ಬುಧವಾರ, 18 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಚಾಮರಾಜನಗರ: ಮಾದಪ್ಪನ ದರ್ಶನಕ್ಕೆ ಪ್ರಯಾಸದ ಪ್ರಯಾಣ!

ವಾರಾಂತ್ಯ, ರಜಾ ದಿನಗಳಲ್ಲಿ ತುಂಬಿ ತುಳುಕುವ ಬಸ್‌ಗಳು: ಪ್ರಯಾಣಿಕರ ಪರದಾಟ
Published : 4 ಆಗಸ್ಟ್ 2024, 6:00 IST
Last Updated : 4 ಆಗಸ್ಟ್ 2024, 6:00 IST
ಫಾಲೋ ಮಾಡಿ
Comments

ಚಾಮರಾಜನಗರ: ಮಾದಪ್ಪನ ದರ್ಶನಕ್ಕೆ ರಾಜ್ಯ ಹಾಗೂ ನೆರೆ ರಾಜ್ಯಗಳಿಂದ ಭಕ್ತ ಸಾಗರ ಹರಿದು ಬರುತ್ತಿರುವ ಪರಿಣಾಮ ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳುವ ಕೆಎಸ್‌ಆರ್‌ಟಿಸಿ ಬಸ್‌ಗಳು ಪ್ರಯಾಣಿಕರಿಂದ ತುಂಬಿ ತುಳುಕುತ್ತಿವೆ. ಪ್ರಯಾಣಿಕರ ಸಂಖ್ಯೆಗೆ ಅನುಗುಣವಾಗಿ ಸರ್ಕಾರಿ ಸಾರಿಗೆ ಬಸ್‌ಗಳ ಸಂಚಾರ ಇಲ್ಲದೆ ಸಾರ್ವಜನಿಕರು ಸಮಸ್ಯೆ ಎದುರಿಸುತ್ತಿದ್ದಾರೆ.

ಜಿಲ್ಲಾ ಕೇಂದ್ರ ಚಾಮರಾಜನಗರದಲ್ಲಿರುವ ಸರ್ಕಾರಿ ಮೆಡಿಕಲ್‌ ಕಾಲೇಜು (ಸಿಮ್ಸ್‌), ಜಿಲ್ಲಾ ಆಸ್ಪತ್ರೆ, ವಿಶ್ವವಿದ್ಯಾಲಯ, ಜಿಲ್ಲಾಡಳಿತ ಭವನ, ಎಸ್‌ಪಿ ಕಚೇರಿ ಸೇರಿದಂತೆ ಸರ್ಕಾರಿ ಕಚೇರಿಗಳಿಗೆ, ಕಾಲೇಜುಗಳಿಗೆ ಕೊಳ್ಳೆಗಾಲ ತಾಲ್ಲೂಕಿನಿಂದ ಪ್ರತಿನಿತ್ಯ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ನೂರಾರು ಮಂದಿ ಪ್ರಯಾಣ ಮಾಡುತ್ತಾರೆ.

ಹೀಗೆ ಪ್ರತಿನಿತ್ಯ ಬಂದುಹೋಗುವವರು ಅಮಾವಾಸ್ಯೆ, ಹುಣ್ಣಿಮೆ, ಹಬ್ಬ–ಹರಿದಿನ, ವಾರಾಂತ್ಯ ಹಾಗೂ ರಜಾ ದಿನಗಳು ಬಂದರೆ ಸಮರ್ಪಕ ಬಸ್‌ ಸೌಲಭ್ಯ ಸಿಗದೆ ಪರದಾಡುತ್ತಾರೆ. ಕೊಳ್ಳೇಗಾಲದಿಂದ ಚಾಮರಾಜನಗರಕ್ಕೆ ಬರುವವರು, ಹಾಗೆಯೇ ಚಾಮರಾಜನಗರದಿಂದ ಕೊಳ್ಳೇಗಾಲ ಹಾಗೂ ಮಹದೇಶ್ವರ ಬೆಟ್ಟಕ್ಕೆ ತೆರಳುವವರು ಸರ್ಕಾರಿ ಬಸ್‌ಗಳಿಗಾಗಿ ತಾಸುಗಟ್ಟಲೆ ಕಾಯಬೇಕಾಗಿದೆ.

ಮೆಡಿಕಲ್‌ ಕಾಲೇಜು ಹಾಗೂ ಸರ್ಕಾರಿ ಜಿಲ್ಲಾ ಆಸ್ಪತ್ರೆಗೆ ಚಿಕಿತ್ಸೆ ಪಡೆಯಲು ಬರುವ ರೋಗಿಗಳಿಗೆ ಸಮಯಕ್ಕೆ ಸರಿಯಾಗಿ ಬಸ್‌ಗಳು ಸಿಗದೆ ಗಂಭೀರ ಸಮಸ್ಯೆ ಎದುರಿಸುತ್ತಿದ್ದಾರೆ. ಗಂಟೆಗಟ್ಟಲೆ ಕಾದರೂ ಆಸನ ಸಿಗುತ್ತದೆ ಎಂಬ ಯಾವ ಖಚಿತತೆಯೂ ಇರುವುದಿಲ್ಲ. ವಿಶೇಷವಾಗಿ ಬೆಳಿಗ್ಗೆ ಹಾಗೂ ಸಂಜೆ ಹೊತ್ತು ಎರಡೂ ನಗರಗಳ ಮಧ್ಯೆ ಸಂಚರಿಸುವ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಕಾಲಿಡಲು ಜಾಗವಿರುವುದಿಲ್ಲ. ಬಸ್‌ನ ಗರಿಷ್ಠ ಆಸನ ಸಾಮರ್ಥ್ಯದ ದುಪ್ಪಟ್ಟು ಸಂಖ್ಯೆಯ ಪ್ರಯಾಣಿಕರನ್ನು ತುಂಬಿಸಲಾಗುತ್ತದೆ ಎನ್ನುತ್ತಾರೆ ಹನೂರು ನಿವಾಸಿ ಜಯಚಂದ್ರ.

ಶಕ್ತಿ ಯೋಜನೆ ಜಾರಿಯಾದ ಬಳಿಕ ಚಾಮರಾಜನಗರ–ಕೊಳ್ಳೇಗಾಲ ಮಾರ್ಗದಲ್ಲಿ ಸಂಚರಿಸುವ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಸಂಚರಿಸುವ ಮಹಿಳಾ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ. ಜತೆಗೆ, ಮಹದೇಶ್ವರ ಬೆಟ್ಟಕ್ಕೆ ಮೈಸೂರು, ಬೆಂಗಳೂರು ಸೇರಿದಂತೆ ರಾಜ್ಯದ ಮೂಲೆ ಮೂಲೆಗಳಿಂದ ಬರುವ ಭಕ್ತರ ಸಂಖ್ಯೆಯೂ ದಿನದಿಂದಕ್ಕೆ ಹೆಚ್ಚುತ್ತಲೇ ಇದೆ.

ಆದರೂ ಪ್ರಯಾಣಿಕರ ಸಂಖ್ಯೆಗೆ ಅನುಗುಣವಾಗಿ ಹೆಚ್ಚುವರಿ ಬಸ್‌ಗಳನ್ನು ಓಡಿಸುತ್ತಿಲ್ಲ. ಮಾದಪ್ಪನ ವಾರದ ದಿನಗಳಾದ ಸೋಮವಾರ, ಶುಕ್ರವಾರ, ವಾರಾಂತ್ಯದ ದಿನಗಳಾದ ಶನಿವಾರ, ಭಾನುವಾರ, ಪ್ರತಿ ಹುಣ್ಣಿಮೆ, ಅಮಾವಾಸ್ಯೆ, ಹಬ್ಬ ಹರಿದಿನಗಳ ಸಂದರ್ಭದಲ್ಲಿ ಸಾರಿಗೆ ಸಂಸ್ಥೆ ಹೆಚ್ಚುವರಿ ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ಓಡಿಸಬೇಕು ಎಂದು ಒತ್ತಾಯಿಸುತ್ತಾರೆ ಅವರು.

ಬಸ್‌ಗಳಲ್ಲಿ ಅತಿಯಾದ ನೂಕು ನುಗ್ಗುಲಿನಿಂದ ಮಕ್ಕಳಿಗೆ ಉಸಿರಾಡಲೂ ಕಷ್ಟವಾಗುವ ಸನ್ನಿವೇಶ ಇರುತ್ತದೆ. ಗರ್ಭಿಣಿಯರು ಅಶಕ್ತರು, ವೃದ್ಧರಿಗೆ ಆಸನಗಳು ಸಿಗದೆ ತಾಸುಗಟ್ಟಲೆ ನಿಂತೇ ಪ್ರಯಾಣ ಮಾಡಬೇಕು. ಸಾರಿಗೆ ಸಂಸ್ಥೆ ಹಾಗೂ ಜಿಲ್ಲೆಯ ಜನಪ್ರತಿನಿಧಿಗಳು ಹೆಚ್ಚುವರಿ ಬಸ್‌ ಸಂಪರ್ಕ ಕಲ್ಪಿಸುವ ಮೂಲಕ ಸಮಸ್ಯೆ ಪರಿಹರಿಸಬೇಕು ಎಂದು ಒತ್ತಾಯಿಸುತ್ತಾರೆ ಕೊಳ್ಳೇಗಾಲದ ಮಲ್ಲಿಗೆಹಳ್ಳಿ ನಿವಾಸಿ ಮಾದೇಶ್.

‘ಬೆಳಿಗ್ಗೆ ಸಂಜೆ ಹೆಚ್ಚುವರಿ ಬಸ್‌ ಓಡಿಸಿ’

ಚಾಮರಾಜನಗರಕ್ಕೆ ಕೊಳ್ಳೇಗಾಲದಿಂದ ನಿತ್ಯವೂ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಪ್ರಯಾಣಿಸುತ್ತೇವೆ. ಶನಿವಾರ ಸೋಮವಾರ ಹುಣ್ಣಿಮೆ ಅಮಾವಾಸ್ಯೆ ಹಬ್ಬದ ದಿನಗಳಲ್ಲಿ ಬಸ್‌ಗಳ ಕೊರತೆ ಎದುರಾಗುತ್ತಿದೆ. ಬೆಳಗಿನ ಅವಧಿಯಲ್ಲಿ ಸಂಚರಿಸುವ ಬಸ್‌ಗಳನ್ನು ಮಹದೇಶ್ವರ ಬೆಟ್ಟಕ್ಕೆ ಬಿಡಲಾಗುತ್ತಿದ್ದು ಚಾಮರಾಜನಗರ ಜಿಲ್ಲಾ ಆಸ್ಪತ್ರೆ ಮೆಡಿಕಲ್ ಕಾಲೇಜಿಗೆ ಚಿಕಿತ್ಸೆಗೆ ಬರುವ ರೋಗಿಗಳಿಗೆ ತೊಂದರೆಯಾಗುತ್ತಿದೆ ನೌಕರರು ಹಾಗೂ ಸಾರ್ವನಿಕರೂ ಸಮಸ್ಯೆ ಎದುರಿಸುತ್ತಿದ್ದಾರೆ. –ಜಯಚಂದ್ರ ಹನೂರು ನಿವಾಸಿ

‘ಮೆಡಿಕಲ್‌ ಕಾಲೇಜಿಗೆ ನೇರ ಬಸ್ ಸೌಲಭ್ಯ ಕಲ್ಪಿಸಿ’

ಮೈಸೂರಿಂದ ಚಾಮರಾಜನಗರ ಮೆಡಿಕಲ್ ಕಾಲೇಜಿಗೆ ನೇರ ಬಸ್‌ ಸಂಪರ್ಕವಿದ್ದು ಕೊಳ್ಳೇಗಾಲದಿಂದಲೂ ಮೆಡಿಕಲ್ ಕಾಲೇಜಿಗೆ ನೇರವಾದ ಬಸ್‌ ಸೌಲಭ್ಯ ಕಲ್ಪಿಸಬೇಕು. ನೇರ ಬಸ್‌ ಸೌಲಭ್ಯ ಇಲ್ಲದೆ ಎರಡೆರಡು ಬಸ್‌ ಹತ್ತಬೇಕಿದೆ. ಬೆಳಿಗ್ಗೆ 7ಕ್ಕೆ ಮಧ್ಯಾಹ್ನ 1ಕ್ಕೆ ಸಂಜೆ 7ಕ್ಕೆ ಬಸ್ ವ್ಯವಸ್ಥೆ ಕಲ್ಪಿಸಿದರೆ ನೌಕರರಿಗೆ ಹಾಗೂ ರೋಗಿಗಳಿಗ ಅನುಕೂಲವಾಗಲಿದೆ. –ನೌಕರರು

‘ಹೆಚ್ಚುವರಿ ಬಸ್‌ ಓಡಿಸಲು ಕ್ರಮ’

ವಾರಾಂತ್ಯದ ದಿನಗಳಲ್ಲಿ ಹಬ್ಬ ಜಾತ್ರೆ ಉತ್ಸವಗಳ ಸಂದರ್ಭ ಮಹದೇಶ್ವರ ಬೆಟ್ಟಕ್ಕೆ ಹೆಚ್ಚುವರಿ ಬಸ್‌ಗಳನ್ನು ಬಿಡಲಾಗುತ್ತಿದೆ. ಅಮಾವಾಸ್ಯೆ ದಿನಗಳಲ್ಲಿ ಪ್ರಯಾಣಿಕರ ದಟ್ಟಣೆ ಹೆಚ್ಚಾಗಿರುವುದು ಬಿಟ್ಟರೆ ಉಳಿದ ದಿನಗಳಲ್ಲಿ  ಸಮಸ್ಯೆ ಇರುವುದಿಲ್ಲ. –ಅಶೋಕ್ ಕುಮಾರ್ ಚಾ.ನಗರ ವಿಭಾಗೀಯ ನಿಯಂತ್ರಣಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT