ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ: ಎಲ್ಲ ಫಲಾನುಭವಿಗಳಿಗೆ ಇನ್ನೂ ಸಿಗದ ‘ಸಮ್ಮಾನ’

ಕೃಷಿ ಸಮ್ಮಾನ್‌: 12,265 ರೈತರ ಖಾತೆಗೆ ರಾಜ್ಯ ಸರ್ಕಾರದ ಮೊದಲ ಕಂತು, ತಾಂತ್ರಿಕ ಕಾರಣಗಳಿಗೆ ವಿಳಂಬ
Last Updated 9 ಜನವರಿ 2020, 19:45 IST
ಅಕ್ಷರ ಗಾತ್ರ

ಚಾಮರಾಜನಗರ: ಕೇಂದ್ರ ಸರ್ಕಾರದ ಮಹಾತ್ವಕಾಂಕ್ಷೆಯ ‘ಪ್ರಧಾನಮಂತ್ರಿ ಕಿಸಾನ್‌ ಸಮ್ಮಾನ್‌’ ಯೋಜನೆಯ ಅಡಿಯಲ್ಲಿ ಜಿಲ್ಲೆಯ ಎಲ್ಲ ಫಲಾನುಭವಿ ರೈತರ ಖಾತೆಗೆ ಇನ್ನೂ ಮೂರು ಕಂತಿನ ಹಣ ಪಾವತಿಯಾಗಿಲ್ಲ.

ಯೋಜನೆಯ ಅಡಿಯಲ್ಲಿ ಕೇಂದ್ರ ಸರ್ಕಾರವು ರೈತರ ಬ್ಯಾಂಕ್‌ ಖಾತೆಗೆ ತಲಾ ₹2,000ದಂತೆ ಮೂರು ಕಂತಿನಲ್ಲಿ ವರ್ಷಕ್ಕೆ ₹6 ಸಾವಿರ ಪಾವತಿ ಮಾಡುತ್ತದೆ. ತಲಾ ₹2,000 ದಂತೆ ಮೂರು ಕಂತಿನಲ್ಲಿ ಹಣ ಪಾವತಿ ಮಾಡಬೇಕು.

ಕಿಸಾನ್‌ ಸಮ್ಮಾನ್‌ ಯೋಜನೆ ಅಡಿಯಲ್ಲಿ ಜಿಲ್ಲೆಯಲ್ಲಿ 1,11,199 ರೈತರು ನೋಂದಣಿ ಮಾಡಿಕೊಂಡಿದ್ದು, ಈ ಪೈಕಿ 1,01,878 ಫಲಾನುಭವಿ ರೈತರನ್ನು ಗುರುತಿಸಲಾಗಿದೆ. ಪೌತಿ ಖಾತೆ ಆಗದಿರುವುದು ಸೇರಿದಂತೆ ವಿವಿಧ ಕಾರಣಗಳಿಗಾಗಿ ಉಳಿದ ರೈತರ ನೋಂದಣಿ ಇನ್ನೂ ಅಂತಿಮವಾಗಿಲ್ಲ.

ಒಟ್ಟು ಫಲಾನುಭವಿಗಳಲ್ಲಿ 97,597 ರೈತರಿಗೆಮೊದಲ ಕಂತು, 96,966 ಮಂದಿಗೆ 2ನೇ ಕಂತು ಹಾಗೂ 64,405 ರೈತರಿಗೆ ಮೂರನೇ ಕಂತು ಬಂದಿದೆ. ಇನ್ನೂ 4,281 ರೈತರಿಗೆ ಮೊದಲ ಕಂತಿನ ಹಣ ಬಂದಿಲ್ಲ. 11,912 ರೈತರಿಗೆ ಎರಡನೇ ಕಂತು ಹಾಗೂ 37,473 ಮಂದಿಗೆ ಮೂರನೇ ಕಂತು ಬರಬೇಕಿದೆ. ಮೊದಲೆರಡು ಕಂತುಗಳು ಶೇ 97ರಷ್ಟು ಮಂದಿಗೆ ಬಂದಿದ್ದರೆ, ಎರಡನೇ ಕಂತು ಶೇ 63ರಷ್ಟು ರೈತರಿಗೆ ಸಿಕ್ಕಿದೆ. ಒಟ್ಟಾರೆಯಾಗಿ ₹51.79 ಕೋಟಿ‌ಹಣವನ್ನು ಕೇಂದ್ರ ಸರ್ಕಾರ ಪಾವತಿ ಮಾಡಿದೆ.

ವಿಳಂಬಕ್ಕೆ ತಾಂತ್ರಿಕ ಕಾರಣ

ಆಧಾರ್‌, ಬ್ಯಾಂಕ್‌ ಖಾತೆ ವಿವರಗಳು, ಸ್ವಯಂ ಘೋಷಣಾ ಪತ್ರಗಳು ಸೇರಿದಂತೆ ಅಗತ್ಯ ದಾಖಲೆಗಳನ್ನು ಸಲ್ಲಿಸಿರುವ ರೈತರಿಗೆ ಸರಿಯಾಗಿ ಖಾತೆಗೆ ಹಣ ಜಮಾ ಆಗುತ್ತಿದೆ. ದಾಖಲೆಗಳಲ್ಲಿ ಸಮಸ್ಯೆ ಆದವರಿಗೆ ಹಣ ಬರುವುದು ವಿಳಂಬವಾಗುತ್ತಿದೆ ಎಂದು ಕೃಷಿ ಇಲಾಖೆಯ ಅಧಿಕಾರಿಗಳು ಹೇಳುತ್ತಾರೆ.

ಎದುರಾಗಿರುವ ಸಮಸ್ಯೆಗಳನ್ನು ಬಗೆಹರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಪ್ರತಿ ದಿನ ರೈತರ ವಿವರಗಳನ್ನು ಆನ್‌ಲೈನ್‌ನಲ್ಲಿ ಅಪ್‌ಡೇಟ್‌ ಮಾಡಲಾಗುತ್ತಿದೆ. ಸಮಸ್ಯೆ ಇತ್ಯರ್ಥವಾದ ನಂತರ ಆ ರೈತರ ಖಾತೆಗಳಿಗೂ ಹಣ ಬರಲಿದೆ ಎಂದು ಅವರು ಹೇಳುತ್ತಾರೆ.

‘ಕಿಸಾನ್‌ ಸಮ್ಮಾನ್‌ ಯೋಜನೆ ಅಡಿಯಲ್ಲಿ ರೈತರಿಗೆ ಹಣ ಬರುವುದು ನಿರಂತರ ಪ‍್ರಕ್ರಿಯೆ. ಈಗಲೂ ನೋಂದಣಿ, ಅರ್ಜಿ ಸಲ್ಲಿಸುವುದಕ್ಕೆ ಅವಕಾಶ ಇದೆ. ಸರಿಯಾದ ಮಾಹಿತಿ ನೀಡಿದ ರೈತರ ಖಾತೆಗೆ ಹಣ ಜಮೆ ಆಗಲಿದೆ’ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ಎಚ್‌.ಟಿ.ಚಂದ್ರಕಲಾ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಜಿಲ್ಲಾಡಳಿತ ಕ್ರಮ ಕೈಗೊಳ್ಳಲಿ‘ಕಿಸಾನ್‌ ಸಮ್ಮಾನ್‌ ಮಾತ್ರವಲ್ಲ; ದಾಖಲೆಗಳು ಸರಿಯಾಗಿ ಇಲ್ಲದಿರುವುದರಿಂದ ಹಾಗೂ ಆಧಾರ್‌, ಬ್ಯಾಂಕ್‌ ಖಾತೆಯ ಸಮಸ್ಯೆಗಳಿಂದಾಗಿ ರೈತರು ಸರ್ಕಾರದ ಇತರ ಯೋಜನೆಗಳ ಲಾಭ ಪಡೆಯಲು ಸಾಧ್ಯವಾಗುತ್ತಿಲ್ಲ. ಅವರು ಎದುರಿಸುತ್ತಿರುವ ಸಮಸ್ಯೆಗಳನ್ನು ನಿವಾರಿಸಲು ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು’ ಎಂದು ರೈತ ಸಂಘ ಮತ್ತು ಹಸಿರು ಸೇನೆಯ ಜಿಲ್ಲಾ ಘಟಕದ ಅಧ್ಯಕ್ಷ ಹೊನ್ನೂರು ಪ್ರಕಾಶ್‌ ಒತ್ತಾಯಿಸಿದರು.

ರಾಜ್ಯದ ಸಹಾಯ ಧನ ವಿಳಂಬ

ಕೇಂದ್ರ ಸರ್ಕಾರದ ರೀತಿಯಲ್ಲೇ, ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರ ಕೂಡ ವರ್ಷಕ್ಕೆ ಎರಡು ಕಂತಿನಲ್ಲಿ ₹4,000 ಮೊತ್ತವನ್ನು ರೈತರ ಖಾತೆಗೆ ಹಾಕುವುದಾಗಿ ಘೋಷಿಸಿತ್ತು.

ಇದುವರೆಗೆ,ಜಿಲ್ಲೆಯ 12,265 ರೈತರಿಗೆ ಮಾತ್ರ ಮೊದಲ ಕಂತಿನ ದುಡ್ಡು ಬಂದಿದೆ.

ರಾಜ್ಯ ಸರ್ಕಾರವೂ ಶೀಘ್ರದಲ್ಲಿ ಪ್ರೋತ್ಸಾಹ ಧನ ನೀಡಲು ಕ್ರಮ ಕೈಗೊಳ್ಳಬೇಕು ಎಂಬುದು ರೈತರ ಆಗ್ರಹ

***

ಕೇಂದ್ರ ಸರ್ಕಾರದ ಹಣ ರೈತರ ಖಾತೆಗೆ ನೇರವಾಗಿ ಜಮೆ ಆಗುತ್ತಿದೆ. ರಾಜ್ಯ ಸರ್ಕಾರದ ಹಣ ಇನ್ನೂ ಬಹುತೇಕ ಫಲಾನುಭವಿಗಳಿಗೆ ಬಂದಿಲ್ಲ
-ಎಚ್‌.ಟಿ.ಚಂದ್ರಕಲಾ, ಜಂಟಿ ಕೃಷಿ ನಿರ್ದೇಶಕಿ

***

ಶೇ 90ಕ್ಕೂ ಹೆಚ್ಚು ರೈತರಿಗೆ ಕೇಂದ್ರ ಸರ್ಕಾರದ ಹಣ ಬಂದಿದೆ. ರಾಜ್ಯ ಸರ್ಕಾರ ಘೋಷಿಸಿದ ಮೊತ್ತ ಬಂದಿಲ್ಲ. ಹಣ ಬಿಡುಗಡೆಗೆ ಸರ್ಕಾರ ಕ್ರಮಕೈಗೊಳ್ಳಬೇಕು
-ಹೊನ್ನೂರು ಪ್ರಕಾಶ್‌, ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ

***

ಅಂಕಿ ಅಂಶ

₹6,000

ಕೇಂದ್ರದಿಂದ ಬರುವ ಮೊತ್ತ

₹4,000

ರಾಜ್ಯ ಸರ್ಕಾರ ನೀಡುವ ಹಣ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT