ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂತರಜಿಲ್ಲೆ ಬಸ್‌ ಸಂಚಾರ ಆರಂಭ

120 ಬಸ್‌ಗಳ ಸಿದ್ಧತೆ, ಶೇ 75ರಷ್ಟು ಸಂಚಾರ, ಮುಂಜಾಗ್ರತಾ ಕ್ರಮಗಳ ಪಾಲನೆ
Last Updated 19 ಮೇ 2020, 16:49 IST
ಅಕ್ಷರ ಗಾತ್ರ

ಚಾಮರಾಜನಗರ: ನಗರವೂ ಸೇರಿದಂತೆ ಜಿಲ್ಲೆಯ ವಿವಿಧ ಭಾಗಗಳಿಂದ ಮೈಸೂರು, ಬೆಂಗಳೂರಿಗೆ ಮಂಗಳವಾರ ಕೆಎಸ್‌ಆರ್‌ಟಿಸಿ ಬಸ್‌ಗಳ ಸಂಚಾರ ಆರಂಭವಾಯಿತು.

ರಾಜ್ಯ ಸರ್ಕಾರವು, ಮಂಗಳವಾರ ಬೆಳಿಗ್ಗೆ 7 ಗಂಟೆಗೆ ಕೆಎಸ್‌ಆರ್‌ಟಿಸಿ ಬಸ್‌ಗಳ ಸಂಚಾರಕ್ಕೆ ಅವಕಾಶ ನೀಡಿದ್ದರಿಂದ ಹೊರ ಜಿಲ್ಲೆಗಳಿಗೆ ತೆರಳುವುದಕ್ಕಾಗಿ ಬೆಳಿಗ್ಗೆಯೇ ಬಸ್‌ ನಿಲ್ದಾಣದಲ್ಲಿ ಪ್ರಯಾಣಿಕರು ಸಾಲು ಗಟ್ಟಿ ನಿಂತಿದ್ದರು.

ಆದರೆ, ಜಿಲ್ಲಾಡಳಿತದ ಅನುಮತಿ ಸಿಗಲು ಸ್ವಲ್ಪ ತಡವಾಗಿದ್ದರಿಂದ ಪ್ರಯಾಣಿಕರೆಲ್ಲ ಕಾಯಬೇಕಾಯಿತು. ಇದರಿಂದಾಗಿ 55 ದಿನದ ನಂತರ ವಿವಿಧ ಕೆಲಸಗಳಿಗಾಗಿ ತೆರಳಬೇಕಾದವರು ಅಸಮಾಧಾನ ವ್ಯಕ್ತಪಡಿಸಿದರು. ಬೆಳಿಗ್ಗೆ 10 ಗಂಟೆ ನಂತರ ಬಸ್‌ ಸಂಚಾರ ಆರಂಭವಾಯಿತು. ಮೊದಲ ದಿನ, ಮೈಸೂರು ಮತ್ತು ಬೆಂಗಳೂರಿಗೆ ಬಸ್‌ಗಳು ಸಂಚರಿಸಿದವು.

ನಂಜನಗೂಡಿಗೆ ಇಲ್ಲ: ಮಂಗಳವಾರ ಒಂದು ಸ್ಥಳದಿಂದ ನಿಗದಿತ ಸ್ಥಳಕ್ಕೆ ನೇರ ಸಂಪರ್ಕ ಕಲ್ಪಿಸಲಾಗಿತ್ತು. ಮಧ್ಯದಲ್ಲಿ ಎಲ್ಲೂ ನಿಲುಗಡೆ ಇರಲಿಲ್ಲ. ಹಾಗಾಗಿ, ಚಾಮರಾಜನಗರ, ಕೊಳ್ಳೇಗಾಲ, ಗುಂಡ್ಲುಪೇಟೆಗಳಿಂದ ಮೈಸೂರಿಗೆ ಹೋಗುವ ಬಸ್‌ಗಳಿಗೆ ನಂಜನಗೂಡಿನಲ್ಲಿ ನಿಲುಗಡೆಗೆ ಅವಕಾಶ ಇರಲಿಲ್ಲ. ಇತ್ತ ಬೆಂಗಳೂರಿಗೆ ಹೋಗುವ ಬಸ್‌ಗಳು ಕೂಡ ಮಧ್ಯದಲ್ಲಿ ಎಲ್ಲೂ ನಿಲ್ಲಿಸಲಿಲ್ಲ.

120 ಬಸ್‌ ವ್ಯವಸ್ಥೆ: ಕಾರ್ಯಾಚರಣೆಗಾಗಿ ಕೆಎಸ್‌ಆರ್‌ಟಿಸಿ ಚಾಮರಾಜನಗರ ವಿಭಾಗವು 120 ಬಸ್‌ಗಳನ್ನು ಸಜ್ಜುಗೊಳಿಸಿತ್ತು. ಈ ಪೈಕಿ ಶೇ 75 ಬಸ್‌ಗಳು ಸಂಚಾರ ನಡೆಸಿವೆ. ಗರಿಷ್ಠ 30 ಪ್ರಯಾಣಿಕರನ್ನು ಕರೆದೊಯ್ಯುವುದಕ್ಕೆ ಮಾತ್ರ ಅವಕಾಶ ಇರುವುದರಿಂದ, ಜನರು ಬರುವವರೆಗೆ ಸಿಬ್ಬಂದಿ ಕಾದು ಕುಳಿತರು. ಮೈಸೂರು, ಬೆಂಗಳೂರಿಗೆ ಪ್ರತಿ 45ರಿಂದ 60 ನಿಮಿಷಕ್ಕೆ ಒಂದರಂತೆ ಬಸ್‌ ಸಂಚರಿಸಿತು.

‘ಬೆಳಿಗ್ಗೆ 10 ಗಂಟೆಯಿಂದ ಕಾರ್ಯಾಚರಣೆ ಆರಂಭಿಸಿದ್ದೇವೆ. ಮೈಸೂರು ಹಾಗೂ ಬೆಂಗಳೂರಿಗೆ ಮಾತ್ರ ಬಸ್‌ ಹಾಕಿದ್ದೇವೆ. ಮಂಡ್ಯಕ್ಕೂ ಸಂಚರಿಸುತ್ತಿಲ್ಲ. ನಿಗದಿತ ಸ್ಥಳದಲ್ಲಿ ಮಾತ್ರ ನಿಲುಗಡೆ ಮಾಡಲಾಗುತ್ತಿದೆ. ಮೊದಲ ದಿನ ಬೆಂಗಳೂರಿನಿಂದ ಮಾತ್ರ ಕೊಳ್ಳೇಗಾಲಕ್ಕೆ ಬಸ್‌ ಬಂದಿದೆ’ ಎಂದು ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಕೆ.ಎಚ್‌.ಶ್ರೀನಿವಾಸ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಬಸ್‌ನಲ್ಲಿ ಸಂಚಾರ ಮಾಡಿದವರೆಲ್ಲರೂ,ಲಾಕ್‌ಡೌನ್‌ ಅವಧಿಯಲ್ಲಿ ಬೇರೆ ಬೇರೆ ಸ್ಥಳಗಳಲ್ಲಿ ಸಿಕ್ಕಿ ಹಾಕಿಕೊಂಡವರು. ಕೆಲಸಕ್ಕಾಗಿ ಹೊರಟವರೂ ಇದ್ದಾರೆ’ ಎಂದು ಅವರು ಮಾಹಿತಿ ನೀಡಿದರು.

‘ಗ್ರಾಮಾಂತರ ಪ್ರದೇಶಕ್ಕೂ ಬಸ್‌ಗಳ ಸಂಚಾರಕ್ಕೆ ಅನುಮತಿ ಸಿಕ್ಕಿದೆ. ಆದರೆ, ಪ್ರಯಾಣಿಕರ ಕೊರತೆ ಇದೆ. ಬೇಡಿಕೆ ನೋಡಿಕೊಂಡು ಬಸ್‌ ವ್ಯವಸ್ಥೆ ಮಾಡಲಾಗುವುದು’ ಎಂದು ಹೇಳಿದರು.

ಮುಂಜಾಗ್ರತಾ ಕ್ರಮ: ‘ನಿಲ್ದಾಣಗಳಲ್ಲಿ ಹಾಗೂ ಬಸ್‌ಗಳಲ್ಲಿ ಕೋವಿಡ್‌–19 ನಿಯಂತ್ರಣಕ್ಕೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಪ್ರತಿಯೊಬ್ಬ ಪ್ರಯಾಣಿಕರಿಗೂ ಥರ್ಮಲ್‌ ಸ್ಕ್ರೀನಿಂಗ್‌ ಮಾಡಲಾಗುತ್ತಿದೆ. ಪ್ರತಿ ಟ್ರಿಪ್‌ ಆದ ಬಳಿಕ ಬಸ್‌ಗಳಿಗೆ ಸೋಂಕು ನಿವಾರಕ ಸಿಂಪಡಿಸಲಾಗುತ್ತದೆ.

ಬಸ್‌ನಲ್ಲಿ ಸ್ಯಾನಿಟೈಸರ್‌ ವ್ಯವಸ್ಥೆ ಮಾಡಲಾಗಿದೆ. 30 ಪ್ರಯಾಣಿಕರಿಗಷ್ಟೇ ಅವಕಾಶ ನೀಡಲಾಗುತ್ತಿದೆ. ಮಾಸ್ಕ್‌ ಧರಿಸಿದ ಪ್ರಯಾಣಿಕರನ್ನು ಮಾತ್ರ ಹತ್ತಿಸಲಾಗುತ್ತಿದೆ. ವಯಸ್ಸಾದವರು, ಮಕ್ಕಳಿಗೆ, ಅನಾರೋಗ್ಯ ಇರುವವರಿಗೆ ಪ್ರಯಾಣಕ್ಕೆ ಅವಕಾಶ ನೀಡುತ್ತಿಲ್ಲ’ ಎಂದು ಶ್ರೀನಿವಾಸ್‌ ತಿಳಿಸಿದರು.

ಜೂನ್‌ 1ರಿಂದ ಖಾಸಗಿ ಬಸ್‌ಗಳ ಸಂಚಾರ?
ಕೆಎಸ್‌ಆರ್‌ಟಿಸಿ ಬಸ್‌ಗಳ ಸಂಚಾರಕ್ಕೆ ಅನುಮತಿ ನೀಡಿರುವ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ, ‘ಬೆಳಿಗ್ಗೆ 7ರಿಂದ ಸಂಜೆ 7ರ ನಡುವೆ ಕೆಎಸ್‌ಆರ್‌ಟಿಸಿ ಬಸ್‌ಗಳ ಸಂಚಾರಕ್ಕೆ ಅನುಮತಿ ನೀಡಲಾಗಿದೆ. ಸದ್ಯದ ಮಟ್ಟಿಗೆ ಒಂದು ಸ್ಥಳದಿಂದ ನಿರ್ದಿಷ್ಟ ಸ್ಥಳದ ನಡುವೆ ಮಾತ್ರ ಸಂಚರಿಸಲು ಅವಕಾಶ ಕಲ್ಪಿಸಲಾಗಿದೆ’ ಎಂದರು.

‘ಖಾಸಗಿ ಬಸ್‌ಗಳ ಸಂಚಾರ ಸದ್ಯಕ್ಕೆ ಲಭ್ಯವಿಲ್ಲ. ಬಸ್‌ ಮಾಲೀಕರ ಸಂಘದ ಜೊತೆ ಸಭೆ ನಡೆಸಿದ್ದೇನೆ. ತೆರಿಗೆ ಸೇರಿದಂತೆ ಇನ್ನಿತರ ವಿಚಾರಗಳಿಗೆ ಸಂಬಂಧಿಸಿದಂತೆ ಮಾಲೀಕರು ಸಾರಿಗೆ ಇಲಾಖೆಗೆ ಕೆಲವು ಬೇಡಿಕೆ ಸಲ್ಲಿಸಿದ್ದಾರೆ. ಇಲಾಖೆ ಈ ಬಗ್ಗೆ ನಿರ್ಧಾರ ಕೈಗೊಳ್ಳಲಿದೆ. ಅದುವರೆಗೆ ಅವರು ಸಂಚಾರ ಆರಂಭಿಸುವುದು ಅನುಮಾನ. ಜೂನ್‌ 1ರಿಂದ ಖಾಸಗಿ ಬಸ್‌ಗಳೂ ಓಡಾಡುವ ನಿರೀಕ್ಷೆ ಇದೆ’ ಎಂದು ಹೇಳಿದರು.

ಆಟೊ, ಟ್ಯಾಕ್ಸಿಗಳಿಗೆ ಅವಕಾಶ
‘ಜಿಲ್ಲೆಯಲ್ಲಿ ಮಂಗಳವಾರದಿಂದ ಟ್ಯಾಕ್ಸಿ, ಆಟೊಗಳ ಸಂಚಾರಕ್ಕೂ ಅನುಮತಿ ನೀಡಲಾಗಿದೆ. ಆಟೊ ಹಾಗೂ ಟ್ಯಾಕ್ಸಿಗಳಲ್ಲಿಚಾಲಕ ಸೇರಿದಂತೆ ಮೂವರು, ಮ್ಯಾಕ್ಸಿ ಕ್ಯಾಬ್‌ಗಳಲ್ಲಿ ಒಟ್ಟು ಆಸನ ಸಾಮರ್ಥ್ಯದ ಶೇ 50ರಷ್ಟು ಪ್ರಯಾಣಿಕರ‌ನ್ನು ಕರೆದೊಯ್ಯಲು ಅವಕಾಶ ಇದೆ’ ಎಂದು ಜಿಲ್ಲಾಧಿಕಾರಿ ರವಿ ಹೇಳಿದರು.

ಚೆಕ್‌ಪೋಸ್ಟ್‌ಗಳಲ್ಲಿ ವಾಗ್ವಾದ
ಬಾಣಹಳ್ಳಿ ಸೇರಿದಂತೆ ವಿವಿಧ ಚೆಕ್‌ಪೋಸ್ಟ್‌ಗಳಲ್ಲಿ ಮಂಗಳವಾರ ಖಾಸಗಿ ವಾಹನಗಳಲ್ಲಿ ಸಂಚರಿಸುವವರಿಗೆ ಪಾಸ್‌ ತೋರಿಸುವಂತೆ ಸಿಬ್ಬಂದಿ ಹೇಳಿದಾಗ ವಾಗ್ವಾದ ನಡೆದವು.

‘ಕೆಎಸ್ಆರ್‌ಟಿಸಿ ಬಸ್‌ಗಳೇ ಸಂಚಾರ ಆರಂಭಿಸಿವೆ. ಹೀಗಿರುವಾಗ ಖಾಸಗಿ ವಾಹನದಲ್ಲಿ ಸಂಚರಿಸಿದರೆ ಏನಾಗುತ್ತದೆ?’ ಎಂದು ಜನರು ಪ್ರಶ್ನಿಸಿದರು.

ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ, ‘ಖಾಸಗಿ ವಾಹನಗಳಿಗೆ ಪಾಸ್‌ ಬೇಡ ಎಂಬ ಆದೇಶ ಸರ್ಕಾರದಿಂದ ಇನ್ನೂ ಬಂದಿಲ್ಲ. ಸದ್ಯದ ಮಟ್ಟಿಗೆ ಹಳೆಯ ನಿಯಮವೇ ಜಾರಿಯಲ್ಲಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT