ಶನಿವಾರ, ಜೂನ್ 19, 2021
27 °C
ಜಿಲ್ಲೆಯಲ್ಲಿ ಮೊದಲ ಬಾರಿಗೆ ‘ಪಬ್ಲಿಕ್ ಅಡ್ರೆಸ್ ಸಿಸ್ಟಂ’ ಅನುಷ್ಠಾನ

ಇನ್ನು ಮುಂದೆ ವೃತ್ತಗಳಲ್ಲಿ ಪೊಲೀಸರಿಂದ ಪಾಠ

ಕೆ.ಎಸ್.ಗಿರೀಶ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ನಗರದ ವೃತ್ತಗಳಲ್ಲಿ ಇನ್ನು ಮುಂದೆ ಸಂಚಾರ ನಿಯಮಗಳು ಸೇರಿದಂತೆ ಕೋವಿಡ್ ಮುನ್ನಚ್ಚರಿಕೆ ಕ್ರಮಗಳನ್ನು ಕುರಿತು ಪೊಲೀಸರು ಪಾಠ ಮಾಡಲಿದ್ದಾರೆ. ಇದಕ್ಕಾಗಿಯೇ ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ‘ಪಬ್ಲಿಕ್ ಅಡ್ರೆಸ್ ಸಿಸ್ಟಂ’ ಎಂಬ ವಿನೂತನ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದೆ.

ದಂಡ ವಿಧಿಸುವುದಕ್ಕಿಂತ ಧ್ವನಿವರ್ಧಕದ ಮೂಲಕ ಅರಿವು ಮೂಡಿಸುವುದು ಇದರ ಪ್ರಧಾನ ಉದ್ದೇಶ.

ವೃತ್ತಗಳಲ್ಲಿ ಸಂಚಾರ ನಿಯಂತ್ರಣಕ್ಕೆಂದು ಇರುವ ಸಂಚಾರ ಪೊಲೀಸರು ‘ವಿಷಲ್’ ಹಾಗೂ ಕೈಸನ್ನೆಗಳ ಮೂಲಕ  ಸಾರ್ವಜನಿಕರಿಗೆ ಸಂದೇಶ ನೀಡುತ್ತಿದ್ದರು. ಆದರೆ, ಈಗ ಅವರಿಗೆ ಧ್ವನಿವರ್ಧಕವನ್ನು ನೀಡಲಾಗಿದೆ. ಇದರ ಮೂಲಕ ಅವರು ತಮ್ಮ ಕಣ್ಣಿಗೆ ಬೀಳುವ ಸಂಚಾರ ನಿಯಮ ಉಲ್ಲಂಘನೆ ಕುರಿತು ಹೇಳುತ್ತಾರೆ. ಇದು ನಿಯಮ ಉಲ್ಲಂಘಿಸುವವರಿಗೆ ಮಾತ್ರವಲ್ಲ ವೃತ್ತದಲ್ಲಿರುವ ಎಲ್ಲರ ಕಿವಿಗೂ ಬೀಳುತ್ತದೆ. ಇದರಿಂದ ಎಲ್ಲರಲ್ಲೂ ನಿಯಮದ ಕುರಿತು ಜಾಗೃತಿ ಮೂಡುತ್ತದೆ.

ಸಿಗ್ನಲ್‌ನಲ್ಲಿ ಒಂದು ಕಡೆ ವಾಹನ ಸವಾರರು ಹೋಗುತ್ತಿದ್ದರೆ, ಮತ್ತೆ ಮೂರು ಕಡೆ ಹಸಿರು ದೀಪಕ್ಕಾಗಿ ಕಾದು ಸವಾರರು ನಿಂತಿರುತ್ತಾರೆ. ಇವರಿಗೆ ಪೊಲೀಸರು ಹೇಳುವ ಜಾಗೃತಿ ಸಂದೇಶಗಳು ತಲುಪುತ್ತವೆ.

ವಾಹನ ವಿಮೆಯ ಮಹತ್ವ, ಹೆಲ್ಮೆಟ್‌ ಇಲ್ಲದೇ ಚಾಲನೆ ಮಾಡುವುದರಿಂದ ಆಗುವ ಅನಾಹುತಗಳು, ವಾಹನದ ದಾಖಲಾತಿಗಳ ಮಹತ್ವ ಮೊದಲಾದ ಸಂಚಾರ ನಿಯಮಗಳ ಕುರಿತು ಪೊಲೀಸರು ಹೇಳುತ್ತಾರೆ.

ಕೋವಿಡ್‌ಗೆ  ಪ್ಲಸ್‌ ಪಾಯಿಂಟ್

ಕೋವಿಡ್‌ ಉತ್ತುಂಗದಲ್ಲಿರುವ ಈ ಹೊತ್ತಿನಲ್ಲಿ ಈ ವಿನೂತನ ವ್ಯವಸ್ಥೆ ಜಾರಿಗೆ ಬಂದಿರುವುದು ಜಿಲ್ಲೆಯ ಜನರಿಗೆ ಕೋ್ವಿಡ್ ನಿಯಮಗಳನ್ನು ಕುರಿತು ತಿಳಿ ಹೇಳುವುದಕ್ಕೂ ಇದು ನೆರವಾಗಲಿದೆ. ಕೋವಿಡ್ ಲಕ್ಷಣಗಳು, ಪದೇ ಪದೇ ಕೈ ತೊಳೆಯುವುದರಿಂದ ಆಗುವ ಲಾಭಗಳು, ಮಾಸ್ಕ್‌ನ್ನು ಏಕೆ ಧರಿಸಬೇಕು ಎಂಬಿತ್ಯಾದಿ ವಿಚಾರಗಳನ್ನು ಪೊಲೀಸರು ಮೈಕ್‌ನಲ್ಲಿ ಹೇಳುತ್ತಾರೆ. ಇದು ವೃತ್ತದ 4 ದಿಕ್ಕುಗಳಿಗೂ ಕೇಳಿಸುತ್ತದೆ. ಇದರಲ್ಲಿ ಸ್ವಯಂಚಾಲಿತವಾಗಿ ಧ್ವನಿ ಬಿತ್ತರಿಸುವ ವ್ಯವಸ್ಥೆಯೂ ಇದೆ.

ಈ ಕುರಿತು ‘ಪ್ರಜಾವಾಣಿ’ ಸಿಪಿಐ ಮಹೇಶ್‌ ಅವರನ್ನು ಸಂಪರ್ಕಿಸಿದಾಗ ಅವರು, ‘ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಹೆಚ್ಚುವರಿ ವರಿಷ್ಠಾಧಿಕಾರಿ ಅವರ ಸತತ ಪರಿಶ್ರಮದ ಫಲವಾಗಿ ವಿನೂತನ ಸಾಧನಗಳು ನಮ್ಮ ಕೈಸೇರಿವೆ. ಈ ಮೂಲಕ ನಾವು ಸಂಚಾರ ಪೊಲೀಸರೊಂದಿಗೆ ಸಂಚಾರ ನಿಯಮಗಳ ಕುರಿತು ಹಾಗೂ ಕೋವಿಡ್‌ ಕುರಿತೂ ಜನರಲ್ಲಿ ಜಾಗೃತಿ ಮೂಡಿಸಲು ನೆರವಾಗುತ್ತದೆ’ ಎಂದು ಹೇಳಿದರು.

ಮೈಸೂರಿನಲ್ಲಿ ಯಶಸ್ವಿ

ಈಗಾಗಲೇ ಇಂತಹ ವ್ಯವಸ್ಥೆಯು ಮೈಸೂರಿನಲ್ಲಿ ಯಶಸ್ವಿಯಾಗಿದೆ. ಸಂಚಾರ ನಿಯಮ ಉಲ್ಲಂಘಿಸುವ ವ್ಯಕ್ತಿ ಹಾಕಿರುವ ಬಟ್ಟೆಯ ಬಣ್ಣವನ್ನು ಉಲ್ಲೇಖಿಸಿ ಪೊಲೀಸರು ಎಲ್ಲರಿಗೂ ಕೇಳುವಂತೆ ಧ್ವನಿವರ್ಧಕದಲ್ಲಿ ಹೇಳುವುದರಿಂದ ವ್ಯಕ್ತಿಗೆ ಮುಜುಗರ ಉಂಟಾಗುತ್ತದೆ. ಮತ್ತೆ ಇಂತಹ ತಪ್ಪನ್ನು ಆತ ಮಾಡಲು ಹಿಂದೇಟು ಹಾಕುತ್ತಾನೆ. ಪೊಲೀಸರ ಜೋರು ಧ್ವನಿ ಕೇಳಿ ಬರುವುದರಿಂದ ಸಾಮಾನ್ಯವಾಗಿ ಸಾರ್ವಜನಿಕರು ನಿಯಮ ಉಲ್ಲಂಘಿಸಲು ಮುಂದಾಗುವುದಿಲ್ಲ. ಸುಲಭವಾಗಿ ಸಿಕ್ಕಿ ಬೀಳಬಹುದು, ಎಲ್ಲರ ಮುಂದೆ ಮುಜುಗರ ಉಂಟಾಗುತ್ತದೆ ಎಂಬ ಕಾರಣಕ್ಕೆ ಇವರು ನಿಯಮ ಪಾಲಿಸುತ್ತಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.