ಶುಕ್ರವಾರ, ಮಾರ್ಚ್ 5, 2021
28 °C
ಮಳಿಗೆ ತೆರೆಯುವುದಕ್ಕೆ ಮೊದಲೇ ಸರತಿ ಸಾಲು, ಬಿಸಿಲು ಲೆಕ್ಕಿಸದೆ, ಅಂತರ ಕಾಪಾಡದೆ ಖರೀದಿ

ಚಾಮರಾಜನಗರ: ಮದ್ಯ ಖರೀದಿಗೆ ಮುಗಿ ಬಿದ್ದರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಲಾಕ್‌ಡೌನ್‌ ಸಡಿಲಿಕೆಯ ಬೆನ್ನಲ್ಲೇ ರಾಜ್ಯ ಸರ್ಕಾರ ಮದ್ಯಮಾರಾಟಕ್ಕೆ ಅನುಮತಿ ನೀಡಿರುವುದರಿಂದ ಜಿಲ್ಲೆಯಲ್ಲಿ 40 ದಿನಗಳ ಬಳಿಕ ಸೋಮವಾರ ಮದ್ಯದ ಅಂಗಡಿಗಳು ತೆರೆದವು. 

ಮಳಿಗೆ ತೆರೆಯುವುದನ್ನೇ ಚಾತಕ ಪಕ್ಷಿಯಂತೆ ಕಾಯುತ್ತಿದ್ದ ಸಾವಿರರೂ ಮದ್ಯಪ್ರೇಮಿಗಳು ಮದ್ಯ ಖರೀದಿಗೆ ಮುಗಿಬಿದ್ದರು. ಸುಡುವ ಬಿಸಿಲು, ದೊಡ್ಡ ಸರತಿ ಸಾಲನ್ನೂ ಲೆಕ್ಕಿಸದೆ ಗ್ರಾಹಕರು ಮದ್ಯ ಖರೀದಿಸಿ ಮನೆಗೆ ಕೊಂಡೊಯ್ದರು. 

ಜಿಲ್ಲೆಯಲ್ಲಿ ಒಟ್ಟು 76 ಅಂಗಡಿಗಳಿಗೆ ಮದ್ಯ ಮಾರಾಟ ಮಾಡಲು ಅಬಕಾರಿ ಇಲಾಖೆ ಅನುಮತಿ ನೀಡಿತ್ತು.  ಬೆಳಿಗ್ಗೆ 9ರಿಂದ ಸಂಜೆ 7ರವರೆಗೆ ಮಾರಾಟಕ್ಕೆ ಅವಕಾಶ ನೀಡಲಾಗಿದೆ. ಕೋವಿಡ್‌–19 ತಡೆಗೆ ಮುಂಜಾಗ್ರತಾ ಕ್ರಮ ಅನುಸರಿಸಬೇಕಾಗಿರುವುದರಿಂದ ಎಲ್ಲ ಅಂಗಡಿಗಳ ಮುಂದೆ ತಡೆ ಬೇಲಿ ಹಾಕಲಾಗಿತ್ತು. ಸೋಮವಾರ ಬೆಳಿಗ್ಗೆ 9 ಗಂಟೆ ಮಳಿಗೆ ತೆರೆಯುವುದಕ್ಕಿಂತ ಒಂದು ಗಂಟೆಯ ಮುಂಚೆಯೇ ಗ್ರಾಹಕರು ಅಂಗಡಿ ಮುಂದೆ ಜಮಾಯಿಸಿದ್ದರು. ಜಿಲ್ಲೆಯಾದ್ಯಂತ ಎಂಎಸ್‌ಐಎಲ್‌ ಮಳಿಗೆಗಳ ಮುಂದೆ ಉದ್ದ ಸಾಲೇ ಇತ್ತು. ಉಳಿದ ಮಳಿಗೆಗಳ ಮುಂದೆ ಜನರ ಸಂಖ್ಯೆ ಕಡಿಮೆ ಇತ್ತು. 

ಅಬಕಾರಿ ಇಲಾಖೆ ಸಿಬ್ಬಂದಿ ಹಾಗೂ ಪೊಲೀಸ್‌ ಸಿಬ್ಬಂದಿಯನ್ನು ಅಂಗಡಿಗಳ ಮುಂದೆ ನಿಯೋಜಿಸಲಾಗಿತ್ತು. ಅಂತರ ಕಾಯ್ದುಕೊಳ್ಳುವುದು, ಮುಖಗವಸು ಧರಿಸುವುಸುದು ಸೇರಿದಂತೆ ಇತರೆ ನಿಯಮಗಳ ಪಾಲನೆ ಬಗ್ಗೆ ಸಿಬ್ಬಂದಿ ಗ್ರಾಹಕರಿಗೆ ಎಚ್ಚರಿಕೆ ನೀಡುತ್ತಿದ್ದರು. ಸಿಬ್ಬಂದಿ ಇರುವವರೆಗೆ ನಿಯಮಗಳನ್ನು ಪಾಲಿಸಿದ ಜನರು ಅವರು ಅಲ್ಲಿಂದ ಹೋದ ನಂತರ ಎಲ್ಲವನ್ನೂ ಗಾಳಿಗೆ ತೂರಿದರು. 

ಖರೀದಿಗೆ ಬಂದ ಬಹುತೇಕರು ಮುಖಗವಸು ಧರಿಸಿದ್ದರು. ಮಳಿಗೆಗಳ ಸಿಬ್ಬಂದಿ ಕೂಡ ಮುಖಗವಸು, ಕೈಗವಸು ಧರಿಸಿಯೇ ಮದ್ಯ ಪೂರೈಸಿದರು.

ಹಳೆಯ ದರ: ಏಪ್ರಿಲ್‌ 1ರಿಂದ ಅನ್ವಯವಾಗುವಂತೆ ಮದ್ಯದ ಬೆಲೆ ಶೇ 6ರಷ್ಟು ಹೆಚ್ಚಾಗಿದೆ. ಆದರೆ, ಸೋಮವಾರ ಹಳೆಯ ದರದಲ್ಲೇ ಮದ್ಯ ಮಾರಾಟ ನಡೆಯಿತು. ಮಂಗಳವಾರದಿಂದ ಮದ್ಯಪ್ರಿಯರು ಹೆಚ್ಚು ಬೆಲೆ ತೆರಬೇಕಿದೆ.  

ಕೆಲವು ಅಂಗಡಿಗಳ ಮಾಲೀಕರು ಎಂಆರ್‌ಪಿಗಿಂತ ಹೆಚ್ಚು ಬೆಲೆಯಲ್ಲಿ ಮಾರಾಟ ಮಾಡುತ್ತಿದ್ದಾರೆ ಎಂಬ ದೂರು ಕೇಳಿ ಬಂತು. ತಕ್ಷಣ ಅಬಕಾರಿ ಸಿಬ್ಬಂದಿ ಮಾಲೀಕರೊಂದಿಗೆ ಮಾತನಾಡಿ, ಯಾವುದೇ ಕಾರಣಕ್ಕೂ ಹೆಚ್ಚಿನ ಬೆಲೆಗೆ ಮಾರಾಟ ಮಾಡುವಂತಿಲ್ಲ ಎಂದು ತಾಕೀತು ಮಾಡಿದರು. 

ಗುಂಡ್ಲುಪೇಟೆ ವರದಿ

ತಾಲ್ಲೂಕಿನಾದ್ಯಂತ ಜನ ಬಿಸಿಲಿನಲ್ಲಿ ಸಾಲು ಗಟ್ಟಿ ನಿಂತು ಮದ್ಯ ಖರೀದಿಸಿದರು. ಅಂತರ ಕಾಯ್ದುಕೊಳ್ಳುವಂತೆ ಪೊಲೀಸರು ಸ್ಥಳದಲ್ಲಿ ಇದ್ದು ಎಚ್ಚರಿಕೆ ನೀಡುತ್ತಿದ್ದರು.  ಎಂಎಸ್ಐಎಲ್ ಮಳಿಗೆಯಲ್ಲಿ ಮಾತ್ರ ಹೆಚ್ಚು ಜನರಿದ್ದರು. ಕೆಲವೊಂದು ಮದ್ಯದ ಅಂಗಡಿಗಳಲ್ಲಿ ಜನರೇ ಇರಲಿಲ್ಲ.

ಸಂತೇಮರಹಳ್ಳಿ ವರದಿ

ಹೋಬಳಿಯಲ್ಲಿ ಮದ್ಯದ ಅಂಗಡಿಗಳನ್ನು ತೆರೆಯುವ ಮೊದಲೇ ಬೆಳಿಗ್ಗೆ 8 ಗಂಟೆಯಿಂದಲೇ ಅಂಗಡಿ ಮುಂಭಾಗ ಗ್ರಾಹಕರು ಜಮಾವಣೆಗೊಂಡಿದ್ದರು.  ಬಾಗಿಲು ತೆರೆಯುತ್ತಿದ್ದಂತೆ, ಅಂತರ ಕಾಪಾಡಿಕೊಳ್ಳದೇ ಒಬ್ಬರ ಹಿಂದೆ ಮತ್ತೊಬ್ಬರು ಬಿದ್ದು ಖರೀದಿಸಿದರು. ಮುಖಗವಸುಗಳನ್ನು ಹೆಚ್ಚು ಜನರು ಧರಿಸಿರಲಿಲ್ಲ.

ಸರತಿ ಸಾಲಿನಲ್ಲಿ ನಿಂತಿದ್ದವರಿಗೆ ಕೆಲವರು ಹಣ ನೀಡಿ ಮದ್ಯ ಖರೀದಿಸುವಂತೆ ಹಣ ನೀಡಿ ಮರೆಯಲ್ಲಿ ನಿಂತುಕೊಳ್ಳುತ್ತಿದ್ದುದು ಕಂಡು ಬಂದಿತ್ತು. ಕೆಲವು ಅಂಗಡಿಗಳಲ್ಲಿ ನಿಗದಿತ ದರಕ್ಕಿಂತ ಹೆಚ್ಚಿನ ದರದಲ್ಲಿ ಮಾರಾಟ ಮಾಡುವುದು ಕಂಡು ಬಂದಿತ್ತು. ಇದನ್ನು ಪ್ರಶ್ನಿಸಿ ಕೆಲವರು ಆಕ್ರೋಶ ವ್ಯಕ್ತಪಡಿಸಿದರು. 

ಹನೂರು ವರದಿ

ಹನೂರು ಪಟ್ಟಣ ಸೇರಿದಂತೆ ಕ್ಷೇತ್ರ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಮದ್ಯ ಪ್ರಿಯರು ಸರತಿ ಸಾಲಿನಲ್ಲಿ ನಿಂತು ಮದ್ಯ ಖರೀಧಿಸಿದರು. ಖರೀದಿಗೆ ಬಂದವರಲ್ಲಿ ಬಹುತೇಕರು ಮುಖಗವಸು ಧರಿಸುವ ಮೂಲಕ ಸರ್ಕಾರದ ಆದೇಶವನ್ನು ಪಾಲಿಸಿದ್ದುದು ವಿಶೇಷವಾಗಿತ್ತು. ನೂರಾರು ಮೀಟರ್‌ ಉದ್ದಕ್ಕೂ ಸಾಲಿನಲ್ಲಿ ನಿಂತು ಮದ್ಯ ಖರೀದಿಸಿದರು. 

ಪಟ್ಟಣದಲ್ಲಿ ಮದ್ಯ ಖರೀದಿಗೆ ಜನ ಮುಗಿಬಿದ್ದರೆ, ಲೊಕ್ಕನಹಳ್ಳಿ, ಕೌದಳ್ಳಿ ಮುಂತಾದ ಕಡೆ ಅಂಗಡಿಗಳ ಮುಂದೆ ಜನರೇ ಇಲ್ಲದೇ ಬಿಕೋ ಎನ್ನುತ್ತಿತ್ತು.

ಯಳಂದೂರು ವರದಿ

ಯಳಂದೂರು ಪಟ್ಟಣದಲ್ಲಿ ಮೂರು ಅಂಗಡಿಗಳಲ್ಲಿ ಮದ್ಯ ಮಾರಾಟ ನಡೆದಿದೆ. ಮಧ್ಯಾಹ್ನದ ಹೊತ್ತಿಗೆ ದಾಸ್ತಾನು ಖಾಲಿಯಾಯಿತು. ನಂತರ ಬಂದವರು ನಿರಾಸೆಯಿಂದ ಹಿಂದಿರುಗಬೇಕಾಯಿತು.  ಬಿಳಿಗಿರಿರಂಗನಬೆಟ್ಟದ ಸೋಲಿಗ ಯುವಕರು ಪಟ್ಟಣಕ್ಕೆ ಬೈಕ್‌ಗಳಲ್ಲಿ ಬಂದು ಮದ್ಯವನ್ನು ಖರೀದಿಸಿದರು.

ಕೊಳ್ಳೇಗಾಲ: ಮದ್ಯದಂಗಡಿಗೆ ಪೂಜೆ!

ಕೊಳ್ಳೇಗಾಲದಲ್ಲಿ ವ್ಯಕ್ತಿಯೊಬ್ಬರು ಮದ್ಯದಂಗಡಿಯ ಬಾಗಿಲು ತೆರೆಯುವುದಕ್ಕೂ ಮುನ್ನ ಪೂಜೆ ಸಲ್ಲಿಸಿದರು. ತೆಂಗಿನ ಕಾಯಿಯಲ್ಲಿ ಕರ್ಪೂರ ಹೊತ್ತಿಸಿ ಅಂಗಡಿಗೆ ಆರತಿ ಬೆಳಗಿದರು. 

ಅಂತರ ಕಾಯ್ದುಕೊಂಡು ಸರತಿ ಸಾಲಿನಲ್ಲಿ ನಿಂತುಕೊಂಡು ಗ್ರಾಹಕರಿ ಮದ್ಯ ಖರೀದಿಸಿದರು. 

ಅಂಗಡಿಗಳ ಮಾಲೀಕರು ಗ್ರಾಹಕರಿಗೆ ಸ್ಯಾನಿಟೈಸರ್‌ ವ್ಯವಸ್ಥೆ ಮಾಡಿದ್ದರು. ಸರ್ಕಾರದ ಆದೇಶವನ್ನು ಚಾಚೂತಪ್ಪದೆ ಪಾಲಿಸುವುದಾಗಿ ಮಾಲೀಕರು ಹೇಳಿದ್ದಾರೆ.

ಹೊಸ ದಾಸ್ತಾನು ಪೂರೈಕೆ ಇಂದು

‘ಪ್ರಜಾವಾಣಿ’ ಜೊತೆಗೆ ಮಾತನಾಡಿದ ಜಿಲ್ಲಾ ಅಬಕಾರಿ  ಉಪ ಆಯುಕ್ತ ಮಾದೇಶ್‌ ಅವರು, ‘ಸೋಮವಾರ ವ್ಯವಹಾರ ಸರಾಗವಾಗಿ ನಡೆದಿದೆ. ಎಲ್ಲೂ ದಾಸ್ತಾನು ಕೊರತೆಯಾಗಿಲ್ಲ. ಹೊಸ ದಾಸ್ತಾನು ಮಂಗಳವಾರ ಬರಲಿದೆ. ಅಂತರ ಕಾಪಾಡಿಕೊಳ್ಳುವುದು ಸೇರಿದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದೇವೆ. ಸ್ಥಳದಲ್ಲಿ ಇಲಾಖೆಯ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ’ ಎಂದು ಹೇಳಿದರು. 

‘ನಿಯಮ ಪಾಲನೆಗಾಗಿ ಅಂಗಡಿಗಳ ಸುತ್ತಮುತ್ತ ಅಗತ್ಯ ಕ್ರಮ ತೆಗೆದುಕೊಳ್ಳುವಂತೆ ಮಾಲೀಕರಿಗೆ ಸೂಚಿಸಲಾಗಿದೆ. ಗ್ರಾಹಕರಲ್ಲೂ ಜಾಗೃತಿ ಮೂಡಿಸುವ ಕೆಲಸ ನಡೆಯುತ್ತಿದೆ’ ಎಂದು ಅವರು ಮಾಹಿತಿ ನೀಡಿದರು. 

ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿರುವ ಬಗ್ಗೆ ಕೇಳಿದ ಪ್ರಶ್ನೆಗೆ, ‘ಈ ಬಗ್ಗೆ ಒಂದೆರಡು ದೂರುಗಳು ಬಂದಿತ್ತು. ಮಾಲೀಕರ ಜೊತೆ ಮಾತನಾಡಿ, ಯಾವುದೇ ಕಾರಣಕ್ಕೂ ಹೆಚ್ಚು ದರ ಪಡೆಯುವಂತಿಲ್ಲ ಎಂದು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಎಲ್ಲ ಮದ್ಯದ ಬೆಲೆ ಏಪ್ರಿಲ್‌ 1ರಿಂದ ಶೇ 6ರಷ್ಟು ಏರಿಕೆಯಾಗಿರುವುದರಿಂದ ಮಂಗಳವಾರದಿಂದ ಮದ್ಯದ ಬೆಲೆ ಸ್ವಲ್ಪ ಹೆಚ್ಚಲಿದೆ’ ಎಂದು ಅವರು ಹೇಳಿದರು. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು