ಗುರುವಾರ , ಏಪ್ರಿಲ್ 15, 2021
23 °C
ರಸ್ತೆ, ಚರಂಡಿ ವ್ಯವಸ್ಥೆ ಇಲ್ಲ. ವಿದ್ಯುತ್‌ ಸಂಪರ್ಕ ಇಲ್ಲದೆ ಕತ್ತಲೆಯಲ್ಲಿ ಮುಳುಗುವ ಮನೆಗಳು

ಯಲಕ್ಕೂರು: ನಾಗರಿಕ ಸೌಲಭ್ಯ ವಂಚಿತ ಬಡಾವಣೆ

ಮಹದೇವ್‌ ಹೆಗ್ಗವಾಡಿಪುರ‌ Updated:

ಅಕ್ಷರ ಗಾತ್ರ : | |

Prajavani

ಸಂತೇಮರಹಳ್ಳಿ: ಈ ಬಡಾವಣೆಗೆ ರಸ್ತೆ ಇಲ್ಲ. ಮುಳ್ಳುಗಳ ಹಾದಿ ತುಳಿದು ಹೋಗಬೇಕು. ಚರಂಡಿ ವ್ಯವಸ್ಥೆ ಇಲ್ಲದೇ ಮನೆಗಳ ಮುಂಭಾಗ ಹರಿಯುವ ಕೊಳಚೆ ನೀರು. ಕುಡಿಯುವ ನೀರಿಗಾಗಿ ಪರದಾಟ. ಬಡಾವಣೆಗೆ ವಿದ್ಯುತ್ ಕಂಬದ ವ್ಯವಸ್ಥೆ ಇಲ್ಲ. ರಾತ್ರಿ ಸಮಯದಲ್ಲಿ ಸೀಮೆಎಣ್ಣೆ ದೀಪ ಉರಿಸುವ ನಿವಾಸಿಗಳು.

ಕುದೇರು ಗ್ರಾಮಪಂಚಾಯಿತಿಗೆ ಸೇರಿದ ಯಲಕ್ಕೂರು ಗ್ರಾಮದ ಹೊಸ ಬಡಾವಣೆಯ ಕಥೆ ಇದು. ಈ ಬಡಾವಣೆಯಲ್ಲಿ ಜನರಿಗೆ ಬೇಕಾದಂತಹ ಕನಿಷ್ಠ ಮೂಲಸೌಕರ್ಯಗಳಿಲ್ಲ. ಬಡಾವಣೆ ನಿರ್ಮಾಣಗೊಂಡು ವರ್ಷಗಳು ಕಳೆದಿದ್ದರೂ, ಇಂದಿಗೂ ಮೂಲ ಸೌಕರ್ಯಗಳಿಂದ ವಂಚಿತವಾಗಿದೆ.

ಬಡಾವಣೆಗೆ ತೆರಳಲು ರಸ್ತೆ ಉತ್ತಮವಾಗಿಲ್ಲ. ರಸ್ತೆಯ ಇಕ್ಕೆಲಗಳಲ್ಲಿ ಮುಳ್ಳಿನ ಗಿಡಗಳು ಬೆಳೆದಿರುವುದರಿಂದ ರಸ್ತೆಯ ಉದ್ದಕ್ಕೂ ಮುಳ್ಳುಗಿಡಗಳು, ಕಳೆಗಿಡಗಳು ಆವರಿಸಿಕೊಂಡಿವೆ. ರಸ್ತೆಯನ್ನು ಅಭಿವೃದ್ಧಿಪಡಿಸಲು ಯಾರೂ ಮುಂದಾಗಿಲ್ಲ. ಬಡಾವಣೆಗೆ ಚರಂಡಿ ವ್ಯವಸ್ಥೆ ಇಲ್ಲದೇ ಮನೆಗಳ ಮುಂಭಾಗವೇ ಕೊಳಚೆ ನೀರನ್ನು ಹರಿ ಬಿಡುತ್ತಿದ್ದಾರೆ. ಮಳೆಗಾಲದ ಸಮಯದಲ್ಲಿ ರಸ್ತೆಯ ತುಂಬೆಲ್ಲ ಮಳೆನೀರು ಹಾಗೂ ಚರಂಡಿಯ ಕೊಳಚೆ ನೀರು ಹರಿಯುತ್ತದೆ. ಜನರು ಇದರಲ್ಲೇ ಓಡಾಡಬೇಕಿದೆ. 

ಕತ್ತಲೆ ಬಡಾವಣೆ: ಬಡಾವಣೆಗೆ ವಿದ್ಯುತ್ ವ್ಯವಸ್ಥೆ ಕಲ್ಪಿಸಿಲ್ಲ. ಹಾಗಾಗಿ ರಾತ್ರಿಯಲ್ಲಿ ಬಡಾವಣೆ ಕತ್ತಲೆಯಲ್ಲಿ ಮುಳುಗುತ್ತದೆ. ರಾತ್ರಿ ಸಮಯದಲ್ಲಿ ನಿವಾಸಿಗಳು ಕತ್ತಲಲ್ಲಿ ತಿರುಗಾಡಬೇಕಾಗಿದೆ. ಮನೆಗಳಲ್ಲಿ ಮೊಂಬತ್ತಿ ಹಾಗೂ ಸೀಮೆಎಣ್ಣೆ ದೀಪದ ಬೆಳಕೇ ಗತಿ. ಬಡಾವಣೆಯಲ್ಲಿ ಮನೆಗಳಿಗೆ ನಲ್ಲಿ ಸಂಪರ್ಕ ವ್ಯವಸ್ಥೆ ಇಲ್ಲ. ಇದರಿಂದ ನಿವಾಸಿಗಳು ಕುಡಿಯುವ ನೀರಿಗೂ ಪರಿತಪಿಸಬೇಕಾಗಿದೆ. ಸಾರ್ವಜನಿಕವಾಗಿ ಒಂದು ನಲ್ಲಿಯನ್ನು ಮಾತ್ರ ಅಳವಡಿಸಲಾಗಿದೆ. ವಿದ್ಯುತ್ ಇರುವ ಸಮಯದಲ್ಲಿ ಮಾತ್ರ ಮನೆಗಳಿಗೆ ನೀರು ತುಂಬಿಸಿಕೊಳ್ಳಬೇಕಾಗಿದೆ.

ಕೂಲಿ ಕೆಲಸಕ್ಕೆ ತೆರಳಿದಾಗ ಕುಡಿಯುವ ನೀರಿನಿಂದಲೂ ವಂಚಿತರಾಗುತ್ತೇವೆ ಎಂದು ನಿವಾಸಿಗಳು ಅಳಲು ತೋಡಿಕೊಳ್ಳುತ್ತಾರೆ.

‘ನಮಗೆ ಕುಡಿಯುವ ನೀರಿಗಾಗಿ ಒಂದು ತೊಂಬೆಯನ್ನಾದರೂ ನಿರ್ಮಿಸಿಕೊಡಬೇಕು. ಮನೆಗಳಿಗೆ ವಿದ್ಯುತ್ ವ್ಯವಸ್ಥೆ ಕಲ್ಪಿಸಿಕೊಡಬೇಕು’ ಎಂದು ನಿವಾಸಿ ಚಿಕ್ಕತಾಯಮ್ಮ ಒತ್ತಾಯಿಸಿದರು.

ಗ್ರಾಮದ ಹಳೆ ಬಡಾವಣೆಯಲ್ಲಿ ಚರಂಡಿ ವ್ಯವಸ್ಥೆ ಸಮರ್ಪಕವಾಗಿಲ್ಲದ ಕಾರಣ ಮನೆಗಳ ಮುಂಭಾಗ ಮನೆಗಳಿಂದ ತ್ಯಾಜ್ಯವಾದ ಕಲ್ಮಷ ನೀರು ಹರಿಯುತ್ತಿದೆ. ಜತೆಗೆ ಇದರ ಸುತ್ತಲೂ ಗಿಡ ಗಂಟೆಗಳು ಬೆಳೆದುಕೊಂಡು ಬಡಾವಣೆಯಲ್ಲಿ ಅನೈರ್ಮಲ್ಯ ಉಂಟಾಗಿದೆ. ಮಳೆಗಾಲದ ಸಮಯದಲ್ಲಿ ರಸ್ತೆಯಲ್ಲಿ ನೀರು ನಿಂತು ಜನಸಂಚಾರಕ್ಕೆ ಅಡಚಣೆ ಉಂಟಾಗುತ್ತದೆ. ಕೆಲವು ನಿವಾಸಿಗಳು ಮನೆಗಳ ಮುಂಭಾಗ ಗುಂಡಿ ತೆಗೆದು ಚರಂಡಿ ನೀರು ತುಂಬಿಸುತ್ತಿದ್ದಾರೆ.

‘ರಸ್ತೆ ಹಾಗೂ ಚರಂಡಿ ವ್ಯವಸ್ಥೆ ಇಲ್ಲದೇ ಮನೆಗಳ ಮುಂಭಾಗ ಕೊಚ್ಚೆ ನೀರು ಹರಿಯುತ್ತಿದೆ. ಚರಂಡಿ ನಿರ್ಮಿಸಿ ಎಂದು ಹಲವಾರು ಬಾರಿ ಮನವಿ ಮಾಡಿದರೂ ಗಮನ ಹರಿಸಿಲ್ಲ’ ಎಂದು ನಿವಾಸಿಗಳಾದ ಮಹದೇವಪ್ಪ, ಜಯಮ್ಮ ಆರೋಪಿಸಿದರು. 

ಓವರ್‌ ಹೆಡ್‌ ಟ್ಯಾಂಕ್‌ ನಿರ್ಮಿಸಲು ಒತ್ತಾಯ

ಗ್ರಾಮಕ್ಕೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಇನ್ನು ಅನುಷ್ಠಾನಗೊಂಡಿಲ್ಲ. ಐದು ಕೊಳವೆ ಬಾವಿಗಳಿಂದ ಕುಡಿಯುವ ನೀರು ಬರುತ್ತಿದ್ದರೂ, ಸಾಕಷ್ಟು ಪ್ರಮಾಣದಲ್ಲಿ ನೀರು ಸರಬರಾಜಾಗುತ್ತಿಲ್ಲ. ಕಿರುನೀರು ಸರಬರಾಜು ಘಟಕದ 11 ತೊಂಬೆಗಳಲ್ಲಿ ಆರು ತೊಂಬೆಗಳಿಗೆ ಮಾತ್ರ ನೀರು ತುಂಬಿಸಲಾಗುತ್ತಿದೆ. ಈ ತೊಂಬೆಗಳಲ್ಲಿ ಗ್ರಾಮದ ಎಲ್ಲ ನಿವಾಸಿಗಳಿಗೆ ನೀರು ಸಾಕಾಗುತ್ತಿಲ್ಲ. ಓವರ್ ಹೆಡ್ ಟ್ಯಾಂಕ್ ನಿರ್ಮಿಸಿ ಬಡಾವಣೆಗೆ ಕುಡಿಯುವ ನೀರು ಸರಬರಾಜು ಮಾಡಬೇಕು ಎಂಬುದು ನಿವಾಸಿಗಳ ಒತ್ತಾಯ.

‘ಗ್ರಾಮಕ್ಕೆ ಭೇಟಿ ನೀಡಿ ಸಮಸ್ಯೆ ಗಮನಿಸಲಾಗಿದೆ. ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಅಗತ್ಯವಿರುವ ಕಡೆಗಳಲ್ಲಿ ಚರಂಡಿ, ರಸ್ತೆ ನಿರ್ಮಿಸಲು ಕ್ರಿಯಾ ಯೋಜನೆ ತಯಾರಿಸಲಾಗುವುದು’ ಎಂದು ಕುದೇರು ಗ್ರಾಮಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಚಂದ್ರು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು