ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಳ್ಳೇಗಾಲ: ಬತ್ತದ ಕೆರೆಗೆ ಮಲಿನ ನೀರಿನ ಶಾಪ!

ಕೊಂಗಳ ಕೆರೆ ಸೇರುತ್ತಿದೆ ನಗರದ ಕೊಳಚೆ ನೀರು
Last Updated 18 ಸೆಪ್ಟೆಂಬರ್ 2021, 2:53 IST
ಅಕ್ಷರ ಗಾತ್ರ

ಕೊಳ್ಳೇಗಾಲ: ಗಡಿ ಜಿಲ್ಲೆ ಚಾಮರಾಜನಗರದ ಪ್ರಮುಖ ವಾಣಿಜ್ಯ ನಗರ ಕೊಳ್ಳೇಗಾಲದ ಸೌಂದರ್ಯವನ್ನು ಹೆಚ್ಚಿಸಬೇಕಾಗಿದ್ದ ಕೊಂಗಳ ಕೆರೆ ನಗರಕ್ಕೆ ಕಪ್ಪುಚುಕ್ಕೆಯಂತಿದೆ!

ವರ್ಷ ಪೂರ್ತಿ ಬತ್ತದ ಈ ಕೆರೆಯ ಒಡಲಲ್ಲಿ ತುಂಬಿರುವುದು ಕೊಳಚೆ ನೀರು. ನಗರದಲ್ಲಿ ಉತ್ಪತ್ತಿಯಾಗುವ ಮಲಿನ ನೀರು ಕೆರೆಯನ್ನು ಸೇರಿ ನೀರನ್ನು ಕಲುಷಿತಗೊಳಿಸುತ್ತಿದ್ದು, ಗಬ್ಬು ನಾರುತ್ತಿದೆ. ಮಲಿನ ನೀರು ಸೇರುತ್ತಿರುವುದರಿಂದಲೇ ಸುಡು ಬೇಸಿಗೆಯಲ್ಲೂ ಕೆರೆಯ ನೀರು ಬತ್ತುತ್ತಿಲ್ಲ.

ಮೈಸೂರು–ಚಾಮರಾಜನಗರದ ಮುಖ್ಯರಸ್ತೆಗೆ ಹೊಂದಿಕೊಂಡಂತಿರುವ ಈ ಕೆರೆ 66.75 ಎಕರೆ ವಿಸ್ತೀರ್ಣವಿದೆ. ನಗರದ ಮಟ್ಟಿಗೆ ಈ ಕೊಂಗಳ ಕೆರೆಗೆ ಐತಿಹಾಸಿಕ ಮಹತ್ವವಿದೆ ಎಂದು ಹೇಳುತ್ತಾರೆ ಸ್ಥಳೀಯರು.

ಕೆಲವು ದಶಕಗಳ ಹಿಂದಿನವರೆಗೂ ಸುತ್ತಮುತ್ತಲಿನ ರೈತರು ವ್ಯವಸಾಯಕ್ಕಾಗಿ ಈ ಕೆರೆಯ ನೀರನ್ನು ಅವಲಂಬಿಸಿದ್ದರು. ನೀರು ಎಷ್ಟು ಶುದ್ಧವಾಗಿತ್ತೆಂದರೆ, ಕುಡಿಯುವುದಕ್ಕೂ ಯೋಗ್ಯವಾಗಿತ್ತು. ದನ ಕರುಗಳಿಗೆ, ಸಂತೆಗೆ ಬರುವ ಸಾರ್ವಜನಿಕರಿಗೆ, ಅಕ್ಕಪಕ್ಕದ ಗ್ರಾಮದವರಿಗೆ ಕೆರೆಯ ನೀರು ಎಲ್ಲದಕ್ಕೂ ಆಗಿಬರುತ್ತಿತ್ತು.

ನಗರ ಬೆಳೆದಂತೆ ನೀರು ಮಲಿನವಾಗುತ್ತಾ ಹೋಯಿತು. ಕುಡಿಯುವುದಕ್ಕೆ ಯೋಗ್ಯವಾಗಿದ್ದ ನೀರು ಕೈಕಾಲು ತೊಳೆಯಲೂ ಯೋಗ್ಯವಿಲ್ಲದಂತಾಯಿತು. ನಗರದಲ್ಲಿ ಉತ್ಪತ್ತಿಯಾಗುವ ಕೊಳಚೆ ನೀರು ಕೆರೆಗೆ ಬಂದು ಸೇರಿ ಜಲಮೂಲವನ್ನೇ ಹದಗೆಡಿಸಿದೆ.

‘ನಗರಸಭೆಯವರಿಗೆ ಎಷ್ಟೇ ಮನವಿ ಮಾಡಿದರೂ ಇದರ ಬಗ್ಗೆ ಕಿಂಚಿತ್ತೂ ಕಾಳಜಿ ವಹಿಸುತ್ತಿಲ್ಲ. ಕೊಳಚೆ ನೀರು ಕೆರೆ ನೀರಿನೊಂದಿಗೆ ಬೆರೆತು ನೀರೆಲ್ಲ ಮಲಿನವಾಗಿ ಕಬ್ಬು ನಾರುತ್ತಿದೆ. ಕೆರೆಯನ್ನು ಹಲವರು ಒತ್ತುವರಿ ಮಾಡಿಕೊಂಡಿದ್ದು, ಸುತ್ತಲೂ ಅನೇಕ ಬಡಾವಣೆಗಳು ನಿರ್ಮಾಣವಾಗಿದೆ. ಇದರಿಂದ ಅಕ್ಕಪಕ್ಕದ ಮನೆಯವರಿಗೆ ಕೊಳಚೆ ನೀರು ದುರ್ನಾತ ಬೀರುತ್ತಿದೆ. ಜೋರಾಗಿ ಮಳೆ ಬಂದರೆ ಸಾಕು, ಕೆರೆಯ ನೀರು ಅನೇಕ ಬಡಾವಣೆಗಳಿಗೆ ನುಗ್ಗುತ್ತದೆ’ ಎಂದು ಹಿರಿಯ ನಾಗರಿಕ ರಂಗಪ್ಪ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ನಗರದ ಕೊಳಚೆ ನೀರು ಕೆರೆಗೆ ಸೇರುತ್ತಿರುವ ಸಂಬಂಧ ಪ್ರತಿಕ್ರಿಯೆ ಪಡೆಯಲು ನಗರಸಭೆ ಆಯುಕ್ತ ವಿಜಯ್‌ ಅವರಿಗೆ ಕರೆ ಮಾಡಿದರೂ ಸಂಪರ್ಕ ಸಾಧ್ಯವಾಗಲಿಲ್ಲ.

ಆಳೆತ್ತರದ ಕಳೆ ಗಿಡಗಳು: ಕೆರೆಯ ನೀರು ಮಲಿನವಾಗಿರುವುದರಿಂದ ಅಕ್ಕ ಪಕ್ಕದ ನಿವಾಸಿಗಳು ಸೊಳ್ಳೆ ಕಾಟವನ್ನು ಅನುಭವಿಸಬೇಕಾಗಿದೆ. ಗಾಳಿ ಬೀಸಿದಾಗಲೆಲ್ಲ ಕೆರೆ ದಂಡೆಗೆ ಹೊಂದಿಕೊಂಡಂತಿರುವ ಬಡಾವಣೆಗಳಿಗೆ ಸೊಳ್ಳೆಗಳು ನುಗ್ಗುತ್ತವೆ. ಕೆರೆಯ ಸುತ್ತಮುತ್ತಲಿನ ಪ್ರದೇಶದಲ್ಲಿ ಬಚ್ಚಲು ಹುಳುಗಳು ಹರಿದಾಡುತ್ತಿರುತ್ತವೆ.

ಹೂಳಿನ ಸಮಸ್ಯೆಯೂ ಕೆರೆಯನ್ನು ಭಾಧಿಸುತ್ತಿದ್ದು, ಆಳೆತ್ತರಕ್ಕೆ ಬೆಳೆದಿರುವ ಕಳೆ ಗಿಡಗಳು ಹಾಗೂ ಜೊಂಡು ಹುಲ್ಲು ಇಡೀ ನೀರನ್ನು ಆವರಿಸಿದೆ. ಕೊಳಚೆ ನೀರಿನ ಜೊತೆಗೆ ಕಳೆಗಿಡಗಳು ಸೇರಿ ನೀರಿನ ಕಪ್ಪಿಗೆ ತಿರುಗಿದೆ.

ಈ ಕೆರೆಯಂಗಳ ಒತ್ತುವರಿಯಾಗಿದೆ. ಈ ಕಾರಣದಿಂದ ಕೆರೆಯ ವ್ಯಾಪ್ತಿ ಕುಗ್ಗಿದೆ. ಒತ್ತುವರಿ ತೆರವುಗಳಿಸಬೇಕು ಎಂದು ಹೋರಾಟಗಾರರು, ಸಾರ್ವಜನಿಕರು ಮಾಡಿರುವ ಮನವಿ ಫಲಪ್ರದವಾಗಿಲ್ಲ.

₹2 ಕೋಟಿ ವೆಚ್ಚದ ಅಭಿವೃದ್ಧಿ ಯೋಜನೆ

ಈ ಕೆರೆಯನ್ನು ಅಭಿವೃದ್ಧಿ ಪಡಿಸಿ ಪ್ರವಾಸಿ ತಾಣವನ್ನಾಗಿ ಪರಿವರ್ತಿಸುವ ಯೋಜನೆಯನ್ನು ಕಾವೇರಿ ನೀರಾವರಿ ನಿಗಮ ಹಾಕಿಕೊಂಡಿದೆ. ಈ ಸಂಬಂಧ ನಿಗಮವು ಯೋಜನೆಯನ್ನೂ ತಯಾರಿಸಿದೆ. ಅದಿನ್ನೂ ಪ್ರಸ್ತಾವದ ಹಂತದಲ್ಲೇ ಇದೆಯಷ್ಟೇ.

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ನಿಗಮದ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ರಾಮಕೃಷ್ಣ ಅವರು, ‘ಕೊಂಗಳಕೆರೆಯನ್ನು ಅಭಿವೃದ್ಧಿ ಪಡಿಸುವ ಉದ್ದೇಶದಿಂದ ನೀರನ್ನು ಸ್ವಚ್ಛಗೊಳಿಸಿ ಒಂದು ಸುಂದರ ತಾಣವನ್ನಾಗಿಸಬೇಕು ಎಂಬ ಚಿಂತನೆಯೊಂದಿಗೆ ₹2 ಕೋಟಿ ವೆಚ್ಚದಲ್ಲಿ ಯೋಜನೆ ತಯಾರಿಸಿ ಸರ್ಕಾರಕ್ಕೆ ಸಲ್ಲಿಸಿದ್ದೇವೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT