ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಪಚುನಾವಣೆ ಶಾಂತಿಯುತ: ಶೇ 71.82 ಮತದಾನ

6,391 ಮಂ‌ದಿಯಿಂದ ಮತದಾನ, 2ನೇ ವಾರ್ಡ್‌ನಲ್ಲಿ ಉಂಟಾದ ಗೊಂದಲ
Last Updated 29 ಅಕ್ಟೋಬರ್ 2022, 2:23 IST
ಅಕ್ಷರ ಗಾತ್ರ

ಕೊಳ್ಳೇಗಾಲ: ಇಲ್ಲಿನ ನಗರಸಭೆಯ 7 ವಾರ್ಡ್‍ಗಳ ಹೊಸ ಸದಸ್ಯರ ಆಯ್ಕೆಗಾಗಿ ಶುಕ್ರವಾರ ಮತದಾನ ಶಾಂತಿಯುತವಾಗಿ ನಡೆದಿದ್ದು, ಶೇ 71.8‌2ರಷ್ಟು ಮಂದಿ ಮತದಾನ ಮಾಡಿದ್ದಾರೆ.

ಸದಸ್ಯರ ಅನರ್ಹತೆಯಿಂದಾಗಿ2, 6, 7, 13, 21, 25 ಹಾಗೂ 26ನೇ ವಾರ್ಡ್‌ಗೆ ಮತದಾನ ನಡೆದಿದೆ. ಬೆಳಿಗ್ಗೆ 7ಗಂಟೆಗೆ ಮತದಾನ ಆರಂಭವಾಯಿತು. ಸಂಜೆ 5 ಗಂಟೆಯವರೆಗೂ ಅವಕಾಶ ನೀಡಲಾಗಿತ್ತು.

ಏಳು ವಾರ್ಡ್‌ಗಳಲ್ಲಿ 10 ಮತಗಟ್ಟೆಗಳನ್ನು ತೆರೆಯಲಾಗಿತ್ತು. ಎರಡನೇ ವಾರ್ಡ್‌ನಲ್ಲಿ ಕೆಲ ಕಾಲ ಗೊಂದಲ ಉಂಟಾಗಿದ್ದು ಬಿಟ್ಟರೆ ಎಲ್ಲ ಕಡೆಗಳಲ್ಲಿಯೂ ಶಾಂತಿಯುತವಾಗಿ ಮತದಾನ ನಡೆದಿದೆ.

8,900 ಮತದಾರರ ಪೈಕಿ 6,391 ಜನರು ಹಕ್ಕು ಚಲಾಯಿಸಿದ್ದಾರೆ. 3,233 ಮಂದಿ ಮಹಿಳೆಯರು ಮತದಾನ ಮಾಡಿದ್ದರೆ, 3,158 ಪುರುಷರು ಹಕ್ಕು ಚಲಾಯಿಸಿದ್ದಾರೆ ಎಂದು ಚುನಾವಣಾ ಅಧಿಕಾರಿಗಳು ತಿಳಿಸಿದ್ದಾರೆ.

ಬೆಳಿಗ್ಗೆ ಬಿರುಸು: ಬೆಳಿಗ್ಗೆಯಿಂದಲೇ ಬಿರುಸಿನ ಮತದಾನ ನಡೆಯಿತು. 11 ಗಂಟೆಯ ನಂತರ ಸ್ವಲ್ಪ ನಿಧಾನವಾಯಿತು. ನಾಲ್ಕು ಗಂಟೆಯವರೆಗೂ ಮತದಾರರು ಕಡಿಮೆ ಸಂಖ್ಯೆಯಲ್ಲಿ ಮತಗಟ್ಟೆಗಳಿಗೆ ಬಂದರು. ಆ ಬಳಿಕ ಐದು ಗಂಟೆಯವರೆಗೆ ಮತ್ತೆ ಬಿರುಸು ಪಡೆಯಿತು.

ಎಲ್ಲ ಮತಗಟ್ಟೆಗಳಲ್ಲಿ ಬೆಳಿಗ್ಗೆ ಮತ್ತು ಸಂಜೆ‌ಯ ಹೊತ್ತು ಮತದಾರರು ಸರತಿ ಸಾಲಿನಲ್ಲಿ ನಿಂತಿದ್ದು ಕಂಡು ಬಂತು. ಹಿರಿಯರು, ಅಶಕ್ತರು, ಅಂಗವಿಕಲರನ್ನು ಅವರ ಕುಟುಂಬದ ಸದಸ್ಯರು ಕರೆದುಕೊಂಡು ಬಂದು ಮತಹಾಕಿಸಿದರು.

ಶಾಯಿ ಬಾಟಲಿ ತೆರೆಯಲು ಪರದಾಟ:25ನೇ ವಾರ್ಡ್‍ನಲ್ಲಿ ಮತದಾನ ಕಾಲು ಗಂಟೆ ವಿಳಂಬವಾಗಿ ಆರಂಭವಾಯಿತು. 7 ಗಂಟೆಯ ಹೊತ್ತಿಗೆ ಮತದಾರರು ಮತಗಟ್ಟೆಯತ್ತ ಬಂದಿದ್ದರು. ಆದರೆ, ಮತದಾರರ ಬೆರಳಿಗೆ ಹಾಕುವ ಶಾಯಿಯ ಬಾಟಲಿಯನ್ನು ಮುಚ್ಚಳ ತೆರೆಯಲು ಮತಗಟ್ಟೆ ಸಿಬ್ಬಂದಿ ಪರದಾಡಿದರು. 15 ನಿಮಿಷಗಳ ಬಳಿಕ ಮತದಾನ ಶುರುವಾಯಿತು.

2ನೇ ವಾರ್ಡ್‍ನಲ್ಲಿ ಗೊಂದಲ: 2 ನೇ ವಾರ್ಡ್‍ನಲ್ಲಿ 30ಕ್ಕೂ ಹೆಚ್ಚು ನಿಮಿಷಗಳ ಕಾಲ ಗೊಂದಲದ ವಾತಾವರಣ ಸೃಷ್ಠಿಯಾಯಿತು.

ಮತದಾರರ ಗುರುತಿನ ಚೀಟಿ ಇದ್ದರೂ ಮತದಾರರ ಪಟ್ಟಿಯಲ್ಲಿ 100ಕ್ಕೂ ಹೆಚ್ಚು ಜನರ ಹೆಸರುಗಳನ್ನು ಕೈ ಬಿಟ್ಟಿದ್ದಾರೆ ಎಂದು ಕೆಲವು ಮತದಾರರು ಆರೋಪಿಸಿದರು. ಈ ಸಂದರ್ಭದಲ್ಲಿ ಗೊಂದಲದ ವಾತಾವರಣ ಉಂಟಾಯಿತು. ಸೆಕ್ಟರ್ ಅಧಿಕಾರಿ ನಂಜಂಡಸ್ವಾಮಿ ಅವರು ಮಾತನಾಡಿ ‘ಮೇಲಾಧಿಕಾರಿಗಳಿಗೆ ವಿಷಯವನ್ನು ತಿಳಿಸುತ್ತೇನೆ. ಅಲ್ಲಿವರೆಗೂ ಶಾಂತಿಯಿಂದ ಇರಬೇಕು’ ಎಂದು ಮನವಿ ಮಾಡಿದರು.

ಮತದಾರರ ಪಟ್ಟಿಯಲ್ಲಿ ಹೆಸರು ಇಲ್ಲದವರು ವಾಪಸ್‌ ಹೋಗಬೇಕಾಯಿತು. ಇನ್ನೂ ಕೆಲವು ಬಡಾವಣೆಗಳಲ್ಲಿ ಇದೇ ಸಮಸ್ಯೆ ಕಂಡು ಬಂದಿದೆ.

ಬಂದೋಬಸ್ತ್: ಮತದಾನದ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಳ್ಳಲು ಪೊಲೀಸರು ಬಿಗಿ ಬಂದೋಬಸ್ತ್‌ ಕೈಗೊಂಡಿದ್ದರು.

ಗೆಲುವು ಖಚಿತ:ಬಿಜೆಪಿ ಮುಖಂಡ ಜಿ.ಎನ್.ನಂಜುಂಡಸ್ವಾಮಿ ಅವರು 21ನೇ ವಾರ್ಡ್‍ನಲ್ಲಿ ಮತ ಚಾಲಾಯಿಸಿದರು. ನಂತರ ಮಾತನಾಡಿದ ಅವರು, ‘ಉಪಚುನಾವಣೆಯಲ್ಲಿ ನಮ್ಮ ಏಳೂ ಅಭ್ಯರ್ಥಿಗಳು ಜಯಶಾಲಿಯಾಗಲಿದ್ದಾರೆ’ ಎಂದರು.

ಮತದಾನದ ಸಂದರ್ಭದಲ್ಲಿ ಶಾಸಕ ಎನ್‌.ಮಹೇಶ್‌, ಬಿಜೆಪಿ, ಕಾಂಗ್ರೆಸ್‌ ಹಾಗೂ ವಿವಿಧ ಪಕ್ಷಗಳ ಮುಖಂಡರು ಮತಗಟ್ಟೆಗಳಿಗೆ ಭೇಟಿ ನೀಡಿದರು. ಅಭ್ಯರ್ಥಿಗಳು ದೂರದಲ್ಲೇ ನಿಂತುಗೊಂಡು ಮತದಾರರನ್ನು ಸೆಳೆಯಲು ಕೊನೆ ಕ್ಷಣದ ಕಸರತ್ತು ನಡೆಸಿದರು.

31ಕ್ಕೆ ಮತ ಎಣಿಕೆ

ಮತದಾನದ ಅವಧಿ ಮುಕ್ತಾಯದ ಬಳಿಕ ಮತಗಟ್ಟೆ ಅಧಿಕಾರಿಗಳು ಮತಯಂತ್ರಗಳನ್ನು ನ್ಯಾಷನಲ್‌ಮಿಡ್ಲ್‌ ಶಾಲೆಗೆ ತಂದರು. ಅಲ್ಲಿಯ ಸ್ಟ್ರಾಂಗ್‌ ರೂಮ್‌ನಲ್ಲಿ ಮತಯಂತ್ರಗಳನ್ನು ಇಡಲಾಗಿದೆ.

24 ಮಂದಿ ಅಭ್ಯರ್ಥಿಗಳ ಭವಿಷ್ಯ ಮತಯಂತ್ರದಲ್ಲಿ ದಾಖಲಾಗಿದೆ. ಇದೇ 31ರಂದು ಮತ ಎಣಿಕೆ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT