ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ: ಪ್ರತ್ಯೇಕ ವಿ.ವಿ: 100 ಎಕರೆ ಜಮೀನು ಅಗತ್ಯ

ಸ್ನಾತಕೋತ್ತರ ಕೇಂದ್ರಕ್ಕೆ ತಜ್ಞರ ಸಮಿತಿ ಭೇಟಿ, ಪರಿಶೀಲನೆ, ಜಿಲ್ಲಾಧಿಕಾರಿ ಜೊತೆ ಚರ್ಚೆ
Last Updated 17 ಜುಲೈ 2021, 3:44 IST
ಅಕ್ಷರ ಗಾತ್ರ

ಚಾಮರಾಜನಗರ: ಜಿಲ್ಲೆಯಲ್ಲಿ ಪ್ರತ್ಯೇಕ ವಿಶ್ವವಿದ್ಯಾಲಯ ಸ್ಥಾ‌ಪನೆ ಸಾಧ್ಯತೆಯ ಅಧ್ಯಯನಕ್ಕಾಗಿ ಸರ್ಕಾರ ನೇಮಿಸಿದ್ದ ತಜ್ಞರ ಸಮಿತಿಯು ಶುಕ್ರವಾರ, ಬೇಡರಪುರದಲ್ಲಿರುವ ಡಾ.ಬಿ.ಆರ್‌.ಅಂಬೇಡ್ಕರ್‌ ಸ್ನಾತಕೋತ್ತರ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತು.

ಸಮಿತಿ ಅಧ್ಯಕ್ಷ, ಮೈಸೂರು ವಿವಿಯ ಕುಲಪತಿ ಡಾ.ಹೇಮಂತ್‌ ಕುಮಾರ್‌ ಹಾಗೂ ಸದಸ್ಯರಾದ ಬೆಂಗಳೂರು ಉತ್ತರ ವಿವಿಯ ಕುಲಪತಿ ಪ್ರೊ.ಕೆಂಪರಾಜು ಅವರು ಸ್ನಾತಕೋತ್ತರ ಕೇಂದ್ರದಲ್ಲಿಲಭ್ಯವಿರುವ ಮೂಲಸೌಕರ್ಯಗಳ ಬಗ್ಗೆ ಮಾಹಿತಿ ಕಲೆಹಾಕಿದರು.ನಂತರ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರೊಂದಿಗೆ ಮಾತುಕತೆ ನಡೆಸಿದರು.

ತಿಂಗಳಾಂತ್ಯದ ಒಳಗೆ ವರದಿ: ಸಭೆಯ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಡಾ.ಹೇಮಂತ್‌ ಕುಮಾರ್‌ ಅವರು, ‘ಚಾಮರಾಜನಗರದಲ್ಲಿ ವಿಶ್ವವಿದ್ಯಾಲಯ ಸ್ಥಾಪನೆಯಾಗಬೇಕು ಎಂಬುದು ಸಮಿತಿಯ ಉದ್ದೇಶ. ನಮ್ಮಲ್ಲಿ ಈಗ 54 ಎಕರೆ ಜಾಗ ಇದೆ. ಇನ್ನೂ 100 ಎಕರೆ ಜಾಗ ಬೇಕು. ಈ ಬಗ್ಗೆ ಜಿಲ್ಲಾಧಿಕಾರಿ ಅವರಿಗೆ ಮನವಿ ಮಾಡಿದ್ದೇವೆ. ಅವರು ಜಾಗಕೊಡಿಸುವ ಭರವಸೆಯನ್ನುನೀಡಿದ್ದಾರೆ’ ಎಂದುಹೇಳಿದರು.

‘ಸಾಮಾನ್ಯ ವಿಶ್ವವಿದ್ಯಾಲಯದ ಜೊತಗೆ ಕೌಶಲ ಅಭಿವೃದ್ಧಿ ನೀಡುವಂತಹ ವಿವಿ ನಮಗೆ ಅಗತ್ಯವಿದೆ. ಇಲ್ಲಿ ಗ್ರ್ಯಾನೈಟ್‌ ಉದ್ಯಮ ಇದೆ. ಅದಕ್ಕೆ ಪೂರಕವಾದ ಕೌಶಲ ತರಬೇತಿ ನೀಡುವ ಕೆಲಸ ಆಗಬೇಕು. ಹಾಗಾಗಿ, ಎಲ್ಲವನ್ನು ಒಳಗೊಂಡ ವಿವಿಯ ಸ್ಥಾಪ‍ನೆಯಾಗಬೇಕಿದೆ. ಈ ತಿಂಗಳ ಅಂತ್ಯದ ಒಳಗಾಗಿ ಸರ್ಕಾರಕ್ಕೆ ವರದಿ ಸಲ್ಲಿಸುತ್ತೇವೆ’ ಎಂದು ಅವರು ಹೇಳಿದರು.

‘ನಾವು ವರದಿ ಸಲ್ಲಿಸಿದ ನಂತರ ಸರ್ಕಾರ ಅದನ್ನು ಅಧ್ಯಯನಮಾಡಲಿದೆ. ಬಹುಶಃ ಮುಂದಿನಬಜೆಟ್‌ ಒಳಗಾಗಿ ಜಿಲ್ಲೆಗೆ ಪ್ರತ್ಯೇಕ ವಿಶ್ವವಿದ್ಯಾಲಯ ಸ್ಥಾಪಿಸುವ ಬಗ್ಗೆ ಸರ್ಕಾರ ಘೋಷಣೆ ಮಾಡಬಹುದು. ಮುಂದಿನ ಶೈಕ್ಷಣಿಕ ವರ್ಷದಿಂದ ವಿವಿ ಆರಂಭಗೊಳ್ಳಲೂಬಹುದು’ ಎಂದು ಡಾ.ಹೇಮಂತ್‌ ಕುಮಾರ್‌ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಎಂಬಿಎಗೆ ಅನುಮತಿ: ಈ ಮಧ್ಯೆ, ಸ್ನಾತಕೋತ್ತರ ಕೇಂದ್ರದಲ್ಲಿ ಸದ್ಯ 10 ಕೋರ್ಸ್‌ಗಳು ಲಭ್ಯವಿದ್ದು, ಈ ವರ್ಷದಿಂದ ಎಂಬಿಎ ಕೋರ್ಸ್‌ ಕೂಡ ಮತ್ತೆಆರಂಭವಾಗಲಿದೆ.

‘ಎಂಬಿಎ ಕೋರ್ಸ್‌ ಮೊದಲೇ ಇಲ್ಲಿ ಇತ್ತು. ಆದರೆ, ಎಐಸಿಟಿಇ ಅನುಮತಿ ನೀಡಿರಲಿಲ್ಲ. ಈಗ ಅನುಮೋದನೆ ಸಿಕ್ಕಿದ್ದು, ಮುಂದಿನ ಶೈಕ್ಷಣಿಕ ವರ್ಷದಿಂದಲೇ ಆರಂಭವಾಗಲಿದೆ’ ಎಂದು ಹೇಮಂತ್‌ ಕುಮಾರ್‌ ಅವರು ತಿಳಿಸಿದರು.

ಜಿಲ್ಲಾಡಳಿತದಿಂದ ಸಕಲ ನೆರವು: ಡಿ.ಸಿ ಭರವಸೆ

ಚಾಮರಾಜನಗರ: ಜಿಲ್ಲೆಗೆ ಪ್ರತ್ಯೇಕ ವಿಶ್ವವಿದ್ಯಾಲಯ ಸ್ಥಾಪನೆಗೆ ಸರ್ಕಾರ ಉದ್ದೇಶಿಸಿದ್ದು, ಇದಕ್ಕೆ ಅಗತ್ಯವಿರುವ ಎಲ್ಲ ನೆರವು ಹಾಗೂ ಸಹಕಾರವನ್ನು ಜಿಲ್ಲಾಡಳಿತದಿಂದ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ತಿಳಿಸಿದರು.

ವಿವಿ ಸ್ಥಾಪನೆ ಸಂಬಂಧ ಸರ್ಕಾರ ನೇಮಿಸಿರುವ ತಜ್ಞರ ಸಮಿತಿ ಸದಸ್ಯರ ಜೊತೆ ನಡೆಸಿದ ಸಭೆಯಲ್ಲಿ ಮಾತನಾಡಿದ ಅವರು, ‘ಇದೊಂದು ಐತಿಹಾಸಿಕ ಯೋಚನೆ.ಜಿಲ್ಲೆಗೆ ತನ್ನದೇ ಆದ ಹೊಸ ವಿವಿಯ ಅವಶ್ಯಕ ಇತ್ತು. ಜಾನಪದ, ಮಹದೇಶ್ವರರ ಮಹಾಕಾವ್ಯ, ಸಾಂಸ್ಕೃತಿಕ, ಅರಣ್ಯ ಸಂಪತ್ತು, ಹುಲಿ ಸಂರಕ್ಷಿತ ಪ್ರದೇಶಗಳು ಸೇರಿದಂತೆ ಹಲವು ವೈಶಿಷ್ಠ್ಯಗಳನ್ನು ಹೊಂದಿದೆ’ ಎಂದರು.

ಕೌಶಲ ಹಾಗೂ ಗಿರಿಜನರ ವಿಷಯಗಳನ್ನು ಒಳಗೊಂಡ ವಿಶೇಷ ವಿವಿ ಸ್ಥಾಪನೆಗೆ ಅವಕಾಶ ಇದೆ. ವೃತ್ತಿ ಆಧರಿತ ಕೋರ್ಸುಗಳನ್ನು ಆರಂಭಿಸಬಹುದು. ಉತ್ಕೃಷ್ಟವಾದ ಗ್ರಾನೈಟ್ಗೆ ಹೆಸರಾದ ನಮ್ಮ ಜಿಲ್ಲೆಯಲ್ಲಿ ಕೌಶಲ್ಯದ ಕೊರತೆಯಿಂದ ಇದಕ್ಕೆ ಸಂಬಂಧಿಸಿದ ಉದ್ಯೋಗಕ್ಕೆ ಬೇರೆಯವರನ್ನು ಅವಲಂಬಿಸಬೇಕಿದೆ. ಸ್ಥಳೀಯರಿಗೆ ಕೌಶಲ ನೀಡಿ ಉದ್ಯೋಗ ನೀಡಬಹುದು ಎಂದರು.

ವಿವಿ ಸ್ಥಾಪನೆಗೆ ಅಗತ್ಯವಿರುವ ಹೆಚ್ಚುವರಿ ಭೂಮಿಯನ್ನು ಗುರುತಿಸಲು ಚಾಮರಾಜನಗರ ತಾಲ್ಲೂಕಿನ ಭಾಗದಲ್ಲಿ ಲಭ್ಯವಿರುವ ಕಡೆ ಪರಿಶೀಲಿಸಲಾಗುವುದು. ಈ ಸಂಬಂಧ ಅಧಿಕಾರಿಗಳಿಗೆ ಸೂಚನೆ ನೀಡುವುದಾಗಿ ಡಾ. ಎಂ.ಆರ್. ರವಿ ಅವರು ತಿಳಿಸಿದರು.

ತಜ್ಞರ ಸಮಿತಿಯ ಅಧ್ಯಕ್ಷ ಜಿ. ಹೇಮಂತ್ ಕುಮಾರ್ ಅವರು ಮಾತನಾಡಿ, ‘ಜಿಲ್ಲೆಯ ಶೈಕ್ಷಣಿಕ ಅಭಿವೃದ್ಧಿಗೆ ಪೂರಕವಾಗಿ ದೂರದೃಷ್ಟಿಯನ್ನು ಇಟ್ಟುಕೊಂಡು ಪ್ರತ್ಯೇಕ ವಿವಿ ಸ್ಥಾಪಿಸುವ ಕುರಿತು ಈಗಾಗಲೇ ಸಭೆ ನಡೆಸಲಾಗಿದೆ’ ಎಂದರು.

ಹೆಚ್ಚುವರಿ ಜಿಲ್ಲಾಧಿಕಾರಿ ಎಸ್. ಕಾತ್ಯಾಯಿನಿದೇವಿ, ತಹಶೀಲ್ದಾರರಾದ ಚಿದಾನಂದ ಗುರುಸ್ವಾಮಿ, ರವಿಶಂಕರ್, ಸಮಿತಿಯ ಸದಸ್ಯರಾದ ಪ್ರೊ.ಟಿ.ಡಿ. ಕೆಂಪರಾಜು, ಅಂಬೇಡ್ಕರ್ ಸ್ನಾತಕೋತ್ತರ ಅಧ್ಯಯನ ಕೇಂದ್ರದ ನಿರ್ದೇಶಕ ಪ್ರೊ.ಶಿವಬಸವಯ್ಯ, ಮೈಸೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯರಾದ ಪ್ರದೀಪ್ ಕುಮಾರ್ ದೀಕ್ಷಿತ್, ಎಸ್ಟೇಟ್ ಆಫೀಸರ್ ಜಯರಾಂ, ಪಿ.ಎಂ.ಇ. ಬೋರ್ಡ್‌ನ ಚೇರ್‌ಮೆನ್ ಲೋಕ್‌ನಾಥ್, ಕಾರ್ಯಪಾಲಕ ಎಂಜಿನಿಯರ್ ಕುಮಾರ್, ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಗಿರೀಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT