ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

International Labours' Day | ಬರ, ಚುನಾವಣೆ: ಕುಸಿದ ಶ್ರಮಿಕರ ಶಕ್ತಿ

ನಾ.ಮಂಜುನಾಥಸ್ವಾಮಿ
Published 1 ಮೇ 2024, 5:04 IST
Last Updated 1 ಮೇ 2024, 5:04 IST
ಅಕ್ಷರ ಗಾತ್ರ

ಯಳಂದೂರು: ಲೋಕಸಭಾ ಚುನಾವಣೆ, ಬಿರು ಬೇಸಿಗೆ ಈ ಬಾರಿ ಕಾರ್ಮಿಕರ ಶಕ್ತಿಯನ್ನು ಕುಗ್ಗಿಸಿದೆ. 

ತಾಲ್ಲೂಕಿನಲ್ಲಿ ಉದ್ಯೋಗ ಖಾತ್ರಿ ಯೋಜನೆ ಸಕ್ರಿಯವಾಗಿದೆ. ಅರೆ ಕುಶಲ ಕಾರ್ಮಿಕರೂ ಇದ್ದಾರೆ. ಪೌರ ಕೆಲಸಗಾರರು ದುಡಿಯುತ್ತಿದ್ದಾರೆ. ತೋಟ ಮತ್ತು ಕಬ್ಬಿನ ಗದ್ದೆಗಳಲ್ಲಿ ಅಸಂಘಟಿತ ಕೂಲಿಗಳು ಸೇರಿದ್ದಾರೆ. ಆದರೆ, 40 ಡಿಗ್ರಿ ಸೆಲ್ಸಿಯಸ್‌ಗೆ ತಲುಪಿರುವ ತಾಪಮಾನ ಕಾರ್ಮಿಕರು ಕೆಲಸಕ್ಕೆ ಇಳಿಯದಂತೆ ಮಾಡಿದೆ. ಇದರಿಂದ ಅಭಿವೃದ್ಧಿ ಕೆಲಸ ಮತ್ತು ಕೂಲಿ ಕಾರ್ಮಿಕರ ಕೊರತೆ ಪಟ್ಟಣ ಮತ್ತು ಗ್ರಾಮೀಣ ಭಾಗದಲ್ಲಿ ಕಂಡು ಬರುತ್ತಿದೆ. 

ತಾಲ್ಲೂಕಿನಲ್ಲಿ ಕೈಗಾರಿಕೆಗಳು ಇಲ್ಲ. ಹಾಗಾಗಿ ಕಾರ್ಮಿಕರು ಬಹುತೇಕ ಕೃಷಿ ಕ್ಷೇತ್ರದಲ್ಲಿ ಉದ್ಯೋಗ ಕಂಡುಕೊಳ್ಳಬೇಕಿದೆ. ತಾಂತ್ರಿಕ ಪದವಿ ಪಡೆದವರ ಸಂಖ್ಯೆ ಕಡಿಮೆ. ಕಲಿತ ಮಹಿಳೆಯರ ಕೊರತೆಯೂ ಬಾಧಿಸಿದೆ. ಹಾಗಾಗಿ, ಕೌಶಲ ರಹಿತ ಸ್ತ್ರೀಯರು ಕೆಲಸ ಅರಸಿ ಜವಳಿ (ಗಾರ್ಮೆಂಟ್ಸ್)ಗೆ ತೆರಳಿದರೆ, ಉಳಿದವರು ಆಲೆಮನೆ ಹಾಗೂ ಸಣ್ಣಪುಟ್ಟ ಕೂಲಿ ಕಾಯಕದಲ್ಲಿ ಬದುಕು ರೂಪಿಸಿಕೊಂಡಿದ್ದಾರೆ.

‘ಈ ವರ್ಷ ಬರದ ಬೇಗೆ ಸಣ್ಣಪುಟ್ಟ ಕೆಲಸಗಳನ್ನು ಕಸಿದಿದೆ. ಮಹಾತ್ಮ ಗಾಂಧಿ ರಾಸ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಉದ್ಯೋಗ ಚೀಟಿ ಇದ್ದವರು ಕೂಡ ಪೂರ್ಣ ಪ್ರಮಾಣದಲ್ಲಿ ಕೆಲಸಕ್ಕೆ ಹಾಜರಾಗುತ್ತಿಲ್ಲ. ಅವರು ಮೈಸೂರು ಮತ್ತಿತರ ಕಡೆ ತೆರಳಿ ಕೂಲಿ ಅರಸುತ್ತಾರೆ. ಕಾಫಿತೋಟ ಮತ್ತಿತರ ಕಡೆ ಕೂಲಿ ಮಾಡುತ್ತಿದ್ದಾರೆ. ಚುನಾವಣೆ ಸಂದರ್ಭ ಖಾತ್ರಿ ಕೆಲಸಗಳಿಗೂ ಹೆಚ್ಚು ಜನರು ತೊಡಗದೆ, ಪ್ರಚಾರ ಕಾರ್ಯದಲ್ಲಿ ಸಮಯ ಕಳೆದಿದ್ದಾರೆ. ಹೊಸ ಯೋಜನೆಗಳು ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ. ಖಾತ್ರಿಯಲ್ಲಿ ನೀಡುವ ಕೂಲಿ ಸಾಕಾಗುವುದಿಲ್ಲ’ ಎಂದು ಹೇಳುತ್ತಾರೆ ಗುಂಬಳ್ಳಿ ಗ್ರಾಮದ ಕಾರ್ಮಿಕ ನಾಗರಾಜು.

‘ಗೃಹ ನಿರ್ಮಾಣ, ಇಟ್ಟಿಗೆ ತಯಾರಿ, ಹೋಟೆಲ್, ಗ್ಯಾರೇಜ್, ಪೆಟ್ರೋಲ್ ಬಂಕ್, ವೆಲ್ಡಿಂಗ್ ವರ್ಕ್ ಹಾಗೂ ಆಲೆಮನೆಗಳು ಒಂದಷ್ಟು ಕೆಲಸ ನೀಡುತ್ತವೆ. ಈ ಸೇವಾ ವಲಯಗಳಲ್ಲಿ ಸಮಯದ ಮಿತಿ ಇಲ್ಲ. ಇಲ್ಲಿ ಪುರುಷರ ಪ್ರಾಬಲ್ಯವೇ. ಮಹಿಳೆಯರು ಸಂಘ-ಸಂಸ್ಥೆಗಳಲ್ಲಿ ತೊಡಗಿದ್ದು, ಸಾಲ ಸೌಲಭ್ಯ ಪಡೆದು ಗೃಹ ಕಾರ್ಯಗಳಿಗೆ ಸೀಮಿತರಾಗಿ ಇದ್ದಾರೆ’ ಎಂದು ಗೌಡಹಳ್ಳಿಯ ಬಿ.ಲಲಿತಾ ಅವರು ‘ಪ್ರಜಾವಾಣಿ’ಗೆ ತಿಳಿಸಿದರು. 

17,439 ಜನರಿಗೆ ಉದ್ಯೋಗ ಕಾರ್ಡ್‌: 

‘ತಾಲ್ಲೂಕಿನಲ್ಲಿ 28 ಸಾವಿರ ಶ್ರಮಿಕರು ಇದ್ದಾರೆ. 17,439 ಮಂದಿ ಜಾಬ್ ಕಾರ್ಡ್ ಪಡೆದಿದ್ದಾರೆ. ಉದ್ಯೋಗ ಖಾತ್ರಿ ಕೆಲಸಕ್ಕೆ ಚಾಲನೆ ಸಿಕ್ಕಿದೆ. ದುಡಿಯುವ ಸ್ಥಳದಲ್ಲಿ ವೈದ್ಯಕೀಯ ತಪಾಸಣೆ, ಕೂಸಿನ ಮನೆ ಸೌಕರ್ಯ, ಶುದ್ಧ ನೀರು ಪೂರೈಕೆ ಮತ್ತು ಸರ್ಕಾರದ ನೆರವು ಕಲ್ಪಿಸಲಾಗಿದೆ. ವಿಶ್ರಾಂತಿ, ಮಕ್ಕಳಿಗೆ ಆರ್ಥಿಕ ನೆರವು ನೀಡಲು ಯೋಜನೆ ಅವಕಾಶ ಕಲ್ಪಿಸಿದೆ’ ಎಂದು ತಾಲ್ಲೂಕು ಕಾರ್ಯನಿರ್ವಾಕಾಧಿಕಾರಿ ಪಿ.ಶ್ರೀನಿವಾಸ್ ‘ಪ್ರಜಾವಾಣಿ’ಗೆ ತಿಳಿಸಿದರು.

ಇಂದು ಅಂತರರಾಷ್ಟ್ರೀಯ ಕಾರ್ಮಿಕ ದಿನ

ದುಡಿಯುವ ವರ್ಗ ರಾಷ್ಟ್ರದ ಶಕ್ತಿ. ಅಭಿವೃದ್ಧಿಯ ಹರಿಕಾರರು. ಆಯಾ ದೇಶದ ಜೀವನ ಮಟ್ಟವನ್ನು ಹೆಚ್ಚಿಸುವ ಹಾಗೂ ಜಾಗತಿಕ ಉತ್ಪಾದನೆಗೆ ಕೊಡುಗೆ ನೀಡುವ ಇವರು ಕಠಿಣ ಪರಿಶ್ರಮಿಗಳು. ಈ ದಿಸೆಯಲ್ಲಿ ಅಮೆರಿಕ 1882ರಿಂದ ‘ಶ್ರಮಿಕರ ದಿನ’ ಆಚರಿಸುತ್ತ ಬಂದಿದೆ. ಭಾರತ 1923ರಿಂದ ಕಾರ್ಮಿಕರ ಹಕ್ಕು ಕಾಯ್ದೆ ಶ್ರಮಿಕರ ಹಿತರಕ್ಷಣೆ ಲಿಂಗ ತಾರತಮ್ಮ ನಿವಾರಣೆ ಸಮಾನ ಕೆಲಸಕ್ಕೆ ಸಮಾನ ಕೂಲಿ ಬಗ್ಗೆ ಜಾಗೃತಿ ಮೂಡಿಸಿ ಕಾರ್ಮಿಕರ ಕಲ್ಯಾಣಕ್ಕೆ ಹಲವಾರು ಯೋಜನೆಗಳನ್ನು ರೂಪಿಸಿ ಗೌರವಿಸುತ್ತ ಬಂದಿದೆ.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT