ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಕ್ತಿಯುತ ಭಾರತ ಕಟ್ಟಲು ಮೋದಿ ಗೆಲ್ಲಿಸಿ: ಮಹೇಶ್‌

Published 25 ಏಪ್ರಿಲ್ 2024, 4:36 IST
Last Updated 25 ಏಪ್ರಿಲ್ 2024, 4:36 IST
ಅಕ್ಷರ ಗಾತ್ರ

ಚಾಮರಾಜನಗರ: ‘ಶಕ್ತಿಯುತ ಭಾರತ ಕಟ್ಟಲು ಮತ್ತು ದೇಶವನ್ನು ಜಗತ್ತಿನಲ್ಲೇ ಮೂರನೇ ಅತಿ ದೊಡ್ಡ ಆರ್ಥಿಕ ಶಕ್ತಿಯನ್ನಾಗಿ ಮಾಡಲು ಮತದಾರರು ಪ್ರಧಾನಿ ಮೋದಿ ಅವರಿಗೆ ಮತ್ತೊಂದು ಅವಕಾಶ ನೀಡಬೇಕು’ ಎಂದು ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಎನ್‌.ಮಹೇಶ್‌ ಬುಧವಾರ ಮನವಿ ಮಾಡಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕ್ಷೇತ್ರದಲ್ಲಿ ಪ್ರಚಾರ ಕಾರ್ಯ ಚೆನ್ನಾಗಿ ನಡೆದಿದೆ. ಪ್ರತಿ ಬೂತ್‌ ವ್ಯಾಪ್ತಿಯಲ್ಲಿ ಎರಡೆರಡು ಬಾರಿ ಸಂಪರ್ಕ ಮಾಡಿದ್ದೇವೆ. ಮಹಾಶಕ್ತಿ ಅಭಿಯಾನ ಮಾಡಿದ್ದೇವೆ. ಪ್ರತಿ ಮತದಾರರ ಮನೆಗೂ ಪಕ್ಷದ ಸಾಧನೆಯ ಕರಪತ್ರಗಳು ತಲುಪಿವೆ. ಮತದಾರ ಜಾಗೃತನಾಗಿದ್ದಾನೆ’ ಎಂದರು. 

‘10 ವರ್ಷಗಳಲ್ಲಿ ನರೇಂದ್ರ ಮೋದಿ ಅವರು ಮಾಡಿದ ಸಾಧನೆಗಳು ಮೂರನೇ ಅವಧಿಯಲ್ಲಿ ಇನ್ನಷ್ಟು ವೇಗ ಪಡೆಯಲಿವೆ. ದೇಶವನ್ನು ಮೂರನೇ ದೊಡ್ಟ ಆರ್ಥಿಕ ಶಕ್ತಿಯನ್ನಾಗಿ ಮಾಡುವುದು ಗುರಿ. ದೇಶವು ಐದು ಟ್ರಿಲಿಯನ್‌ ಆರ್ಥಿಕ ಶಕ್ತಿಯಾದರೆ, 2029ಕ್ಕೆ ಪ್ರತಿಯೊಬ್ಬ ವ್ಯಕ್ತಿಯ ತಲಾ ಆದಾಯ ಪ್ರತಿ ದಿನ ₹1,500 ಆಗಲಿದೆ’ ಎಂದರು.

‘ಮೋದಿಯವರು ಭ್ರಷ್ಟಾಚಾರ ರಹಿತ ಆಡಳಿತ ನೀಡಿದ್ದಾರೆ. ಬದುಕುವುದನ್ನು ಸುಲಭವಾಗಿಸಿದ್ದಾರೆ. ದೇಶಕ್ಕಾಗಿ ನಿಸ್ವಾರ್ಥವಾಗಿ ದುಡಿಯುತ್ತಿರುವ ಅವರಿಗೆ ಮತದಾರರು ಮತ್ತೊಂದು ಅವಕಾಶ ನೀಡಬೇಕು’ ಎಂದು ಮನವಿ ಮಾಡಿದರು. 

‘ಚಾಮರಾಜನಗರ ಕ್ಷೇತ್ರದ ಎಸ್‌.ಬಾಲರಾಜು ಉತ್ತಮ ಅಭ್ಯರ್ಥಿ. ಜನರು ಜಾಗೃತರಾಗಿದ್ದಾರೆ. ಉತ್ತಮ ಅಭ್ಯರ್ಥಿಯನ್ನು ಆಯ್ಕೆ ಮಾಡಬೇಕು ಎಂಬುದು ಜನರ ಮನಸ್ಸಿನಲ್ಲಿದೆ’ ಎಂದರು. 

ಅಂತ್ಯ ಮಾಡಿ: ರಾಮನಗರದಲ್ಲಿ ಪ್ರಚಾರ ಮಾಡುವ ಸಂದರ್ಭದಲ್ಲಿ ಕೊಳ್ಳೇಗಾಲ ಕ್ಷೇತ್ರದ ದಲಿತ ಸಮುದಾಯದ ಬಗ್ಗೆ ನಿಂದನಾತ್ಮಕವಾಗಿ ಮಾತನಾಡಿದ್ದಾರೆ ಎಂಬ ಆರೋಪಗಳ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಎನ್‌.ಮಹೇಶ್‌, ‘40 ವರ್ಷಗಳ ರಾಜಕೀಯ ಜೀವನವನ್ನು ನನ್ನ ಸಮುದಾಯದ ಅಭಿವೃದ್ದಿಗಾಗಿ ತ್ಯಾಗ ಮಾಡಿದ್ದೇನೆ. ನಾನೊಬ್ಬ ಅಂಬೇಡ್ಕರ್ ವಾದಿಯಾಗಿದ್ದು, ಅವರ ಅಶಯದಂತೆ ಸಮುದಾಯ ಅಭಿವೃದ್ದಿಗೆ ದುಡಿಯುತ್ತಿದ್ದೇನೆ. ನಾನು ಭಾಷಣ ಮಾಡುವಾಗ ಸಲುಗೆಯಿಂದ ಗ್ರಾಮೀಣ ಭಾಷೆಯ ಪದಗಳನ್ನು ಬಳಸಿದ್ದೆ. ಆಮೇಲೆ ಅದು ತಪ್ಪು ಎಂದು ಅರಿವಾದ ತಕ್ಷಣ ಕ್ಷಮೆ ಕೇಳಿದ್ದೇನೆ. ಆದರೂ ಮತ್ತೆ ಮತ್ತೆ ಆ ವಿಚಾರವನ್ನೇ ಪ್ರಸ್ತಾಪಿಸಿ ಚುನಾವಣೆ ಸಂದರ್ಭದಲ್ಲಿ ನನ್ನ ವಿರುದ್ದ ಷಡ್ಯಂತ್ರ ಮಾಡುತ್ತಿರುವುದು ಸರಿಯಲ್ಲ. ಈಗಾಗಲೇ ಕ್ಷಮೆ ಕೋರಿದ್ದೇನೆ. ಮತ್ತೊಮ್ಮೆ ಕೋರುವೆ. ಈ ವಿಚಾರವನ್ನು ಇಲ್ಲಿಗೆ ಅಂತ್ಯ ಮಾಡಿ’ ಎಂದರು. 

ಬಿಜೆಪಿ ಚುನಾವಣಾ ಉಸ್ತುವಾರಿ ಎನ್.ವಿ.ಫಣೀಶ್, ಸಂಚಾಲಕ ಪ್ರೊ.ಕೆ.ಆರ್. ಮಲ್ಲಿಕಾರ್ಜುನಪ್ಪ, ಸಹ ಸಂಚಾಲಕ ಪರೀಕ್ಷಿತ್‌ರಾಜ್, ಕೇಂದ್ರ ಪರಿಹಾರ ಸಮಿತಿ ಮಾಜಿ ಅಧ್ಯಕ್ಷ ಎಂ. ರಾಮಚಂದ್ರ, ಒಬಿಸಿ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ನೂರೊಂದುಶೆಟ್ಟಿ, ಜಿಲ್ಲಾ ಉಪಾಧ್ಯಕ್ಷ ಎಚ್.ಎಂ. ಬಸವಣ್ಣ, ಜಿಲ್ಲಾ ವಕ್ತಾರ ಕಾಡಳ್ಳಿ ಶಿವರುದ್ರಸ್ವಾಮಿ ಭಾಗವಹಿಸಿದ್ದರು. 

ಬಿ.ಪುಟ್ಟಸ್ವಾಮಿ
ಬಿ.ಪುಟ್ಟಸ್ವಾಮಿ

ಬಾಲರಾಜು ಗೆಲುವು ಖಚಿತ: ಜೆಡಿಎಸ್‌

ಚಾಮರಾಜನಗರ: ಎನ್‌ಡಿಎ ಮೈತ್ರಿ ಅಭ್ಯರ್ಥಿ ಎಸ್.ಬಾಲರಾಜು ಅವರ ಗೆಲುವಿಗೆ ಪೂರಕವಾದ ವಾತಾವರಣ ಕ್ಷೇತ್ರದಲ್ಲಿದ್ದು ಅವರನ್ನು ಅತ್ಯಧಿಕ ಮತಗಳಿಂದ ಗೆಲ್ಲಿಸುವ ಮೂಲಕ ಮೋದಿಯವರು ಮತ್ತೆ ದೇಶದ ಪ್ರಧಾನಿ ಮಾಡಲು ಶಕ್ತಿ ತುಂಬಬೇಕು ಎಂದು ಜೆಡಿಎಸ್ ಮುಖಂಡ ಲೋಕಸಭಾ ಕ್ಷೇತ್ರದ ಸಹ ಸಂಚಾಲಕ ಪುಟ್ಟಸ್ವಾಮಿ ಹೇಳಿದರು.  ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ‘ಕ್ಷೇತ್ರ ಎಂಟು ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ 3.5–4 ಲಕ್ಷದಷ್ಟು ಜೆಡಿಎಸ್‌ ಮತಗಳಿದ್ದು ಎಲ್ಲರೂ ಬಾಲರಾಜು ಅವರನ್ನು ಬೆಂಬಲಿಸಲಿದ್ದಾರೆ. 26 ರಂದು ನಡೆಯುವ ಮತದಾನದಲ್ಲಿ ಪಕ್ಷದ ಎಲ್ಲರೂ ಕಮಲದ ಗುರುತಿಗೆ ಮತ ಹಾ‌ಕಬೇಕು’ ಎಂದು ಮನವಿ ಮಾಡಿದರು.  ಕೊಳ್ಳೇಗಾಲ ಕ್ಷೇತ್ರದಲ್ಲಿ ಕೆಲವರು ಜೆಡಿಎಸ್‌ನಿಂದ ಕಾಂಗ್ರೆಸ್‌ಗೆ ಹೋಗಿದ್ದಾರೆ ಎಂದು ಹೇಳಲಾಗುತ್ತಿದೆ. ಅವರೆಲ್ಲ ವೈಯಕ್ತಿಕ ಕಾರಣಗಳಿಂದ ಹೋಗಿದ್ದಾರೆ. ಅವರೆಲ್ಲ ಪಕ್ಷದಲ್ಲಿ ಇರಲೇ ಇಲ್ಲ’ ಎಂದು ಪುಟ್ಟಸ್ವಾಮಿ ಹೇಳಿದರು.  ‘ಹನೂರು ಶಾಸಕರು ಸಂಪೂರ್ಣವಾಗಿ ಪ್ರಚಾರದಲ್ಲಿ ತೊಡಗಿಕೊಂಡಿದ್ದು ಹನೂರಿನಲ್ಲಿ ಮೈತ್ರಿ ಅಭ್ಯರ್ಥಿಗೆ ಮುನ್ನಡೆ ಸಿಗಲಿದೆ. ಚುನಾವಣೆಯಲ್ಲಿ ಬಾಲರಾಜು ಗೆಲ್ಲಲಿದ್ದಾರೆ’ ಎಂದು ಹೇಳಿದರು. ಮುಖಂಡರಾದ ಆಲೂರು ಮಲ್ಲು ಜಿ.ಎಂ.ಶಂಕರ್ ರಾಮಚಂದ್ರನಾಯಕ ಹೊಂಗನೂರು ರಾಜಣ್ಣ ಆನಂದ್ ರಾಜಣ್ಣ ಪಣ್ಯದಹುಂಡಿ ಭಾಗವಹಿಸಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT