ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌ ಆಡಳಿತದಲ್ಲಿ ಖಜಾನೆ ಖಾಲಿ: ಬಿಎಸ್‌ವೈ

ಗುಂಡ್ಲುಪೇಟೆಯಲ್ಲಿ ಎನ್‌ಡಿಎ ಅಭ್ಯರ್ಥಿ ಪರ ಪ್ರಚಾರ
Published 22 ಏಪ್ರಿಲ್ 2024, 7:25 IST
Last Updated 22 ಏಪ್ರಿಲ್ 2024, 7:25 IST
ಅಕ್ಷರ ಗಾತ್ರ

ಗುಂಡ್ಲುಪೇಟೆ: ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಖಜಾನೆ ಖಾಲಿಯಾಗಿದೆ.  ಪಕ್ಷ ದಿವಾಳಿಯಾಗಿದೆ. ಇಲ್ಲಿವರೆಗೆ ಒಂದು ಕಿಲೋ ಮೀಟರ್ ರಸ್ತೆ ನಿರ್ಮಿಸಿಲ್ಲ. ಕೆಲಸ ಮರೆತು ಅಧಿಕಾರಕ್ಕಾಗಿ ಗ್ಯಾರಂಟಿ ಎಂಬ ಸುಳ್ಳು ಭರವಸೆ ನೀಡಿ ಜನರನ್ನು ದಾರಿ ತಪ್ಪಿಸುತ್ತಿದ್ದಾರೆ’ ಎಂದು ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ ಭಾನುವಾರ ವಾಗ್ದಾಳಿ ನಡೆಸಿದರು. 

ಪಟ್ಟಣದ ಹಳೇ ಬಸ್ ನಿಲ್ದಾಣದಲ್ಲಿ ಭಾನುವಾರ ಚಾಮರಾಜನಗರ ಲೋಕಸಭಾ ಕ್ಷೇತ್ರದ ಎನ್‍ಡಿಎ ಮೈತ್ರಿಕೂಟದ ಅಭ್ಯರ್ಥಿ ಎಸ್.ಬಾಲರಾಜು ಪರ ನಡೆದ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.

‘ಮೋದಿಯವರು ಮೂರನೇ ಬಾರಿ ಪ್ರಧಾನಿಯಾಗುವುದು ಖಚಿತ. ಇದನ್ನು ತಡೆಯಲು ಯಾವ ಶಕ್ತಿಯಿಂದಲೂ ಸಾಧ್ಯವಿಲ್ಲ. ಮೋದಿ ಅವರು ವಿಶ್ವವೇ ಕೊಂಡಾಡುವ ವ್ಯಕ್ತಿಯಾಗಿದ್ದಾರೆ. ಮೋದಿ ಆಡಳಿತದಿಂದ ದೇಶ ಇಂದು ಸುಭದ್ರವಾಗಿದೆ’ ಎಂದರು.

‘ಜನರಿಗೆ ಅಕ್ಕಿ ನೀಡುತ್ತಿರುವುದು ಕೇಂದ್ರವೇ ವಿನಾ ರಾಜ್ಯ ಸರ್ಕಾರವಲ್ಲ. ರಾಜ್ಯ ಕಾಂಗ್ರೆಸ್ ಇಲ್ಲಿಯ ವರೆಗೆ ಒಂದು ಕೆಜಿ ಅಕ್ಕಿ ಕೊಟ್ಟಿಲ್ಲ. ‘ನಾವೇ ಕೊಟ್ಟಿದ್ದು’ ಎಂದು ಬೊಬ್ಬೆ ಹೊಡೆದು ಕೇಂದ್ರ ಸರ್ಕಾರದ ಬಗ್ಗೆ ಬಹಳವಾಗಿ ಹಗುರವಾಗಿ ಮಾತನಾಡುತ್ತಿದ್ದಾರೆ. ಕೇಂದ್ರ ಸರ್ಕಾರವು ಕಿಸಾನ್ ಸಮ್ಮಾನ್, ಶುದ್ಧ ಕುಡಿಯುವ ನೀರು, ಉಚಿತ ಅಡುಗೆ ಅನಿಲ ಸೇರಿದಂತೆ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದು ರೈತರು, ಕೂಲಿ ಕಾರ್ಮಿಕರು, ಬಡವರ ಪರ ನಿಂತಿದೆ’ ಎಂದು ತಿಳಿಸಿದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸಿ.ಎಸ್.ನಿರಂಜನಕುಮಾರ್ ಮಾತನಾಡಿ, ‘ಲೋಕಸಭೆ ದೇಶದ ಚುನಾವಣೆಯಾಗಿದ್ದು, ಮೋದಿ ಹತ್ತು ವರ್ಷ ಆಡಳಿತದ ಅವಧಿಯಲ್ಲಿ ಜನಮನ್ನಣೆ ಗಳಿಸಿ ಹಳ್ಳಿಗಳ ಅಭಿವೃದ್ಧಿ, ರಸ್ತೆ, ವಿಮಾನ ನಿಲ್ದಾಣ ಸೇರಿದಂತೆ ವಿವಿಧ ಕೆಲಸಗಳನ್ನು ಮಾಡಿದ್ದಾರೆ. ಮನಮೋಹನ್ ಸಿಂಗ್ ಸರ್ಕಾರದ ಅವಧಿಯಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿತ್ತು. ಮೋದಿ ಬಂದ ನಂತರ ಭಾರತದ ಕಡೆ ಪ್ರಪಂಚವೇ ತಿರುಗಿ ನೋಡುವಂತೆ ಮಾಡಿದ್ದಾರೆ. ಸೈನಿಕರಿಗೆ ಬಲ ತುಂಬಿ, ತಂತ್ರಜ್ಞಾನದಲ್ಲಿ ದಾಪುಗಾಲು ಇಟ್ಟಿದ್ದಾರೆ’ ಎಂದರು. 

‘ಮೋದಿ ಸರ್ಕಾರದ ಕಾರ್ಯಕ್ರಮಗಳನ್ನು ಕಾಂಗ್ರೆಸ್‍ನವರು ಅಣಕವಾಡುತ್ತಿದ್ದಾರೆ. ನಿಜವಾಗಿಯೂ ಚೊಂಬು ಕೊಟ್ಟವರು ಕಾಂಗ್ರೆಸ್‌ನವರು. ಗ್ಯಾರಂಟಿ ಯೋಜನೆ ಮೂಲಕ ಮಹಿಳೆಯರಿಗೆ ₹2,000 ಅನೇಕ ದರ ಹೆಚ್ಚಳ ಮಾಡಿದ್ದಾರೆ. ಇದು ಜನಸಾಮಾನ್ಯರಿಗೆ ಹೊರೆಯಾಗಿದೆ’ ಎಂದು ಕಿಡಿಕಾರಿದರು.

ಬಿಜೆಪಿ ರಾಜ್ಯ ಉಪಾಧ್ಯಕ್ಷ ಎನ್.ಮಹೇಶ್ ಮಾತನಾಡಿ, ‘ಮೋದಿಯವರನ್ನು ಮೂರನೇ ಬಾರಿ ಪ್ರಧಾನಿ ಮಾಡಲು ರಾಜ್ಯದ 28 ಕ್ಷೇತ್ರಗಳನ್ನು ಗೆಲ್ಲಬೇಕು ಎಂಬುದು ಬಿ.ಎಸ್.ಯಡಿಯೂರಪ್ಪ ಸಂಕಲ್ಪ. ಕಾಂಗ್ರೆಸ್‌ನವರು ಬಹಳ ಕೀಳು ಮಟ್ಟದ ಚೊಂಬು ಜಾಹೀರಾತು ಕೊಟ್ಟಿದ್ದಾರೆ. ಆದರೆ ನಿಜವಾಗಿಯೂ ಖಾಲಿ ಚೊಂಬನ್ನು ಮೋದಿ ಕೈಗೆ ಕೊಟ್ಟವರು ಕಾಂಗ್ರೆಸ್. ಅದನ್ನು ಮೋದಿ ಅಕ್ಷಯ ಪಾತ್ರೆ ಮಾಡಿದ್ದಾರೆ’ ಎಂದು ತಿಳಿಸಿದರು.

ಕ್ಷೇತ್ರದ ಸಂಚಾಲಕ ಕೆ.ಆರ್.ಮಲ್ಲಿಕಾರ್ಜುನಪ್ಪ, ಕೇಂದ್ರ ಪರಿಹಾರ ಸಮಿತಿ ಮಾಜಿ ಅಧ್ಯಕ್ಷ ರಾಮಚಂದ್ರ, ಮುಖಂಡ ಡಾ.ಪ್ರೀತನ್ ನಾಗಪ್ಪ, ಮಂಡಲ ಅಧ್ಯಕ್ಷ ಸಿ.ಮಹದೇವಪ್ರಸಾದ್, ಹಿಂದುಳಿದ ಮೋರ್ಚ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ನೂರೊಂದುಶೆಟ್ಟಿ, ಪುರಸಭೆಯ ಮಾಜಿ ಅಧ್ಯಕ್ಷ ಪಿ.ಗಿರೀಶ್, ಮುಖಂಡರಾದ ಎನ್.ಮಲ್ಲೇಶ್, ಆರ್.ಸುಂದರ್, ನಾಗಶ್ರೀ ಪ್ರತಾಪ್‌, ಎಲ್.ಸುರೇಶ್, ಎಸ್.ಎಂ.ಮಲ್ಲಿಕಾರ್ಜುನಪ್ಪ, ಶ್ರೀಕಂಠಪ್ಪ ಇತರರು ಇದ್ದರು.

ಶ್ರೀನಿವಾಸ ಪ್ರಸಾಸ್‌ ಅಳಿಯ ಮೋಹನ್‌ ಭಾಗಿ

ಪ‍್ರಚಾರ ಸಭೆಯಲ್ಲಿ ಸಂಸದ ವಿ.ಶ್ರೀನಿವಾಸ ಪ್ರಸಾದ್‌ ಅಳಿಯ ಡಾ.ಎನ್‌.ಎಸ್‌.ಮೋಹನ್‌ ಭಾಗವಹಿಸುವುದರಿಂದ ಕಾಂಗ್ರೆಸ್‌ ಸೇರುತ್ತಾರೆ ಎಂಬ ವದಂತಿಗೆ ತೆರೆ ಎಳೆದರು.  ಯಡಿಯೂರಪ್ಪ ಅವರ ಜೊತೆಯಲ್ಲಿ ವೇದಿಕೆ ಹಂಚಿಕೊಂಡು ಪಕ್ಷದ ಅಭ್ಯರ್ಥಿ ಪರವಾಗಿ ಮಾತನಾಡಿದರು. ಪಕ್ಷದಲ್ಲೇ ಉಳಿಯುವುದಾಗಿ ಹೇಳಿದರು.  ಸಭೆಯ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಾ.ಮೋಹನ್‌ ‘ನಾನು ಮಾವ ಶ್ರೀನಿವಾಸ್ ಪ್ರಸಾದ್ ಹಾಗೂ ನಮ್ಮ ಕುಟುಂಬದ ಸೇವೆ ಚಾಮರಾಜನಗರದಲ್ಲಿ ಮುಂದುವರೆಯುತ್ತದೆ. ನಾನೊಬ್ಬ ಸಂಘ ಪರಿವಾರದ ಕಾರ್ಯಕರ್ತ. ಪರಿವಾರ ಏನು ಸೂಚನೆ ನೀಡಿದೆಯೋ ಅದನ್ನು ಮಾಡಿಕೊಂಡು ಬಂದಿರುವೆ. ಸಂಘದ ನಿಲುವೇ ನನ್ನ ನಿಲುವು’ ಎಂದರು.  ಕರ್ನಾಟಕ ರಾಜ್ಯ ಉಸ್ತುವಾರಿ ರಾಧಾ ಮೋಹನ್ ದಾಸ್ ರಾಜ್ಯ ಘಟಕದ ಅಧ್ಯಕ್ಷ ವಿಜಯೇಂದ್ರ ಹಾಗೂ ಯಡಿಯೂರಪ್ಪ ಅವರು ಕರೆದು ಮಾತನಾಡಿದ್ದಾರೆ. ಎಲ್ಲವೂ ಒಂದು ಹಂತಕ್ಕೆ ಬಂದಿದೆ’ ಎಂದರು. 

ಹದಗೆಟ್ಟ ಕಾನೂನು ಸುವ್ಯವಸ್ಥೆ: ಯಡಿಯೂರಪ್ಪ 

‘ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ. ಕೊಲೆ ಸುಲಿಗೆ ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ಪ್ರಕರಣಗಳು ಹೆಚ್ಚಾಗಿವೆ. ತಡೆಯುವ ಪ್ರಯತ್ನ ನಡೆಯುತ್ತಿಲ್ಲ. ಸರ್ಕಾರ ಬದುಕಿದೆಯಾ ಸತ್ತಿದೆಯಾ ಎಂಬುದು ಗೊತ್ತಾಗುತ್ತಿಲ್ಲ’ ಎಂದು ಯಡಿಯೂರಪ್ಪ ಟೀಕಿಸಿದರು.  ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ‘ಚಾಮರಾಜನಗರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಬಾಲರಾಜು ಗೆದ್ದೇ ಗೆಲ್ಲುತ್ತಾರೆ. ಕನಿಷ್ಠ ಎರಡೂವರೆ ಲಕ್ಷ ಮತಗಳ ಅಂತರದಿಂದ ಗೆಲ್ಲುತ್ತಾರೆ. ರಾಜ್ಯದಲ್ಲಿ ಎನ್‌ಡಿ‌ಎ ಪರ ಅಲೆ ಇದೆ. 28 ಕ್ಷೇತ್ರಗಳನ್ನೂ ಗೆಲ್ಲಲು ಪ್ರಯತ್ನ ಮಾಡುತ್ತಿದ್ದೇವೆ. ಗೆಲ್ಲುತ್ತೇವೆ’ ಎಂದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT