ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಗ್ಗಿದ ಪ್ರವಾಹ; ನಿಟ್ಟುಸಿರುಬಿಟ್ಟ ಜಿಲ್ಲಾಡಳಿತ

ಗ್ರಾಮಕ್ಕೆ ಮರಳುತ್ತಿರುವ ಸಂತ್ರಸ್ತರು: ಪರಿಹಾರ ಕೇಂದ್ರದಲ್ಲಿ ಮಕ್ಕಳು, ಮಹಿಳೆಯರು– ಪರಿಹಾರಕ್ಕೆ ಮೊರೆ
Last Updated 14 ಆಗಸ್ಟ್ 2019, 11:30 IST
ಅಕ್ಷರ ಗಾತ್ರ

ಕೊಳ್ಳೇಗಾಲ: ತಾಲ್ಲೂಕಿನ ಕಾವೇರಿ ನದಿ ಪಾತ್ರದ ಗ್ರಾಮಗಳನ್ನು ಎರಡು ದಿನಗಳಿಂದ ಕಾಡಿದ್ದ ಪ್ರವಾಹ ಮಂಗಳವಾರ ಇಳಿದಿದೆ. ಜಲಾವೃತಗೊಂಡಿದ್ದ ಗ್ರಾಮಗಳಿಂದ ನೀರು ಇಳಿದು ಹೋಗಿದ್ದು, ಕೃಷಿ ಜಮೀನುಗಳಲ್ಲಿ ಅಲ್ಲಲ್ಲಿ ಇನ್ನೂ ನೀರು ನಿಂತಿದೆ.

ನೆರೆಪೀಡಿತವಾಗಿದ್ದ ಐದು ಗ್ರಾಮಗಳ ಪೈಕಿ ದಾಸನಪುರ, ಹಳೆ ಅಣಗಳ್ಳಿ ಹಾಗೂ ಹಳೆ ಹಂಪಾಪುರ ಸಂಪೂರ್ಣವಾಗಿ ಜಲಾವೃತವಾಗಿದ್ದವು. ಮುಳ್ಳೂರು ಹಾಗೂ ದ್ವೀಪ ಗ್ರಾಮ ಎಡಕುರಿಯಾದಲ್ಲಿ ಸ್ವಲ್ಪ ಭಾಗಕ್ಕೆ ಮಾತ್ರ ನೀರು ನುಗ್ಗಿತ್ತು.

ನೆರೆಯಿಂದಾಗಿ ದಾಸನಪುರದಲ್ಲಿ ಹೆಚ್ಚಿನ ಹಾನಿ ಸಂಭವಿಸಿದೆ. ಗ್ರಾಮಸ್ಥರ 22 ಮನೆಗಳು ಹಾಗೂ 10 ದನದ ಕೊಟ್ಟಿಗೆಗಳಿಗೆ ಹಾನಿಯಾಗಿದೆ. ಹಳೆ ಅಣಗಳ್ಳಿಯಲ್ಲಿ ಏಳು ಮನೆ ಹಾಗೂ ಆರು ಕೊಟ್ಟಿಗೆ, ಹಳೆ ಹಂಪಾಪುರದಲ್ಲಿ ಮೂರು ಮನೆ ಹಾಗೂ ಐದು ಕೊಟ್ಟಿಗೆಗಳು, ಮುಳ್ಳೂರಿನಲ್ಲಿ ಐದು ಮನೆಗಳು ಮತ್ತು ಎರಡು‌ ಕೊಟ್ಟಿಗೆಗಳು ಹಾನಿಗೀಡಾಗಿವೆ.

ಕೆಲವು ಮನೆಗಳು ಹಾಗೂ ಕೊಟ್ಟಿಗೆಗಳು ಸಂಪೂರ್ಣವಾಗಿ ಕುಸಿದಿದ್ದರೆ, ಇನ್ನು ಕೆಲವಕ್ಕೆ ಭಾಗಶಃ ಹಾನಿಯಾಗಿವೆ. ಎಡಕುರಿಯಾ ಗ್ರಾಮದಲ್ಲಿ ಯಾವುದೇ ಹಾನಿ ಸಂಭವಿಸಿಲ್ಲ. ಹಳೆ ಅಣಗಳ್ಳಿಯಲ್ಲಿ ಮಾದೇಗೌಡ ಎಂಬುವವರಿಗೆ ಸೇರಿದ ಕರುವೊಂದು ನೆರೆಯಲ್ಲಿ ಕೊಚ್ಚಿಕೊಂಡು ಹೋಗಿದೆ. ಹಳೆ ಹಂಪಾಪುರದ ದೊಡ್ಡರಂಗಯ್ಯ ಎಂಬುವರಿಗೆ ಸೇರಿದ ಕುರಿಯೊಂದು ಮೃತಪಟ್ಟಿದೆ. ಎರಡು ದಿನಗಳ ಕಾಲ ನೀರು ನಿಂತಿದ್ದರಿಂದ ಗ್ರಾಮಗಳಿಗೆ ಸಂಪ‍ರ್ಕ ಕಲ್ಪಿಸುವ ರಸ್ತೆಗಳಿಗೂ ಹಾನಿಯಾಗಿದೆ.

ಗ್ರಾಮಗಳು ಇನ್ನೂ ಸಹಜ ಸ್ಥಿತಿಗೆ ಮರಳಿಲ್ಲ.ನೆರೆ ಇಳಿದಿರುವುದರಿಂದ ವಿವಿಧ ಪರಿಹಾರ ಕೇಂದ್ರದಲ್ಲಿರುವ ಗ್ರಾಮಸ್ಥರು ನಿಧಾನವಾಗಿ ತಮ್ಮ ಊರುಗಳಿಗೆ ತೆರಳುತ್ತಿದ್ದಾರೆ. ವಿದ್ಯುತ್‌ ಸಂಪರ್ಕ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಇಲ್ಲದಿರುವುದರಿಂದ ಇನ್ನೂ ಒಂದೆರಡು ದಿನಗಳ ಕಾಲ ಪರಿಹಾರ ಕೇಂದ್ರಗಳಲ್ಲಿ ಉಳಿದುಕೊಳ್ಳುವಂತೆ ಸಂತ್ರಸ್ತರಿಗೆ ಅಧಿಕಾರಿಗಳು ಹಾಗೂ ಶಾಸಕರು ಮನವಿ ಮಾಡಿಕೊಂಡಿದ್ದಾರೆ.

ಮಹಿಳೆಯರು, ವೃದ್ಧರು ಮತ್ತು ಮಕ್ಕಳು ಪರಿಹಾರ ಕೇಂದ್ರಗಳಲ್ಲೇ ಇದ್ದು, ಯುವಕರು ಹಾಗೂ ವಯಸ್ಕರು ಗ್ರಾಮಗಳಿಗೆ ತೆರಳಿ ನೆರೆಯಿಂದಾಗಿ ಅಸ್ತವ್ಯಸ್ತವಾಗಿರುವ ಮನೆಗಳನ್ನು ಸ್ವಚ್ಛಗೊಳಿಸುವ ಕಾರ್ಯ ಆರಂಭಿಸಿದ್ದಾರೆ.

ಜಿಲ್ಲಾಧಿಕಾರಿ ಭೇಟಿ: ಮಂಗಳವಾರ ಮುಂಜಾನೆ ನೆರೆ ಇಳಿಯುತ್ತಿದ್ದಂತೆಯೇ ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಹಾಗೂ ಇತರ ಅಧಿಕಾರಿಗಳು ಗ್ರಾಮಗಳಿಗೆ ತೆರಳಿ ಪರಿಸ್ಥಿತಿ ಅವಲೋಕಿಸಿದರು. ಸ್ಥಳದಲ್ಲಿದ್ದ ಗ್ರಾಮಸ್ಥರೊಂದಿಗೆ ಮಾತುಕತೆ ನಡೆಸಿದರು. ಮನೆಗೆ ಹಾನಿಯಾದವರಿಗೆ, ಬೆಳೆ ನಷ್ಟ ಅನುಭವಿಸುವವರಿಗೆ ಸೂಕ್ತ ಪರಿಹಾರ ನೀಡುವ ಭರವಸೆಯನ್ನು ಅವರು ನೀಡಿದರು.

ಶಾಸಕರ ಭೇಟಿ: ಮಂಗಳವಾರ ಪರಿಹಾರ ಕೇಂದ್ರಗಳಿಗೆ ಭೇಟಿ ನೀಡಿದ ಶಾಸಕ ಎನ್‌.ಮಹೇಶ್‌ ಅವರು, ಸಂತ್ರಸ್ತರೊಂದಿಗೆ ಮಾತುಕತೆ ನಡೆಸಿದರು. ಕೇಂದ್ರದಲ್ಲಿ ನೀಡಲಾಗುತ್ತಿರುವ ಊಟ ಹಾಗೂ ಇತರ ಸೌಲಭ್ಯಗಳ ಬಗ್ಗೆ ಜನರಲ್ಲಿ ವಿಚಾರಿಸಿದರು‌.

ಮತ್ತೆ ಮಳೆಯಾಗುವ ಸಾಧ್ಯತೆ ಇರುವುದರಿಂದ ಇನ್ನೂ ಎರಡು ದಿನಗಳ ಕಾಲ ಇಲ್ಲೇ ಇರಿ ಎಂದು ಸಂತ್ರಸ್ತರಿಗೆ ತಿಳಿಸಿದ ಅವರು, ‘ಪ್ರವಾಹದಿಂದ ಮನೆ ಕಳೆದುಕೊಂಡವರಿಗೆ ಮನೆ ನಿರ್ಮಿಸಲು ₹ 5 ಲಕ್ಷ, ದುರಸ್ತಿಗೆ ₹ 1 ಲಕ್ಷ ಹಾಗೂ ತುರ್ತಾಗಿ ₹ 10 ಸಾವಿರ ಪರಿಹಾರ ನೀಡುವ ಭರವಸೆಯನ್ನು ಮುಖ್ಯಮಂತ್ರಿ ಯಡಿಯೂರಪ್ಪ ಅವರು ನೀಡಿದ್ದಾರೆ. ಅದು ನಮ್ಮಲ್ಲಿಗೂ ಅನ್ವಯವಾಗುತ್ತದೆ. ಅವರ ಜೊತೆ ಮಾತನಾಡಿ ನಮ್ಮ ತಾಲ್ಲೂಕಿನ ಸಂತ್ರಸ್ತರಿಗೂ ಪರಿಹಾರ ಕೊಡಿಸಲು ಯತ್ನಿಸುತ್ತೇನೆ’ ಎಂದು ಭರವಸೆ ನೀಡಿದರು.

ಅಧಿಕಾರಿಗಳೊಂದಿಗೆ ಸಭೆ: ಪ್ರವಾಹ ಪರಿಸ್ಥಿತಿಗೆ ಸಂಬಂಧಿಸಿದಂತೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಎನ್‌.ಮಹೇಶ್‌ ಅವರು, ಸಂತ್ರಸ್ತರ ಪುನರ್ವಸತಿ ಕಾರ್ಯ ಹಾಗೂ ಪರಿಹಾರ ನೀಡುವ ವಿಚಾರವಾಗಿ ಚರ್ಚಿಸಿದರು.

‘ಸಂತ್ರಸ್ತರು ಸ್ವಗ್ರಾಮಕ್ಕೆ ಮರಳಿದ ನಂತರ ಅವರಿಗೆ 10 ದಿನಗಳಿಗೆ ಆಗುವಷ್ಟು ಪಡಿತರ ನೀಡಬೇಕು. ವಿದ್ಯುತ್‌ ಸಂಪರ್ಕ ಶೀಘ್ರವಾಗಿ ಕಲ್ಪಿಸಬೇಕು. ತಾತ್ಕಾಲಿಕವಾಗಿ ಟ್ಯಾಂಕರ್‌ ಮೂಲಕ ಕುಡಿಯುವ ನೀರನ್ನು ಪೂರೈಸಬೇಕು’ ಎಂದು ಸೂಚಿಸಿದರು.

ದಾನಿಗಳ ನೆರವು:ಕೊಳ್ಳೇಗಾಲದ ಕೆಲವು ಮಂದಿ ಹಾಗೂ ಸಂಸ್ಥೆಗಳು ಸ್ವಯಂಪ್ರೇರಿತರಾಗಿ ಪರಿಹಾರ ಕೇಂದ್ರಗಳಿಗೆ ಬಂದು ಸಂತ್ರಸ್ತರಿಗೆ ಹೊದಿಕೆ ಸೇರಿದಂತೆ ಇನ್ನಿತರ ಅವಶ್ಯಕ ವಸ್ತುಗಳು, ಬಾಳೆಹಣ್ಣು ಹಾಗೂ ಆಹಾರ ಪೊಟ್ಟಣಗಳನ್ನು ವಿತರಿಸುತ್ತಿದ್ದುದು ಕಂಡು ಬಂತು.

ವೈಜ್ಞಾನಿಕ ಪರಿಹಾರ ನೀಡಲು ಆಗ್ರಹ

ನೆರೆಯಿಂದಾಗಿ ಆಗಿರುವ ಹಾನಿಗೆ ವೈಜ್ಞಾನಿಕ ಪರಿಹಾರ ನೀಡಬೇಕು ಎಂದು ಸಂತ್ರಸ್ತರು ಒತ್ತಾಯಿಸಿದ್ದಾರೆ.‘ಕೆಲವರ ಮನೆ ಸಂಪೂರ್ಣವಾಗಿ ಧ್ವಂಸವಾಗಿವೆ. ಇನ್ನು ಕೆಲವರದ್ದು ಭಾಗಶಃ ಹಾನಿಯಾಗಿದೆ. ಕೊಟ್ಟಿಗೆಗಳು ಕುಸಿದು ಬಿದ್ದಿವೆ. ಬೆಳೆಯೂ ಹಾನಿಯಾಗಿದೆ. ಆಗಿರುವ ನಷ್ಟವನ್ನು ಜಿಲ್ಲಾಡಳಿತ ಭರಿಸಬೇಕು’ ಎಂದು ಅವರು ಆಗ್ರಹಿಸಿದ್ದಾರೆ.

ಕಳೆದ ವರ್ಷ ಸರಿಯಾಗಿ ಪರಿಹಾರ ನೀಡಿಲ್ಲ ಎಂಬುದು ಅವರ ಆರೋಪ. ‘ಮನೆಯಲ್ಲೇ ಚಹಾ ಅಂಗಡಿ ಇಟ್ಟು ಜೀವನ ಸಾಗಿಸುತ್ತಿದ್ದೆ. ಈಗ‌ನೆರೆಯಿಂದಾಗಿ ಮನೆಯೇ ಕುಸಿದಿದೆ. ಏನು ಮಾಡಬೇಕು ಗೊತ್ತಾಗುತ್ತಿಲ್ಲ. ನನ್ನ ಬದುಕಿಗೆ ಸರ್ಕಾರ ದಾರಿ ಮಾಡಿಕೊಡಬೇಕು’ ಎಂದು ದಾಸನಪುರದ ರಾಜಮ್ಮ ‘ಪ್ರಜಾವಾಣಿ’ಗೆ ತಿಳಿಸಿದರು.

‘ಮನೆಗಳಿಗೆಲ್ಲ ನೀರು ನುಗ್ಗಿ ಕೆಸರಾಗಿದೆ. ಅದನ್ನು ಸ್ವಚ್ಛಗೊಳಿಸಲು ಎರಡು ದಿನ ಬೇಕು. ಇದಕ್ಕೆ ಜಿಲ್ಲಾಡಳಿತ ಪರಿಹಾರ ಕೊಡುತ್ತದೆಯೇ ಎಂಬುದು ಗೊತ್ತಿಲ್ಲ’ ಎಂದು ಮತ್ತೊಬ್ಬ ಸಂತ್ರಸ್ತ ತಿಳಿಸಿದರು.

ಪರಿಹಾರ ಕೇಂದ್ರದಲ್ಲಿ ಸೌಲಭ್ಯ

ಐದು ಕಡೆ ತೆರೆಯಲಾಗಿದ್ದ ಪರಿಹಾರ ಕೇಂದ್ರಗಳಲ್ಲಿ ನೀಡಿದ್ದ ಸೌಲಭ್ಯಗಳ ಬಗ್ಗೆ ಸಂತ್ರಸ್ತರು ಮೆಚ್ಚುಗೆ ವ್ಯಕ್ತಪಡಿಸಿದರು.

‘ನಮ್ಮನ್ನು ಚೆನ್ನಾಗಿ ನೋಡಿಕೊಂಡರು. ಒಳ್ಳೆಯ ಊಟ ಕೊಟ್ಟರು. ಅವಶ್ಯಕತೆ ಇದ್ದ ವಸ್ತುಗಳನ್ನೂ ಕೊಟ್ಟರು. ಹಾಗಾಗಿ ಸಮಸ್ಯೆಯಾಗಲಿಲ್ಲ. ಮಹಿಳೆಯರು ಮತ್ತು ಮಕ್ಕಳು ಇನ್ನೂ ಅಲ್ಲೇ ಇದ್ದಾರೆ. ನಾವು ಮಾತ್ರ ಗ್ರಾಮಕ್ಕೆ ಬಂದಿದ್ದೇವೆ. ಮನೆ ಸ್ವಚ್ಛಗೊಳಿಸಿದ ನಂತರ ಮನೆಯವರನ್ನು ಕರೆತರುವೆ’ ಎಂದು ಹಳೆ ಅಣಗಳ್ಳಿಯ ಸಂತ್ರಸ್ತರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ವೆಸ್ಲಿ ಸೇತುವೆಗೆ ಮತ್ತಷ್ಟು ಹಾನಿ

ಕಾವೇರಿ ನದಿ ಪ್ರವಾಹದಿಂದಾಗಿ ಸೋಮವಾರ ಮುಳುಗಿದ್ದ, ಶಿವನಸಮುದ್ರದ ಬಳಿಯ ಐತಿಹಾಸಿಕ ವೆಸ್ಲಿ ಸೇತುವೆಗೆ ಮತ್ತಷ್ಟು ಹಾನಿಯಾಗಿದೆ. ಕಳೆದ ವರ್ಷದ ಪ್ರವಾಹದಲ್ಲಿ ಸೇತುವೆಯ ಒಂದಷ್ಟು ಭಾಗ ಕುಸಿದು ಬಿದ್ದಿತ್ತು.

ಈ ಬಾರಿ ಮತ್ತೆ ಒಂದೆರಡು ಕಂಬಗಳು ಕೊಚ್ಚಿ ಹೋಗಿವೆ ಎಂದು ಹೇಳಲಾಗುತ್ತಿದೆ.

ಬೆಳೆ ನಷ್ಟ: ನಾಲ್ಕೈದು ದಿನಗಳಲ್ಲಿ ನಿಖರ ಮಾಹಿತಿ

ಪ್ರವಾಹದಿಂದಾಗಿ ಎಷ್ಟು ಪ್ರಮಾಣದಲ್ಲಿ ಬೆಳೆ ಹಾನಿ ಸಂಭವಿಸಿದೆ ಎಂಬುದರ ಸ್ಪಷ್ಟವಾದ ಮಾಹಿತಿ ಇನ್ನೂ ಲಭ್ಯವಾಗಿಲ್ಲ.

ಆದರೆ, ಅಧಿಕಾರಿಗಳು ಪ್ರಾಥಮಿಕವಾಗಿ ಮಾಡಿರುವ ಅಂದಾಜಿನ ಪ್ರಕಾರ, 734 ಹೆಕ್ಟೇರ್‌ (ಸುಮಾರು 1,835 ಎಕರೆ) ಪ್ರದೇಶಗಳಲ್ಲಿ ಬೆಳೆದಿದ್ದ ಬೆಳೆಗಳಿಗೆ ಹಾನಿಯಾಗಿದೆ ಎಂದು ಮೂಲಗಳು ತಿಳಿಸಿವೆ.

ಶಾಸಕ ಎನ್‌.ಮಹೇಶ್‌ ಅವರು ನಡೆಸಿರುವ ಸಭೆಯಲ್ಲಿ ಕೃಷಿ ಅಧಿಕಾರಿಗಳು ಈ ಮಾಹಿತಿಯನ್ನು ನೀಡಿದ್ದಾರೆ.

ದಾಸನಪುರದಲ್ಲಿ 165 ಹೆಕ್ಟೇರ್‌, ಮುಳ್ಳೂರು 152 ಹೆಕ್ಟೇರ್‌, ಹಳೆ ಅಣಗಳ್ಳಿ 127 ಹೆಕ್ಟೇರ್‌, ಹರಳೆ 110 ಹೆಕ್ಟೇರ್‌ ಮತ್ತು ಹಳೆ ಹಂಪಾಪುರದಲ್ಲಿ 180 ಹೆಕ್ಟೇರ್‌ ಕೃಷಿ ಜಮೀನಿಗೆ ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ.

ಕಬ್ಬು‌, ಭತ್ತ, ರಾಗಿ, ಜೋಳ ಮತ್ತು ತರಕಾರಿ ಬೆಳೆಗಳು ನೆರೆಯಿಂದ ನಾಶವಾಗಿವೆ.

‘ಇದು ಪ್ರಾಥಮಿಕ ಅಂದಾಜಷ್ಟೇ. ಕೃಷಿ ಅಧಿಕಾರಿಗಳು ಇನ್ನಷ್ಟೇ ಸಮೀಕ್ಷೆ ನಡೆಸಬೇಕಿದೆ. ನಿಖರವಾದ ಮಾಹಿತಿ ಸಿಗಲು ನಾಲ್ಕೈದು ದಿನಗಳು ಬೇಕು’ ಎಂದು ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ‘ಪ್ರಜಾವಾಣಿ’ಗೆ ತಿಳಿಸಿದರು.

ಬೆಳೆ ನಷ್ಟ: ವಾರದಲ್ಲಿ ನಿಖರ ಮಾಹಿತಿ

ಪ್ರವಾಹದಿಂದಾಗಿ ಎಷ್ಟು ಪ್ರಮಾಣದಲ್ಲಿ ಬೆಳೆ ಹಾನಿ ಸಂಭವಿಸಿದೆ ಎಂಬುದರ ಸ್ಪಷ್ಟವಾದ ಮಾಹಿತಿ ಇನ್ನೂ ಲಭ್ಯವಾಗಿಲ್ಲ.

ಆದರೆ, ಅಧಿಕಾರಿಗಳು ಪ್ರಾಥಮಿಕವಾಗಿ ಮಾಡಿರುವ ಅಂದಾಜಿನ ಪ್ರಕಾರ, 734 ಹೆಕ್ಟೇರ್‌ (ಸುಮಾರು 1,835 ಎಕರೆ) ಪ್ರದೇಶಗಳಲ್ಲಿ ಬೆಳೆದಿದ್ದ ಬೆಳೆಗಳಿಗೆ ಹಾನಿಯಾಗಿದೆ ಎಂದು ಮೂಲಗಳು ತಿಳಿಸಿವೆ.

ಶಾಸಕ ಎನ್‌.ಮಹೇಶ್‌ ಅವರು ನಡೆಸಿರುವ ಸಭೆಯಲ್ಲಿ ಕೃಷಿ ಅಧಿಕಾರಿಗಳು ಈ ಮಾಹಿತಿಯನ್ನು ನೀಡಿದ್ದಾರೆ.

ದಾಸನಪುರದಲ್ಲಿ 165 ಹೆಕ್ಟೇರ್‌, ಮುಳ್ಳೂರು 152 ಹೆಕ್ಟೇರ್‌, ಹಳೆ ಅಣಗಳ್ಳಿ 127 ಹೆಕ್ಟೇರ್‌, ಹರಳೆ 110 ಹೆಕ್ಟೇರ್‌ ಮತ್ತು ಹಳೆ ಹಂಪಾಪುರದಲ್ಲಿ 180 ಹೆಕ್ಟೇರ್‌ ಕೃಷಿ ಜಮೀನಿಗೆ ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ.

ಕಬ್ಬು‌, ಭತ್ತ, ರಾಗಿ, ಜೋಳ ಮತ್ತು ತರಕಾರಿ ಬೆಳೆಗಳು ನೆರೆಯಿಂದ ನಾಶವಾಗಿವೆ.

‘ಇದು ಪ್ರಾಥಮಿಕ ಅಂದಾಜಷ್ಟೇ. ಕೃಷಿ ಅಧಿಕಾರಿಗಳು ಇನ್ನಷ್ಟೇ ಸಮೀಕ್ಷೆ ನಡೆಸಬೇಕಿದೆ. ನಿಖರವಾದ ಮಾಹಿತಿ ಸಿಗಲು ನಾಲ್ಕೈದು ದಿನಗಳು ಬೇಕು’ ಎಂದು ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT