ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆರೆ ತುಂಬಿಸುವ ಯೋಜನೆ; ರೈತರಿಗೆ ವರ

ಆಲಂಬೂರು ಏತ ನೀರಾವರಿ ಯೋಜನೆಯಿಂದ ಚಾಮರಾಜನಗರ, ಗುಂಡ್ಲುಪೇಟೆ ರೈತರಿಗೆ ಅನುಕೂಲ
Last Updated 11 ಸೆಪ್ಟೆಂಬರ್ 2021, 15:41 IST
ಅಕ್ಷರ ಗಾತ್ರ

ಚಾಮರಾಜನಗರ: ಶತಮಾನಗಳಿಂದ ಜಿಲ್ಲೆಯ ರೈತರ ಕೃಷಿಗೆ ಜಲಮೂಲವಾಗಿದ್ದ ಕೆರೆಗಳು ಬತ್ತಿ ಹೋಗಿ ಬರಪೀಡಿತವಾಗಿದ್ದ ಜಿಲ್ಲೆಗೆ ವರವಾಗಿ ಪರಿಣಮಿಸಿದ್ದು, ನದಿ ಮೂಲದಿಂದ ಕೆರೆಗಳಿಗೆ ನೀರು ತುಂಬಿಸುವ ಯೋಜನೆ.

ಕುಡಿಯುವ ನೀರಿನ ಉದ್ದೇಶಕ್ಕಾಗಿ ರಾಜ್ಯ ಸರ್ಕಾರ ರೂಪಿಸಿದ್ದ ಈ ಮಹತ್ವಾಕಾಂಕ್ಷೆಯ ಯೋಜನೆ, ಜಿಲ್ಲೆಯಲ್ಲಿ ಯಶಸ್ವಿಯಾಗಿ ಇತರ ಕಡೆಗಳಲ್ಲೂ ಅನುಷ್ಠಾನಗೊಳಿಸುವುದಕ್ಕೆ ಮಾದರಿಯಾಗಿದೆ.

ಜಿಲ್ಲೆಯ ರೈತರ ಒತ್ತಡ ಹಾಗೂ ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಲಹೆಯನ್ನು ಪರಿಗಣಿಸಿ 2008ರಲ್ಲಿ ಬಿ.ಎಸ್‌.ಯಡಿಯೂರಪ್ಪ ನೇತೃತ್ವದ ಸರ್ಕಾರ ಆಲಂಬೂರು ಏತ ನೀರಾವರಿ ಯೋಜನೆ ಘೋಷಿಸಿತ್ತು.

ನಂಜನಗೂಡು ತಾಲ್ಲೂಕಿನ ಆಲಂಬೂರು ಬಳಿ ಕಪಿಲ ನದಿಯಿಂದ ನೀರನ್ನು ಎತ್ತಿ ನಂಜನಗೂಡು, ಚಾಮರಾಜನಗರ ಮತ್ತು ಗುಂಡ್ಲುಪೇಟೆ ತಾಲ್ಲೂಕುಗಳ 23 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಚಾಲನೆ ನೀಡಿದ್ದು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ.

₹ 190 ಕೋಟಿ ವೆಚ್ಚದ ಈ ಯೋಜನೆ ಮೂರು ಹಂತಗಳಲ್ಲಿ ಅನುಷ್ಠಾನಗೊಂಡಿತ್ತು. ನಾಲ್ಕನೇ ಹಂತದಲ್ಲಿ ವಿಸ್ತರಿಸಿದ ಯೋಜನೆ ₹ 53 ಕೋಟಿ ವೆಚ್ಚದಲ್ಲಿ ಇದೀಗ ಅನುಷ್ಠಾನಗೊಳ್ಳುತ್ತಿದೆ. ಗುಂಡ್ಲುಪೇಟೆ ತಾಲ್ಲೂಕಿನ ಹುತ್ತೂರು ಕೆರೆಯಿಂದ ತಾಲ್ಲೂಕಿನ ಒಂಬತ್ತು ಕೆರೆಗಳಿಗೆ ನೀರು ಹರಿಯುತ್ತಿದೆ ಹಾಗೂ ಚಾಮರಾಜನಗರ ತಾಲ್ಲೂಕಿನ ಎರಡು ಕೆರೆಗಳಿಗೆ ನೀರು ಹರಿಸುವ ಕಾಮಗಾರಿ ಪ್ರಗತಿಯಲ್ಲಿದೆ.

ನಾಲ್ಕು ಹಂತಗಳ ಈ ಏತ ನೀರಾವರಿ ಯೋಜನೆಯಲ್ಲಿ ಈವರೆಗೆ 30 ಕೆರೆಗಳಿಗೆ ನೀರು ಹರಿದಿದೆ. ಇನ್ನೂ ಎರಡು ಕೆರೆಗಳಿಗೆ ಹರಿಯಬೇಕಾಗಿದೆ.

ಗಾಂಧಿಗ್ರಾಮ ಏತ ನೀರಾವರಿ ಯೋಜನೆ: ಆಲಂಬೂರು ಏತ ನೀರಾವರಿ ಯೋಜನೆಯಲ್ಲದೇ, ಗಾಂಧಿ ಗ್ರಾಮ ಏತ ನೀರಾವರಿ ಯೋಜನೆಯೂ ಜಿಲ್ಲೆಯಲ್ಲಿ ಅನುಷ್ಠಾನಗೊಂಡಿದೆ. ಇದರ ಅಡಿಯಲ್ಲಿ ಗುಂಡ್ಲು‍ಪೇಟೆ ತಾಲ್ಲೂಕಿನಲ್ಲಿ ಒಂಬತ್ತು ಕೆರೆಗಳಿಗೆ ನೀರು ತುಂಬಿಸಲಾಗುತ್ತಿದೆ.

₹ 67.50 ಕೋಟಿ ವೆಚ್ಚದ ಈ ಯೋಜನೆಯಲ್ಲಿ ನಂಜಗೂಡು ತಾಲ್ಲೂಕಿನ ಮೂರು ಹಾಗೂ ಗುಂಡ್ಲುಪೇಟೆ ತಾಲ್ಲೂಕಿನ ಒಂಬತ್ತು ಕೆರೆಗಳಿಗೆ ನೀರು ಹರಿಸಲಾಗುತ್ತಿದೆ. ಕಳೆದ ವರ್ಷದ ನವೆಂಬರ್‌ನಲ್ಲಷ್ಟೇ ಯೋಜನೆ ಪೂರ್ಣಗೊಂಡಿದೆ.

ಸುತ್ತೂರು ಏತ ನೀರಾವರಿ ಯೋಜನೆ: ಆಲಂಬೂರು ಏತ ನೀರಾವರಿ ಯೋಜನೆಯ ಯಶಸ್ಸಿನಿಂದ ಪ್ರೇರಣೆಗೊಂಡು ಜಾರಿಗೊಳಿಸಿದ ಯೋಜನೆ, ಸುತ್ತೂರು ಏತ ನೀರಾವರಿ ಯೋಜನೆ. ₹ 223 ಕೋಟಿ ವೆಚ್ಚದ ಈ ಯೋಜನೆಗೆ 2017ರ ಜುಲೈನಲ್ಲಿ ಚಾಲನೆ ನೀಡಲಾಗಿತ್ತು.

ನಂಜನಗೂಡು ತಾಲ್ಲೂಕಿನ ಸುತ್ತೂರು ಬಳಿ ಕಪಿಲಾ ನದಿಯಿಂದ ನೀರನ್ನು ಮೇಲಕ್ಕೆತ್ತಿ ನಂಜನಗೂಡು ತಾಲ್ಲೂಕಿನ ಎರಡು, ಚಾಮರಾಜನಗರ ಹಾಗೂ ಯಳಂದೂರು ತಾಲ್ಲೂಕುಗಳ 22 ಕೆರೆ ಸೇರಿದಂತೆ ಒಟ್ಟು 24 ಕೆರೆಗಳನ್ನು ತುಂಬಿಸುವುದು ಈ ಯೋಜನೆಯ ಉದ್ದೇಶ.

18 ತಿಂಗಳಲ್ಲಿ ಮೊದಲ ಹಂತದಲ್ಲಿ 10 ಕೆರೆಗಳಿಗೆ ನೀರು ಹರಿಯಬೇಕಿತ್ತು. ಆದರೆ, ನಿಧಾನಗತಿಯ ಕಾಮಗಾರಿಯಿಂದ ಯೋಜನೆ ವಿಳಂಬವಾಗಿದ್ದು, ರೈತರು ಹಾಗೂ ಗ್ರಾಮಸ್ಥರ ಹೋರಾಟದಿಂದಾಗಿ 10 ದಿನದ ಹಿಂದೆ ಯೋಜನೆಗೆ ಚಾಲನೆ ನೀಡಲಾಗಿದೆ.ಚಾಮರಾಜನಗರ ತಾಲ್ಲೂಕಿನ ಉಮ್ಮತ್ತೂರು ಕೆರೆಗೆ ನೀರು ಹರಿಯಲು ಆರಂಭವಾಗಿದೆ. ನೀರಿನ ಮಟ್ಟ ನಿಧಾನವಾಗಿ ಮೇಲಕ್ಕೇರುತ್ತಿದೆ.

ಮತ್ತೊಂದು ಯೋಜನೆ: ಕೊಳ್ಳೇಗಾಲದ ಸರಗೂರು ಗ್ರಾಮದಿಂದ ಕಾವೇರಿ ನದಿ ನೀರನ್ನು ಹನೂರು ತಾಲ್ಲೂಕಿನ ಗುಂಡಾಲ್‌ ಜಲಾಶಯ ಹಾಗೂ ಇತರ ಎರಡು ಕೆರೆಗಳಿಗೆ ನೀರು ತುಂಬಿಸುವ ₹ 132 ಕೋಟಿ ವೆಚ್ಚದ ಯೋಜನೆ ಅನುಷ್ಠಾನದ ಹಂತದಲ್ಲಿದ್ದು ಕಾಮಗಾರಿ ನಿಧಾನವಾಗಿ ನಡೆಯುತ್ತಿದೆ.

ಅಂತರ್ಜಲ ಮಟ್ಟ ಏರಿಕೆ: ಕೆರೆಗಳು ತುಂಬಿದ ಪ್ರದೇಶದಲ್ಲಿ ಅಂತರ್ಜಲದ ಮಟ್ಟ ಗಣನೀಯವಾಗಿ ಏರಿಕೆಯಾಗಿದೆ. ಕೆರೆ ತುಂಬಿಸುವ ಯೋಜನೆ ಅನುಷ್ಠಾನಗೊಂಡ ಬಳಿಕ ರೈತರಿಗೆ ಸುಡು ಬೇಸಿಗೆಯಲ್ಲೂ ನೀರಿನ ಕೊರತೆ ಉಂಟಾಗಿಲ್ಲ.

ಮಳೆಗಾಲದಲ್ಲಿ ಒಂದು ಬಾರಿ ಕೆರೆಗಳನ್ನು ತುಂಬಿಸಿದರೆ, ನಾಲ್ಕರಿಂದ ಐದು ತಿಂಗಳಲ್ಲಿ ಕೆರೆಗಳ ನೀರು ಖಾಲಿಯಾಗುತ್ತದೆ. ಆದರೆ, ಸುತ್ತಮುತ್ತಲಿನ ಪ್ರದೇಶದಲ್ಲಿ ಅಂತರ್ಜಲ ಮಟ್ಟ ಹೆಚ್ಚುವುದರಿಂದ ಕೊಳವೆಬಾವಿಗಳಲ್ಲಿ ನೀರು ಬರುತ್ತಿರುತ್ತದೆ. ನಾಲ್ಕೈದು ವರ್ಷಗಳ ಹಿಂದೆ ಮಳೆಗಾಲ ಬಿಟ್ಟು ಬೇರೆ ಸಮಯದಲ್ಲಿ ಕೃಷಿ ಮಾಡಲು ಸಾಧ್ಯವಾಗದಿದ್ದ ಪ್ರದೇಶದಲ್ಲಿ ಈಗ ರೈತರು ವಿವಿಧ ಬೆಳೆಗಳನ್ನು ಬೆಳೆದು ಆರ್ಥಿಕ ಸದೃಢರಾಗುತ್ತಿದ್ದಾರೆ.

ಕೃಷಿ ಕೆಲಸಕ್ಕೆ ನೀರಿಲ್ಲದೇ ನಗರ ಪ್ರದೇಶಗಳಿಗೆ ಕೆಲಸ ಹುಡುಕಿಕೊಂಡು ಹೋದವರು ಈಗ ವಾಪಸ್‌ ಬಂದು ಕೃಷಿಯಲ್ಲಿ ತೊಡಗಿರುವ ನಿದರ್ಶನಗಳು ಅಲ್ಲಲ್ಲಿ ಕಾಣಸಿಗುತ್ತವೆ.

ಕೃಷಿಕರ ಬದುಕು ಉಳಿಸಿತು...

‘ನೀರಿನ ಕೊರತೆಯಿಂದಾಗಿ ವರ್ಷದಲ್ಲಿ ಒಂದು ಬೆಳೆ ತೆಗೆಯಲೂ ಸಾಧ್ಯವಾಗದ ಸ್ಥಿತಿ ಇತ್ತು. 2014ರಲ್ಲಿ ಆಲಂಬೂರು ಏತ ನೀರಾವರಿ ಯೋಜನೆಯಲ್ಲಿ ಕೆಲವು ಕೆರೆಗಳಿಗೆ ನೀರು ಬಂತು. 2016ರಲ್ಲಿ ನಮ್ಮ ಕೆರೆಗೂ ನೀರು ಹರಿಯಿತು. ಅಂದಿನಿಂದ ನಮಗೆ ನೀರಿನ ಸಮಸ್ಯೆ ಉಂಟಾಗುತ್ತಿಲ್ಲ. ವರ್ಷಕ್ಕೆ ಒಮ್ಮೆ ತುಂಬುವ ಕೆರೆ ನಾಲ್ಕೈದು ತಿಂಗಳಲ್ಲಿ ಬರಿದಾದರೂ, ಅಂತರ್ಜಲ ಲಭ್ಯವಿರುತ್ತದೆ’ ಎಂದು ಚಾಮರಾಜನಗರ ತಾಲ್ಲೂಕಿನ ನಂಜೇದೇವನಪುರದ ರೈತ ಎನ್‌.ಎಸ್‌.ಬೆಳ್ಳಿ ಮಾದಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.

‘ರೈತರು ವಿವಿಧ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ವ್ಯಾಪಾರ ವೃದ್ಧಿಯಾಗಿದೆ. ಆರ್ಥಿಕವಾಗಿಯೂ ರೈತರು ಸದೃಢರಾಗುತ್ತಿದ್ದಾರೆ. ಕೂಲಿ ಕಾರ್ಮಿಕರಿಗೆ ಕೆಲಸ ಸಿಗುತ್ತಿದೆ. ಕೃಷಿ ಚಟುವಟಿಕೆಗಳನ್ನು ನಂಬಿ ವಾಹನಗಳು, ಸರಕು ಸಾಗಣೆ ವಾಹನಗಳನ್ನು ಬಾಡಿಗೆಗೆ ಇಟ್ಟಿರುವವರಿಗೂ ಸಂಪಾದನೆಯಾಗುತ್ತಿದೆ’ ಎಂದುಅವರು ಹೇಳಿದರು.

‘ನಮ್ಮ ಊರು ಮಾತ್ರ ಅಲ್ಲ; ಎಲ್ಲೆಲ್ಲಿ ಕೆರೆಗಳು ತುಂಬಿವೆಯೋ ಅಲ್ಲೆಲ್ಲ ಅಂತರ್ಜಲ ಹೆಚ್ಚಿ ರೈತರಿಗೆ ಅನುಕೂಲವಾಗಿದೆ. ಈ ಯೋಜನೆ ಜಾರಿಯಾಗದಿದ್ದರೆ ರೈತರ ಬದುಕನ್ನು ಊಹಿಸಲು ಸಾಧ್ಯವಿರಲಿಲ್ಲ. ಎಲ್ಲರೂ ಜಮೀನುಗಳನ್ನು ತೊರೆದು ಗುಳೆ ಹೋಗಬೇಕಿತ್ತು. ಕೆರೆಗೆ ಪ್ರತಿ ವರ್ಷ ಸರಿಯಾದ ಸಮಯಕ್ಕೆ ನೀರು ತುಂಬಿಸಲು ಸರ್ಕಾರ ಹಾಗೂ ಅಧಿಕಾರಿಗಳು ಕ್ರಮ ವಹಿಸಬೇಕು’ ಎಂದು ಅವರು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT