ಯಳಂದೂರು: ತಾಲ್ಲೂಕಿನ ಮಲ್ಲಿಗೆಹಳ್ಳಿಯಲ್ಲಿ ಮಂಗಳವಾರ ರಾತ್ರಿ ಬಾಲಕನ ಮೇಲೆ ದಾಳಿ ನಡೆಸಿದ ಚಿರತೆಯು ನಿರಂತರವಾಗಿ ತನ್ನ ಜಾಡು ಬದಲಿಸುತ್ತಿದ್ದು, ಬುಧವಾರ ಮಧ್ಯಾಹ್ನ ಕಟ್ನವಾಡಿ ಗ್ರಾಮದಲ್ಲಿ ಕಾಣಿಸಿಕೊಂಡಿದೆ.
ಮಂಗಳವಾರ ರಾತ್ರಿ ದಾಳಿ ಮಾಡಿ ಪರಾರಿಯಾಗಿರುವ ಚಿರತೆ ಸೆರೆಗೆ ಅರಣ್ಯ ಇಲಾಖೆ ಬುಧವಾರ ಇಡೀ ದಿನ ಕಾರ್ಯಾಚರಣೆ ನಡೆಸಿತು. ಅಪರೂಪಕ್ಕೆ ಎಂಬಂತೆ ಚಿರತೆಯನ್ನು ಸೆರೆ ಹಿಡಿಯಲು ಅರಿವಳಿಕೆ ಚುಚ್ಚುಮದ್ದು ಬಳಸಲು ಇಲಾಖೆಯ ಉನ್ನತ ಅಧಿಕಾರಿಗಳು ಅನುಮತಿ ನೀಡಿದ್ದರು. ಬುಧವಾರ ಸೆರೆ ಹಿಡಿಯಲು ಸಾಧ್ಯವಾಗಿಲ್ಲ.
ಬಾಲಕನ ಮೇಲೆ ಚಿರತೆ ದಾಳಿ ಮಾಡಿದ ನಂತರ ಗ್ರಾಮಸ್ಥರು ಭಯಗೊಂಡಿದ್ದಾರೆ. ಮಲ್ಲಿಗೆಹಳ್ಳಿ ಶಾಲೆಗೆ ರಜೆ ಘೋಷಿಸಲಾಗಿದೆ. ಜನರು ಮತ್ತು ಜಾನುವಾರು ರಕ್ಷಣೆಗೆ ಸಿಬ್ಬಂದಿ ಜಾಗೃತಿ ಮೂಡಿಸುತ್ತಿದ್ದು, 100ಕ್ಕೂ ಹೆಚ್ಚಿನ ಅರಣ್ಯ ರಕ್ಷಕರು ಗ್ರಾಮಗಳಲ್ಲಿ ಪಥ ಸಂಚಲನ ನಡೆಸಿ, ಗ್ರಾಮದ ಸಮುದಾಯ ಭವನದಲ್ಲಿ ವಾಸ್ತವ್ಯ ಹೂಡಿದ್ದಾರೆ.
ಕ್ಯಾಮೆರಾ ಬಳಕೆ
ಚಿರತೆಯ ಚಲನವಲನದ ಮೇಲೆ ನಿಗಾ ಇಡುವುದಕ್ಕಾಗಿ ವಿವಿಧ ಕಡೆಗಳಲ್ಲಿ ಕ್ಯಾಮೆರಾ ಅಳವಡಿಸಲಾಗಿದೆ. ಬೋನುಗಳನ್ನೂ ಇಡಲಾಗಿದ್ದು, ನಾಲ್ಕು ಆಡು ಮತ್ತು ಕರುಗಳನ್ನು ಕಟ್ಟಿ ಹಾಕಲಾಗಿದೆ. ಅಲ್ಲೂ ಕ್ಯಾಮೆರಾ ಇಡಲಾಗಿದ್ದು, ನೇರವಾಗಿ ವೀಕ್ಷಿಸುವ ವ್ಯವಸ್ಥೆ ಮಾಡಲಾಗಿದೆ.
‘ಚಿರತೆ ಬಲಿ ಪ್ರಾಣಿಗಳ ಬಳಿ ಬಂದು ದಾಳಿ ಮಾಡಿದರೆ, ತಕ್ಷಣ ಅರಿವಳಿಕೆ ತಜ್ಞರು ಚುಚ್ಚು ಮದ್ದು ಹೊಡೆಯಲಿದ್ದಾರೆ. ಬೋನಿನಲ್ಲಿ ಇಟ್ಟ ಪ್ರಾಣಿಗಳನ್ನು ರಕ್ಷಿಸಲಾಗುತ್ತದೆ’ ವಲಯ ಅರಣ್ಯ ಅಧಿಕಾರಿ ಎಂದು ಆರ್ ಎಫ್ ಒ ಲೋಕೇಶ್ಮೂರ್ತಿ ಹೇಳಿದರು.
ಚಾಮರಾಜನಗರ ವೃತ್ತದ ಪ್ರಭಾರ ಮುಖ್ಯ ಸಂರಕ್ಷಣಾಧಿಕಾರಿ ಮಾಲತಿ ಪ್ರಿಯಾ ಅವರು ಗ್ರಾಮಕ್ಕೆ ಭೇಟಿ ನೀಡಿ ಕಾರ್ಯಾಚರಣೆ ಬಗ್ಗೆ ಮಾಹಿತಿ ಪಡೆದಿದ್ದಾರೆ.
‘ಗ್ರಾಮದ ಸುತ್ತಮುತ್ತ ವಿದ್ಯುತ್ ಬಲ್ಬ್ ಅಳವಡಿಸುವ ಕೆಲಸ ಆರಂಭಿಸಲಾಗಿದೆ. ರಸ್ತೆ ಮತ್ತು ಕೆರೆ ಸುತ್ತಮುತ್ತ ಪೊದೆ ಗಿಡಗಳನ್ನು ಸ್ವಚ್ಛಗೊಳಿಸಲು ಹೆಚ್ಚಿನ ಗಮನಹರಿಸಬೇಕು’ ಎಂದು ಗ್ರಾಮಸ್ಥ ಮಹೇಶ್ ಹೇಳಿದರು.
‘ಅರಿವಳಿಕೆ ಚುಚ್ಚುಮದ್ದು ನೀಡುವುದಕ್ಕಾಗಿ ಬಂಡೀಪುರ ಪಶುವೈದ್ಯ ಮಿರ್ಜಾ ವಸೀಂ, ಚಿರತೆ ಕಾರ್ಯಪಡೆಯ ಅಕ್ರಂ ಬಂದಿದ್ದಾರೆ. ಕಾರ್ಯಾಚರಣೆ ನಡೆಸುತ್ತಿದ್ದೇವೆ’ ಎಂದು ಬಿಆರ್‌ಟಿ ಡಿಸಿಎಫ್ ದೀಪ್ ಜೆ.ಕಾಂಟ್ರ್ಯಾಕ್ಟರ್ ‘ಪ್ರಜಾವಾಣಿ’ಗೆ ತಿಳಿಸಿದರು.
ತಹಶೀಲ್ದಾರ್ ಶಿವರಾಜು, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಆರ್.ಉಮೇಶ್, ಸರ್ಕಲ್ ಇನ್‌ಸ್ಪೆಕ್ಟರ್ ಶಿವರಾಜು ಮುದೋಳ್, ಕಂದಾಯ ನಿರೀಕ್ಷಕ ರಾಜಶೇಖರ್, ಅರಣ್ಯ ಅಧಿಕಾರಿಗಳಾದ ಮಧು ಮತ್ತು ವರುಣ್ ಹಾಗೂ ಸಿಬ್ಬಂದಿ ಇದ್ದರು.
ಅದೇ ಚಿರತೆಯೇ: ಹನೂರು ತಾಲ್ಲೂಕಿನ ಕಗ್ಗಲಿಗುಂದಿಯಲ್ಲಿ ಬಾಲಕಿಯ ಸಾವಿಗೆ ಕಾರಣವಾಗಿದ್ದು ಇದೇ ಚಿರತೆಯೇ ಎಂಬ ಅನುಮಾನ ಮೂಡಿದೆ. ಅರಣ್ಯ ಇಲಾಖೆಯ ಅಧಿಕಾರಿಗಳು ಇದನ್ನು ದೃಢಪಡಿಸಿಲ್ಲ. ಅವರಲ್ಲೂ ಈ ಬಗ್ಗೆ ಶಂಕೆ ಇದೆ.
‘ಎರಡು ಕಡೆಗಳಲ್ಲಿ ಸೆರೆಯಾಗಿರುವ ಚಿರತೆಗಳ ಚಿತ್ರಗಳನ್ನು ಪರಸ್ಪರ ಹೋಲಿಸಿ ನೋಡಿದರೆ ಮಾತ್ರ ಅದನ್ನು ಪತ್ತೆ ಮಾಡಲು ಸಾಧ್ಯ. ಮಲ್ಲಿಗೆಹಳ್ಳಿ ವ್ಯಾಪ್ತಿಯಲ್ಲಿ ಚಿರತೆಯ ಸ್ಪಷ್ಟ ಚಿತ್ರ ಸೆರೆಯಾಗಿಲ್ಲ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಾಲಕನ ಆರೋಗ್ಯ ಸ್ಥಿರ
ಚಾಮರಾಜನಗರ: ಚಿರತೆ ದಾಳಿಯಿಂದ ಗಾಯಗೊಂಡು ಯಡಬೆಟ್ಟದ ಸಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಲ್ಲಿಗೆಹಳ್ಳಿ ಗ್ರಾಮದ ಬಾಲಕ ಹರ್ಷಿತ್ ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ. ‘ಬಾಲಕನ ಬಲ ಕೆನ್ನೆ ಎದೆ ಬಲಕಾಲಿಗೆ ಗಾಯಗಳಾಗಿವೆ. ವಿಶೇಷ ವಾರ್ಡ್‌ನಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅಪಾಯ ಏನೂ ಇಲ್ಲ. ಆರೋಗ್ಯ ಸ್ಥಿರವಾಗಿದೆ’ ಎಂದು ಜಿಲ್ಲಾ ಸರ್ಜನ್ ಕೃಷ್ಣಪ್ರಸಾದ್ ತಿಳಿಸಿದರು.
ಶಾಸಕ ಎಆರ್‌ಕೆ ಭೇಟಿ
ಬುಧವಾರ ಸಂಜೆ ಆಸ್ಪತ್ರೆಗೆ ಕೊಳ್ಳೇಗಾಲ ಶಾಸಕ ಎ.ಆರ್.ಕೃಷ್ಣಮೂರ್ತಿ ಅವರು ಭೇಟಿ ನೀಡಿ ಬಾಲಕನ ಆರೋಗ್ಯ ವಿಚಾರಿಸಿದರು. ಆತನ ಪೋಷಕರಿಗೆ ಧೈರ್ಯ ತುಂಬಿದರು. ಮುಖಂಡರಾದ ಎಸ್.ಜಯಣ್ಣ ಬಿ.ಕೆ.ರವಿಕುಮಾರ್ ಚಿಕ್ಕಮಹದೇವ್ ಇದ್ದರು. ಪ್ರಭಾರ ಸಿಸಿಎಫ್ ಮಾಲತಿ ಪ್ರಿಯಾ ಡಿಸಿಎಫ್ ದೀಪ್ ಜೆ.ಕಾಂಟ್ರ್ಯಾಕ್ಟರ್ ಅವರು ಆಸ್ಪತ್ರೆಗೆ ಭೇಟಿ ನೀಡಿ ಬಾಲಕನ ಆರೋಗ್ಯ ವಿಚಾರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.