ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹದೇಶ್ವರ ಬೆಟ್ಟ: ಮರುಕಳಿಸಿದ ಭೂಕುಸಿತ

2019ರಲ್ಲೂ ಸಂಭವಿಸಿದ್ದ ಕುಸಿತ; ವೈಜ್ಞಾನಿಕ ದುರಸ್ತಿ ಕಾಮಗಾರಿಗೆ ಜನರ ಆಗ್ರಹ
Last Updated 23 ಅಕ್ಟೋಬರ್ 2021, 17:01 IST
ಅಕ್ಷರ ಗಾತ್ರ

ಮಹದೇಶ್ವರ ಬೆಟ್ಟ: ಬೆಟ್ಟದಿಂದ ಪಾಲಾರ್‌ ಕಡೆಗೆ ಹೋಗುವ ಅಂತರರಾಜ್ಯ ಹೆದ್ದಾರಿಯಲ್ಲಿ 2019ರಲ್ಲಿ ಸಂಭವಿಸಿದ್ದ ಭೂ ಕುಸಿತ ಈ ವರ್ಷವೂ ಮರುಕಳಿಸಿದೆ.

ಬುಧವಾರ ರಾತ್ರಿ ನಿರಂತರವಾಗಿ ಸುರಿದ ಭಾರಿ ಮಳೆಗೆ ಪಾಲಾರ್‌ಗೆ ಕಡೆಗೆ ಹೋಗುವಾಗ ಬೆಟ್ಟದಿಂದ 6 ಕಿ.ಮೀ ದೂರದಲ್ಲಿ ನಾಲ್ಕನೇ ತಿರುವಿನಲ್ಲಿ ತಡೆಗೋಡೆ ಕುಸಿದಿದೆ. 2019ರಲ್ಲಿ ಇಲ್ಲೇ ಭೂಕುಸಿತ ಸಂಭವಿಸಿತ್ತು. ಲೋಕೋಪಯೋಗಿ ಇಲಾಖೆ ಆ ಪ್ರದೇಶದಲ್ಲಿ ದುರಸ್ತಿ ಕಾರ್ಯ ಕೈಗೊಂಡಿತ್ತು. ಬಹುತೇಕ ಕೆಲಸ ಪೂರ್ಣಗೊಂಡಿತ್ತು. ಈಗ ಮತ್ತೆ ಅದೇ ಜಾಗದಲ್ಲಿ ಕುಸಿತ ಉಂಟಾಗಿದೆ.

ಕುಸಿತದ ತೀವ್ರತೆ ಎಷ್ಟಿತ್ತೆಂದರೆ, ಕಲ್ಲು ಮಣ್ಣು 6, 8 ತಿರುವಿನವರಿಗೆ ಕೊಚ್ಚಿಕೊಂಡು ಹೋಗಿತ್ತು. ರಸ್ತೆಯಲ್ಲಿ ಬಿದ್ದಿದ್ದ ಮಣ್ಣು ತೆರವುಗೊಳಿಸುವವರೆಗೂ ಗುರುವಾರ ವಾಹನಗಳ ಸಂಚಾರಕ್ಕೆ ಅಡಚಣೆಯಾಯಿತು. ಲೋಕೋಪಯೋಗಿ ಇಲಾಖೆಯು ಈಗ ಮತ್ತೆ ಭೂ ಕುಸಿತವಾಗಿರುವ ಜಾಗದಲ್ಲಿ ದುರಸ್ತಿ ಕಾರ್ಯ ಕೈಗೊಳ್ಳಬೇಕಿದೆ.

2019ರ ಅಕ್ಟೋಬರ್‌ 25ರಂದು ಪಾಲಾರ್‌ ರಸ್ತೆಯಲ್ಲಿ 10ಕ್ಕೂ ಹೆಚ್ಚು ಕಡೆ ಭೂ ಕುಸಿತ ಸಂಭವಿಸಿತ್ತು. ಅಂದಿನ ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಅವರು ಖುದ್ದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಲೋಕೋಪಯೋಗಿ ಇಲಾಖೆಯು ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ತಡೆಗೋಡೆ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಂಡಿತ್ತು.

ಅವೈಜ್ಞಾನಿಕ ಕಾಮಗಾರಿ: ಈ ರಸ್ತೆಯಲ್ಲಿ ಆಗಿಂದಾಗ್ಗೆ ಮಳೆಗೆ ವರ್ಷದಲ್ಲಿ ಒಮ್ಮೆ ಅಥವಾ ಎರಡು ಬಾರಿ ಭೂ ಕುಸಿತದಂತಹ ಪ್ರಕರಣಗಳು ನಡೆಯುತ್ತಿದ್ದರೂ, ಲೋಕೋಪಯೋಗಿ ಇಲಾಖೆಯು ಭೌಗೋಳಿಕ ಪ‍ರಿಸ್ಥಿತಿಗೆ ಅನುಗುಣವಾಗಿ ಕಾಮಗಾರಿಯನ್ನು ನಿರ್ಮಾಣ ಮಾಡದೇ ಅವೈಜ್ಞಾನಿಕವಾಗಿ ಮಾಡದೇ ಇರುವುದರಿಂದ ಪದೇ ಪದೇ ಈ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ ಎಂದು ಆರೋಪಿಸುತ್ತಾರೆ ಸಾರ್ವಜನಿಕರು.

ನಾಲ್ಕನೇ ತಿರುವಿನಲ್ಲಿ ದುರಸ್ತಿ ಕಾಮಗಾರಿ ಆರು ತಿಂಗಳು ಕಳೆದರೂ ಪೂರ್ಣಗೊಂಡಿರಲಿಲ್ಲ.

‘ಜಾಸ್ತಿ ನೀರು ಬಂದಿದ್ದರಿಂದ ಭೂಕುಸಿತ’

ಘಟನೆ ಸಂಬಂಧ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಮಹದೇವಸ್ವಾಮಿ ಅವರು, ‘ಬೆಟ್ಟ ಪ್ರದೇಶವಾಗಿರುವುದರಿಂದ ಮಳೆಗಾಲದಲ್ಲಿ ಕುಸಿತ ಆಗುವುದು ಸಹಜ. ಎತ್ತರದಿಂದ ರಭಸವಾಗಿ ನೀರು ಹರಿದಾಗ ಎಷ್ಟು ದೃಢವಾದ ತಡೆಗೋಡೆಗೂ ನೀರಿನ ಒತ್ತಡವನ್ನು ತಡೆದುಕೊಳ್ಳುವುದಕ್ಕೆ ಕಷ್ಟವಾಗುತ್ತದೆ. ಗುಡ್ಡ ಕುಸಿತವಾದರೆ, ತಕ್ಷಣವೇ ವಾಹನಗಳ ಸಂಚಾರಕ್ಕೆ ಅನುವು ಮಾಡುವುದಾಗಿ ತಾತ್ಕಾಲಿಕ ದುರಸ್ತಿ ಮಾಡುತ್ತೇವೆ. ಪಾಲಾರ್‌ ರಸ್ತೆಯಲ್ಲಿ ಈಗಾಗಲೇ ಕಾಮಗಾರಿ ಪ್ರಗತಿಯಲ್ಲಿತ್ತು. ನೀರು ಹೋಗಲು ಬೇರೆ ದಾರಿ ಮಾಡಲಾಗಿತ್ತು. ಹೆಚ್ಚು ನೀರು ಬಂದಿದ್ದರಿಂದ ಕುಸಿತ ಉಂಟಾಗಿದೆ.ಮಳೆ ನಿಂತ ಮೇಲೆ ದುರಸ್ತಿ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT