ಭಾನುವಾರ, ಆಗಸ್ಟ್ 1, 2021
21 °C
ಕೊಳ್ಳೇಗಾಲ: ತಾತ್ಕಾಲಿಕ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಲ್ಲಿ ಪ್ರಯಾಣಿಕರ ಪರದಾಟ

ಇದು ಕೆಸರು ಗದ್ದೆಯಲ್ಲ, ಬಸ್‌ ನಿಲ್ದಾಣ!

ಅವಿನ್ ಪ್ರಕಾಶ್ ವಿ. Updated:

ಅಕ್ಷರ ಗಾತ್ರ : | |

Prajavani

ಕೊಳ್ಳೇಗಾಲ: ಎರಡು ದಿನಗಳಿಂದ ಸುರಿಯುತ್ತಿರುವ ಜಿಟಿ ಜಿಟಿ ಮಳೆಯಿಂದಾಗಿ ನಗರದ ತಾತ್ಕಾಲಿಕ ಬಸ್ ನಿಲ್ದಾಣ ಕೆಸರು ಗದ್ದೆಯಾಗಿ ಬದಲಾಗಿದೆ.

ಹೊಸ ಬಸ್‌ ನಿಲ್ದಾಣ ಕಾಮಗಾರಿ ಆಮೆ ಗತಿಯಲ್ಲಿ ನಡೆಯುತ್ತಿರುವುದರಿಂದ ಪ್ರತಿ ವರ್ಷ ಮಳೆಗಾಲದಲ್ಲಿ ತಾತ್ಕಾಲಿಕ ಬಸ್‌ ನಿಲ್ದಾಣದಲ್ಲಿ ಈ ಸಮಸ್ಯೆ ಕಾಡುತ್ತಿದೆ.‌ ಪ್ರಯಾಣಿಕರಿಗೆ ಪರದಾಟ ತಪ್ಪುತ್ತಿಲ್ಲ. 

ಮಣ್ಣನ್ನು ಸಮತಟ್ಟು ಮಾಡಿ ತಾತ್ಕಾಲಿಕ ನಿಲ್ದಾಣ ಮಾಡಲಾಗಿದೆ. ಜಲ್ಲಿ, ಟಾರು ಹಾಕಲಾಗಿಲ್ಲ. ಹಾಗಾಗಿ, ಬಸ್‌ಗಳ ಓಡಾಟದಿಂದ ಗುಂಡಿಗಳು ಬಿದ್ದಿವೆ. ಒಂದು ಮಳೆ ಬಿದ್ದರೂ ಸಾಕು ಗುಂಡಿಗಳಲ್ಲಿ ನೀರು ನಿಂತು ಕೆಸರು ಉಂಟಾಗುತ್ತದೆ. 

ಎರಡು ದಿನಗಳಿಂದ ಮಳೆ ಚೆನ್ನಾಗಿ ಬರುತ್ತಿದ್ದು, ಮಣ್ಣಿನ ಮೇಲ್ಪದರ ಕೊಚ್ಚಿ ಹೋಗಿದೆ. ಪ್ರಯಾಣಿಕರು ಕೆಸರಿನಲ್ಲಿ ನಡೆದುಕೊಂಡು ಹೋಗಿ ಬಸ್‌ ಏರುವುದು, ಕೆಳಗಿಳಿವುದು ಮಾಡಬೇಕಿದೆ. ಬಟ್ಟೆಗೆ ಕೊಳೆಯಾಗುವ ಭಯದಿಂದಲೇ ಜನರು ನಿಲ್ದಾಣದಲ್ಲಿ ನಡೆದಾಡಬೇಕಿದೆ.

 ‘ಮಳೆ ಬಂದರೆ ಸಾಕು ಬಸ್ ನಿಲ್ದಾಣ ಕೆಸರು ಗದ್ದೆಯಂತಾಗುತ್ತದೆ. ಹಲವು ವರ್ಷಗಳಿಂದ ನಾವು ಈ ಸಮಸ್ಯೆ ಎದುರಿಸುತ್ತಿದ್ದೇವೆ. ಗುಂಡಿಗಳನ್ನು ಮುಚ್ಚಲು ಶಾಶ್ವತ ದುರಸ್ತಿ ಕಾರ್ಯ ಕೈಗೊಳ್ಳಲು ಅಧಿಕಾರಿಗಳು ಕಾಳಜಿವಹಿಸುತ್ತಿಲ್ಲ’ ಎಂದು ಪ್ರಯಾಣಿಕ ಬಸವರಾಜು ಅವರು ದೂರಿದರು.

‘ನೂತನವಾಗಿ ನಿರ್ಮಾಣವಾಗುತ್ತಿರುವ ಹೈಟೆಕ್ ಬಸ್ ನಿಲ್ದಾಣದ ಕಾಮಗಾರಿ ಆಮೆಗತಿಯಲ್ಲಿ ನಡೆಯುತ್ತಿದೆ. ಅದನ್ನು ಶೀಘ್ರವಾಗಿ ಮುಕ್ತಾಯಗೊಳಿಸಿ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಯೋಚಿಸಬೇಕು’ ಎಂದು ಪ್ರಯಾಣಿಕರಾದ ದೀಪಾ ಮುಕ್ತಾ ಅವರು ‘ಪ್ರಜಾವಾಣಿ’ಗೆ ತಿಳಿಸಿದರು. 

’ಆವರಣದ ಸುತ್ತಲೂ ಮಳೆನೀರು ಸಮರ್ಪಕವಾಗಿ ಹರಿದು ಹೋಗುತ್ತಿಲ್ಲ. ನಿಲ್ದಾಣದಲ್ಲೇ ನೀರು ನಿಂತು ಕೆಸರು ಗದ್ದೆಯಾಗಿದೆ. ಈ ಕಾರಣದಿಂದ ಸಮಸ್ಯೆಯಾಗುತ್ತಿದೆ’ ಆಟೊ ಚಾಲಕ ನಯಾಜ್ ಪಾಷಾ ಅವರು ತಿಳಿಸಿದರು. ‌

ಶೌಚಾಲಯ ಅವ್ಯವಸ್ಥೆ: ಬಸ್ ನಿಲ್ದಾಣದಲ್ಲಿ ಶೌಚಾಲಯವಿದೆ.  ಆದರೆ, ನಿರ್ವಹಣೆ ಮಾಡದಿರುವುದರಿಂದ ಗಬ್ಬು ನಾರುತ್ತಿದೆ. ಶೌಚಾಲಯದ ಸಮೀಪವೇ ಕೆಸರು ಇತುವ ಕಾರಣ ಪುರುಷ ಪ್ರಯಾಣಿಕರು ಅಲ್ಲೇ ಮೂತ್ರ ಮಾಡುತ್ತಿದ್ದು, ವಾತಾವರಣ ಇನ್ನಷ್ಟು ಹದಗೆಟ್ಟಿದೆ. ಮಹಿಳೆಯರು ಮುಜುಗರ ಪಡಬೇಕಾದ ಸ್ಥಿತಿ ಇದೆ. ಅವರು ಕೂಡ ಬಯಲನ್ನೇ ಆಶ್ರಯಿಸಬೇಕಾಗಿದೆ.

ನಿಲ್ದಾಣಕ್ಕೆ ಆವರಣ ಗೋಡೆಗಳಿಲ್ಲದ ಕಾರಣ, ಬೀದಿನಾಯಿಗಳು, ಹಂದಿಗಳು, ಹಸುಗಳು ಬಸ್‍ಗಳ ಮಧ್ಯೆದಲ್ಲೇ ಓಡಾಡಿಕೊಂಡಿವೆ. ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಬಸ್ ನಿಲ್ದಾಣದ ಆವರಣ ಅಸ್ವಚ್ಛತೆಯ ತಾಣವಾಗಿ ಮಾರ್ಪಟ್ಟಿದೆ. ಆವರಣದಲ್ಲಿ ಎಲ್ಲೆಂದರಲ್ಲಿ ಕಸ ಸುರಿಯಲಾಗಿದೆ. ಇದರಿಂದ ದುರ್ವಾಸನೆ ಬರುತ್ತಿದೆ.

ಈ ಬಗ್ಗೆ ಪ್ರತಿಕ್ರಿಯೆ ಪಡೆಯಲು ಕೆಎಸ್‌ಆರ್‌ಟಿಸಿ ಡಿಪೊ ಮ್ಯಾನೇಜರ್‌ ಸುಬ್ರಹ್ಮಣ್ಯ ಅವರಿಗೆ ಕರೆ ಮಾಡಿದರೂ ಸಂಪರ್ಕ ಸಾಧ್ಯವಾಗಲಿಲ್ಲ. 

ಪ್ರಯಾಣಿಕರಿಗೆ ಮರವೇ ಆಸರೆ

ತಾತ್ಕಾಲಿಕ ಬಸ್‌ ನಿಲ್ದಾಣದ ಪರಿಸ್ಥಿತಿ ಆ ರೀತಿ ಆದರೆ, ನಗರದಲ್ಲಿ ಬಸ್‌ಗಳಿಗಾಗಿ ಕಾಯುವ ಪ್ರಯಾಣಿಕರಿಗೆ ಬಿಸಿಲು, ಮಳೆಯಿಂದ ರಕ್ಷಣೆ ನೀಡುವ ಬಸ್‌ ತಂಗುದಾಣೆಗಳೇ ಇಲ್ಲ. ಮರಗಳ ಆಶ್ರಯವನ್ನೇ ಪ್ರಯಾಣಿಕರು ಪಡೆಯಬೇಕಾಗಿದೆ. 

‘ಹಿರಿಯ ನಾಗರಿಕರು, ಮಹಿಳೆಯರು ಹಾಗೂ ಮಕ್ಕಳಿಗೆ ಇದರಿಂದ ತೊಂದರೆಯಾಗುತ್ತಿದೆ. ಚುನಾವಣೆ ಬಂದರೆ ಮಾತ್ರ ನಮ್ಮ ಬಗ್ಗೆ ರಾಜಕೀಯ ಮುಖಂಡರು, ಜನಪ್ರತಿನಿಧಿಗಳು ಕಾಳಜಿ ವಹಿಸುತ್ತಾರೆ. ಗೆದ್ದ ನಂತರ ಬೇಕು ಬೇಡಗಳನ್ನು ಕೇಳುವುದಿಲ್ಲ. ಸಮಸ್ಯೆ ಬಗೆಹರಿಸಲೂ ಯತ್ನಿಸುವುದಿಲ್ಲ’ ಎಂದು ಮಹಿಳೆ ಸುನಂದ ಅವರು ದೂರಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.