ಗುರುವಾರ , ಆಗಸ್ಟ್ 11, 2022
21 °C
ಕಮಲ ಪಾಳಯದ ಬಗ್ಗೆ ಮೃದು ಧೋರಣೆ, ಮುಖಂಡರು, ಸಚಿವರೊಂದಿಗೆ ಹೆಚ್ಚಿನ ಒಡನಾಟ

ಬಿಜೆಪಿಯತ್ತ ಕೊಳ್ಳೇಗಾಲ ಶಾಸಕ ಎನ್‌.ಮಹೇಶ್‌?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಾಮರಾಜನಗರ: ಬಿಎಸ್‌ಪಿಯಿಂದ ಉಚ್ಚಾಟನೆಗೊಂಡಿರುವ ಕೊಳ್ಳೇಗಾಲ ಶಾಸಕ ಎನ್‌.ಮಹೇಶ್ ಅವರ‌ ಬೆಂಬಲಿಗರಿಬ್ಬರು ಬಿಎಸ್‌ಪಿಯ ಮೂವರು ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿ ಬಂಧನಕ್ಕೆ ಒಳಗಾಗಿರುವ ಪ್ರಕರಣ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಎನ್‌.ಮಹೇಶ್ ಅವರು ಬಿಜೆಪಿ ಕಡೆಗೆ ಹೆಚ್ಚು ವಾಲುತ್ತಿರುವುದು ಈ ಘಟನೆಗೆ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ. ಶೀಘ್ರದಲ್ಲಿ ಅವರು ಬಿಜೆಪಿಗೆ ಸೇರ್ಪಡೆಗೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ, ಮಹೇಶ್‌ ಅವರು ಇದನ್ನು ನಿರಾಕರಿಸಿದ್ದಾರೆ. 

ಆದರೆ, ಎನ್‌.ಮಹೇಶ್‌ ಅವರ ಇತ್ತೀಚಿನ ಕೆಲವು ರಾಜಕೀಯ ನಡೆಗಳು ಅವರ ಬೆಂಬಲಿಗರು ಹಾಗೂ ಬಿಎಸ್‌ಪಿ ಕಾರ್ಯಕರ್ತರ ನಡುವೆ ಘರ್ಷಣೆಗೆ ಕಾರಣವಾಗಿದ್ದು, ಡಿ.1ರಂದು ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಕೊಳ್ಳೇಗಾಲಕ್ಕೆ ಬಂದ ನಂತರ ಘರ್ಷಣೆ ತಾರಕಕ್ಕೇರಿದೆ. 

ಬಿಜೆಪಿ ಹಮ್ಮಿಕೊಂಡಿದ್ದ ಗ್ರಾಮ ಸ್ವರಾಜ್ಯ ಸಮಾವೇಶದಲ್ಲಿ ಭಾಗವಹಿಸುವುದಕ್ಕಾಗಿ ಸಚಿವರಾದ ಆರ್‌.ಅಶೋಕ, ಎಸ್‌ಟಿ.ಸೋಮಶೇಖರ್‌, ಗೋಪಾಲಯ್ಯ, ನಾರಾಯಣ ಗೌಡ, ವಿಜಯೇಂದ್ರ ಅವರು ಬಂದಿದ್ದರು. ಎನ್‌.ಮಹೇಶ್‌ ಅವರು ಸಚಿವರನ್ನು ಹಾಗೂ ವಿಜಯೇಂದ್ರ ಅವರನ್ನು ಸ್ವಾಗತಿಸಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ್ದ ವಿಜಯೇಂದ್ರ ಅವರು, ‘ಬಿಜೆಪಿ ಸರ್ಕಾರ ರಚನೆಯಾಗಲು ಎನ್‌.ಮಹೇಶ್‌ ಕೂಡ ಕಾರಣ’ ಎಂದು ಹೇಳಿದ್ದರು. 

ಮೃದು ಧೋರಣೆ: ಬಿಎಸ್‌ಪಿಯನ್ನು ರಾಜ್ಯದಲ್ಲಿ ಕಟ್ಟಿದ ಪ್ರಮುಖರಲ್ಲಿ ಒಬ್ಬರಾಗಿರುವ ಶಾಸಕ ಎನ್‌.ಮಹೇಶ್‌ ಅವರು  ಕಾಂಗ್ರೆಸ್‌–ಜೆಡಿಎಸ್‌ ಮೈತ್ರಿ ಸರ್ಕಾರ ವಿಶ್ವಾಸ ಮತಯಾಚನೆ ಮಾಡಿದ ಸಂದರ್ಭದಲ್ಲಿ ಸದನಕ್ಕೆ ಗೈರು ಹಾಜರಾಗಿ ಪಕ್ಷದಿಂದ ಉಚ್ಚಾಟನೆಗೊಂಡ ನಂತರ, ಬಿಜೆಪಿಗೆ ಹತ್ತಿರವಾಗುತ್ತಿದ್ದಾರೆ. 

ಬಿಜೆಪಿ ಸರ್ಕಾರ ರಚನೆಯಾದ ನಂತರ ಕಮಲ ಪಕ್ಷದ ಬಗ್ಗೆ ಮೃದು ಧೋರಣೆ ತಾಳುತ್ತಾ ಬಂದಿರುವ ಅವರು, ಕೊಳ್ಳೇಗಾಲ ನಗರಸಭೆಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಚುನಾವಣೆಯಲ್ಲಿ ಬಿಜೆಪಿ ಸದಸ್ಯರೊಂದಿಗೆ ಮೈತ್ರಿ ಮಾಡಿಕೊಂಡು ತಮ್ಮ ಬೆಂಬಲಿಗರಿಗೆ ಅಧಿಕಾರ ಸಿಗುವಂತೆ ನೋಡಿಕೊಂಡಿದ್ದಾರೆ. 

ಇತ್ತೀಚೆಗೆ ಸಂಸದ ವಿ.ಶ್ರೀನಿವಾಸ ಪ್ರಸಾದ್‌ ಅವರಿಗೆ ಹೆಚ್ಚು ಹತ್ತಿರವಾಗುತ್ತಿರುವ ಮಹೇಶ್‌ ಅವರು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್‌ ಬಯಸುತ್ತಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ. 

ಇನ್ನೂ ನಿರ್ಧಾರ ಮಾಡಿಲ್ಲ: ಸ್ಪಷ್ಟನೆ

ಈ ಬೆಳವಣಿಗೆಗಳ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿರುವ ಎನ್‌.ಮಹೇಶ್‌ ಅವರು, ‘ನಾನು ಬಿಜೆಪಿ ಸೇರುವ ಬಗ್ಗೆ ಇನ್ನೂ ನಿರ್ಧರಿಸಿಲ್ಲ. ನನ್ನ ಕ್ಷೇತ್ರಕ್ಕೆ ನಾಲ್ವರು ಸಚಿವರು ಬರುವಾಗ‌ ಅವರನ್ನು ಶಾಸಕನಾಗಿ ನಾನು ಸ್ವಾಗತಿಸಿದ್ದೇನೆ. ವಿಜಯೇಂದ್ರ ಅವರ ಜೊತೆ ರಾಜಕೀಯ ಮಾತನಾಡಿಲ್ಲ. ಕ್ಷೇತ್ರಕ್ಕೆ ಬಂದಿರುವುದರಿಂದ ಅವರನ್ನೂ ಸ್ವಾಗತಿಸಿದ್ದೇನೆ’ ಎಂದರು.  

‘ನಾನು ಬಿಎಸ್‌ಪಿಯಿಂದ ದೂರವಾಗುವಂತೆ ಅದರ ಕಾರ್ಯಕರ್ತರು, ಮುಖಂಡರು ಮಾಡುತ್ತಿದ್ದಾರೆ. ಅವರು ನನ್ನ ಬಗ್ಗೆ ಟೀಕೆ ಮಾಡಲಿ, ಆರೋಪವನ್ನು ಮಾಡಲಿ. ಆದರೆ, ಅವಾಚ್ಯ, ಅಶ್ಲೀಲ ಪದಗಳಿಂದ ನಿಂದಿಸುತ್ತಿದ್ದಾರೆ. ನಾನು ಮತ್ತೆ ಪಕ್ಷಕ್ಕೆ ಬರದಂತೆ ಮಾಡಲು ಎಲ್ಲವನ್ನೂ ಮಾಡುತ್ತಿದ್ದಾರೆ’ ಎಂದರು. 

ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಕಣಕ್ಕಿಳಿಯಲು ಯತ್ನಿಸುತ್ತಿದ್ದೀರಂತೆ ಎಂದು ಕೇಳಿದ್ದಕ್ಕೆ, ‘ಅಂತಹ ಯೋಚನೆ ಏನೂ ಮಾಡಿಲ್ಲ. ಮುಂದೆ ಏನಾಗುತ್ತದೆಯೋ ನೋಡೋಣ. ಕಾಲಾಯೇ ತಸ್ಮೈ ನಮಃ’ ಎಂದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು