ಗುರುವಾರ, 20 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಂಡಾಲ್ ಬಳಿ ಚಿರತೆ ಹಾವಳಿ

ಜನರಲ್ಲಿ ಅತಂಕ: ಚಿರತೆ ಸೆರೆಗೆ ಒತ್ತಾಯ
Published 10 ಜೂನ್ 2024, 15:32 IST
Last Updated 10 ಜೂನ್ 2024, 15:32 IST
ಅಕ್ಷರ ಗಾತ್ರ

ಹನೂರು: ತಾಲ್ಲೂಕಿನ ಗುಂಡಾಲ್ ಜಲಾಶಯ ಸಮೀಪದ ತೋಟದ ಮನೆಗಳ ಬಳಿ ನಾಲ್ಕೈದು ದಿನಗಳಿಂದ ಮೇಕೆ, ಕೋಳಿ ಹಾಗೂ ಕರುವಿನ ಮೇಲೆ ಚಿರತೆ ನಿರಂತರವಾಗಿ ದಾಳಿ ನಡೆಸಿದ್ದು ರೈತರಲ್ಲಿ ಆತಂಕ ಸೃಷಿಯಾಗಿದೆ.

ಐದು ದಿನಗಳಲ್ಲಿ ಹತ್ತು ಮೇಕೆಗಳು, ಎರಡು ಕೋಳಿ ಹಾಗೂ ಒಂದು ಕರುವನ್ನು ಚಿರತೆ ಬಲಿ ಪಡೆದಿದ್ದು ಹಾವಳಿಗೆ ಬ್ರೇಕ್‌ ಹಾಕಲು ಸಾದ್ಯವಾಗಿಲ್ಲ. ಪ್ರತಿನಿತ್ಯ ಕಾಡಂಚಿನ ಜಮೀನಿಗೆ ಬರುವ ಚಿರತೆ ಸಿಕ್ಕ ಪ್ರಾಣಿಗಳನ್ನು ಹಿಡಿದು ತಿಂದು ಹಾಕುತ್ತಿದೆ. ಇದರಿಂದ ತೋಟದ ಮನೆಗಳಲ್ಲಿ ವಾಸವಾಗಿರುವ ರೈತರು ಭಯಭೀತರಾಗಿದ್ದಾರೆ.

ಜೂನ್ 6ರಂದು ರಾತ್ರಿ ರಂಗೇಗೌಡ ಹಾಗೂ ಮಾದೇವಶೆಟ್ಟಿ ಎಂಬುವವರಿಗೆ ಸೇರಿದ ಎರಡು ಮೇಕೆ, 7ರಂದು ರಾತ್ರಿ ಬಸವರಾಜು ಅವರಿಗೆ ಸೇರಿದ ಎರಡು ಮೇಕೆ, ಆನಂದ ಅವರಿಗೆ ಸೇರಿದ ಒಂದು ಮೇಕೆ, 8ರಂದು ವೆಂಕಟೇಶ ಅವರ ಎರಡು ಕೋಳಿ, ಬಾಲು ಅವರಿಗೆ ಸೇರಿದ ಕರು ತಿಂದಿರುವ ಚಿರತೆ ಸೋಮವಾರ ಮಹೇಶ್ ಅವರ ಮೇಕೆಗಳನ್ನು ತಿಂದು ಮುಗಿಸಿದೆ.

ನಿರಂತರವಾಗಿ ಜಾನುವಾರುಗಳ ಮೇಲೆ ದಾಳಿ ಮಾಡುತ್ತಿರುವ ಚಿರತೆ ಜನರ ಮೇಲೆ ಎರಗಿದರೆ ಗತಿಯೇನು ಎಂಬ ಆತಂಕ ಸ್ಥಳೀಯರಲ್ಲಿ ಮನೆ ಮಾಡಿದೆ.

ಈ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದರೆ ದಾಳಿ ನಂತರ ಸ್ಥಳಕ್ಕೆ ಬಂದು ಫೋಟೊ ತೆಗೆದುಕೊಂಡು ಹೋಗುತ್ತಾರೆ. ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಹೈನುಗಾರಿಕೆ ಮಾಡಿ ಕೂಲಿ– ನಾಲಿ ಮಾಡಿ ಜೀವನ ಸಾಗಿಸುತ್ತಿದ್ದು ಇದೇರೀತಿ ಚಿರತೆ ದಾಳಿ ಮಾಡುತ್ತಿದ್ದರೆ ಬದುಕುವುದು ಹೇಗೆ ಎಂದು ರೈತರು ಪ್ರಶ್ನಿಸಿದ್ದಾರೆ.

ಕಾವೇರಿ ವನ್ಯಧಾಮದ ಕಡೆಯಿಂದ ಚಿರತೆ ಬಂದಿದ್ದು ದಾಳಿ ಮಾಡಿದ ಮೊದಲ ದಿನವೇ ಸ್ಥಳಕ್ಕೆ ಭೇಟಿನೀಡಿ ನಾಲ್ಕು ಸಾಮಾನ್ಯ ಬೋನುಗಳ ಜತೆ ವಿಶೇಷವಾಗಿ ತುಮಕೂರು ಬೋನ್ ಸಹ ಅಳವಡಿಸಲಾಗಿದೆ. ಚಿರತೆ ಚಲನವಲನಗಳನ್ನು ವೀಕ್ಷಿಸಲು 20 ಕಡೆಗಳಲ್ಲಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಜತೆಗೆ ಕಳ್ಳಬೇಟೆ ತಡೆ ಶಿಬಿರದ ಸಿಬ್ಬಂದಿ ಪಾಳಿಯಲ್ಲಿ ಗಸ್ತು ತಿರುಗುತ್ತಿದ್ದಾರೆ. ವಲಯ ಅರಣ್ಯಾಧಿಕಾರಿ ಹಾಗೂ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ನಿತ್ಯ ವರದಿ ನೀಡುವಂತೆ ಸೂಚಿಸಲಾಗಿದೆ.

ಧ್ವನಿವರ್ಧಕದ ಮೂಲಕ ಸ್ಥಳೀಯರಿಗೆ ಎಚ್ಚರಿಕೆ ನೀಡಲಾಗಿದ್ದು ಜಾಗೃತಿ ಕರಪತ್ರಗಳನ್ನು ಹಂಚಲಾಗಿದೆ. ಉಪಟಳ ನೀಡುತ್ತಿರುವ ಚಿರತೆ ಸೆರೆಹಿಡಿಯಲು ಸ್ಥಳೀಯರು ಸಹಕಾರ‌ ನೀಡಬೇಕು ಎಂದು ಬಿಳಿಗಿರಿರಂಗನಾಥ ಸ್ವಾಮಿ ಹುಲಿ ರಕ್ಷಿತಾರಣ್ಯದ ಉಪ ಅರಣ್ಯ ಸಂರಕ್ಷಣಾಧಿಕಾರಿ ದೀಪ ಜೆ.ಕಂಟ್ರಾಕ್ಟರ್ ಮನವಿ ಮಾಡಿದರು.

ಚಿರತೆ ಸೆರೆಗೆ ಬೋನು ಅಳವಡಿಸಿರುವ ಅರಣ್ಯ ಇಲಾಖೆ ಸಿಬ್ಬಂದಿ
ಚಿರತೆ ಸೆರೆಗೆ ಬೋನು ಅಳವಡಿಸಿರುವ ಅರಣ್ಯ ಇಲಾಖೆ ಸಿಬ್ಬಂದಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT