ಮಂಗಳವಾರ, ಡಿಸೆಂಬರ್ 1, 2020
22 °C

ಕಾಲೇಜುಗಳ ಆರಂಭ: ಮೊದಲ ದಿನ ಬಾರದ ವಿದ್ಯಾರ್ಥಿಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಕೋವಿಡ್‌ ಲಾಕ್‌ಡೌನ್‌ ನಂತರ ಮುಚ್ಚಲಾಗಿದ್ದ ಪಾಲಿಟೆಕ್ನಿಕ್‌, ಎಂಜಿನಿಯರಿಂಗ್‌ ಹಾಗೂ ಪದವಿ ಕಾಲೇಜುಗಳು, ಸ್ನಾತಕೋತ್ತರ ಕೇಂದ್ರ ಮಂಗಳವಾರದಿಂದ ಜಿಲ್ಲೆಯಲ್ಲೂ ಆರಂಭವಾದವು. ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಮಾತ್ರ ತರಗತಿಗಳು ಆರಂಭವಾಗಿವೆ.  

ಆದರೆ, ಮೊದಲ ದಿನ ವಿದ್ಯಾರ್ಥಿಗಳಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು. ಖಾಸಗಿ ಕಾಲೇಜುಗಳಲ್ಲಿ ಕೆಲವು ವಿದ್ಯಾರ್ಥಿಗಳು ಬಂದಿದ್ದರೆ, ಸರ್ಕಾರಿ ಕಾಲೇಜುಗಳಲ್ಲಿ ಬೆರಳೆಣಿಕೆಯಷ್ಟು ವಿದ್ಯಾರ್ಥಿಗಳು ಬಂದಿದ್ದರು. 

ಕೋವಿಡ್‌ ಪರೀಕ್ಷೆ ಕಡ್ಡಾಯಗೊಳಿಸಿದ್ದರಿಂದ ಬಹುತೇಕ ವಿದ್ಯಾರ್ಥಿಗಳು ತರಗತಿಗೆ ಬರಲು ಹಿಂದೇಟು ಹಾಕಿದರು. 

ಮುನ್ನೆಚ್ಚರಿಕೆ ಕ್ರಮ: ಕಾಲೇಜು ಆರಂಭಿಸುವುದಕ್ಕೂ ಮುನ್ನ ಕೋವಿಡ್‌ ತಡೆ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕಾಗಿದ್ದರಿಂದ ಎಲ್ಲ ಸಂಸ್ಥೆಗಳ ಆಡಳಿತ ಮಂಡಳಿಗಳು ಅಗತ್ಯ ಕ್ರಮ ಕೈಗೊಂಡಿದ್ದವು. ಕಾಲೇಜು ಆವರಣವನ್ನು ಸ್ಯಾನಿಟೈಸ್‌ ಮಾಡಲಾಗಿತ್ತು. ವಿದ್ಯಾರ್ಥಿಗಳ ಥರ್ಮಲ್‌ ಸ್ಕ್ಯಾನಿಂಗ್‌, ಸ್ಯಾನಿಟೈಸರ್‌ ನೀಡಲು ವ್ಯವಸ್ಥೆ ಮಾಡಲಾಗಿತ್ತು. 

ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳಿಗಳಿಗೆ ಕೋವಿಡ್‌ ಪರೀಕ್ಷೆ ನಡೆಸಲು ಕೆಲವು ಕಾಲೇಜುಗಳಲ್ಲಿ ಆರೋಗ್ಯ ಸಿಬ್ಬಂದಿಯನ್ನೂ ನಿಯೋಜಿಸಲಾಗಿತ್ತು. 

ಸ್ನಾತಕೋತ್ತರ ಕೇಂದ್ರ ಖಾಲಿ: ನಗರದ ಹೊರ ವಲಯದಲ್ಲಿರುವ ಯಡಪುರದಲ್ಲಿರುವ ಡಾ.ಬಿ.ಆರ್‌.ಅಂಬೇಡ್ಕರ್‌ ಸ್ನಾತಕೋತ್ತರ ಕೇಂದ್ರಕ್ಕೆ ಒಬ್ಬನೇ ಒಬ್ಬ ವಿದ್ಯಾರ್ಥಿ ಬರಲಿಲ್ಲ. ಕೇಂದ್ರದಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿತ್ತು. 

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಕೇಂದ್ರ ನಿರ್ದೇಶಕ ಪ್ರೊ. ಶಿವಬಸವಯ್ಯ ಅವರು, ‘ತರಗತಿಗಳ ಆರಂಭಕ್ಕೆ ಸಿದ್ಧತೆ ನಡೆದಿದೆ. ಎಲ್ಲ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಬಂದಿದ್ದರು. ಆದರೆ, ಅಂತಿಮ ವರ್ಷದ ವಿದ್ಯಾರ್ಥಿಗಳು ಯಾರೂ ಬಂದಿರಲಿಲ್ಲ. ಆನ್‌ಲೈನ್‌ ತರಗತಿಗಳು ಎಂದಿನಂತೆ ನಡೆಸಲಾಗಿದೆ. ಕೋವಿಡ್‌ ತಡೆಗೆ ಎಲ್ಲ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಕೋವಿಡ್‌ ಪರೀಕ್ಷೆಗಾಗಿ ಗುರುವಾರದಿಂದ ಕೇಂದ್ರಲ್ಲೇ ವೈದ್ಯರನ್ನು ನಿಯೋಜಿಸಲಾಗುವುದು’ ಎಂದು ಹೇಳಿದರು. 

‘ತರಗತಿಗೆ ಹಾಜರಾಗುವ ವಿದ್ಯಾರ್ಥಿಗಳು ಪೋಷಕರಿಂದ ಒಪ್ಪಿಗೆ ಪತ್ರ ಹಾಗೂ ಕೋವಿಡ್‌ ಪರೀಕ್ಷೆಯಲ್ಲಿ ನೆಗೆಟಿವ್‌ ಬಂದ ವರದಿಯನ್ನು ಕಡ್ಡಾಯವಾಗಿ ಸಲ್ಲಿಸಬೇಕು. 19, 20 ಮತ್ತು 21ರಂದು ಕೇಂದ್ರದಲ್ಲೇ ವಿದ್ಯಾರ್ಥಿಗಳಿಗೆ ಕೋವಿಡ್‌ ಪರೀಕ್ಷೆ ನಡೆಸುವ ವ್ಯವಸ್ಥೆ ಮಾಡಲಾಗುತ್ತಿದೆ. ಆ ಬಳಿಕ ಕೇಂದ್ರಕ್ಕೆ ಬರುವ ವಿದ್ಯಾರ್ಥಿಗಳು ಅವರೇ ಪರೀಕ್ಷೆ ನಡೆಸಿಕೊಂಡು ಬರಬೇಕು. ಇದನ್ನು ಈಗಾಗಲೇ ಎಲ್ಲ ವಿದ್ಯಾರ್ಥಿಗಳ ಗಮನಕ್ಕೆ ತರಲಾಗಿದೆ’ ಎಂದು ಅವರು ಹೇಳಿದರು. 

ಯಡಪುರದ ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜಿಗೆ ಮಂಗಳವಾರ ಇಬ್ಬರು ವಿದ್ಯಾರ್ಥಿಗಳು ಬಂದಿದ್ದರು. ‘ನಮ್ಮಲ್ಲಿ 243 ವಿದ್ಯಾರ್ಥಿಗಳು ಇದ್ದಾರೆ. ಇಬ್ಬರು ಬಂದಿದ್ದರು. ಆದರೆ ಕೋವಿಡ್‌ ಪರೀಕ್ಷೆ ಮಾಡಿಸಿರಲಿಲ್ಲ. ಜಿಲ್ಲಾಸ್ಪತ್ರೆಯಲ್ಲಿ ಮಾಡಿಸುವುದಾಗಿ ಅವರು ತೆರಳಿದರು. ಕಾಲೇಜು ಆರಂಭಕ್ಕೆ ಎಲ್ಲ ಸಿದ್ಧತೆಗಳನ್ನು ಮಾಡಿದ್ದೇವೆ’ ಎಂದು ಎಂಜಿನಿಯರಿಂಗ್‌ ಕಾಲೇಜು ಪ್ರಾಂಶುಪಾಲ ಕೆ.ಐ.ಪರಶಿವಮೂರ್ತಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು. 

ನಗರದ ಸರ್ಕಾರಿ ಪ್ರಥಮದರ್ಜೆ ಕಾಲೇಜಿಗೆ ಬಂದವರ ಸಂಖ್ಯೆಯೂ ಕಡಿಮೆ ಇತ್ತು. ಬೆಳಿಗ್ಗೆ 9.30 ಆದರೂ ಸಿಬ್ಬಂದಿ, ವಿದ್ಯಾರ್ಥಿಗಳು ಯಾರೂ ಬಂದಿರಲಿಲ್ಲ.

ನಗರದ ಜೆಎಸ್‌ಎಸ್‌ ಮಹಿಳಾ ಕಾಲೇಜಿಗೆ 110 ವಿದ್ಯಾರ್ಥಿನಿಯರು ಮೊದಲ ದಿನ ಬಂದಿದ್ದರು. 

‘ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ನಮ್ಮಲ್ಲಿ  ಅಂತಿಮ ವರ್ಷದಲ್ಲಿ 334 ವಿದ್ಯಾರ್ಥಿಗಳಿದ್ದಾರೆ. 110 ವಿದ್ಯಾರ್ಥಿಗಳು ಬಂದಿದ್ದರು. ವಿದ್ಯಾರ್ಥಿಗಳ ಕೋವಿಡ್‌ ಪರೀಕ್ಷೆಗೂ ಕ್ರಮ ಕೈಗೊಳ್ಳಲಾಗಿದೆ’ ಎಂದು ಕಾಲೇಜು ಪ್ರಾಂಶುಪಾಲ ಎ.ಜಿ.ಶಿವಕುಮಾರ್‌ ಅವರು ತಿಳಿಸಿದರು. 

ಸೇವಾಭಾರತಿ ಪದವಿ ಕಾಲೇಜಿನಲ್ಲಿ ಶೇ 70ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ತರಗತಿಗೆ ಹಾಜರಾದರು. ‘ಅಂತಿಮ ವರ್ಷದಲ್ಲಿ 62 ವಿದ್ಯಾರ್ಥಿಗಳಿದ್ದು, 52 ಮಂದಿ ತರಗತಿಗೆ ಹಾಜರಾಗಿದ್ದಾರೆ. ಕಾಲೇಜಿನಲ್ಲೇ ಕೋವಿಡ್‌ ಪರೀಕ್ಷೆ ನಡೆಸಲಾಗಿದೆ’ ಎಂದು ಪ್ರಾಂಶುಪಾಲರಾದ ನಿರ್ಮಲಾ ಅವರು ಹೇಳಿದರು. 

ಚಾಮರಾಜನಗರ ಮಾತ್ರವಲ್ಲದೇ ಜಿಲ್ಲೆಯ ಇತರ ಕಡೆಗಳಲ್ಲೂ ಇದೇ ವಾತಾವರಣ ಇತ್ತು. 

ಗುಂಡ್ಲುಪೇಟೆ ವರದಿ: ಗುಂಡ್ಲುಪೇಟೆ ತಾಲ್ಲೂಕಿನಲ್ಲಿ ಜೆಎಸ್ಎಸ್, ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕಬ್ಬಳ್ಳಿ ಪ್ರಥಮ ದರ್ಜೆ ಕಾಲೇಜು, ಗೌತಮ ಶಿಕ್ಷಣ ಸಂಸ್ಥೆ ಕಾಲೇಜುಗಳಿದ್ದು, 500ಕ್ಕೂ  ಹೆಚ್ಚು ತೃತೀಯ ವರ್ಷದ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಜೆಎಸ್ಎಸ್ ನಲ್ಲಿ ಒಟ್ಟು 180 ವಿದ್ಯಾರ್ಥಿಗಳಿದ್ದು, ಅದರಲ್ಲಿ 20 ಮಂದಿ , ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 350 ಕ್ಕೂ ಹೆಚ್ಚಿನ ವಿದ್ಯಾರ್ಥಿಗಳಲ್ಲಿ 25 ಮಂದಿ ಹಾಜರಾಗಿದ್ದರು. ಕಬ್ಬಹಳ್ಳಿಯಲ್ಲಿ 40 ವಿದ್ಯಾರ್ಥಿಗಳಿದ್ದು 4 ಮಂದಿ ಹಾಜರಾಗಿದ್ದಾರೆ.

ಕೊಳ್ಳೇಗಾಲ ವರದಿ: ಕೊಳ್ಳೇಗಾಲದಲ್ಲಿ ಮೂರು ಪದವಿ ಕಾಲೇಜುಗಳಿದ್ದು, ಮಹದೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಾತ್ರ ವಿದ್ಯಾರ್ಥಿಗಳು ಹಾಜರಾಗಿದ್ದರು. ಇನ್ನೂ 2 ಕಾಲೇಜುಗಳು ಬುಧವಾರದಿಂದ ಕಾರ್ಯನಿರ್ವಹಿಸಲಿದೆ. ಕಾಲೇಜಿನಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಬೆರಳೆಣಿಕೆಯಷ್ಟಿತ್ತು. ಹನೂರಿನ ಪದವಿ ಕಾಲೇಜಿಗೆ ಐವರು ವಿದ್ಯಾರ್ಥಿಗಳು ಬಂದಿದ್ದರು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು