ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಸರಾ ವಿಶೇಷ: ಕೆಎಸ್‌ಆರ್‌ಟಿಸಿಗೆ ₹75 ಲಕ್ಷ ಆದಾಯ

ಅ.4ರಿಂದ 10ರವರೆಗೆ ವಿವಿಧ ಊರುಗಳಿಗೆ ವಿಶೇಷ ಸೇವೆ
Last Updated 21 ಅಕ್ಟೋಬರ್ 2019, 4:09 IST
ಅಕ್ಷರ ಗಾತ್ರ

ಚಾಮರಾಜನಗರ: ಮೈಸೂರು ದಸರಾ ಮಹೋತ್ಸವ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ (ಕೆಎಸ್‌ಆರ್‌ಟಿಸಿ) ಚಾಮರಾಜನಗರ ವಿಭಾಗ ಉತ್ತಮ ಆದಾಯ ಗಳಿಸಿದೆ.

ದಸರಾ ಅಂಗವಾಗಿ ಅಕ್ಟೋಬರ್‌ 4ರಿಂದ 10ರ ವರೆಗೆ ಕೆಎಸ್‌ಆರ್‌ಟಿಸಿ ವಿಶೇಷ ಬಸ್‌ಗಳ ಸೇವೆ ಒದಗಿಸಿತ್ತು. ಇದಕ್ಕಾಗಿ ಹೆಚ್ಚುವರಿಯಾಗಿ 90 ಬಸ್‌ಗಳನ್ನು ಬಳಸಲಾಗಿತ್ತು. ಏಳು ದಿನಗಳಲ್ಲಿ ₹ 75 ಲಕ್ಷ ಆದಾಯ ಗಳಿಸಿದೆ. ಈ ಬಸ್‌ಗಳಲ್ಲಿ ಅಂದಾಜು 1.26 ಲಕ್ಷ ಪ್ರಯಾಣಿಕರು ಸಂಚಾರಿಸಿದ್ದಾರೆ.

‘ದಸರಾ ಸಂದರ್ಭದಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಬೇರೆ ಕಡೆಗಳಿಂದ ಹೆಚ್ಚುವರಿಯಾಗಿ 90 ಬಸ್‌ಗಳನ್ನು ತರಿಸಿ ಮೈಸೂರು ಹಾಗೂ ಜಿಲ್ಲೆಯ ‍ಪ್ರಮುಖ ಸ್ಥಳಗಳ ನಡುವೆ ವಿಶೇಷ ಸೇವೆ ಒದಗಿಸಲಾಗಿತ್ತು’ ಎಂದು ಕೆಎಸ್ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಕೆ.ಎಚ್‌.ಶ್ರೀನಿವಾಸ್‌‘ಪ್ರಜಾವಾಣಿ’ಗೆ ತಿಳಿಸಿದರು.

ಹೆಚ್ಚುವರಿ ಬಸ್‌ಗಳು,ಚಾಮರಾಜನಗರ–ಮೈಸೂರು, ಗುಂಡ್ಲುಪೇಟೆ–ಮೈಸೂರು, ಕೊಳ್ಳೇಗಾಲ–ಮೈಸೂರು, ನಂಜನಗೂಡು– ಮೈಸೂರು, ಮೈಸೂರು–ಬೆಂಗಳೂರು ನಡುವೆ ಸಂಚಾರ ನಡೆಸಿದ್ದವು.

‘ದಸರಾ ಆರಂಭದ ಮೊದಲ ಎರಡು ದಿನ ಹೆಚ್ಚು ಪ್ರಯಾಣಿಕರು ಇರಲಿಲ್ಲ. ಹಾಗಾಗಿ, ನಂತರದ ದಿನಗಳಲ್ಲಿ ಹೆಚ್ಚುವರಿ ಬಸ್‌ಗಳನ್ನು ಹಾಕಿದ್ದೆವು. ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ನಮ್ಮ ಅಂಕಿ ಅಂಶಗಳ ಪ್ರಕಾರ, ವಿಶೇಷ ಬಸ್‌ಗಳಲ್ಲಿ ಅಂದಾಜು 1.26 ಲಕ್ಷ ಮಂದಿ ಪ್ರಯಾಣಿಸಿದ್ದಾರೆ’ ಎಂದು ಶ್ರೀನಿವಾಸ್‌ ಅವರು ಮಾಹಿತಿ ನೀಡಿದರು.

ದರ ಹೆಚ್ಚಳ: ವಿಶೇಷ ಬಸ್‌ಗಳ ಪ್ರಯಾಣ ದರವನ್ನು ಕೂಡ ಹೆಚ್ಚಿಸಲಾಗಿತ್ತು. ಚಾಮರಾಜನಗರ ಮತ್ತು ಮೈಸೂರು ನಡುವಿನ ಸಾಮಾನ್ಯ ದರ ₹ 50. ಆದರೆ, ದಸರಾ ವಿಶೇಷ ಬಸ್‌ ದರವನ್ನು ₹ 5 ಹೆಚ್ಚಿಸಲಾಗಿತ್ತು. ಉಳಿದ ಮಾರ್ಗಗಳಲ್ಲೂ ದರ ಹೆಚ್ಚಿಸಲಾಗಿತ್ತು.

ನೀರಸ ಪ್ರತಿಕ್ರಿಯೆ: ಅಕ್ಟೋಬರ್ 1ರಿಂದ 4ರ ವರೆಗೆ ನಗರದಲ್ಲಿ ನಡೆದಿದ್ದ ಜಿಲ್ಲಾ ದಸರಾ ಮಹೋತ್ಸವಕ್ಕಾಗಿ ಕೆಎಸ್‌ಆರ್‌ಟಿಸಿ ಹೆಚ್ಚುವರಿ ಬಸ್‌ಗಳ ವ್ಯವಸ್ಥೆ ಮಾಡಿತ್ತು. ಆದರೆ, ಇದಕ್ಕೆ ಜನರಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.

‘ರಾತ್ರಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವೀಕ್ಷಿಸಲು ದೂರದ ಊರುಗಳಿಂದ ಬರುವ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸಲು ಬಸ್ ವ್ಯವಸ್ಥೆ ಮಾಡಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದ್ದರು. ಅದರಂತೆ ಚಾಮರಾಜನಗರ–ಕೊಳ್ಳೇಗಾಲ ಮತ್ತು ಚಾಮರಾಜನಗರ–ಗುಂಡ್ಲುಪೇಟೆ ನಡುವೆ ತಲಾ 10 ಬಸ್‌ಗಳ ವ್ಯವಸ್ಥೆ ಮಾಡಲಾಗಿತ್ತು. ಆದರೆ, ಪ್ರಯಾಣಿಕರು ಇರಲಿಲ್ಲ’ ಎಂದು ಶ್ರೀನಿವಾಸ್‌ ತಿಳಿಸಿದರು.

ದೀಪಾವಳಿ ಜಾತ್ರೆ: 320 ಹೆಚ್ಚುವರಿ ಬಸ್‌
ಜಿಲ್ಲೆಯ ಪ್ರಮುಖ ಯಾತ್ರಾ ಸ್ಥಳ ಮಹದೇಶ್ವರ ಬೆಟ್ಟದಲ್ಲಿ ಅ.27 ಮತ್ತು 28ರಂದು ನಡೆಯಲಿರುವ ದೀಪಾವಳಿ ಜಾತ್ರೆಗಾಗಿ ಕೆಎಸ್‌ಆರ್‌ಟಿಸಿ 320 ಹೆಚ್ಚುವರಿ ಬಸ್‌ಗಳ ವ್ಯವಸ್ಥೆ ಮಾಡಿದೆ.

ಹೆಚ್ಚುವರಿ ಬಸ್‌ಗಳು, ಇದೇ 26ರಿಂದ 30ರ ನಡುವೆ ಮಹದೇಶ್ವರ ಬೆಟ್ಟ ಹಾಗೂ ಜಿಲ್ಲೆ, ಹೊರ ಜಿಲ್ಲೆಗಳ ಪ್ರಮುಖ ಕೇಂದ್ರಗಳ ನಡುವೆ ಸಂಚರಿಸಲಿದೆ.

ಮಹದೇಶ್ವರ ಬೆಟ್ಟದಿಂದ ಚಾಮರಾಜನಗರ, ಕೊಳ್ಳೇಗಾಲ, ಗುಂಡ್ಲುಪೇಟೆ, ಮೈಸೂರು, ಕನಕಪುರ ಮುಂತಾದ ಕಡೆಗಳಿಗೆ ವಿಶೇಷ ಬಸ್‌ ಸೇವೆ ಒದಗಿಸಲಾಗುವುದು ಎಂದು ನಿಗಮದ ವಿಭಾಗೀಯ ನಿಯಂತ್ರಣಾಧಿಕಾರಿ ಕೆ.ಎಚ್‌.ಶ್ರೀನಿವಾಸ್‌ ‘ಪ್ರಜಾವಾಣಿ’ಗೆ ವಿವರಿಸಿದರು.

‘ನಮ್ಮದೇ ವಿಭಾಗದ 150 ಬಸ್‌ಗಳನ್ನು ಇದಕ್ಕೆ ಬಳಸಿಕೊಳ್ಳಲಾಗುತ್ತಿದೆ. ಉಳಿದ ಬಸ್‌ಗಳನ್ನು ಮಂಡ್ಯ, ರಾಮನಗರ, ಮೈಸೂರು ಘಟಕಗಳ ಬಸ್‌ಗಳನ್ನು ಬಳಸಲಾಗುವುದು’ ಎಂದು ಅವರು ತಿಳಿಸಿದರು.

*
ದೀಪಾವಳಿ ಜಾತ್ರೆಗೆ ಬೆಟ್ಟಕ್ಕೆ ಲಕ್ಷಾಂತರ ಭಕ್ತರು ಬರುತ್ತಾರೆ. ಅವರ ಅನುಕೂಲಕ್ಕಾಗಿ 320 ಹೆಚ್ಚುವರಿ ಬಸ್‌ ವ್ಯವಸ್ಥೆ ಮಾಡಲಾಗಿದೆ.
–ಕೆ.ಎಚ್‌.ಶ್ರೀನಿವಾಸ್‌, ಕೆಎಸ್‌ಆರ್‌ಡಿಸಿ ವಿಭಾಗೀಯ ನಿಯಂತ್ರಣಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT