ಬುಧವಾರ, ಜನವರಿ 26, 2022
23 °C
ಜಂಟಿ ಸಮೀಕ್ಷೆ ವರದಿ; ಹನೂರು ತಾಲ್ಲೂಕಿನ ರಾಗಿ ಬೆಳೆಗಾರರಿಗೆ ಹೆಚ್ಚು ನಷ್ಟ

ಚಾಮರಾಜನಗರ | ಮಳೆ: 2,522 ಹೆಕ್ಟೇರ್‌ ಬೆಳೆ ಹಾನಿ

ಸೂರ್ಯನಾರಾಯಣ ವಿ. Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ನವೆಂಬರ್‌ ತಿಂಗಳಲ್ಲಿ ಜಿಲ್ಲೆಯಲ್ಲಿ ಸುರಿದ ಮಳೆಗೆ 2,522 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ.  

ಬೆಳೆ ನಷ್ಟ ಅಂದಾಜು ಮಾಡುವುದಕ್ಕಾಗಿ ಜಿಲ್ಲಾಡಳಿತ ನಡೆಸಿರುವ ಜಂಟಿ ಸಮೀಕ್ಷೆ ಮುಕ್ತಾಯವಾಗಿದ್ದು, ಅದರ ವರದಿ ಪ್ರಕಾರ, ರಾಗಿ ಬೆಳೆಗೆ ಹೆಚ್ಚು ಹಾನಿಯಾಗಿದೆ. 

ಹನೂರು ತಾಲ್ಲೂಕಿನಲ್ಲಿ ಅತಿ ಹೆಚ್ಚು ಅಂದರೆ 1,837 ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆದಿರುವ ಬೆಳೆ ನೀರು ಪಾಲಾಗಿದೆ. ಗುಂಡ್ಲುಪೇಟೆಯಲ್ಲಿ ಯಾವುದೇ ಬೆಳೆ ನಷ್ಟ ಸಂಭವಿಸಿಲ್ಲ. 

ಬೆಳೆವಾರು ನಷ್ಟ ಗಮನಿಸಿದರೆ, ರಾಗಿ ಬೆಳೆಗಾರರಿಗೆ ಹೆಚ್ಚು ನಷ್ಟವಾಗಿದೆ. ಜಿಲ್ಲೆಯಲ್ಲಿ 2,100.6 ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆದಿರುವ ರಾಗಿ ಬೆಳೆಗೆ ಹಾನಿಯಾಗಿದೆ. ಹನೂರು ತಾಲ್ಲೂಕಿನಲ್ಲಿ 1,791 ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿದ್ದ ರಾಗಿ ಫಸಲು ನೆಲಕ್ಕಚ್ಚಿದೆ. ಚಾಮರಾಜನಗರ ತಾಲ್ಲೂಕಿನಲ್ಲಿ 237.6 ಹೆಕ್ಟೇರ್‌ ರಾಗಿ ಹಾಳಾಗಿದೆ. 

ಉಳಿದಂತೆ ಜಿಲ್ಲೆಯಾದ್ಯಂತ 201 ಹೆಕ್ಟೇರ್‌ನಲ್ಲಿ ಬೆಳೆದಿರುವ ಜೋಳಕ್ಕೆ ಹಾನಿಯಾಗಿದೆ. 142 ಹೆಕ್ಟೇರ್‌ ಪ್ರದೇಶದ ಕಡಲೆ ಬೆಳೆ ನೀರು ಪಾಲಾಗಿದೆ. 31 ಹೆಕ್ಟೇರ್‌ನಲ್ಲಿ ಬೆಳೆದಿರುವ ಹುರುಳಿ, 25 ಹೆಕ್ಟೇರ್‌ ಪ್ರದೇಶದಲ್ಲಿ ಭತ್ತ ಬೆಳೆದಿರುವವರಿಗೆ ಬೆಳೆ ನಷ್ಟವಾಗಿದೆ. 

4,600ಕ್ಕೂ ಹೆಚ್ಚು ರೈತರಿಗೆ ನಷ್ಟ: ಜಿಲ್ಲೆಯಾದ್ಯಂತ ಅತಿವೃಷ್ಟಿಯಿಂದಾಗಿ 4,500ಕ್ಕೂ ಹೆಚ್ಚು ರೈತರಿಗೆ ನಷ್ಟವಾಗಿದೆ. ಕೃಷಿ ಇಲಾಖೆಯು ಪರಿಹಾರ ತಂತ್ರಾಂಶದಲ್ಲಿ ಬೆಳೆ ನಷ್ಟದ ವಿವರ ದಾಖಲಿಸುತ್ತಿದ್ದು, ಶುಕ್ರವಾರ ಬೆಳಿಗ್ಗೆವರೆಗೆ 4,555 ರೈತರಿಗೆ ಆಗಿರುವ ಬೆಳೆ ನಷ್ಟದ ಮಾಹಿತಿಯನ್ನು ಸಿಬ್ಬಂದಿ, ಪರಿಹಾರ ತಂತ್ರಾಂಶದಲ್ಲಿ ದಾಖಲಿಸಿದ್ದಾರೆ. ವಿವರಗಳನ್ನು ಅಪ್‌ಲೋಡ್‌ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ಕೃಷಿ ಇಲಾಖೆಯ ಅಧಿಕಾರಿಗಳು ಹೇಳಿದ್ದಾರೆ. 

ಹನೂರು ತಾಲ್ಲೂಕಿನಲ್ಲೇ 2350ಕ್ಕೂ ಹೆಚ್ಚು ರೈತರು ಬೆಳೆ ನಷ್ಟ ಅನುಭವಿಸಿದ್ದಾರೆ. ನಷ್ಟ ಅನುಭವಿಸಿರುವವರಲ್ಲಿ ಬಹುತೇಕ ಮಂದಿ ಅತಿ ಸಣ್ಣ ರೈತರು. 

‘ಜಂಟಿ ಸಮೀಕ್ಷೆ ಕಾರ್ಯ ಪೂರ್ಣಗೊಂಡಿದ್ದು, ನಷ್ಟದ ವಿವರಗಳನ್ನು ತಂತ್ರಾಂಶದಲ್ಲಿ ಅಪ್‌ಲೋಡ್‌ ಮಾಡಲಾಗುತ್ತಿದೆ. ಪ್ರಕ್ರಿಯೆ ಇನ್ನೂ ಪೂರ್ಣಗೊಂಡಿಲ್ಲ. ಇನ್ನು ಒಂದೆರಡು ದಿನ ಬೇಕು. ಆ ಬಳಿಕ ಸರ್ಕಾರವು ಗುಂಟೆ ಲೆಕ್ಕದಲ್ಲಿ ನಿಗದಿತ ಪರಿಹಾರವನ್ನು ರೈತರ ಖಾತೆಗೆ ಜಮೆ ಮಾಡಲಿದೆ’ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಎಚ್‌.ಟಿ.ಚಂದ್ರಕಲಾ ‘ಪ್ರಜಾವಾಣಿ’ಗೆ ತಿಳಿಸಿದರು. 

‘ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯ ಮಾರ್ಗಸೂಚಿಯನ್ವಯ ಮಳೆಯಾಶ್ರಿತ ಬೆಳೆಗಳಿಗೆ ಹೆಕ್ಟೇರ್‌ಗೆ ₹ 6,900 ಹಾಗೂ ಭತ್ತದಂತಹ ನೀರಾವರಿ ಬೆಳೆಗೆ ಹೆಕ್ಟೇರ್‌ಗೆ ₹ 13 ಸಾವಿರ ಪರಿಹಾರ ಬರುತ್ತದೆ’ ಎಂದರು. 

ಶೇ 73.50ರಷ್ಟು ಬಿತ್ತನೆ: ಈ ಮಧ್ಯೆ, ಮಳೆ ನಿಂತ ನಂತರವೂ ಹಿಂಗಾರು ಅವಧಿಯ ಬಿತ್ತನೆ ಪ್ರಮಾಣ ಹೆಚ್ಚಾಗಿಲ್ಲ. ನವೆಂಬರ್‌ 16ರವರೆಗೆ, ಒಟ್ಟು ಗುರಿಯ ಶೇ 72ರಷ್ಟು ಬಿತ್ತನೆಯಾಗಿತ್ತು. ತಿಂಗಳ ಅಂತ್ಯಕ್ಕೆ ಇದು ಶೇ 73.50ಕ್ಕೆ ಏರಿದೆ. 

ಕೃಷಿ ಇಲಾಖೆಯು 36,260 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗುವ ಗುರಿ ಹೊಂದಿತ್ತು. ಸದ್ಯ 26,652 ಹೆಕ್ಟೇರ್‌ ಪ್ರದೇಶದಲ್ಲಿ ರೈತರು ವಿವಿಧ ಬೆಳೆಗಳನ್ನು ಬಿತ್ತನೆ ಮಾಡಿದ್ದಾರೆ.

ನವೆಂಬರ್‌ನಲ್ಲಿ ದಾಖಲೆ ಬರೆದ ‘ವರುಣ’

ಜಿಲ್ಲೆಯಲ್ಲಿ ಈ ವರ್ಷದ ನವೆಂಬರ್‌ನಲ್ಲಿ ದಾಖಲೆಯ ಮಳೆಯಾಗಿದೆ. ಗಡಿ ಜಿಲ್ಲೆಯಲ್ಲಿ ಹಿಂಗಾರು ಅವಧಿಯಲ್ಲಿ ಮಳೆ ಹೆಚ್ಚು ಬೀಳುತ್ತದೆಯಾದರೂ ಸೆಪ್ಟೆಂಬರ್‌, ಅಕ್ಟೋಬರ್‌ನಲ್ಲಿ ಜಾಸ್ತಿ ಮಳೆಯಾಗುತ್ತದೆ. ಚಳಿಗಾಲದ ಅವಧಿಯಾಗಿರುವ ನವೆಂಬರ್‌ನಲ್ಲಿ ಕಡಿಮೆ. 

ನವೆಂಬರ್‌ನಲ್ಲಿ ವಾಡಿಕೆಯಲ್ಲಿ 6.68 ಸೆಂ.ಮೀ ಮಳೆಯಾಗುತ್ತದೆ. 2019–20ರಲ್ಲಿ 4.96 ಸೆಂ.ಮೀ, 2020–21ರಲ್ಲಿ 8.27 ಸೆಂ.ಮೀ ಮಳೆಯಾಗಿದ್ದರೆ, ಈ ವರ್ಷ 2‌1.08 ಸೆಂ.ಮೀ ಮಳೆ ಸುರಿದಿದೆ. ಅಂದರೆ, ವಾಡಿಕೆ ಮಳೆಗಿಂತ ಮೂರು ಪಟ್ಟು ಹೆಚ್ಚು ವರ್ಷಧಾರೆಯಾಗಿದೆ. 

ಸೆಪ್ಟೆಂಬರ್‌ನಲ್ಲಿ ಸಾಮಾನ್ಯವಾಗಿ 13.09 ಸೆಂ.ಮೀ ಮಳೆಯಾಗುತ್ತದೆ. 2019ರಲ್ಲಿ 12.55 ಸೆಂ.ಮೀ, 2020ರಲ್ಲಿ 15.51 ಸೆಂ.ಮೀ ಮಳೆಯಾಗಿದ್ದರೆ ಈ ವರ್ಷ ಕೇವಲ 6 ಸೆಂ.ಮೀ ಆಗಿತ್ತು. 

ಅಕ್ಟೋಬರ್‌ನಲ್ಲಿ ವಾಡಿಕೆಯಲ್ಲಿ 16.61 ಸೆಂ.ಮೀ ಮಳೆಯಾಗುತ್ತದೆ. 2019ರಲ್ಲಿ 24.5 ಸೆಂ.ಮೀ, 2020ರಲ್ಲಿ 10.35 ಸೆಂ.ಮೀ ಬಿದ್ದಿದ್ದರೆ, ಈ ಬಾರಿ 20.55 ಸೆಂ.ಮೀನಷ್ಟು ಮಳೆಯಾಗಿದೆ.

***

ಎನ್‌ಡಿಆರ್‌ಎಫ್‌ ಮಾರ್ಗಸೂಚಿಯಂತೆ ನಿಗದಿ ಪಡಿಸಿರುವ ಬೆಳೆ ನಷ್ಟ ಪರಿಹಾರದ ಮೊತ್ತವು ರೈತರ ಬ್ಯಾಂಕ್‌ ಖಾತೆಗೆ ಸರ್ಕಾರದಿಂದ ನೇರವಾಗಿ ಜಮೆ ಆಗಲಿದೆ

- ಎಚ್‌.ಟಿ.ಚಂದ್ರಕಲಾ, ಕೃಷಿ ಜಂಟಿ ನಿರ್ದೇಶಕಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು