ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ| ಮೂಲಸೌಕರ್ಯ ವಂಚಿತ ಕ್ರೀಡಾಂಗಣಗಳು

ನಡೆಯದ ಅಭಿವೃದ್ಧಿ ಕೆಲಸ, ವರ್ಷಗಳಿಂದ ನನೆಗುದಿಗೆ, ನಿರ್ವಹಣೆ ಕೊರತೆ, ಕ್ರೀಡಾಳುಗಳಿಗೆ ತೊಂದರೆ
Last Updated 21 ಆಗಸ್ಟ್ 2022, 19:30 IST
ಅಕ್ಷರ ಗಾತ್ರ

ಚಾಮರಾಜನಗರ: ಕ್ರೀಡಾಕಲಿಗಳನ್ನು ಹುಟ್ಟುಹಾಕಬೇಕಾದ ಜಿಲ್ಲೆಯ ಕ್ರೀಡಾಂಗಣಗಳು ನಿರ್ವಹಣೆ ಇಲ್ಲದೆ, ಕನಿಷ್ಠ ಮೂಲಸೌಕರ್ಯಗಳಿಲ್ಲದೆ ಕ್ರೀಡಾಳುಗಳ ಸಾಧನೆಗಳಿಗೆ ಅಡ್ಡಿಯಾಗಿದೆ.

ಜಿಲ್ಲೆ ರಚನೆಯಾಗಿ 25 ವರ್ಷಗಳಾದರೂ, ಜಿಲ್ಲೆಯಲ್ಲಿ ಸುಸಜ್ಜಿತ ಹಾಗೂ ಮಾದರಿಯಾದಂತಹ ಒಂದು ಕ್ರೀಡಾಂಗಣವನ್ನು ಅಭಿವೃದ್ಧಿ ಪಡಿಸಲು ಜಿಲ್ಲಾಡಳಿತ, ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಗೆ ಸಾಧ್ಯವಾಗಿಲ್ಲ.

ತಾಲ್ಲೂಕು ಕೇಂದ್ರಗಳು ಬಿಡಿ, ಜಿಲ್ಲಾ ಕೇಂದ್ರದಲ್ಲಿರುವ ಡಾ.ಬಿ.ಆರ್‌.ಅಂಬೇಡ್ಕರ್‌ ಕ್ರೀಡಾಂಗಣವನ್ನಾದರೂ ಪೂರ್ಣ ಪ್ರಮಾಣದಲ್ಲಿ ಅಭಿವೃದ್ಧಿ ಪಡಿಸಲು ಆಗಿಲ್ಲ. ₹10 ಕೋಟಿಗೂ ಹೆಚ್ಚು ಹಣ ಖರ್ಚು ಮಾಡಿದ್ದರೂ, ಇನ್ನೂ ಕಾಮಗಾರಿ ಮುಕ್ತಾಯವಾಗಿಲ್ಲ. ಕನಿಷ್ಠ ಮೂಲಸೌಕರ್ಯಗಳ ಕೊರತೆಗಳನ್ನು ಕ್ರೀಡಾಪಟುಗಳು, ತರಬೇತುದಾರರು ಎದುರಿಸುತ್ತಿದ್ದಾರೆ. ಒಂದು ಮಳೆ ಬಂದರೆ ಕ್ರೀಡಾಂಗಣ ಕೆಸರಿನ ಅಂಗಳವಾಗುತ್ತದೆ.

ಐದು ತಾಲ್ಲೂಕುಗಳ ಪೈಕಿ ಯಳಂದೂರಿನಲ್ಲಿ ಕ್ರೀಡಾಂಗಣವೇ ಇಲ್ಲ. ಕೊಳ್ಳೇಗಾಲ, ಹನೂರು, ಗುಂಡ್ಲುಪೇಟೆಯಲ್ಲಿರುವ ಕ್ರೀಡಾಂಗಣ
ಗಳೂ ನಿರ್ವಹಣೆ, ಮೂಲಸೌಕರ್ಯ ಕೊರತೆ ಎದುರಿಸುತ್ತಿವೆ.

ಪೂರ್ಣಗೊಳ್ಳದ ಕೆಲಸ: ಜಿಲ್ಲಾ ಕ್ರೀಡಾಂಗಣದ ಅಭಿವೃದ್ಧಿ ಕಾರ್ಯ 2002ರಲ್ಲಿ ಆರಂಭವಾಯಿತು. ಅಭಿವೃದ್ಧಿ ಪ್ರಕ್ರಿಯೆ ಆರಂಭಗೊಂಡು 20 ವರ್ಷಗಳು ಸಂದರೂ ಕೆಲಸ ಪೂರ್ಣಗೊಂಡಿಲ್ಲ. ಒಳಾಂಗಣ ಕ್ರೀಡಾಂಗಣವೂ ಸಮರ್ಪಕವಾಗಿಲ್ಲ. ಈಜುಕೊಳ್ಳ ನಿರ್ಮಾಣ ಯೋಜನೆ ನ್ಯಾಯಾಲಯದ ಕಟಕಟೆಯಲ್ಲಿದೆ.

ಕ್ರೀಡಾಂಗಣವನ್ನು ನೋಡಿದರೆ ಸಿಂಥೆಟಿಕ್‌ ಟ್ರ್ಯಾಕ್‌, ವೀಕ್ಷಣಾ ಗ್ಯಾಲರಿ, ಸುತ್ತಲೂ ಕಾಂಪೌಂಡ್‌, ಇತ್ತೀಚೆಗೆ ನಿರ್ಮಾಣವಾದ ಪ್ರವೇಶದ್ವಾರ ಕಾಣಿಸುತ್ತಿದೆ. ಕಾಂಪೌಂಡ್‌ ಕೆಲಸ ಇನ್ನೂ ಪೂರ್ಣಗೊಂಡಿಲ್ಲ. ಮಳೆ ಬಂದರೆ ಕ್ರೀಡಾಂಗಣ ಕೆಸರುಮಯ ಆಗುತ್ತದೆ. ಇತ್ತೀಚೆಗೆ ಕ್ರೀಡಾಪಟುಗಳು ಕೆಸರುಮಯ ಕ್ರೀಡಾಂಗಣದಲ್ಲಿ ಹುಲ್ಲು ನಾಟಿ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದು ದೊಡ್ಡ ಸುದ್ದಿಯಾಗಿತ್ತು. ಕ್ರೀಡಾ ಹಾಸ್ಟೆಲ್‌ ಕೂಡ ಮೈದಾನಕ್ಕೆ ಹೊಂದಿಕೊಂಡಿದೆ. ಮಳೆ ಬಂದರೆ ಕ್ರೀಡಾಂಗಣದಲ್ಲಿ ನೀರು ನಿಲ್ಲುವುದರಿಂದ ಮಕ್ಕಳಿಗೆ ಹಾಸ್ಟೆಲ್‌ಗೆ ಹೋಗುವುದಕ್ಕೆ ಆಗುವುದಿಲ್ಲ. ಕ್ರೀಡಾಂಗಣದಲ್ಲಿ ಒಳಚರಂಡಿ ವ್ಯವಸ್ಥೆ ಇಲ್ಲ.

ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಕ್ರೀಡಾಂಗಣದ ಅಭಿವೃದ್ಧಿಗೆ ₹7 ಕೋಟಿ ಬಿಡುಗಡೆಯಾಗಿತ್ತು. ಅದರಲ್ಲಿ ಕೆಲವು ಕಾಮಗಾರಿಗಳು ಪೂರ್ಣಗೊಂಡಿವೆ. ಉಳಿದ ಕೆಲಸ ಮುಗಿಯಲು ಇನ್ನೂ ₹2 ಕೋಟಿ ಬೇಕು ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ. ನಗರೋತ್ಥಾನ ಯೋಜನೆ ಅಡಿಯಲ್ಲಿ ಅಷ್ಟು ಅನುದಾನ ಪಡೆಯಲು ಯೋಜಿಸಲಾಗಿದೆ.

ಬೇಸತ್ತ ಕ್ರೀಡಾಪಟುಗಳು

ಕೊಳ್ಳೇಗಾಲ: ತಾಲ್ಲೂಕು ಕ್ರೀಡಾಂಗಣದಲ್ಲಿ ಸಮರ್ಪಕ ವ್ಯವಸ್ಥೆ ಇಲ್ಲದಿರುವುದರಿಂದ ಇಲ್ಲಿನ ಕ್ರೀಡಾಪಟ್ಟುಗಳು ಬೇಸತ್ತು ಹೋಗಿದ್ದಾರೆ.

ನಗರದ ಶ್ರೀ ಮಹದೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮೈದಾನದಲ್ಲಿ 12 ವರ್ಷಗಳ ಹಿಂದೆಯೇ ಅಭಿವೃದ್ಧಿ ಕೆಲಸಕ್ಕೆ ಚಾಲನೆ ನೀಡಿದರೂ ಕಾಮಗಾರಿ ಇನ್ನೂ ಮುಕ್ತಾಯವಾಗಿಲ್ಲ. ಕ್ರೀಡಾಂಗಣದ ಅಭಿವೃದ್ಧಿಗೆ ₹66 ಲಕ್ಷ ಅನುದಾನ ಬಿಡುಗಡೆ ಮಾಡಲಾಗಿತ್ತು. ಮೈದಾನದಲ್ಲಿ 2 ಗ್ಯಾಲರಿ ಬಿಟ್ಟರೆ ಬೇರೆ ಯಾವ ಕೆಲಸವೂ ಆಗಿಲ್ಲ. ಹಳೆಯ ಮೈದಾನವನ್ನೇ ಸರಿಪಡಿಸಿ ಅದರಲ್ಲೇ ಕ್ರೀಡಾಕೂಟಗಳನ್ನು ಆಯೋಜಿಸಲಾಗುತ್ತಿದೆ.

ಕುಡಿಯುವ ನೀರು, ಕುಳಿತು ಕೊಳ್ಳಲು ಉತ್ತಮ ಸ್ಥಳ, ಶೌಚಾಲಯಗಳಿಲ್ಲ. ಯುವಕರು, ಯುವತಿಯರು ಬಯಲನ್ನೇ ಅವರಿಸಬೇಕಾಗಿದೆ. ಮಳೆ ಬಂದರೆ ಮೈದಾನ ಕೆಸರು ಗದ್ದೆಯಾಗುತ್ತದೆ ಹಾಗೂ ವಿವಿಧ ಕ್ರೀಡೆಗಳಿಗೆ ಪ್ರತ್ಯೇಕ ಕೋರ್ಟ್‍ಗಳಿಲ್ಲ. ರಾತ್ರಿಯಾದರೆ ಸಾಕು ಮೈದಾನವು ಮಿನಿ ಡಾಬಗಳಂತೆ ಪರಿರ್ವತನೆಯಾಗುತ್ತದೆ.

ಮೂಲಸೌಕರ್ಯ ವಂಚಿತ

ಹನೂರು: ತಾಲ್ಲೂಕು ಹಾಗೂ ಹೋಬಳಿ ಕ್ರೀಡಾಕೂಟಗಳಿಗೆ ವೇದಿಕೆಯಾಗಿರುವ ಪಟ್ಟಣದ ಮಹದೇಶ್ವರ ಕ್ರೀಡಾಂಗಣ ಮೂಲಸೌಕರ್ಯ
ಗಳಿಂದ ವಂಚಿತವಾಗಿದೆ.

10 ಎಕರೆಯಲ್ಲಿ ನಿರ್ಮಾಣವಾಗಿರುವ ಕ್ರೀಡಾಂಗಣ ಹೆಸರಿಗೆ ಮಾತ್ರ ಕ್ರೀಡಾಂಗಣ. ಒಳಗೆ ಯಾವುದೇ ಸೌಲಭ್ಯಗಳಿಲ್ಲದೇ ಬಯಲು ಪ್ರದೇಶದಂತೆ ಇದೆ. ಜಿಲ್ಲಾ ಮಟ್ಟದ ಕ್ರೀಡಾಕೂಟಗಳ ಜತೆಗೆ ರಾಜ್ಯಮಟ್ಟದ ಕ್ರೀಡೆಗಳು ಇಲ್ಲಿ ಆಯೋಜನೆಗೊಂಡಿವೆ. ಪ್ರತಿ ಕ್ರೀಡಾಕೂಟದ ಸಂದರ್ಭದಲ್ಲೂ ಕ್ರೀಡಾಪಟುಗಳಿಗೆ ಮೂಲಸೌಕರ್ಯ ಕಲ್ಪಿಸಿಕೊಡಬೇಕು ಎಂಬ ಕೂಗು ಕೇಳಿ ಬರುತ್ತಲೇ ಇದೆ.

ಕ್ರೀಡಾಂಗಣ ನಿರ್ಮಿಸಿ ದಶಕಗಳು ಕಳೆದರೂ ಇದುವರೆಗೂ ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿಲ್ಲ. ಮಳೆಗಾಲದ ಸಂದರ್ಭದಲ್ಲಂತೂ ಕ್ರೀಡಾಂಗಣ ಕೆರೆಯಂತಾಗುತ್ತದೆ. ನೆರಳಿನ ವ್ಯವಸ್ಥೆಯಿಲ್ಲದೆ ಪ್ರೇಕ್ಷಕರು ಬಿಸಿಲಿನಲ್ಲೇ ನಿಂತು ಕ್ರೀಡೆಗಳನ್ನು ನೋಡಬೇಕಿದೆ.

ಅವ್ಯವಸ್ಥೆಯ ಆಗರ

ಗುಂಡ್ಲುಪೇಟೆ: ಪಟ್ಟಣದ ಡಿ.ದೇವರಾಜ ಅರಸು ಕ್ರೀಡಾಂಗಣ ಅವ್ಯವಸ್ಥೆಯಿಂದ ಕೂಡಿದ್ದು, ನಿರ್ವಹಣೆ ಕೊರತೆ ಎದುರಿಸುತ್ತಿದೆ.

ಕ್ರೀಡಾಂಗಣದಲ್ಲಿ 400 ಮೀಟರ್ ಉದ್ದದ ಟ್ರ್ಯಾಕ್ ಇದ್ದು, ಕಲ್ಲುಗಳಿಂದ ಕೂಡಿದೆ. ಮಳೆಯಾದರೆ ನಡೆದಾಡಲು ಕಷ್ಟವಾಗುತ್ತದೆ. ವಾಲಿಬಾಲ್ ಬಿಟ್ಟು ಇತರ ಕ್ರೀಡೆಗಳಿಗೆ ಅಂಕಣಗಳಿಲ್ಲ. ಒಳಾಂಗಣದಲ್ಲಿ ನೀರು, ಶೌಚಾಲಯ ವ್ಯವಸ್ಥೆ ಆಗಲಿ ಇಲ್ಲ.
ಕ್ರೀಡಾಂಗಣದ ಸುತ್ತಲೂ ತಂತಿ ಬೇಲಿ ಇದ್ದು ಕೆಲವು ಕಡೆ ಹಾಳಾಗಿದೆ.

ಕ್ರೀಡಾಂಗಣದಲ್ಲಿ ರಾತ್ರಿ ಸಮಯದಲ್ಲಿ ಕುಡುಕರ ಹಾವಳಿ ಇದೆ. ಹೈಮಾಸ್ಟ್‌ ದೀಪದ ಬಲ್ಬ್‌ ಗಳು ಹಾಳಾಗಿವೆ. ಕ್ರೀಡಾಂಗಣದಲ್ಲಿ ಜಿಮ್ ಇದ್ದರೂ ಸರಿಯಾದ ಉಪಕರಣಗಳಿಲ್ಲ.

ತರಬೇತುದಾರರು, ಕ್ರೀಡಾಪಟುಗಳುಏನಂತಾರೆ?

‘ಕನಿಷ್ಠ ಸೌಲಭ್ಯಗಳೇ ಇಲ್ಲ’

ಜಿಲ್ಲೆಯ ಕ್ರೀಡಾಪಟುಗಳಿಗೆ ವರದಾನವಾಗಬೇಕಾಗಿದ್ದ ಡಾ.ಬಿ.ಆರ್‌.ಅಂಬೇಡ್ಕರ್‌ ಜಿಲ್ಲಾ ಕ್ರೀಡಾಂಗಣದಲ್ಲಿ ಕನಿಷ್ಠ ಮೂಲಸೌಕರ್ಯಗಳೇ ಇಲ್ಲ. ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಬಿಸಿಲು, ಮಳೆಗೆ ಆಶ್ರಯಿಸಲು ನೆರಳು ಇಲ್ಲ. ಶೌಚಾಲಯಗಳಿದ್ದರೂ, ಅಲ್ಲಿ ನೀರಿನ ವ್ಯವಸ್ಥೆ ಇಲ್ಲ. ಕ್ರೀಡಾಪಟುಗಳಲ್ಲಿ ಹೆಣ್ಣುಮಕ್ಕಳೇ ನಮ್ಮಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಋತುಸ್ರಾವದ ಸಂದರ್ಭದಲ್ಲಿ ಅವರು ಪಡುವ ಕಷ್ಟ ಅಷ್ಟಿಷ್ಟಲ್ಲ. ಕ್ರೀಡಾಂಗಣದ ಅಭಿವೃದ್ಧಿಗೆ ಕೋಟಿಗಟ್ಟಲೆ ಖರ್ಚು ಮಾಡಿರುವುದಾಗಿ ಅಧಿಕಾರಿಗಳು ಹೇಳುತ್ತಾರೆ. ಆಗಿರುವ ಕೆಲಸಗಳೇ ಕಾಣುತ್ತಿಲ್ಲ. ಇನ್ನೂ ಕಾಮಗಾರಿ ಪೂರ್ಣಗೊಂಡಿಲ್ಲ. ಒಳಚರಂಡಿ ವ್ಯವಸ್ಥೆ ಇಲ್ಲ. ಮಳೆಗಾಲದಲ್ಲಿ ಕ್ರೀಡಾಂಗಣ ಕೆಸರುಗದ್ದೆಯಾಗುತ್ತದೆ. ಸಾಧನೆ ಮಾಡಿದ ಕ್ರೀಡಾಪಟುಗಳನ್ನು ಗುರುತಿಸುವ ಕೆಲಸವನ್ನೂ ಕ್ರೀಡಾ ಇಲಾಖೆ ಮಾಡುತ್ತಿಲ್ಲ.

ಶಿವು,ಸೈನಿಕ್‌ ಅಥ್ಲೆಟಕ್ಸ್‌ ಕ್ಲಬ್‌ ತರಬೇತುದಾರ, ಚಾಮರಾಜನಗರ

‘ಮೂಲಸೌಕರ್ಯಗಳಿಲ್ಲ..’

ತಾಲ್ಲೂಕು ಕ್ರೀಡಾಂಗಣದಲ್ಲಿ ಸರಿಯಾದ ಮೂಲ ಸೌಕರ್ಯಗಳೇ ಇಲ್ಲದೆ ತೊಂದರೆಯಾಗುತ್ತಿದೆ. ವಿವಿಧ ಕ್ರೀಡೆಗಳಿಗೆ ಪ್ರತ್ಯೇಕ ಕೋರ್ಟ್‍ಗಳಿಲ್ಲ. ಬೇರೆ ಜಿಲ್ಲೆಗಳಲ್ಲಿ ಉತ್ತಮವಾದ ಕ್ರೀಡಾಂಗಣಗಳಿವೆ. ನಮ್ಮ ಜಿಲ್ಲೆಯಲ್ಲಿ ಎಲ್ಲೂ ಇಲ್ಲ. ಹೀಗಾಗಿ ಕ್ರೀಡಾಪಟುಗಳಿಗೆ ಅಭ್ಯಾಸ ಮಾಡಲು ಆಗುತ್ತಿಲ್ಲ. ನಮ್ಮನ್ನು ಜಿಲ್ಲಾಡಳಿತವೂ ಗುರುತಿಸುತ್ತಿಲ್ಲ.

ಮನೋರಂಜನ್,ಹ್ಯಾಂಡ್ ಬಾಲ್, ಕಬಡ್ಡಿ ಕ್ರೀಡಾಪಟು, ಕೊಳ್ಳೇಗಾಲ

‘ಸೌಕರ್ಯ, ಭದ್ರತೆ ಬೇಕು’

ತಾಲ್ಲೂಕಿನ ಕ್ರೀಡಾಂಗಣ ಇದ್ದೂ ಇಲ್ಲದಂತಿದೆ. ಮೂಲಸೌಕರ್ಯಗಳು ಇಲ್ಲದಿರುವುದರಿಂದ ತರಬೇತುದಾರರು, ಕ್ರೀಡಾಳುಗಳಿಗೆ ಸಮಸ್ಯೆಯಾಗುತ್ತಿದೆ. ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯುಕ್ರೀಡಾಂಗಣಕ್ಕೆ ಮೂಲಸೌಕರ್ಯ ಕಲ್ಪಿಸುವುದರ ಜತೆಗೆ ಭದ್ರತೆ ವ್ಯವಸ್ಥೆ ಮಾಡಬೇಕು.

ಶ್ರೀನಿವಾಸ್ ನಾಯ್ಡು,ಹನೂರು

‘ನೀರು ನಿಂತು ಅವ್ಯವಸ್ಥೆ’

ಹನೂರು ತಾಲ್ಲೂಕು ಕ್ರೀಡಾಂಗಣದಲ್ಲಿ ಮಳೆ ಬಂದರೆ ನೀರು ನಿಲ್ಲುತ್ತದೆ. ನೀರು ಬಸಿದು ಹೋಗಲು ವ್ಯವಸ್ಥೆ ಮಾಡಬೇಕು. ತರಬೇತುದಾರರು, ಅಭ್ಯಾಸದಲ್ಲಿ ನಿರತರಾದ ಕ್ರೀಡಾಪ‍ಟುಗಳಿಗೆ ಕನಿಷ್ಠ ಸೌಲಭ್ಯಗಳನ್ನು ಕಲ್ಪಿಸಬೇಕು.

ಶ್ರೀನಿವಾಸ್,ಹನೂರು

‘ರಸ್ತೆ ಬದಿಯಲ್ಲೇ ಅಭ್ಯಾಸ’

ತಾಲ್ಲೂಕು ಕೇಂದ್ರದಲ್ಲಿ ಕ್ರೀಡಾಂಗಣವೇ ಇಲ್ಲ.ಶಾಲಾ ಕಾಲೇಜುಗಳು ಮತ್ತು ಕ್ರೀಡಾ ಇಲಾಖೆ ತಾಲೂಕಿನಲ್ಲಿ ಆಟೋಟಗಳನ್ನು ಏರ್ಪಡಿಸಲು ಪರದಾಡಬೇಕಿದೆ. ಖಾಸಗಿ ಶಾಲಾ ಕಾಲೇಜುಗಳ ಮೈದಾನ ಹುಡುಕುವಂತಾಗಿದೆ. ಕ್ರೀಡಾಸಕ್ತರು ರಸ್ತೆ ಬದಿಗಳಲ್ಲಿ ಇಲ್ಲವೇ ಕೆರೆಕಟ್ಟೆಗಳ ಬಳಿ ಅಭ್ಯಾಸ ಮಾಡುವಂತಾಗಿದೆ.

ಸುರೇಶ್ ಕುಮಾರ್. ಎಚ್,ಕ್ರೀಡಾಪಟು, ಯಳಂದೂರು

‘ಮಳೆ ಬಂದರೆ ಪರದಾಟ’

ಕ್ರೀಡಾ ಚಟುವಟಿಕೆಗಳಲ್ಲಿ ಪಟ್ಟಣದ ಪದವಿಪೂರ್ವ ಕಾಲೇಜಿನ ಮೈದಾನವನ್ನೇ ಅವಲಂಬಿಸಬೇಕಾಗಿದೆ. ಮಳೆ ಬಂದರೆ ಈ ಅಂಗಳ ನೀರು ನಿಂತು ಕೆಸರು ಗದ್ದೆಯಾಗುತ್ತದೆ. ಇದರಿಂದ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಪರಿತಪಿಸುವಂತಾಗಿದೆ. ಮಳೆಯ ಕಾರಣಕ್ಕೆ ಕ್ರೀಡಾಕೂಟಗಳನ್ನೂ ರದ್ದುಪಡಿಸುವ ಸಂದರ್ಭಗಳು ಬಂದಿವೆ.

ಶ್ರೀನಿವಾಸ್ ಅಂಬಳೆ,ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತುದಾರ,ಯಳಂದೂರು ತಾಲ್ಲೂಕು

‘ಅಭಿವೃದ್ಧಿಗೆ ನಿರಂತರ ಪ್ರಯತ್ನ’

ಕ್ರೀಡಾಂಗಣದ ಸ್ಥಿತಿಗತಿಗಳ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಯುವಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಆರ್.ಅನಿತಾ, ‘ಕ್ರೀಡಾಂಗಣಗಳಲ್ಲಿ ಶೌಚಾಲಯ ಸೇರಿದಂತೆ ಇನ್ನಿತರ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಪ್ರಯತ್ನ ಮಾಡಲಾಗುತ್ತಿದೆ. ಆಯಾ ಕ್ಷೇತ್ರದ ಶಾಸಕರು ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದೇವೆ. ಕೆಲವು ಮೈದಾನಗಳ ಅಭಿವೃದ್ಧಿಗಾಗಿ ಅನುದಾನಕ್ಕೆ ಪ್ರಸ್ತಾವವನ್ನು ಕಳುಹಿಸಲಾಗಿದೆ’ ಎಂದರು.

‘ಚಾಮರಾಜನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಒಳಚರಂಡಿ ವ್ಯವಸ್ಥೆ, ಸ್ವಲ್ಪ ಕಾಂಪೌಂಡ್‌ನ ಕೆಲಸ ಬಾಕಿ ಇದೆ. ನಗರೋತ್ಥಾನ ಅಡಿಯಲ್ಲಿ ₹2 ಕೋಟಿ ಅನುದಾನ ಸಿಗಲಿದ್ದು, ಕಾಮಗಾರಿ ಪೂರ್ಣಗೊಳಿಸಲಾಗುವುದು. ಕೊಳ್ಳೇಗಾಲದ ಕ್ರೀಡಾಂಗಣದಲ್ಲಿ ಮೂಲಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ಶಾಸಕರ ನೇತೃತ್ವದಲ್ಲಿ ಸಭೆ ನಡೆದಿದೆ. ಗುಂಡ್ಲುಪೇಟೆ ಕ್ರೀಡಾಂಗಣದಲ್ಲಿ ಒಳ ಚರಂಡಿ ವ್ಯವಸ್ಥೆಗೆ ₹47 ಲಕ್ಷ ವೆಚ್ಚದಲ್ಲಿ ಪ್ರಸ್ತಾವ ಸಲ್ಲಿಸಲಾಗಿದೆ’ ಎಂದು ಮಾಹಿತಿ ನೀಡಿದರು.

‘ಯಳಂದೂರಿನಲ್ಲಿ ಸುಸಜ್ಜಿತ ಕ್ರೀಡಾಂಗಣ ನಿರ್ಮಿಸಲು 8ರಿಂದ 10 ಎಕರೆ ಜಾಗಬೇಕು. ತಹಶೀಲ್ದಾರ್‌ ಹಾಗೂ ಶಾಸಕರಿಗೂ ಈ ಸಂಬಂಧ ಮನವಿ ಮಾಡಿದ್ದೇವೆ’ ಎಂದು ಅನಿತಾ ಹೇಳಿದರು.

ನಿರ್ವಹಣೆ: ಸೂರ್ಯನಾರಾಯಣ ವಿ.

ಪೂರಕ ಮಾಹಿತಿ: ನಾ.ಮಂಜುನಾಥಸ್ವಾಮಿ, ಮಲ್ಲೇಶ ಎಂ. ಅವಿನ್‌ಪ್ರಕಾಶ್‌ ವಿ., ಬಿ.ಬಸವರಾಜು,

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT