ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ: ಗಂಧದ ಮರಕ್ಕಾಗಿ ಮನೆ ಮಾಲೀಕನನ್ನೇ ಕೊಲೆ ಮಾಡಿದ ದುರುಳರು

Last Updated 5 ಅಕ್ಟೋಬರ್ 2020, 11:21 IST
ಅಕ್ಷರ ಗಾತ್ರ

ಚಾಮರಾಜನಗರ: ತಾಲ್ಲೂಕಿನ ಚಂದಕವಾಡಿ ಗ್ರಾಮದಲ್ಲಿ ಶ್ರೀಗಂಧ ಮರ ಕಳ್ಳತನ ಮಾಡಲು ಬಂದಿದ್ದ ಮರಕಳ್ಳರು ಮನೆ ಮಾಲೀಕನನ್ನು ಹತ್ಯೆ ಮಾಡಿ ಪರಾರಿಯಾಗಿದ್ದಾರೆ.

ಭಾನುವಾರಮಧ್ಯರಾತ್ರಿ ಈ ಘಟನೆ ನಡೆದಿದೆ. ಚಂದಕವಾಡಿ ಗ್ರಾಮದ ಶಿವಬಸಪ್ಪ (80) ಕೊಲೆಯಾದವರು. ಅವರ ಕೈ ಕಾಲು ಕಟ್ಟಿ ಹಾಕಿ ಬಟ್ಟೆಯಿಂದ ಕುತ್ತಿಗೆಯನ್ನು ಬಿಗಿದು ಹತ್ಯೆ ಮಾಡಲಾಗಿದೆ. ಮನೆಯಿಂದ ಸ್ವಲ್ಪ ದೂರದಲ್ಲಿ ಅವರ ಶವ ಪತ್ತೆಯಾಗಿದೆ. ಮೂವರು ಈ ಕೃತ್ಯ ಎಸಗಿದ್ದಾರೆ ಎಂದು ಶಿವಬಸಪ್ಪ ಅವರ ಮನೆಯವರು ದೂರು ನೀಡಿದ್ದಾರೆ. ಮರಕಡಿಯುತ್ತಿದ್ದ ಇಬ್ಬರನ್ನು ಕಂಡಿದ್ದಾಗಿ ಅವರು ಹೇಳಿದ್ದಾರೆ.

ಘಟನೆ ವಿವರ: ಶಿವಬಸಪ್ಪ ಅವರ ಮನೆಯ ಎದುರು 15ರಿಂದ 20 ವರ್ಷವಾಗಿದ್ದ ಗಂಧದ ಮರವಿದೆ. ಭಾನುವಾರ ರಾತ್ರಿ ಶಿವಬಸಪ್ಪ ಅವರು ಮನೆಯ ಎದುರಿನ ಜಗಲಿಯಲ್ಲಿ ಮಲಗಿದ್ದರು. ಮಧ್ಯ ರಾತ್ರಿ ಮನೆಗೆ ಬಂದ ಕಳ್ಳರು ಹೊರಗಡೆ ಮಲಗಿದ್ದ ಶಿವಬಸಪ್ಪ ಅವರನ್ನು ಸ್ವಲ್ಪ ದೂರಕ್ಕೆ ಹೊತ್ತೊಯ್ದು ಬಟ್ಟೆಯನ್ನು ಕುತ್ತಿಗೆಗೆ ಬಿಗಿದು ಕೊಲೆ ಮಾಡಿದ್ದಾರೆ. ಮನೆಯಿಂದ ಯಾರೂ ಹೊರಗಡೆ ಬರಬಾರದು ಎಂಬ ಕಾರಣಕ್ಕೆ ಹೊರಗಡೆಯಿಂದ ಚಿಲಕವನ್ನೂ ಅವರು ಹಾಕಿದ ಕಳ್ಳರು, ಯಂತ್ರದ ನೆರವಿನಿಂದ ಗಂಧದ ಮರವನ್ನು ಕತ್ತರಿಸಲು ಮುಂದಾಗಿದ್ದಾರೆ. ಸದ್ದಿಗೆ ಎಚ್ಚರಗೊಂಡ ಮನೆಯವರು ಬಾಗಿಲು ತೆರೆಯಲು ಯತ್ನಿಸಿ ವಿಫಲರಾದರು. ಪ್ರಯಾಸದಿಂದ ಬಾಗಿಲು ತೆರೆದು ಹೊರ ಬಂದಾಗ ಮರಗಳ್ಳರು ಓಡಿದರು ಎಂದು ಸ್ಥಳೀಯರು ಹೇಳಿದ್ದಾರೆ.

ಮನೆಯ ಹೊರಗಡೆ ಶಿವಬಸಪ್ಪ ಅವರು ಇಲ್ಲದಿರುವುದನ್ನು ಕಂಡ ಮನೆಯವರು ಸ್ಥಳೀಯರ ನೆರವಿನಿಂದ ಸುತ್ತಮುತ್ತ ಹುಡುಕಾಡಿದ್ದಾರೆ. ಸ್ವಲ್ಪ ದೂರದಲ್ಲಿ ಶವ ಪತ್ತೆಯಾಗಿದೆ ಎಂದು‍ಪೊಲೀಸರು ತಿಳಿಸಿದ್ದಾರೆ.

‘ಮೂವರು ಈ ಕೃತ್ಯವನ್ನು ಎಸಗಿದ್ದಾರೆ ಎಂದು ಮನೆಯವರು ದೂರು ನೀಡಿದ್ದಾರೆ. ಆರೋಪಿಗಳು ಇನ್ನೂ ಪತ್ತೆಯಾಗಿಲ್ಲ. ತನಿಖೆ ನಡೆಸುತ್ತಿದ್ದೇವೆ’ ಎಂದು ರಾಮಸಮುದ್ರ ಪೊಲೀಸ್‌ ಠಾಣೆ ಸಬ್‌ ಇನ್‌ಸ್ಪೆಕ್ಟರ್‌ ರವಿಕುಮಾರ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಅನಿತಾ ಬಿ.ಹದ್ದಣ್ಣವರ್‌, ರವಿಕುಮಾರ್‌ ಹಾಗೂ ಇತರ ಪೊಲೀಸ್‌ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT