ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಲ್ಯವಿವಾಹ ತಡೆಯಿರಿ, ಮಕ್ಕಳಿಗೆ ಶಿಕ್ಷಣ ನೀಡಿ: ಶ್ರೀಧರ

ವಿಶ್ವ ಆದಿವಾಸಿಗಳ ದಿನಾಚರಣೆ: ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯದರ್ಶಿ ಸಲಹೆ
Last Updated 9 ಆಗಸ್ಟ್ 2022, 16:12 IST
ಅಕ್ಷರ ಗಾತ್ರ

ಚಾಮರಾಜನಗರ: ‘ಆದಿವಾಸಿಗಳು ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಬೇಕು. ಬಾಲ್ಯ ವಿವಾಹಕ್ಕೆ ಪ್ರೋತ್ಸಾಹ ನೀಡಬಾರದು’ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶ್ರೀಧರ ಎಂ. ಮಂಗಳವಾರ ಹೇಳಿದರು.

ನಗರದ ಲ್ಯಾಂಪ್ಸ್ ಗಿರಿಜನ ಭವನದಲ್ಲಿ ಜಿಲ್ಲಾ ಬುಡಕಟ್ಟು ಗಿರಿಜನ ಅಭಿವೃದ್ಧಿ ಸಂಘದ ವತಿಯಿಂದ ಆಯೋಜಿಸಿದ್ದ ವಿಶ್ವ ಆದಿವಾಸಿ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಜಿಲ್ಲಾ ಬುಡಕಟ್ಟು ಗಿರಿಜನ ಅಭಿವೃದ್ಧಿ ಸಂಘ ಹಮ್ಮಿಕೊಂಡಿದ್ದ ವಿಶ್ವ ಆದಿವಾಸಿ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಗಿರಿಜನರಲ್ಲಿ ಬಾಲ್ಯ ವಿವಾಹ ಹೆಚ್ಚಿದೆ. ಇದಕ್ಕೆ ಅವಕಾಶ ಕೊಡಬಾರದು. ಎರಡನೇ ಮದುವೆಯಾಗುವುದಕ್ಕೂ ಮುನ್ನ ಮೊದಲ ವಿವಾಹದಲ್ಲಿ ವಿಚ್ಛೇದನ ಪಡೆಯಬೇಕು. ಇಲ್ಲದಿದ್ದರೆ ಕಾನೂನು ಉಲ್ಲಂಘನೆಯಾಗುತ್ತದೆ. ನಾವೆಲ್ಲರೂ ಸಂವಿಧಾನದ ಅಡಿಯಲ್ಲೇ ಕಾರ್ಯನಿರ್ವಹಿಸಬೇಕು. ಎಲ್ಲರೂ ಕಾನೂನುಗಳ ಬಗ್ಗೆ ಅರಿಯಬೇಕು’ ಎಂದರು.

‘ಜಿಲ್ಲೆಯಲ್ಲಿ ಶೇ 48ರಷ್ಟು ಅರಣ್ಯ ಇದೆ. ಇದಕ್ಕೆ ಆದಿವಾಸಿಗಳೇ ಕಾರಣ. ಆದರೆ, ಕಾಡಿನ ಒಳಗೆ ವಾಸಿಸುವ ಇವರು ಇನ್ನೂ ಮೂಲಸೌಕರ್ಯಗಳಿಂದ ವಂಚಿತರಾಗಿದ್ದಾರೆ. ರಸ್ತೆ, ವಿದ್ಯುತ್‌ ಆರೋಗ್ಯ ಸೇವೆಗಳಂತಹ ಕನಿಷ್ಠ ಸೇವೆಗಳು ಸಿಗುತ್ತಿಲ್ಲ. ಅವರಿಗೆ ಮೂಲ ಸೌಕರ್ಯ ಕಲ್ಪಿಸುವ ಮೂಲಕ ಮುಖ್ಯವಾಹಿನಿಗೆ ತರಬೇಕು. ಸರ್ಕಾರದ ಸೌಲಭ್ಯಗಳನ್ನು ಅವರಿಗೆ ತಲುಪಿಸಬೇಕು. ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯಿತಿ ಈ ಕೆಲಸ ಮಾಡಬೇಕು’ ಎಂದು ಹೇಳಿದರು.

ಶಿಕ್ಷಣ ನೀಡಿ: ಜಿಲ್ಲಾ ‍ಪರಿಶಿಷ್ಟ ವರ್ಗಗಳ ಕಲ್ಯಾಣ ಅಧಿಕಾರಿ ಮಂಜುಳಾ ಮಾತನಾಡಿ, ‘ಗಿರಿಜನರಲ್ಲಿ ಬಾಲ್ಯವಿವಾಹ ಹೆಚ್ಚಿದೆ. ಮಹಿಳೆಯರು ಅಪೌಷ್ಟಿಕತೆ ಹಾಗೂ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಸಾಮಾಜಿಕವಾಗಿ ಮುಂದಿದ್ದರೂ, ಶೈಕ್ಷಣಿಕವಾಗಿ, ಆರ್ಥಿಕವಾಗಿ ಹಿಂದಿದ್ದಾರೆ. ಅಭಿವೃದ್ಧಿ ಹೊಂದಲು ಶಿಕ್ಷಣ ಅತ್ಯಂತ ಮುಖ್ಯ. ಆದಿವಾಸಿಗಳು ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸಲು ಮುಂದಾಗಬೇಕು’ ಎಂದರು.

ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ಸರಸ್ವತಿ ಮಾತನಾಡಿ, ‘ಬುಡಕಟ್ಟು ಮಹಿಳೆ ದೇಶದ ರಾಷ್ಟ್ರಪತಿ ಆಗಿದ್ದಾರೆ. ಒಬ್ಬರು ಸಾಕಾಗುವುದಿಲ್ಲ. ಇನ್ನೂ ಹಲವರು ನ್ಯಾಯಾಧೀಶರಾಗಬೇಕು, ಮಂತ್ರಿಗಳಾಗಬೇಕು, ವೈದ್ಯರಾಗಬೇಕು, ಎಂಜಿನಿಯರ್ ಆಗಬೇಕು. ಇದಕ್ಕಾಗಿ ಶಿಕ್ಷಣ ಪಡೆಯಬೇಕು. ಮಕ್ಕಳಿಗೆ ಮದುವೆ ಮಾಡುವುದನ್ನು ಬಿಡಬೇಕು. ನಿಮಗೆ ಯಾವುದೇ ಮಾಹಿತಿ ಬಂದರೆ ಮಕ್ಕಳ ಸಹಾಯವಾಣಿ 1098ಕ್ಕೆ ಕರೆ ಮಾಡಿ’ ಎಂದು ಹೇಳಿದರು.

ಕಾರ್ಯಕ್ರಮಕ್ಕೂ ಮುನ್ನ ಚಾಮರಾಜೇಶ್ವರ ದೇವಾಲಯದ ಮುಂಭಾಗದಿಂದ ಸತ್ಯಮಂಗಲ ರಸ್ತೆಯಲ್ಲಿರುವ ಗಿರಿಜನ ಲ್ಯಾಂಪ್ಸ್‌ ಭವನದವರೆಗೆ ಮೆರವಣಿಗೆ ನಡೆಯಿತು.

ಜಿಲ್ಲಾ ಬುಡಕಟ್ಟು ಗಿರಿಜನ ಅಭಿವೃದ್ಧಿ ಸಂಘದ ಅಧ್ಯಕ್ಷ ಸಿ.ಮಹದೇವ, ವಿಜಿಕೆಕೆ ಟಿಎಚ್‌ಆರ್‌ಸಿ ನಿರ್ದೇಶಕಿ ಡಾ.ತಾನಿಯ ಶೇಷಾದ್ರಿ, ರಾಜ್ಯ ಸೋಲಿಗರ ಅಭಿವೃದ್ಧಿ ಸಂಘದ ಅಧ್ಯಕ್ಷ ಜಡೇಸ್ವಾಮಿ, ರಾಜ್ಯ ಮೂಲ ಆದಿವಾಸಿ ವೇದಿಕೆ ಕಾರ್ಯದರ್ಶಿ ಮುತ್ತಯ್ಯ, ಸೋಲಿಗರ ಅಭಿವೃದ್ಧಿ ಸಂಘದ ಹನೂರು ತಾಲ್ಲೂಕು ಅಧ್ಯಕ್ಷ ರಂಗೇಗೌಡ, ಗುಂಡ್ಲುಪೇಟೆ ಗಿರಿಜನ ಶ್ರೇಯೋಭಿವೃದ್ಧಿ ಸಂಘದ ಅಧ್ಯಕ್ಷೆ ಪುಟ್ಟಮ್ಮ, ಮುಖಂಡರಾದ ಮಾದಮ್ಮ, ಕೇತಮ್ಮ, ಮಹದೇವಮ್ಮ, ಮಾದಮ್ಮ, ನಾಗಮ್ಮ, ಮಹದೇವಮ್ಮ, ಸುಶೀಲಾ ಇತರರು ಇದ್ದರು.

‘ಮೂಲಸೌಕರ್ಯ, ಆರೋಗ್ಯ ಸೇವೆ ಒದಗಿಸಿ’
ಪ್ರಾಸ್ತಾವಿಕವಾಗಿ ಮಾತನಾಡಿದಜಿಲ್ಲಾ ಬುಡಕಟ್ಟು ಗಿರಿಜನ ಅಭಿವೃದ್ಧಿ ಸಂಘದ ಕಾರ್ಯದರ್ಶಿ ಸಿ.ಮಾದೇಗೌಡ ಮಾತನಾಡಿ, ‘ಆದಿವಾಸಿ ಮಹಿಳೆಯರಲ್ಲಿ ತಾರತಮ್ಯ ಇಲ್ಲ. ಸಂಸ್ಕೃತಿಯನ್ನು ಬೆಳೆಸುವಲ್ಲಿ ಮಹಿಳೆಯರು ಪ್ರಮುಖ ಪಾತ್ರವಹಿಸುತ್ತಾರೆ. ಮದುವೆ ವಿಚಾರದಲ್ಲೂ ಮಹಿಳೆಯರಿಗೆ ಸಂಪೂರ್ಣ ಸ್ವಾತಂತ್ರ್ಯವಿದೆ. ಆದಿವಾಸಿಗಳಿಗೆ ಮೂಲ ಸೌಕರ್ಯಗಳನ್ನು ಕಲ್ಪಿಸುವ ಅಗತ್ಯವಿದೆ. ಆದಿವಾಸಿಗಳಿಗೆ ಗುಣಮಟ್ಟದ ಶಿಕ್ಷಣ ಸಿಗುತ್ತಿಲ್ಲ. ಅಲ್ಲದೇ ಆರೋಗ್ಯ ಸಮಸ್ಯೆಗಳು ಕಾಡುತ್ತವೆ. ಆಸ್ಪತ್ರೆಗಳಲ್ಲಿ ಉತ್ತಮ ಸೇವೆ ಸಿಗುತ್ತಿಲ್ಲ. ಅನುವಂಶಿಯ ಕಾಯಿಲೆಗಳಿಗೆ ಸರಿಯಾದ ಚಿಕಿತ್ಸೆ ಸಿಗುತ್ತಿಲ್ಲ’ ಎಂದರು.

‘ನಮ್ಮ ಮುಂದೆ ಹಲವು ಸವಾಲುಗಳಿದ್ದು, ಒಟ್ಟಾಗಿ ಹೋರಾಟ ಮಾಡಬೇಕಾಗಿದೆ. ಮಲೆ ಮಹದೇಶ್ವರ ವನ್ಯಧಾಮವನ್ನು ಹುಲಿ ಯೋಜನೆ ಘೋಷಣೆ ಮಾಡುವುದನ್ನು ತಡೆಯಬೇಕಾಗಿದೆ. ಬಂಡೀಪುರದಲ್ಲಿ ಅರಣ್ಯ ಉಪ ಉತ್ಪನ್ನಗಳ ಸಂಗ್ರಹಕ್ಕೆ ಅವಕಾಶ ಮಾಡಿಕೊಡುತ್ತಿಲ್ಲ. ಬಿಳಿಗಿರಿ ರಂಗನಬೆಟ್ಟದಲ್ಲಿ 25 ಸೋಲಿಗ ಕುಟುಂಬಗಳನ್ನು ಒಕ್ಕಲೆಬ್ಬಿಸುವ ಪ್ರಯತ್ನ ನಡೆಯುತ್ತಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT