ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಗಮಾರಿ ರೋಗ: ಒಣಗಿದ ಆಲೂಗಡ್ಡೆ ಬೆಳೆ

ಗುಂಡ್ಲುಪೇಟೆ: ತೇವಾಂಶ ಕಾರಣ ಬೆಳೆಗೆ ಕಾಯಿಲೆ, ಹುಸಿಯಾದ ರೈತರ ನಿರೀಕ್ಷೆ, ನಷ್ಟದ ಆತಂಕ
Last Updated 11 ಅಕ್ಟೋಬರ್ 2022, 16:33 IST
ಅಕ್ಷರ ಗಾತ್ರ

ಗುಂಡ್ಲುಪೇಟೆ: ಕಳೆದ ವರ್ಷ ಆಲೂಗಡ್ಡೆಗೆ ಕನಿಷ್ಠ ಬೆಲೆ ಇಲ್ಲದೆ ಸಂಕಷ್ಟ ಅನುಭವಿಸಿದ್ದ ರೈತರಿಗೆ ಈ ವರ್ಷ ಅಂಗಮಾರಿ ರೋಗ ಹೊಡೆತ ನೀಡಿದೆ. ತಾಲ್ಲೂಕಿನ ರೈತರು ಈ ಬಾರಿ ಉತ್ತಮ ಬೆಲೆಯ ನಿರೀಕ್ಷೆಯಲ್ಲಿದ್ದರು.

ಚಾಮರಾಜನಗರ ಜಿಲ್ಲೆಯಲ್ಲಿ ಗುಂಡ್ಲುಪೇಟೆ ಹಾಗೂ ಹನೂರು ತಾಲ್ಲೂಕಿನಲ್ಲಿ ರೈತರು ಆಲೂಗಡ್ಡೆ ಬೆಳೆಯುತ್ತಾರೆ.

ತಾಲ್ಲೂಕಿನ ಹಂಗಳ, ದೇವರಹಳ್ಳಿ, ಕಲ್ಲಿಗೌಡನಹಳ್ಳಿ, ಮಗುವಿನಹಳ್ಳಿ, ಶಿವಪುರ, ಚೌಡಹಳ್ಳಿ, ಹುಂಡಿಪುರ ಸೇರಿದಂತೆ ಮಂಗಲ ಭಾಗಗಳಲ್ಲಿ ಅಂದಾಜು 500 ಎಕರೆ ಪ್ರದೇಶದಲ್ಲಿ ರೈತರು ಆಲೂಗಡ್ಡೆ ಬೆಳೆಯುತ್ತಾರೆ.

ಈ ಬಾರಿಯೂ ರೈತರು ಆಲೂಗಡ್ಡೆ ಬಿತ್ತನೆ ಮಾಡಿದ್ದರು. ಆಗಸ್ಟ್‌, ಸೆಪ್ಟೆಂಬರ್‌ ತಿಂಗಳಲ್ಲಿ ಸತತ ಮಳೆಯಿಂದಾಗಿ ವಾತಾವರಣದ ತೇವಾಂಶ ಹೆಚ್ಚಾಗಿ ಹೂ ಬಿಡುವ ಮುನ್ನವೇ ಬೆಳೆಗಳಿಗೆ ಲೇಟ್‌ ಬ್ಲೈಟ್‌ (ನಿಧಾನ ಅಂಗಮಾರಿ) ರೋಗ ತಗುಲಿದೆ.

‘ಆಲೂಗಡ್ಡೆ ಗಿಡಗಳ ಎಲೆ ಉದುರಿ ಗಿಡ ಒಣಗಿ ಹೋಗುತ್ತಿದೆ. ಅನೇಕ ರೈತರ ಬೆಳೆ ಒಣಗುವ ಹಂತ ತಲುಪಿದೆ.ಬಹುತೇಕ ರೈತರು ಔಷಧ ಸಿಂಪಡಿಸುತ್ತಾ ಬೆಳೆಯನ್ನು ಉಳಿಸಲು ಯತ್ನಿಸುತ್ತಿದ್ದಾರೆ. ರೋಗ ಹತೋಟಿಗೆ ಬರುವ ಲಕ್ಷಣ ಕಾಣಿಸುತ್ತಿಲ್ಲ’ ಎಂದುಮಗುವಿನಹಳ್ಳಿ ಗ್ರಾಮದ ರೈತ ಚಿನ್ನಸ್ವಾಮಿ ‘ಪ್ರಜಾವಾಣಿ’ಗೆ ತಿಳಿಸಿದರು.

ನಿರೀಕ್ಷೆ ಹುಸಿ: ರಾಜ್ಯದ ಹಾಸನ ಭಾಗದಲ್ಲಿ ಹೆಚ್ಚು ಆಲೂಗಡ್ಡೆ ಬೆಳೆಯಲಾಗುತ್ತಿದೆ. ಅಲ್ಲಿಯೂ ಬೆಳೆಗೆ ರೋಗ ಕಾಣಿಸಿಕೊಂಡು ರೈತರು ನಷ್ಟ ಅನುಭವಿಸಿದ್ದಾರೆ. ಇಳುವರಿಯೂ ಕಡಿಮೆಯಾಗಿದೆ. ಹಾಗಾಗಿ ತಾಲ್ಲೂಕಿನಲ್ಲಿ ಬೆಳೆದ ಆಲೂಗಡ್ಡೆಗೆ ಉತ್ತಮ ಬೆಲೆ ಸಿಗಬಹುದು ಎಂಬ ನಿರೀಕ್ಷೆಯಲ್ಲಿ ರೈತರಿದ್ದರು.

‘ನಿರೀಕ್ಷೆ ಈಗ ಹುಸಿಯಾಗಿದೆ. ರೋಗಬಾಧೆಯಿಂದ ಬೆಳೆ ಸ್ವಲ್ಪವೂ ಕೈ ಸೇರುವುದಿಲ್ಲ’ ಎಂಬ ಆತಂಕವನ್ನು ಬೆಳೆಗಾರರು ವ್ಯಕ್ತಪಡಿಸಿದರು.

‘ಮೇ ತಿಂಗಳಿನಿಂದ ಸತತವಾಗಿ ಮಳೆಯಾಗುತ್ತಲೇ ಇದ್ದುದರಿಂದ ಅನೇಕ ರೈತರಿಗೆ ಆಲೂಗಡ್ಡೆ ಎರಡನೇ ಬಾರಿಗೆ ಬಿತ್ತನೆ ಮಾಡಲು ಅವಕಾಶ ನೀಡಲಿಲ್ಲ. ಉತ್ತಮ ಬೆಲೆ ಸಿಗುತ್ತದೆ ಎಂಬ ನಿರೀಕ್ಷೆ ಇತ್ತು. ಆದರೂ ರೋಗದಿಂದ ಸಂಕಷ್ಟ ಎದುರಾಗಿದೆ’ ಎಂದು ಅವರು ತಿಳಿಸಿದರು.

ತೇವಾಂಶ ಹೆಚ್ಚು ಕಾರಣ: ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಬಿ.ಎಸ್‌.ರಾಜು, ‘ಸತತ ಮಳೆಯಿಂದ ವಾತಾವರಣದಲ್ಲಿ ತೇವಾಂಶ ಹೆಚ್ಚಾಗಿರುವುದರಿಂದ ಹಾಗೂ ಶೀತ ವಾತಾವರಣವೇ ಮುಂದುವರಿದಿರುವುದರಿಂದ ರೋಗ ಕಾಣಿಸಿಕೊಂಡಿದೆ’ ಎಂದು ಹೇಳಿದರು.

ರೋಗ ಕಾಣಿಸಿಕೊಂಡರೆದಿನದಿಂದ ದಿನಕ್ಕೆ ಹೆಚ್ಚಾಗಿ ಗಿಡಗಳು ಒಣಗುತ್ತವೆ. ಕಾಯಿ ಸರಿಯಾಗಿ ಕಟ್ಟುವುದಿಲ್ಲ’ ಎಂದು ವಿವರಿಸಿದರು.

ಹನೂರಿನಲ್ಲಿ ಕಾಣದ ಸಮಸ್ಯೆ

ಹನೂರು ತಾಲ್ಲೂಕಿನಲೊಕ್ಕನಹಳ್ಳಿ, ಆಂಡಿಪಾಳ್ಯ, ಒಡೆಯರಪಾಳ್ಯ, ಪಿ.ಜಿ ಪಾಳ್ಯ, ಹುತ್ತೂರು ಹಾಗೂ ಬೈಲೂರು ಗ್ರಾಮಗಳ ವ್ಯಾಪ್ತಿಯಲ್ಲಿ ರೈತರು ಆಲೂಗಡ್ಡೆ ಬೆಳೆಯುತ್ತಾರೆ. ಈ ಬಾರಿ 800 ಎಕರೆಗೂ ಹೆಚ್ಚು ಪ್ರದೇಶದಲ್ಲಿ ಬಿತ್ತನೆಯಾಗಿದೆ. ಅಲ್ಲಿ ಈವರೆಗೆ ರೋಗ ಕಾಣಿಸಿಕೊಂಡಿಲ್ಲ.

ತಾಲ್ಲೂಕಿನಲ್ಲಿ ಸೆಪ್ಟೆಂಬರ್‌ ತಿಂಗಳಲ್ಲಿ ಮಳೆ ಕಡಿಮೆಯಾಗಿತ್ತು. ಬಿಸಿಲಿನ ವಾತಾವರಣ ಇತ್ತು.

ಆಲೂಗಡ್ಡೆಗೆ ಹೆಚ್ಚಿನ ಮಳೆ ಅವಶ್ಯಕತೆ ಇರುವುದಿಲ್ಲ, ಮಣ್ಣಿನಲ್ಲಿ ತೇವಾಂಶ ಇದ್ದರೆ ಸಾಕು. ಈ ಭಾರಿ ನಿರೀಕ್ಷೆಗಿಂತ ಹೆಚ್ಚಿನ ಮಳೆಯಾದ್ದರಿಂದ ರೋಗ ಕಂಡು ಬಂದಿದೆ

-ಬಿ.ಎಸ್.ರಾಜು. ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT