ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾತಿಭೇದವಿಲ್ಲದ ಸಮಾಜ ಸುಧಾರಕ

ನಾಡಪ್ರಭು ಕೆಂಪೇಗೌಡ ಜಯಂತಿಯಲ್ಲಿ ಡಾ.ಟಿ.ಸಿ.ಪೂರ್ಣಿಮಾ ಅಭಿಮತ
Last Updated 27 ಜೂನ್ 2019, 17:10 IST
ಅಕ್ಷರ ಗಾತ್ರ

ಚಾಮರಾಜನಗರ: ಕುವೆಂಪು ಅವರ ಸರ್ವ ಜನಾಂಗದ ಶಾಂತಿಯ ತೋಟ ಎಂಬಂತೆ ಜಾತಿಯನ್ನು ಮೀರಿ ಸರ್ವ ಜನಾಂಗ, ಸಮಾಜಕ್ಕೆ ಸೇವೆ ಸಲ್ಲಿಸಿದವರು ನಾಡಪ್ರಭು ಕೆಂಪೇಗೌಡರು ಎಂದು ಮೈಸೂರಿನ ವಾರ್ತಾ ಮತ್ತು ಪ್ರಚಾರ ಸಚಿವಾಲಯದ ಉಪನಿರ್ದೇಶಕಿ ಡಾ.ಟಿ.ಸಿ.ಪೂರ್ಣಿಮಾ ಅಭಿಪ್ರಾಯಪಟ್ಟರು.

ನಗರದ ಜೆ.ಎಚ್‌.ಪಟೇಲ್‌ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಗುರುವಾರ ಹಮ್ಮಿಕೊಂಡಿದ್ದ ನಾಡಪ್ರಭು ಕೆಂಪೇಗೌಡ ಜಯಂತಿಯಲ್ಲಿ ಅವರು ಮಾತನಾಡಿದರು.

ಒಬ್ಬ ಸಾಧಕನ ಹೆಸರಿನಲ್ಲಿ ನಾಡು ಅಭಿವೃದ್ಧಿ ಹೊಂದುತ್ತದೆ ಎನ್ನುವುದಾದರೆ ನಾವು ಅವರ ಸಾಧನೆಗಳತ್ತ ಕಣ್ಣಾಡಿಸಬೇಕಾಗುತ್ತದೆ. ಮನುಷ್ಯನಿಗೆ ಹುಟ್ಟುವಾಗಹೆಸರು ಇರುವುದಿಲ್ಲ, ಉಸಿರು ಇರುತ್ತದೆ. ಸಾವಿನಲ್ಲಿ ಉಸಿರು ಇರುವುದಿಲ್ಲ, ಆದರೆ ಹೆಸರನ್ನು ಬಿಟ್ಟು ಹೋಗಬೇಕಾಗುತ್ತದೆ. ಸಾಧನೆ ತೋರಿದರೆ ಅವರ ಹೆಸರು ಚಿರಸ್ಥಾಯಿಯಾಗಿರುತ್ತದೆ ಎಂದರು.

5 ಶತಮಾನಗಳು ಕಳೆದರೂ ಇಂದಿಗೂ ಕೆಂಪೇಗೌಡರ ಸ್ಮರಣೆ ನಿರಂತರವಾಗಿ ನಡೆಯುತ್ತಿದೆ ಎನ್ನುವುದಕ್ಕೆ ಅವರು ಮಾಡಿದ ಸಮಾಜ ಸುಧಾರಣೆ, ಅಭಿವೃದ್ಧಿ ಕಾರ್ಯಗಳೇ ಸಾಕ್ಷಿಯಾಗಿ ನಿಲ್ಲುತ್ತದೆ ಎಂದರು.

ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಮಾತನಾಡಿ, ‘ಅಂದು ಬೆಂದಕಾಳೂರಿನ (ಬೆಂಗಳೂರು) ಸಂಪನ್ಮೂಲಗಳನ್ನು ಗುರುತಿಸಿ ಸದ್ಬಳಕೆ ಮಾಡಿಕೊಂಡು ಕೆರೆಕಟ್ಟೆಗಳನ್ನು ಅಭಿವೃದ್ಧಿ ಗೊಳಿಸುವಂತಹ ಯೋಚನೆ ಇದ್ದಿದ್ದರಿಂದ ಇಂದಿಗೂ ಅವರನ್ನು ಸ್ಮರಿಸುತ್ತೇವೆ. ಅವರ ಸ್ಮರಣೆ ಮತ್ತು ಸಮಾಜಮುಖಿ ಕಾರ್ಯಗಳನ್ನು ಎಲ್ಲ ಅಧಿಕಾರಿಗಳು ಮಾದರಿಯಾಗಿ ಇಟ್ಟುಕೊಳ್ಳಬೇಕು. ಅಭಿವೃದ್ಧಿ ಕಾರ್ಯ ಗಳನ್ನು ಕೈಗೆತ್ತಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಸ್.ಲತಾಕುಮಾರಿ ಮಾತನಾಡಿ, ‘16ನೇ ಶತಮಾನದ ಅದ್ಭುತ ಆಡಳಿತಗಾರ ಕೆಂಪೇಗೌಡ. ಮಹಿಳೆಯರ ಪರ ಧ್ವನಿ ಎತ್ತಿದವರು. ಮೌಢ್ಯದ ವಿರುದ್ಧ ನಿಂತವರು. ಸಮಾಜದ ಬಡ ಜನರ ಅಭಿವೃದ್ಧಿಗೆ ಸಾಕಷ್ಟು ಶ್ರಮಿಸಿದವರು’ ಎಂದು ಹೇಳಿದರು.

ಅಂತರರಾಷ್ಟ್ರೀಯ ಕಿಕ್‌ ಬಾಕ್ಸಿಂಗ್‌ ನಲ್ಲಿ ಚಿನ್ನದ ಪದಕ ಪಡೆದ ತಾಲ್ಲೂಕಿನ ಪಣ್ಯದಹುಂಡಿ ಗ್ರಾಮದ ಆರ್.ವಂಶಿ ಹಾಗೂ ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಕೆಂಪೇಗೌಡರ ಭಾವಚಿತ್ರವನ್ನು ಚಾಮರಾಜೇಶ್ವರಸ್ವಾಮಿ ದೇವಸ್ಥಾನ ದಿಂದ ಜೆ.ಎಚ್.ಪಟೇಲ್‌ ಸಭಾಂಗಣ ದವರೆಗೆ ಮೆರವಣಿಗೆ ನಡೆಸಲಾಯಿತು.

ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅನಿತಾ ಬಿ.ಹದ್ದಣ್ಣವರ್, ಜಿಲ್ಲಾ ಪಂಚಾಯಿತಿ ಸದಸ್ಯ ಸಿ.ಎನ್.ಬಾಲರಾಜು, ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ಬಸವಣ್ಣ, ಸದಸ್ಯ ಮಹದೇವಶೆಟ್ಟಿ ಇದ್ದರು.

ಸಮುದಾಯ ಭವನಗಳಿಗೆ ₹2 ಕೋಟಿ
ಹಿಂದುಳಿದ ಕಲ್ಯಾಣ ಇಲಾಖೆಯಲ್ಲಿಸಮುದಾಯ ಭವನ ನಿರ್ಮಾಣಕ್ಕೆ₹2 ಕೋಟಿ ಅನುದಾನ ಮೀಸಲಿಡಲಾಗಿದೆ. ಜಿಲ್ಲೆಯಲ್ಲಿ ಜಾಗ ಗುರುತಿಸಿದರೆ ಹಣ ಬಿಡುಗಡೆ ಮಾಡಲಾಗುವುದು. ಶೀಘ್ರವೇ ಒಕ್ಕಲಿಗ ಸಮುದಾಯದವರು ಕೆಂಪೇಗೌಡ ಭವನ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಪುಟ್ಟರಂಗಶೆಟ್ಟಿ ಹೇಳಿದರು.

ಬೆಂಗಳೂರಿನ ನಾಲ್ಕು ವಲಯಗಳಿಗೆ ಮಾನ್ಯತೆ ನೀಡಿ ನಾಲ್ಕು ದಿಕ್ಕುಗಳಲ್ಲೂ ಭೂಮಿಪೂಜೆ ನೆರವೇರಿಸಿದ್ದರು. ಕೃಷಿಗೆ ಹೆಚ್ಚಿನ ಆದ್ಯತೆ ನೀಡಿ 54 ಪೇಟೆಗಳನ್ನು ಸ್ಥಾಪಿಸಿದ್ದರು. ಒಕ್ಕಲಿಗ ಸಮುದಾಯದವರಿಗೆ ಸರ್ಕಾರ ಮೀಸಲಿರಿಸಿರುವ ಹಣವನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT