ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೋಂ ಸ್ಟೇ, ವಸತಿಗೃಹ, ರೆಸಾರ್ಟ್‌ಗಳು ಭರ್ತಿ

ವರ್ಷಾಂತ್ಯ, ಹೊಸ ವರ್ಷ ಸಂಭ್ರಮಾಚರಣೆ, ಕೊಠಡಿ ಕಾಯ್ದಿಸುತ್ತಿರುವ ಪ್ರವಾಸಿಗರು
Last Updated 24 ಡಿಸೆಂಬರ್ 2022, 0:30 IST
ಅಕ್ಷರ ಗಾತ್ರ

ಚಾಮರಾಜನಗರ/ಗುಂಡ್ಲುಪೇಟೆ:ಕ್ರಿಸ್‌ಮಸ್‌, ವರ್ಷಾಂತ್ಯ ಹಾಗೂ ಹೊಸ ವರ್ಷಾರಂಭದ ಸಂಭ್ರಮಾಚರಣೆಗೆ ಪ್ರವಾಸಿಗರು ಸಜ್ಜಾಗಿದ್ದು ಹೋ ಸ್ಟೇ, ರೆಸಾರ್ಟ್‌ಗಳು, ವಸತಿ ಗೃಹಗಳಲ್ಲಿ ಕೊಠಡಿಗಳನ್ನು ಕಾಯ್ದಿರಿಸುತ್ತಿದ್ದಾರೆ.

ಬಂಡೀಪುರ ವ್ಯಾಪ್ತಿಯ ಜಂಗಲ್‌ ಲಾಡ್ಜಸ್‌ ಅಂಡ್‌ ರೆಸಾ‌ರ್ಟ್ಸ್‌ ಸೇರಿದಂತೆ ಬಹುತೇಕ ರೆಸಾರ್ಟ್‌ಗಳು, ಹೋಂ ಸ್ಟೇಗಳು ಭರ್ತಿಯಾಗಿವೆ. ಇದೇ 20ರಿಂದಲೇ ಪ‍್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡಲು ಆರಂಭಿಸಿದ್ದು, ಜನವರಿ ಮೊದಲವಾರದವರೆಗೂ ಈ ಪರಿಸ್ಥಿತಿ ಮುಂದುವರಿಯಲಿದೆ.

ಎರಡು ವರ್ಷಗಳಿಂದ ಕೋವಿಡ್‌ ಕಾರಣಕ್ಕೆ ನಿರ್ಬಂಧಗಳನ್ನು ಹೇರಲಾಗಿತ್ತು. ಹೀಗಾಗಿ ಪ್ರವಾಸೋದ್ಯಮ ನೆಲಕ್ಕಚ್ಚಿತ್ತು. ಈ ವರ್ಷ ಹೊಸ ವರ್ಷಾಚರಣೆಗೆ ಕೋವಿಡ್‌ ಅಡ್ಡಿಯಾಗಿಲ್ಲ.ಬಂಡೀಪುರದ ಕಾಡಂಚಿನ ಪ್ರದೇಶದಲ್ಲಿರುವ ಹೋಂ ಸ್ಟೇ ಹಾಗೂ ವಸತಿ ಗೃಹಗಳಿಗೆ ಬೆಂಗಳೂರು ಸೇರಿದಂತೆ ನಗರ ಪ್ರದೇಶಗಳಿಂದ ಯುವಜನರು ಹೋಂ ಸ್ಟೇ ಹಾಗೂ ರೆಸಾರ್ಟ್‌ಗಳನ್ನು ಕಾಯ್ದಿರಿಸುತ್ತಿದ್ದಾರೆ.ಬಂಡೀಪುರ ಕ್ಯಾಂಪಸ್‌ನಲ್ಲಿ ಅರಣ್ಯ ಇಲಾಖೆಯ ವಸತಿಗೃಹಗಳೂ ಇದ್ದು, ಈಗಾಗಲೇ ಬುಕ್ಕಿಂಗ್‌ ಆಗಿವೆ.

‘ಈಗಾಗಲೇ ಬಹುತೇಕ ಎಲ್ಲ ಕೊಠಡಿಗಳು ಬುಕ್ಕಿಂಗ್ ಆಗಿವೆ. ಕ್ರಿಸ್‌ಮಸ್‌ನಿಂದ ಸಂಕ್ರಾಂತಿವರೆಗೂ ಎಲ್ಲ ಹೋಟೆಲ್, ವಸತಿ ಗೃಹಗಳು ತುಂಬಿರುತ್ತವೆ. ನಮ್ಮಲ್ಲಿಗೂ ನಗರ ಪ್ರದೇಶಗಳ ಪ್ರವಾಸಿಗರೇ ಬರುತ್ತಾರೆ’ ಎಂದು ಮೇಲುಕಾಮನಹಳ್ಳಿ ಎಂಸಿ.ರೆಸಾರ್ಟ್ ಮಾಲೀಕ ಮಂಜು ‘ಪ್ರಜಾವಾಣಿ’ಗೆ ತಿಳಿಸಿದರು.

‘ಕೋವಿಡ್‌ ಆರಂಭವಾದಾಗಿನಿಂದ ವಹಿವಾಟು ಕಡಿಮೆ ಇತ್ತು. ಈ ವರ್ಷ ಉತ್ತಮ ವಹಿವಾಟು ಆಗುವ ನಿರೀಕ್ಷೆಯಲ್ಲಿದ್ದೇವೆ. ನಮ್ಮಲ್ಲಿ ಕೊಠಡಿಗಳು ಖಾಲಿ ಇಲ್ಲದಿರುವುದರಿಂದ ಬೇರೆವರಿಗೆ ಕರೆ ಮಾಡಿ ಕೇಳುತ್ತಿದ್ದೇವೆ. ಕೊಠಡಿಗಳು ಸಿಗುತ್ತಿಲ್ಲ’ ಎಂದರು.

‘ಎರಡು ವರ್ಷಗಳಿಂದ ಕೋವಿಡ್‌ ನಿಯಮಗಳು ಮತ್ತು ಸೋಂಕಿನ ಭಯದಿಂದ ಪ್ರವಾಸಿಗರು ಹೆಚ್ಚು ಬಂದಿರಲಿಲ್ಲ. ಹೊರದೇಶದವರೂ ಬಂದಿರಲಿಲ್ಲ. ಈ ಬಾರಿ ಪ್ರವಾಸಿಗರ ಸಂಖ್ಯೆ ಹೆಚ್ಚಿದೆ’ ಎಂದುಖಾನ್ ಗೂಪ್ಹಾ ಹೋಟೆಲ್ ಸಿಬ್ಬಂದಿ ತಿಳಿಸಿದರು.

ಜೆಎಲ್‌ಆರ್‌ ಭರ್ತಿ: ಚಾಮರಾಜನಗರ ತಾಲ್ಲೂಕಿನ ಕೆ.ಗುಡಿಯಲ್ಲಿರುವ (ಬಿಆರ್‌ಟಿ ಅರಣ್ಯ) ಜಂಗಲ್‌ ಲಾಡ್ಜಸ್‌ ಅಂಡ್‌ ರೆಸಾರ್ಟ್ಸ್‌ (ಜೆಎಲ್‌ಆರ್‌) ಕೊಠಡಿಗಳು ಭರ್ತಿಯಾಗಿವೆ.

‘ವರ್ಷದ ಕೊನೆಯ ವಾರ, ಹೊಸ ವರ್ಷದಲ್ಲಿ ಪ್ರವಾಸಿಗರಿಂದ ಕೊಠಡಿಗಳಿಗೆ ಹೆಚ್ಚು ಬೇಡಿಕೆ ಇದೆ. ಜನವರಿ 3ರವರೆಗೂ ಭರ್ತಿಯಾಗಿವೆ. ಎರಡು ವರ್ಷಗಳಿಂದ ಕೋವಿಡ್‌ ಕಾರಣಕ್ಕೆ ಬೇಡಿಕೆ ಇರಲಿಲ್ಲ’ ಎಂದು ರೆಸಾರ್ಟ್‌ ವ್ಯವಸ್ಥಾಪಕ ಪ್ರಸನ್ನಕುಮಾರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಹನೂರು ತಾಲ್ಲೂಕಿನ ಗೋಪಿನಾಥಂನಲ್ಲಿರುವ ಜೆಎಲ್‌ಆರ್‌ ನೇಚರ್‌ ಕ್ಯಾಂಪ್‌ನಲ್ಲೂ ಹೊಸ ವರ್ಷಕ್ಕೆ ಕಾಟೇಜ್‌ಗಳು ಭರ್ತಿಯಾಗಿವೆ. ಗೋಪಿನಾಥಂನಲ್ಲಿರುವ ಅರಣ್ಯ ಇಲಾಖೆಯ ಐಬಿ ಕೂಡ 27ರವರೆಗೆ ಭರ್ತಿಯಾಗಿದೆ.

‘ನಿಯಮಗಳನ್ನು ಉಲ್ಲಂಘಿಸುವಂತಿಲ್ಲ’

ಬಂಡೀಪುರದ ಕಾಡಂಚಿನ ಗ್ರಾಮಗಳಲ್ಲಿರುವ ರೆಸಾರ್ಟ್‌, ಹೋಂ ಸ್ಟೇಗಳು, ವಸತಿ ಗೃಹಗಳು ಕ್ರಿಸ್‌ಮಸ್‌ ಅಥವಾ ಹೊಸ ವರ್ಷಾಚರಣೆ ಸಂದರ್ಭದಲ್ಲಿ ಇಲಾಖೆಯ ನಿಯಮಗಳನ್ನು ಉಲ್ಲಂಘಿಸುವಂತಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿರುವ ಬಂಡೀಪುರ ಹುಲಿ ಯೋಜನೆ ನಿರ್ದೇಶಕ ಡಾ.ರಮೇಶ್‌ಕುಮಾರ್‌, ‘ನಿಯಮಗಳನ್ನು ಮೀರದಂತೆ ಆಚರಣೆ ಮಾಡಲು ತಿಳಿಸಲಾಗಿದೆ. ನಿಯಮ ಉಲ್ಲಂಘನೆ ಮಾಡಿದರೆ ಕ್ರಮಕೈಗೊಳ್ಳಲಾಗುತ್ತದೆ. ಸಂಭ್ರಮಾಚರಣೆ ಮಾಡುವ ಸಂದರ್ಭದಲ್ಲಿ ಬೇರೆಯವರಿಗೆ ಮತ್ತು ಕಾಡು ಪ್ರಾಣಿಗಳಿಗೆ ತೊಂದರೆಯಾಗಬಾರದು’ ಎಂದರು.

ಬಿಆರ್‌ಟಿ: ಬೆಟ್ಟಕ್ಕೆ ಪ್ರವಾಸಿಗರ ಲಗ್ಗೆ

ಯಳಂದೂರು: ತಾಲ್ಲೂಕಿನ ಪ್ರಸಿದ್ಧ ಬೆಳಗಿರಂಗನ ಬೆಟ್ಟದಲ್ಲೂ ಕ್ರಿಸ್‌ಮಸ್‌ ಮತ್ತು ಹೊಸ ವರ್ಷದ ವರ್ಷಾಚರಣೆ ಸಂದರ್ಭಕ್ಕೆ ಕೊಠಡಿಗಳಿಗೆ ಬೇಡಿಕೆ ಹೆಚ್ಚಿದೆ.

ಹೊಸ ವರ್ಷಕ್ಕೆ ದೇವಾಲಯಕ್ಕೆ ಭೇಟಿ ನೀಡುವ ಭಕ್ತರ ಸಂಖ್ಯೆಯೂ ಹೆಚ್ಚಾಗಲಿದೆ.

ವಿವಿಧ ಜಿಲ್ಲೆಗಳಿಂದ ಬರುವ ಭಕ್ತರು ಮತ್ತು ಪರಿಸರ ಪ್ರೇಮಿಗಳು ಖಾಸಗಿ ಮತ್ತು ಸರ್ಕಾರಿ ವಸತಿ ಗೃಹಗಳಲ್ಲಿ ಉಳಿಯುತ್ತಾರೆ. ಹಾಗಾಗಿ, ವಾರ ಪೂರ್ತಿ ಜನದಟ್ಟಣೆ ಕಂಡು ಬರಲಿದೆ.

ಈಗಾಗಲೇ ಕೊಠಡಿಗಳ ದರ ಹೆಚ್ಚಿಸಲಾಗಿದೆ. ಡಿಸೆಂಬರ್ ಮೂರನೇ ವಾರದಿಂದಲೇ ಮುಂಗಡ ಬುಕ್ಕಿಂಗ್ ಆರಂಭವಾಗಿದೆ ಎಂದು ಖಾಸಗಿ ಲಾಡ್ಜ್‌ನ ನಿರ್ವಾಹಕರು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT