ಸೋಮವಾರ, ಜುಲೈ 4, 2022
24 °C
ಲಾಕ್‌ಡೌನ್ ಅವಧಿಯಲ್ಲಿ ಸ್ಥಗಿತಗೊಂಡ ಪ್ರವಾಸೋದ್ಯಮ, ಆರು ತಿಂಗಳು ಪರ್ಯಾಯ ದಾರಿ ಹುಡುಕಿದ ತೆಪ್ಪಗಳ ನಿರ್ವಾಹಕರು

PV Web Exclusive| ಹೊಗೆನಕಲ್‌: ಕೋವಿಡ್ ಹೊಡೆತಕ್ಕೆ ತಿಪ್ಪೆಯಾದ ‘ತೆಪ್ಪ’ದ ಬದುಕು

ಸೂರ್ಯನಾರಾಯಣ ವಿ. Updated:

ಅಕ್ಷರ ಗಾತ್ರ : | |

Prajavani

‘ನಮ್ಮ ಊರಿನ 300 ಕುಟುಂಬಗಳು ಪ್ರವಾಸಿಗರನ್ನೇ ಅವಲಂಬಿಸಿವೆ. ಪ್ರವಾಸಿಗರು ಬಂದರೆ ನಮಗೆ ಒಂದಿಷ್ಟು ಕಾಸು ಸಿಗುತ್ತದೆ. ಕೋವಿಡ್‌ ಲಾಕ್‌ಡೌನ್‌ ಆರಂಭವಾದ ನಂತರ ಆರು ತಿಂಗಳ ಕಾಲ ಜೀವನ ನಡೆಸುವುದು ಕಷ್ಟವಾಯಿತು. ಕೃಷಿ, ಕೂಲಿ, ಕಲ್ಲು ಒಡೆಯುವುದು.. ಹೀಗೆ ಸಿಕ್ಕಿದ ಕೆಲಸವೆಲ್ಲ ಮಾಡಬೇಕಾಯಿತು. ಹಾಗೋ ಹೀಗೋ ದಿನಗಳನ್ನು ದೂಡಿದೆವು...’ 

– ರಾಜ್ಯದ ಗಡಿ ಭಾಗ ಚಾಮರಾಜನಗರ ಜಿಲ್ಲೆಯ ಹೊಗನಕಲ್‌ ಜಲಪಾತ ಪ್ರದೇಶದಲ್ಲಿ ಕಾವೇರಿ ನದಿಯಲ್ಲಿ ಹುಟ್ಟು ಹಾಕುತ್ತಾ ತೆಪ್ಪವನ್ನು ನಡೆಸುತ್ತಿದ್ದ ಪೆರುಮಾಳ್‌ ಅವರು ಕೋವಿಡ್‌ನಿಂದಾಗಿ ಅನುಭವಿಸಿದ ಸಂಕಷ್ಟವನ್ನು ಬಿಚ್ಚಿಡುತ್ತಾ ಹೋದರು.


ಗೋಪಿನಾಥಂ ಹಾಗೂ ಸುತ್ತಮುತ್ತಲಿನ ಸ್ಥಳೀಯರು ಕೂಡ ದೈನಂದಿನ ಓಡಾಟಕ್ಕೆ ತೆಪ್ಪವನ್ನೇ ಅವಲಂಬಿಸಿದ್ದಾರೆ

ಪೆರುಮಾಳ್‌ ಅವರು ಗೋಪಿನಾಥಂ ನಿವಾಸಿ. ಕಾವೇರಿ ನದಿಯಲ್ಲಿ ಹರಗಲು ಅಥವಾ ತೆಪ್ಪ ಓಡಿಸುವುದು ಅವರ ಕಾಯಕ. ತೆಪ್ಪದಲ್ಲಿ ಪ್ರವಾಸಿಗರನ್ನು ಕುಳ್ಳಿರಿಸಿ ಹೊಗೆನಕಲ್‌ ಜಲಪಾತದ ಬುಡದವರೆಗೂ ಕರೆದುಕೊಂಡು ಹೋಗಿ, ಕೊರಕಲು ಕಲ್ಲುಗಳ ನಡುವೆ ಕವಲು ಕವಲಾಗಿ ರಭಸದಿಂದ ಧುಮ್ಮಿಕ್ಕುವ ನೀರನ್ನು ತೋರಿಸಿ, ವಾಪಸ್‌ ಕರೆತರುವುದು ಅವರ ಕೆಲಸ. ನೀರಿನ ಸೆಳೆತ ಹೆಚ್ಚಿದ್ದರೆ, ಪ್ರವಾಸಿಗರನ್ನು ತೆಪ್ಪದಲ್ಲಿ ನದಿ ದಾಟಿಸಿ, ತಮಿಳುನಾಡಿನ ಕಡೆಯತ್ತ ಅವರನ್ನು ಕರೆದುಕೊಂಡು ಹೋಗಿ ಅಲ್ಲಿಂದ ಜಲಪಾತವನ್ನು ತೋರಿಸುತ್ತಾರೆ. 


ಪೆರುಮಾಳ್

ಪೆರುಮಾಳ್‌ ಅವರು ಮಾತ್ರ ಅಲ್ಲ. ಗೋಪಿನಾಥಂ, ಆಲಂಬಾಡಿ ಸೇರಿದಂತೆ ಸುತ್ತಮುತ್ತಲಿನ ಊರಿನ 300 ಮಂದಿ ತೆಪ್ಪ ನಡೆಸುವ ವೃತ್ತಿಯನ್ನು ಮಾಡುತ್ತಾರೆ. ಬಹುತೇಕರಿಗೆ ಇದುವೇ ಆದಾಯದ ಮೂಲ. ಕೆಲವರಿಗೆ ಸಣ್ಣ ಪ್ರಮಾಣದ ಜಮೀನು ಇದೆ. ಅದರಲ್ಲಿ ವ್ಯವಸಾಯವನ್ನೂ ಮಾಡುತ್ತಾರೆ. 

ಹೊಗೆನಕಲ್‌ ಜಲಪಾತ ವೀಕ್ಷಣೆಗಾಗಿ ಬರುವ ಪ್ರವಾಸಿಗರನ್ನು ತೆಪ್ಪದಲ್ಲಿ ಕರೆದೊಯ್ಯಲು ಇವರು ಕಾಯುತ್ತಿರುತ್ತಾರೆ. ಅವರದ್ದೇ ಆದ ಸಂಘ ಇದ್ದು, ಸರತಿ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಾರೆ. ತೆಪ್ಪದಲ್ಲಿ ಕರೆದುಕೊಂಡು ಹೋಗಲು ಒಬ್ಬರಿಗೆ ₹125 ಟಿಕೆಟ್‌ ದರವನ್ನು ಅರಣ್ಯ ಇಲಾಖೆ ನಿಗದಿ ಪಡಿಸಿದೆ. ಒಮ್ಮೆಗೆ ಕನಿಷ್ಠ ನಾಲ್ಕು ಮಂದಿ ಇದ್ದರೆ ಮಾತ್ರ ತೆಪ್ಪವನ್ನು ಓಡಿಸುತ್ತಾರೆ. ನಾಲ್ಕು ಮಂದಿಯ ದುಡ್ಡು ತೆತ್ತರೆ, ಒಬ್ಬರು ಅಥವಾ ಇಬ್ಬರನ್ನು ಅವರು ಕರೆದುಕೊಂಡು ಹೋಗುತ್ತಾರೆ. 

ಹೊಗೆನಕಲ್‌ ಜಲಪಾತದ ವೀಕ್ಷಣೆಗೆ ತಮಿಳುನಾಡಿಗೆ ಸೇರಿದ ಪ್ರದೇಶಕ್ಕೆ ಬರುವ ಪ್ರವಾಸಿಗರಿಗೆ ಹೋಲಿಸಿದರೆ, ನಮ್ಮ ರಾಜ್ಯದ ಕಡೆಯಿಂದ ವೀಕ್ಷಣೆಗೆ ಬರುವವರ ಸಂಖ್ಯೆ ಕಡಿಮೆ. ತಮಿಳುನಾಡಿನ ಕಡೆಯಲ್ಲಿ ಸ್ಥಳೀಯ ಗ್ರಾಮ ಪಂಚಾಯಿತಿಯು ಪ್ರವಾಸಿ ತಾಣವನ್ನು ನಿರ್ವಹಿಸುತ್ತಿದ್ದು, ಸಾಕಷ್ಟು ಅಭಿವೃದ್ಧಿ ನಡೆಸಿದೆ. ನಮ್ಮ ಭಾಗ ಅರಣ್ಯ ಇಲಾಖೆಯ ನಿಯಂತ್ರಣದಲ್ಲಿದ್ದು, ತಾಣ ಹೆಚ್ಚಿನ ಅಭಿವೃದ್ಧಿಯಾಗಿಲ್ಲ. 

ಇದೇ ಕಾರಣಕ್ಕೆ ಇಲ್ಲಿಗೆ ಬರುವ ಪ್ರವಾಸಿಗರ ಸಂಖ್ಯೆ ಕಡಿಮೆ. ವಿಶೇಷ ರಜಾ ದಿನಗಳಲ್ಲಿ ಹಾಗೂ ವಾರಾಂತ್ಯಗಳಲ್ಲಿ ಮಾತ್ರ ಹೆಚ್ಚಿನ ಪ್ರವಾಸಿಗರು ಬರುತ್ತಾರೆ. ವಾರದ ದಿನಗಳಲ್ಲಿ ಬೆರಳೆಣಿಕೆಯಷ್ಟು ಮಂದಿ ಬರುತ್ತಾರೆ. ಹಾಗಾಗಿ, ತಮಿಳುನಾಡಿನ ಭಾಗದಲ್ಲಿ ತೆಪ್ಪ ಓಡಿಸುವವರ ಆದಾಯಕ್ಕೆ ಹೋಲಿಸಿದರೆ, ನಮ್ಮವರ ಆದಾಯ ಕಡಿಮೆ. ರಜಾ ದಿನಗಳಲ್ಲಿ ಮಾತ್ರ ಒಂದಷ್ಟು ಆದಾಯವಾಗುತ್ತದೆ ಎಂದು ಹೇಳುತ್ತಾರೆ ತೆಪ್ಪಗಳ ನಿರ್ವಾಹಕರು.   


ಹೊಗೆನಕಲ್‌ ಜಲಪಾತದ ಕವಲುಗಳು

ಆ ಆದಾಯಕ್ಕೆ ಕೊಡಲಿ ಏಟು ಕೊಟ್ಟಿದ್ದು ಕೋವಿಡ್‌–19. ಅದು ಒಂದೆರಡು ತಿಂಗಳಲ್ಲ. ಬರೋಬ್ಬರಿ ಆರು ತಿಂಗಳು.

ಕಾಡುಗಳ್ಳ ವೀರಪ್ಪನ್‌ ಹುಟ್ಟೂರು ಎಂಬ ಕಾರಣಕ್ಕೆ ಕುಖ್ಯಾತಿ ಗಳಿಸಿದ್ದ ಗೋಪಿನಾಥಂ ಹಾಗೂ ಸುತ್ತಮುತ್ತಲಿನ ಊರುಗಳಲ್ಲಿ ಎಂಟು ಸಾವಿರ ಜನರಿದ್ದಾರೆ. 300 ಕುಟುಂಬಗಳು ಹೊಗೆನಕಲ್‌ ಜಲಪಾತ ಪ್ರದೇಶದಲ್ಲಿ ತೆಪ್ಪ ಓಡಿಸುವುದನ್ನೇ ಆದಾಯದ ಮೂಲವಾಗಿಸಿಕೊಂಡಿದ್ದಾರೆ. 

‘ಲಾಕ್‌ಡೌನ್‌ ಆರಂಭವಾದ ನಂತರ ಪ್ರವಾಸೋದ್ಯಮ ಚಟುವಟಿಕೆಗಳು ಸ್ಥಗಿತಗೊಂಡವು. ಪ್ರವಾಸಿಗರು ಬರುವುದಕ್ಕೆ ನಿರ್ಬಂಧ ಇದ್ದುದರಿಂದ ನಮಗೆ ತೆಪ್ಪ ಓಡಿಸುವ ಕೆಲಸ ಇರಲಿಲ್ಲ. ಲಾಕ್‌ಡೌನ್‌ ತೆರವಾದ ನಂತರವೂ ಜನರ ಓಡಾಟಕ್ಕೆ ಮುಕ್ತ ಪ್ರವೇಶ ಇಲ್ಲದೇ ಇದ್ದುದರಿಂದ ಪ್ರವಾಸಿಗರು ಬರುತ್ತಿರಲಿಲ್ಲ. ಸಂಪಾದನೆಯೇ ಇರಲಿಲ್ಲ. ಪರ್ಯಾಯ ಕೆಲಸಗಳನ್ನು ನಾವು ಹುಡುಕಿಕೊಳ್ಳಬೇಕಾಯಿತು’ ಎಂದು ಪೆರುಮಾಳ್‌ ಹೇಳಿದರು. 

‘ಹೆಚ್ಚಿನವರು ವ್ಯವಸಾಯ ಮಾಡಿದರು. ತಮಗೆ ಸ್ವಂತ ಜಮೀನು ಇಲ್ಲದಿದ್ದರೂ, ಬೇರೆಯವರ ಜಮೀನಿನಲ್ಲಿ ಕೃಷಿ ಮಾಡಿದರು. ನನಗೆ ಜಮೀನು ಇಲ್ಲ. ನನ್ನ ಅಳಿಯನ ಜಮೀನಿನಲ್ಲಿ ಚೆಂಡು ಹೂ ಬೆಳೆದೆ. ಕಲ್ಲು ಒಡೆಯುವ ಕೆಲಸಕ್ಕೂ ಹೋದೆ. ಸರ್ಕಾರದಿಂದ ನಮಗೆ ಏನೂ ಸಿಗಲಿಲ್ಲ’ ಎಂದು ಅನುಭವಿಸಿದ ಕಷ್ಟವನ್ನು ವಿವರಿಸಿದರು. 


ಪ್ರವಾಸಿಗರಿಗಾಗಿ ಕಾಯುತ್ತಿರುವ ಹರಗಲುಗಳು

‘ಪ್ರವಾಸಿಗರು ಬಂದರೆ ದಿನಕ್ಕೆ ₹300ರಿಂದ ₹500 ಸಿಗುತ್ತದೆ. ವಾರಾಂತ್ಯದಲ್ಲಿ ಹಾಗೂ ರಜಾ ದಿನಗಳಲ್ಲಿ ಸ್ವಲ್ಪ ಹೆಚ್ಚು ಸಂಪಾದನೆಯಾಗುತ್ತದೆ. ಆರು ತಿಂಗಳು ಅದಕ್ಕೂ ಕಲ್ಲು ಬಿದ್ದಿತ್ತು. ಈಗ ಒಂದು ತಿಂಗಳಿಂದ ಪ್ರವಾಸಿಗರು ಬರಲು ಆರಂಭಿಸಿದ್ದಾರೆ. ಮೊದಲಿನಷ್ಟು ಜನರು ಈಗಲೂ ಬರುತ್ತಿಲ್ಲ. ಆದರೆ, ನಿಧಾನವಾಗಿ ಹೆಚ್ಚಾಗುತ್ತಿದೆ. ಜೀವನ ಈಗ ಚೇತರಿಸಿಕೊಳ್ಳುತ್ತಿದೆ. ಮಹದೇಶ್ವರ ಬೆಟ್ಟದಲ್ಲಿ ದಸರಾ ಜಾತ್ರೆ ಹಾಗೂ ದೀಪಾವಳಿ ಜಾತ್ರೆಗಳನ್ನು ಈ ಬಾರಿ ರದ್ದುಗೊಳಿಸಲಾಗಿತ್ತು. ತಾಳಬೆಟ್ಟದಿಂದ ಯಾವ ವಾಹನಗಳನ್ನೂ ಬಿಡುತ್ತಿರಲಿಲ್ಲ. ಈ ಕಾರಣಕ್ಕಾಗಿ ಹಬ್ಬಗಳ ರಜಾ ದಿನಗಳಲ್ಲಿ ಪ್ರವಾಸಿಗರು ಬಂದಿರಲಿಲ್ಲ. ಇದರಿಂದಲೂ ನಮಗೆ ನಷ್ಟವಾಗಿದೆ. ಹೆಚ್ಚು ಪ್ರವಾಸಿಗರು ಬಂದು ನಮ್ಮ ಸಂಪಾದನೆ ಮೊದಲಿನ ಸ್ಥಿತಿಗೆ ಬರಲು ಇನ್ನೂ ಸಮಯಬೇಕು’ ಎಂದು ನಿಟ್ಟುಸಿರು ಬಿಟ್ಟ ಪೆರುಮಾಳ್‌, ನಮ್ಮನ್ನು ಸುರಕ್ಷಿತವಾಗಿ ದಡ ಸೇರಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು