ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಚ್ಚುಬೆಲ್ಲ: ಏರಿದ ಬೆಲೆ, ಕ್ವಿಂಟಲ್‌ಗೆ ₹ 5 ಸಾವಿರ

ಯಳಂದೂರು ಸುತ್ತಮುತ್ತ ಮುಚ್ಚಿದ ಆಲೆಮನೆ: ಉತ್ಪಾದನೆ ಇಳಿಮುಖ 
Published 13 ಮೇ 2023, 4:06 IST
Last Updated 13 ಮೇ 2023, 4:06 IST
ಅಕ್ಷರ ಗಾತ್ರ

ಯಳಂದೂರು: ತಾಲ್ಲೂಕಿನಲ್ಲಿ ಮಳೆ ಜೋರಾಗುತ್ತಿದೆ. ಇದರಿಂದ ಆಲೆಮನೆಗಳಿಗೆ ಕಬ್ಬು ಪೂರೈಕೆಗೆ ಹಿನ್ನಡೆಯಾಗಿದೆ. ಉರುವಲು ಮತ್ತು ಶ್ರಮಿಕರ ಕೊರತೆಯೂ ಬೆಲ್ಲದ ಉತ್ಪಾದನೆ ಕುಸಿತಕ್ಕೆ ಕಾರಣವಾಗಿದ್ದು, ಬೆಲೆಯಲ್ಲಿ ದಿಢೀರ್ ಏರಿಕೆ ಕಂಡಿದೆ. ಆದರೆ, ದರ ಹೆಚ್ಚಳದ ಲಾಭವನ್ನು ಪಡೆಯಲಾಗದ ಆತಂಕವನ್ನು ಕೃಷಿಕರು ಎದುರಿಸುವಂತೆ ಆಗಿದೆ.

ತಾಲ್ಲೂಕಿನಲ್ಲಿರುವ 10 ಸಾವಿರ ಹೆಕ್ಟೇರ್ ಕೃಷಿ ಭೂಮಿಯಲ್ಲಿ, 3.5 ಹೆಕ್ಟೇರ್ ಪ್ರದೇಶದಲ್ಲಿ ಕಬ್ಬು ಬೆಳೆಯಲಾಗುತ್ತಿದೆ. ಕಳೆದ ಬಾರಿ ಹೆಚ್ಚಾದ ಮಳೆ ಮತ್ತು ನೆರೆಗೆ ಕಬ್ಬಿನ ಇಳುವರಿ ಕುಸಿದಿತ್ತು. ನಂತರ ರೈತರು ಕಬ್ಬಿನ ನಾಟಿಯನ್ನು ನಿರ್ಲಕ್ಷಿಸಿದ್ದರು. ಹಾಗಾಗಿ, ಈ ವರ್ಷ ಕಬ್ಬಿನ ಆವಕದಲ್ಲಿ ಇಳಿಕೆಯಾಗಿದ್ದು, ಬೆಲ್ಲಕ್ಕೆ ಬೇಡಿಕೆ ಹೆಚ್ಚಿಸಿದೆ.

‘ಕಳೆದ ವರ್ಷ ಕ್ವಿಂಟಲ್ ಬೆಲ್ಲಕ್ಕೆ ಬೆಲೆ ₹ 3 ಸಾವಿರ ಇತ್ತು. ಈ ಬಾರಿ ಕ್ವಿಂಟಲ್‌ಗೆ ₹ 5ಸಾವಿರದಿಂದ ₹ 5,500ರವರೆಗೆ ಇದೆ. ಸಾವಿರ ಅಚ್ಚಿನ ಬೆಲ್ಲಕ್ಕೆ ವೆಚ್ಚ ₹ 1,700 ತಗುಲುತ್ತದೆ. ಕನಿಷ್ಠ ₹ 5 ಸಾವಿರಕ್ಕೆ ಮಾರಾಟವಾದರೂ, ರೈತರಿಗೆ ₹ 3,300 ಸಿಗಲಿದೆ. ಬುಧವಾರದ ಮಾರುಕಟ್ಟೆಯಲ್ಲಿ ಬೆಲ್ಲಕ್ಕೆ ಉತ್ತಮ ಬೇಡಿಕೆ ವ್ಯಕ್ತವಾಗಿದ್ದು, ಶನಿವಾರ ಧಾರಣೆ ₹ 6 ಸಾವಿರ ಮುಟ್ಟುವ ನಿರೀಕ್ಷೆ ಇದೆ’ ಎಂದು ಕೃಷಿಕ ಗೂಳಿಪುರ ಶಿವಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು. 

ಮಾರುಕಟ್ಟೆಯಲ್ಲಿ ಪೂರೈಕೆ ಕಡಿಮೆ ಇರುವುದರಿಂದ ಬೇಡಿಕೆಯೂ ಹೆಚ್ಚಿದೆ. ತಮಿಳುನಾಡು ಮತ್ತು ಸ್ಥಳೀಯ ವ್ಯಾಪಾರಿಗಳು ಹೆಚ್ಚು ಬೆಲ್ಲ ಕೊಳ್ಳುತ್ತಿದ್ದಾರೆ. ಆದರೆ, ವಾರದಿಂದ ಕಬ್ಬು ಕಟಾವು ಕುಸಿದಿದೆ. ಈ ನಡುವೆ ಬೆಲ್ಲದ ಬೆಲೆ ಹೆಚ್ಚಿರುವುದರಿಂದ ಇಳುವರಿ ಇಲ್ಲದ ಕಬ್ಬನ್ನು ತರಾತುರಿಯಲ್ಲಿ ರೈತರು ಕಟಾವು ಮಾಡುತ್ತಿದ್ದಾರೆ.

ಕಟಾವಿನ ಸಮಸ್ಯೆ: ‘ಈಗ ಮಳೆ ಸುರಿಯುತ್ತಿದೆ. ಕಬ್ಬು ಕಟಾವು ಮಾಡುವುದು ಕಷ್ಟ. ಶ್ರಮಿಕರು ಮಳೆಗಾಲದಲ್ಲಿ ಕೆಲಸ ಮಾಡುವುದಿಲ್ಲ. ಕಬ್ಬನ್ನು ಆಲೆಮನೆಗೆ ಸಾಗಣೆ ಮಾಡುವುದು ಸವಾಲು. ಮಳೆ ಹೆಚ್ಚಾದರೆ ಆಲೆಮನೆ ಮಾಲೀಕರಿಗೂ ಉರುವಲಿನ ಸಮಸ್ಯೆಯೂ ಎದುರಾಗುತ್ತದೆ. ಇದರಿಂದ ದಿನಕ್ಕೆ 2 ಸಾವಿರ ಅಚ್ಚು (2 ಕ್ವಿಂಟಲ್) ಮಾತ್ರ ಉತ್ಪಾದಿಸಲು ಸಾಧ್ಯ. ಉಳಿದ ದಿನಗಳಲ್ಲಿ 4 ಸಾವಿರ ಅಚ್ಚು ತಯಾರಿಸಬಹುದು’ ಎನ್ನುತ್ತಾರೆ ಆಲೆಮನೆ ಮಾಲೀಕ ಚಾಮುಂಡನಾಯಕ.

Highlights - ಮಳೆ; ಸಿಗುತ್ತಿಲ್ಲ ಉರುವಲು ಇಳಿದ ಬೆಲ್ಲ ಪೂರೈಕೆ ಪ್ರಮಾಣ ಇನ್ನಷ್ಟು ಬೆಲೆ ಹೆಚ್ಚಳ ಸಾಧ್ಯತೆ

‘ಬೆಲೆ ಹೆಚ್ಚಳ ಖಚಿತ’ ‘ಮಳೆಗಾಲದಲ್ಲಿ ಬೆಲ್ಲ ತಯಾರಿಕೆ ಸುಲಭವಲ್ಲ. ಕೆಲಸದವರು ದುಡಿಯಲು ಹಿಂದೇಟು ಹಾಕುತ್ತಾರೆ. ಹೆಚ್ಚು ಕೂಲಿಗೆ ಬೇಡಿಕೆ ಸಲ್ಲಿಸುತ್ತಾರೆ. ಗುಣಮಟ್ಟದ ಬೆಲ್ಲ ಉತ್ಪಾದನೆಯೂ ಕಷ್ಟ. ಮಾರುಕಟ್ಟೆಯಲ್ಲಿ ಬೆಲ್ಲದ ಆವಕವೂ ಕುಸಿಯುತ್ತದೆ. ಹಾಗಾಗಿ ಮುಂಗಾರು ಅವಧಿಯಲ್ಲಿ ಬೆಲ್ಲದ ಬೆಲೆ ಗಗನ ಮುಟ್ಟಲಿದೆ’ ಎಂದು ಚಾಮುಂಡನಾಯಕ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT