ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಡಿಬಿದ್ದ ಹೊಂಗನೂರು ಹಿರಿಕೆರೆ: ರೈತರಲ್ಲಿ ಮಂದಹಾಸ

ಆರು ವರ್ಷಗಳ ಭರ್ತಿ, ಜಮೀನಲ್ಲಿ ನಿಂತ ನೀರು, ಹೂಳು ತೆಗೆಸಲು ಆಗ್ರಹ
Last Updated 16 ನವೆಂಬರ್ 2021, 19:30 IST
ಅಕ್ಷರ ಗಾತ್ರ

ಸಂತೇಮರಹಳ್ಳಿ: ಹೋಬಳಿ ವ್ಯಾಪ್ತಿಯ ಹೊಂಗನೂರು ಹಿರಿಕೆರೆಯು ಆರು ವರ್ಷಗಳ ನಂತರ ಭರ್ತಿಯಾಗಿದ್ದು, ಈ ಭಾಗದ ರೈತರಲ್ಲಿ ಮಂದಹಾಸ ಮೂಡಿಸಿದೆ.

ಕೆರೆ ಕೋಡಿ ಬಿದ್ದು ಹಾಗೂ ತೂಬಿನ ಮೂಲಕ ಹೆಚ್ಚುವರಿ ನೀರು ಹರಿಯುತ್ತಿರುವುದರಿಂದ ಕೆಳಭಾಗದ ಜಮೀನುಗಳಲ್ಲಿ ರೈತರು ಬೆಳೆದ ಫಸಲು ನಷ್ಟವಾಗಿದೆ.

ಜಿಲ್ಲೆಯ ದೊಡ್ಡ ಕೆರೆಗಳಲ್ಲಿ ಒಂದಾಗಿರುವ ಈ ಕೆರೆ ಬಿಳಿಗಿರಿ ರಂಗನಾಥ ಸ್ವಾಮಿ ಬೆಟ್ಟದ ತಪ್ಪಲಿನಲ್ಲಿದೆ. ಈಚೆಗೆ ಸುರಿದ ಮಳೆಗೆ ಕೆರೆ ಕೋಡಿ ಬಿದ್ದಿದೆ. ಹೀಗಾಗಿ ಅಚ್ಚುಕಟ್ಟು ಪ್ರದೇಶದ ಹೊಂಗನೂರು, ಮಸಣಾಪುರ, ಇರಸವಾಡಿ, ಚಾಟೀಪುರ, ಕಳ್ಳಿಪುರ, ಗಂಗವಾಡಿ, ದಾಸನಹುಂಡಿ, ಮೂಕಹಳ್ಳಿ ಗ್ರಾಮದ ರೈತರಿಗೆ ವರದಾನವಾಗಲಿದ್ದು, ಜನ-ಜಾನುವಾರುಗಳಿಗೆ ಬೇಸಿಗೆ ಸಮಯದಲ್ಲಿ ಕುಡಿಯುವ ನೀರಿನ ಸಮಸ್ಯೆ ಬಾಧಿಸದು.

ಕೆರೆಯು 560 ಎಕರೆ ವಿಸ್ತೀರ್ಣ ಹೊಂದಿದ್ದು, 1,808 ಎಕರೆ ಪ್ರದೇಶದಲ್ಲಿ ನಡೆಯುವ ವ್ಯವಸಾಯಕ್ಕೆ ನೀರುಣಿಸುತ್ತಿದೆ. ಕೆರೆಯು ಬಿಆರ್‌ಟಿ ಅರಣ್ಯದ ತಪ್ಪಲಿನಲ್ಲಿದ್ದರೂ, ಕೆರೆಯ ನೀರಿನ ಮೂಲಗಳಿಗೆ ಧಕ್ಕೆಯಾಗಿರುವ ಪರಿಣಾಮ ಮಳೆ ಸುರಿದರೂ ಕೆರೆ ಭರ್ತಿಯಾಗುತ್ತಿರಲಿಲ್ಲ.

2000ನೇ ಸಾಲಿನಲ್ಲಿ ಹೊಂಗನೂರು ಹಿರಿಕೆರೆ ಏತ ನೀರಾವರಿ ಯೋಜನೆಗೆ ₹ 2.40 ಕೋಟಿಗೆ ತಾಂತ್ರಿಕ ಮಂಜೂರಾತಿ ಸಿಕ್ಕಿತ್ತು.

ಕಳ್ಳಿಪುರದ ಬಳಿ ಕಬಿನಿ ಬಲದಂಡೆ ನಾಲೆ ಸರಪಳಿ 128.360 ಕಿಮೀ.ನಿಂದ 30 ಕ್ಯುಸೆಕ್‌ಗಳಷ್ಟು ನೀರು ಎತ್ತಿ ಕೆರೆಗೆ ಹರಿಸಲು ನಿರ್ಧರಿಸಲಾಗಿತ್ತು. ಕಾವೇರಿ ನೀರಾವರಿ ನಿಗಮದ ಮೂಲಕ ಅನುಷ್ಠಾನಗೊಂಡ ಈ ಯೋಜನೆಯು ಪೂರ್ಣಗೊಳ್ಳಲು 12 ವರ್ಷ ಹಿಡಿದಿತ್ತು.

ಕಳ್ಳೀಪುರ ಬಳಿ ನಿರ್ಮಿಸಿದ್ದ ಪಂಪ್‍ಹೌಸ್‍ನಿಂದ ಕೆರೆಗೆ ನೀರು ಪೂರೈಕೆಗೆ 2012ರಲ್ಲಿ ಚಾಲನೆ ದೊರೆದಿತ್ತು. ಆದರೆ, ನಾಲೆಯಲ್ಲಿ ನೀರು ಹರಿಯುವ ವೇಳೆ ವಿದ್ಯುತ್ ಕೊರತೆ ಎದುರಾಗುತಿತ್ತು. ಯೋಜನೆ ಲೋಕಾರ್ಪಣೆಗೊಂಡು ವರ್ಷಗಳು ಕಳೆದರೂ ಕೆರೆ ಮಾತ್ರ ಭರ್ತಿಯಾಗುತ್ತಿರಲಿಲ್ಲ. ಇದರಿಂದ ಅರೆ ನೀರಾವರಿಯಲ್ಲಿ ಬೆಳೆ ಬೆಳೆಯುವ ರೈತರ ಕನಸು ಈಡೇರಲಿಲ್ಲ.
ಕೆಲವು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಕೆರೆಗೆ ಭಾರಿ ಪ್ರಮಾಣದಲ್ಲಿ ನೀರು ಹರಿದುಬಂದು, ಭರ್ತಿಯಾಗಿದೆ. ಅಚ್ಚುಕಟ್ಟು ಪ್ರದೇಶದಲ್ಲಿ ಜೋಳ, ರಾಗಿ ಭತ್ತ, ಬಿತ್ತನೆ ಮಾಡಿರುವ ರೈತರು ಫಸಲು ತೆಗೆಯಲು ಸಜ್ಜಾಗಿದ್ದಾರೆ.

ಕೆರೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಹೂಳು ತುಂಬಿದೆ. ನೀರು ಇಲ್ಲದಿರುವ ವೇಳೆ ಹೂಳು ತೆಗೆಯುವ ಕೆಲಸವು ಸರಿಯಾಗಿ ನಡೆದಿಲ್ಲ. ಹಾಗಾಗಿ ನೀರು ಬಸಿದು ಹೋಗುತ್ತದೆ ಎಂಬುದು ಈ ಭಾಗದ ರೈತರಆರೋಪ.

ಬೆಳೆ ನಷ್ಟದ ಆತಂಕ:ಈಗಾಗಲೇ ಕೆರೆಯು ಕೋಡಿ ಬಿದ್ದಿದ್ದು, ತೂಬಿನ ಮೂಲಕ ಬಿಡುಗಡೆಯಾದ ನೀರು ಹಾಗೂ ದಿನನಿತ್ಯದ ಮಳೆಯಿಂದ ಬೆಳೆದಿರುವ ಫಸಲಿನಲ್ಲಿ ನೀರು ತುಂಬಿದೆ. ಇದರಿಂದ ಕೆಲವು ರೈತರು ಬೆಳೆ ನಷ್ಟದಭೀತಿಯಲ್ಲಿದ್ದಾರೆ.

‘ಕೆರೆ ಹೂಳು ತೆಗೆಸಿ’

ಈ ಭಾಗದಲ್ಲಿ ಸುಮಾರು ಹತ್ತಾರು ಗ್ರಾಮಗಳಿಗೆ ಹಿರಿಕೆರೆಯು ಜೀವನಾಡಿ ಯಾಗಿದೆ. ಯಾವುದೇ ಸರ್ಕಾರ ಬಂದರೂ ಕೆರೆಗಳ ಪುನಶ್ಚೇತನಕ್ಕೆ ಅವಕಾಶ ಮಾಡಿಕೊಡಬೇಕು. ಈ ನಿಟ್ಟಿನಲ್ಲಿ ಕೆರೆಹೂಳು ತೆಗೆಸಿದಾಗ ಬೇಸಿಗೆ ಸಮಯದಲ್ಲಿ ಕೆರೆಯಲ್ಲಿ ನೀರು ಶೇಖರಣೆಯಾಗಲು ಅವಕಾಶವಿರುತ್ತದೆ. ಇದರಿಂದ ಸುತ್ತಲಿನ ಪಂಪ್‍ಸೆಟ್‍ಗಳಿಗೆ ಅಂತರ್ಜಲ ಹೆಚ್ಚಾಗುತ್ತದೆ. ರೈತರು ವರ್ಷಪೂರ್ತಿ ಬೆಳೆ ತೆಗೆಯಲು ಅವಕಾಶವಿರುತ್ತದೆ. ಈ ನಿಟ್ಟಿನಲ್ಲಿ ಕೆರೆಗಳ ಅಭಿವೃದ್ಧಿಗೆ ಸರ್ಕಾರ ಹೆಚ್ಚು ಉತ್ತೇಜನ ನೀಡಬೇಕು’ ಎಂದು ಗ್ರಾಮದ ಮುಖಂಡ ಎಚ್.ವಿ.ಚಂದ್ರು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT