ಚಾಮರಾಜನಗರ: ಜಿಲ್ಲೆಯ ಎಲ್ಲ ನ್ಯಾಯಾಲಯಗಳಲ್ಲಿ ಶನಿವಾರ ಲೋಕ ಅದಾಲತ್ ನಡೆದಿದ್ದು, 15,500ಕ್ಕೂ ಹೆಚ್ಚು ಪ್ರಕರಣಗಳು ಇತ್ಯರ್ಥವಾಗಿವೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಮೂಲಗಳು ತಿಳಿಸಿವೆ.
ವಿಲೇವಾರಿಗೊಂಡಿರವು ಪ್ರಕರಣಗಳ ನಿಖರ ಸಂಖ್ಯೆ ಸದ್ಯಕ್ಕೆ ಗೊತ್ತಾಗಿಲ್ಲ. ನ್ಯಾಯಾಲಯದಲ್ಲಿರುವ ಬಾಕಿ ಪ್ರಕರಣ, ವ್ಯಾಜ್ಯಪೂರ್ವ ಪ್ರಕರಣ ಸೇರಿದಂತೆ 16 ಸಾವಿರದಷ್ಟು ಪ್ರಕರಣಗಳನ್ನು ವಿಲೇವಾರಿ ಮಾಡುವ ಗುರಿಯನ್ನು ಈ ಬಾರಿ ಪ್ರಾಧಿಕಾರ ಹಾಕಿಕೊಂಡಿತ್ತು. ಸೋಮವಾರ ಇಲ್ಲವೇ ಮಂಗಳವಾರ ನಿಖರ ಮಾಹಿತಿ ತಿಳಿಯಲಿದ್ದು, ಗುರಿ ತಲುಪುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ.
ಚಾಮರಾಜನಗರದ ನ್ಯಾಯಾಲಯದಲ್ಲಿ ನಡೆದ ಅದಾಲತ್‌ನಲ್ಲಿ 37 ವರ್ಷಗಳ ಹಿಂದಿನ ಜಮೀನು ವಿವಾದ ಇತ್ಯರ್ಥವಾಗಿದೆ. ವಿಚ್ಛೇದನಕ್ಕೆ ಮುಂದಾಗಿದ್ದ ದಂಪತಿ ನ್ಯಾಯಾಧೀಶರು, ವಕೀಲರ ಸಲಹೆಯ ಮೇರೆಗೆ ಮತ್ತೆ ಜೊತೆಯಾಗಿ ಸಂಸಾರ ನಡೆಸುವ ವಾಗ್ದಾನ ನೀಡಿ ಒಂದಾಗಿದ್ದಾರೆ. ಕೊಳ್ಳೇಗಾಲ ನ್ಯಾಯಾಲಯದಲ್ಲೂ ಬೇರೆಯಾಗಲು ಬಯಸಿದ್ದ ದಂಪತಿ ಮತ್ತೆ ಜೊತೆಯಾಗಿದ್ದಾರೆ.
37 ವರ್ಷಗಳ ಬಳಿಕ ಇತ್ಯರ್ಥ: ಚಾಮರಾಜನಗರದ ದೇವಾಂಗ ಬೀದಿಯ ನಿವಾಸಿ ಶಾಂತಲಕ್ಷ್ಮಿ ಹಾಗೂ ಸತ್ಯಭಾಮ ಎಂಬುವವರ ನಡುವೆ ಜಮೀನಿಗೆ ಸಂಬಂಧಿಸಿದಂತೆ 1987ರಿಂದಲೇ ದಾವೆ ನಡೆಯುತ್ತಿತ್ತು. ಎರಡು ಬಾರಿ ಹೈಕೋರ್ಟ್‌ಗೂ ಈ ಪ್ರಕರಣ ಹೋಗಿತ್ತು.
ಈ ಹಿಂದೆ ಲೋಕಅದಲಾತ್‌ನಲ್ಲಿ ಈ ಪ್ರಕರಣವನ್ನು ಪರಿಹರಿಸುವ ಪ್ರಯತ್ನ ನಡೆದಿತ್ತು. ಆದರೆ, ಅದು ವಿಫಲವಾಗಿತ್ತು. ಜೆಎಂಎಫ್‌ಸಿ ನ್ಯಾಯಾಧೀಶರಾದ ಚಂಪಕಾ ಮತ್ತು ಹಿರಿಯ ವಕೀಲರ ಸಲಹೆಯ ಮೇರೆಗೆ ಈ ಪ್ರಕರಣವನ್ನು ಶನಿವಾರ ಅದಾಲತ್‌ನಲ್ಲಿ ಕೈಗೆತ್ತಿಕೊಳ್ಳಲಾಗಿದ್ದು, ಎರಡೂ ಕಡೆಯವರು ರಾಜಿಗೆ ಒಪ್ಪಿಕೊಂಡಿದ್ದರಿಂದ ಪ್ರಕರಣ ಇತ್ಯರ್ಥವಾಗಿದೆ.
ಒಂದಾದ ದಂಪತಿ: ತಾಲ್ಲೂಕಿನ ಹೊಂಗನೂರು ಗ್ರಾಮದ ಶಿವಕುಮಾರ್ ಹಾಗೂ ರಾಮನಗರ ಜಿಲ್ಲೆಯ ಬಿತ್ತನಗೆರೆ ಗ್ರಾಮದ ರಾಜೇಶ್ವರಿ ದಂಪತಿ ನಡುವೆ ಭಿನ್ನಾಭಿಪ್ರಾಯ ತಲೆ ದೋರಿ ಪರಸ್ಪರ ಪ್ರತ್ಯೇಕವಾಗಲು ಬಯಸಿದ್ದರು.
ಈ ಸಂಬಂಧ ಶಿವಕುಮಾರ್ ಅವರು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಲ್ಲಿ ವ್ಯಾಜ್ಯ ಪೂರ್ವ ಪ್ರಕರಣ ದಾಖಲಿಸಿದ್ದರು. ಲೋಕ ಅದಾಲತ್‌ನಲ್ಲಿ ಪ್ರಾಧಿಕಾರದ ಸದಸ್ಯಕಾರ್ಯದರ್ಶಿ ಶ್ರೀಧರ ಎಂ ಹಾಗೂ ಹಿರಿಯ ವಕೀಕಲರು ಮಧ್ಯಸ್ಥಿತಿಕೆ ವಹಿಸಿ ಇಬ್ಬರಿಗೂ ತಿಳಿ ಹೇಳಿದ್ದು, ದಂಪತಿ ಮತ್ತೆ ಜೊತೆಯಾಗಿ ಬಾಳುವ ತೀರ್ಮಾನ ಕೈಗೊಂಡಿದ್ದಾರೆ.
ಕೊಳ್ಳೇಗಾಲ ನ್ಯಾಯಾಲಯದಲ್ಲೂ ಇದೇ ರೀತಿಯ ಪ್ರಕರಣ ನಡೆದಿದೆ.
ಕೊಳ್ಳೇಗಾಲದ ನಿವಾಸಿ ರಜನಿಕಾಂತ್ ಎಂಬುವವರು ತಮ್ಮ ಪತ್ನಿ ಜಯಶ್ರೀ ಅವರಿಂದ ವಿಚ್ಛೇದನ ಕೋರಿ ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು.
ಈ ಪ್ರಕರಣ ಶನಿವಾರದ ಲೋಕ ಅದಾಲತ್‌ನಲ್ಲಿ ವಿಚಾರಣೆಗೆ ಬಂದಿದ್ದು, ನ್ಯಾಯಾಧೀಶರು ಹಾಗೂ ವಕೀಲರ ಸಲಹೆಯ ನಂತರ ಇಬ್ಬರೂ ತಮ್ಮ ವೈಮನಸ್ಸನ್ನು ಮರೆತು ಒಂದಾಗಿ ಬಾಳಲು ಒಪ್ಪಿಕೊಂಡಿದ್ದಾರೆ ಎಂದು ಪ್ರಾಧಿಕಾರದ ಮೂಲಗಳು ತಿಳಿಸಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.