ಬುಧವಾರ, 28 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2023 ಮರೆಯುವ ಮುನ್ನ | ಚಾಮರಾಜನಗರ: ದರೋಡೆ, ಅಪರಾಧ ಕೃತ್ಯಕ್ಕೆ ಬೀಳದ ಕಡಿವಾಣ..

Published 31 ಡಿಸೆಂಬರ್ 2023, 6:31 IST
Last Updated 31 ಡಿಸೆಂಬರ್ 2023, 6:31 IST
ಅಕ್ಷರ ಗಾತ್ರ

ಚಾಮರಾಜನಗರ: ಕಳ್ಳತನ, ದರೋಡೆ, ಸಾಮೂಹಿಕ ಆತ್ಮಹತ್ಯೆಯಂತಹ ಪ್ರಕರಣಗಳಿಗೆ ಜಿಲ್ಲೆ ಸಾಕ್ಷಿಯಾಯಿತು. ಚಾಮರಾಜನಗರ, ಕೊಳ್ಳೇಗಾಲದಲ್ಲಿ ಲಕ್ಷಾಂತರ ಮೌಲ್ಯದ ಆಭರಣಗಳ, ನಗದು ಕಳ್ಳತನ ಪ್ರಕರಣಗಳು ವರದಿಯಾದವು. 

ಶೇ 48ರಷ್ಟು ಅರಣ್ಯ ಪ್ರದೇಶ ಹೊಂದಿರುವ ಜಿಲ್ಲೆಯಲ್ಲಿ ಈ ವರ್ಷವೂ ಮಾನವ ವನ್ಯಜೀವಿ ಸಂಘರ್ಷ ಪ್ರಕರಣಗಳು ವರದಿಯಾಗುತ್ತಲೇ ಇದ್ದವು. ಆನೆ, ಹುಲಿಯಂತಹ ದಾಳಿಗಳಿಗಳಿಂದ ಪ್ರಾಣ ಹಾನಿ, ಬೆಳೆ ಹಾನಿ ನಡೆದವು. ಬೇಟೆಗಾರರ ಉಪಟಳ ನಿಯಂತ್ರಣ ಅರಣ್ಯ ಇಲಾಖೆಗೆ ಸವಾಲಾಗಿ ಪರಿಣಮಿಸಿದವು. 

ಕೊಳ್ಳೇಗಾಲ ನಗರದ ಬಸವೇಶ್ವರನಗರದಲ್ಲಿರುವ ಶ್ರೀದತ್ತ ಮೆಡಿಕಲ್‌ನ ಮಾಲೀಕ ವಿನಯ್‌ ಮನೆಯಲ್ಲಿ ಜನವರಿ 18ರ ತಡರಾತ್ರಿ  ₹20 ಲಕ್ಷ ಮೌಲ್ಯದ 490 ಗ್ರಾಂನಷ್ಟು ಚಿನ್ನಾಭರಣ ಮತ್ತು ₹49 ಸಾವಿರ ನಗದು ಕಳವಾಯಿತು. ಎರಡು ವಾರಗಳ ಬಳಿಕ ಮೂವರು ಆರೋಪಿಗಳನ್ನು ಬಂಧಿಸಿ, ಚಿನ್ನಾಭರಣ ವಶಪಡಿಸಿಕೊಳ್ಳುವಲ್ಲಿ ಪೊಲೀಸರು ಯಶಸ್ವಿಯಾದರು. 

ಚಾಮರಾಜನಗರ ಭಗೀರಥ ನಗರದ ಮನೆಯೊಂದಕ್ಕೆ ಫೆ.1ರ ನಸುಕಿನಲ್ಲಿ ಕನ್ನ ಹಾಕಿದ ಕಳ್ಳರು 300 ಗ್ರಾಂ ಚಿನ್ನವನ್ನು ಕದ್ದೊಯ್ದಿದ್ದರು. ಫೆ.1ರ ರಾತ್ರಿ ನಗರದ ವಿವೇಕನಗರ ಬಡಾವಣೆಯಲ್ಲಿ ವಕೀಲರೊಬ್ಬರ ಮನೆಗೆ ನುಗ್ಗಿದ್ದ ಕಳ್ಳರು  600 ಗ್ರಾಂ ಚಿನ್ನ, 5.5 ಕೆಜಿ ಬೆಳ್ಳಿ ವಸ್ತುಗಳನ್ನು ದೋಚಿದ್ದರು. ಎರಡೂ ಪ್ರಕರಣಗಳನ್ನು ಭೇದಿಸಿದ್ದ ಪೊಲೀಸರು ವಾರಸುದಾರರಿಗೆ ಚಿನ್ನ, ಬೆಳ್ಳಿ ವಸ್ತುಗಳನ್ನು ಹಸ್ತಾಂತರಿಸಿದ್ದರು. 

ಕೈದಿ ಪರಾರಿ: ಜಿಲ್ಲಾ ಕಾರಾಗೃಹದಲ್ಲಿದ್ದ ವಿಚಾರಣಾಧೀನ ಕೈದಿ ಸುರೇಶ ಅವರು ಆಗಸ್ಟ್‌ 4ರಂದು ವಿಚಾರಣೆಗಾಗಿ ಸತ್ಯಮಂಗಲದ ನ್ಯಾಯಾಲಯಕ್ಕೆ ಕರೆದೊಯ್ಯುತ್ತಿದ್ದಾಗ ದಾರಿ ಮಧ್ಯೆ ಪೊಲೀಸರಿಂದ ತಪ್ಪಿಸಿಕೊಂಡಿದ್ದರು. ಒಂದು ದಿನದ ನಂತರ ಕವಲಂದೆ ಬಳಿ ರೈಲಿನಲ್ಲಿ ಸುರೇಶ ಪತ್ತೆಯಾಗಿದ್ದರು. 

ಅಕ್ಟೋಬರ್‌ 18ರಂದು ಚಾಮರಾಜನಗರದ ಜೋಡಿ ರಸ್ತೆಯಲ್ಲಿರುವ ಕೆನರಾ ಬ್ಯಾಂಕ್‌ ಶಾಖೆಯಲ್ಲಿ ನಗದು ಕೌಂಟರ್‌ ಬಳಿಯಿಂದ ಅಪರಿಚಿತ ವ್ಯಕ್ತಿ ₹5 ಲಕ್ಷ ನಗದನ್ನು ಅನಾಯಾಸವಾಗಿ ಎತ್ತಿಕೊಂಡು ಹೋಗಿದ್ದರು. ನಾಲ್ವರ ತಂಡ ಈ ಕೃತ್ಯ ಎಸಗಿದೆ ಎಂದು ಪೊಲೀಸರು ಹೇಳಿದ್ದರು. ಆರೋಪಿಗಳು ಇನ್ನೂ ಪತ್ತೆಯಾಗಿಲ್ಲ. 

ನವೆಂಬರ್‌ 30ರಂದು ಚಾಮರಾಜನಗರದಲ್ಲಿ ನಡೆದ ಸನ್ಮಾನ ಸಮಾರಂಭದಲ್ಲಿ ಮಹಾನಾಯಕ ಧಾರಾವಾಹಿಯಲ್ಲಿರಮಾಭಾಯಿ ಪಾತ್ರಧಾರಿ ನಾರಾಯಣಿ ವರ್ಣೆ ಅವರಿಗೆ ತೊಡಿಸಿದ್ದ ಬೆಳ್ಳಿ ಕಿರೀಟವನ್ನು ಕಿಡಿಗೇಡಿಗಳು ವೇದಿಕೆಯಿಂದಲೇ ಎಗರಿಸಿದ್ದರು. 600 ಗ್ರಾಂ ತೂಕದ ಕಿರೀಟ ಇನ್ನೂ ಪತ್ತೆಯಾಗಿಲ್ಲ.

ನಗರದ ಚಿಕ್ಕಅಂಗಡಿ ಬೀದಿ ರಸ್ತೆಯಲ್ಲಿರುವ ನಂದಿನಿ ಹಾಲಿನ ಮಾರಾಟ ಮಳಿಗೆಗೆ ಡಿ.2ರ ನಸುಕಿನಲ್ಲಿ ಕನ್ನ ಹಾಕಿದ್ದ ಇಬ್ಬರು ಕಳ್ಳರು ₹6.50 ಲಕ್ಷ ನಗದು ದೋಚಿದ್ದರು. ಆರೋಪಿಗಳು ಇನ್ನೂ ಪತ್ತೆಯಾಗಿಲ್ಲ. 

ದರೋಡೆ ಪ್ರಕರಣಗಳು: ಗುಂಡ್ಲುಪೇಟೆ ತಾಲ್ಲೂಕಿನ ಬೇಗೂರು ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಒಂದೂವರೆ ತಿಂಗಳ ಅವಧಿಯಲ್ಲಿ ಎರಡು ದರೋಡೆ ಪ್ರಕರಣಗಳು ವರದಿಯಾಗಿದ್ದವು. ಎರಡೂ ಪ್ರಕರಣಗಳಲ್ಲಿ ಚಿನ್ನದ ವ್ಯಾಪಾರಿಗಳ ವಾಹನವನ್ನು ಅಡ್ಡಗಟ್ಟಿ ತಲಾ ₹40 ಲಕ್ಷದಷ್ಟು ನಗದು ಹಣ ದೋಚಲಾಗಿತ್ತು. ಚಿನ್ನದ ವ್ಯಾಪಾರಿಗಳು ಮತ್ತು ದರೋಡೆಕೋರರು ಕೇರಳದವರಾಗಿದ್ದರು. 

ಮೊದಲ ಪ್ರಕರಣ ಆಗಸ್ಟ್‌ 11ರಂದು ಬೆಳಿಗ್ಗೆಯೇ ನಡೆದಿತ್ತು. ಸುಖದೇವ್‌ ಎಂಬ ಕೇರಳದ ಚಿನ್ನದ ವ್ಯಾಪಾರಿ ಕಾರನ್ನು ಅಡ್ಡಗಟ್ಟಿದ 10 ಮಂದಿ ದರೋಡೆಕೋರರು, ವ್ಯಾಪಾರಿ ಮತ್ತು ಚಾಲಕನನ್ನು ಥಳಿಸಿ, ₹40 ಲಕ್ಷ ನಗದು ಮತ್ತು ಕಾರು ಸಹಿತ ಪರಾರಿಯಾಗಿದ್ದರು. ಈ ಪ್ರಕರಣದಲ್ಲಿ ಎಂಟು ಮಂದಿಯನ್ನು ಪೊಲೀಸರು ಬಂಧಿಸಿದ್ದರು. 

ಇನ್ನೊಂದು ಪ್ರಕರಣ ಸೆ.27ರ ಮಧ್ಯರಾತ್ರಿ ನಡೆದಿತ್ತು. ಈ ‍ಪ್ರಕರಣದಲ್ಲಿ ಇನ್ನೊಂದು ದರೋಡೆಕೋರರ ಗುಂಪು ಕೇರಳದ ಚಿನ್ನದ ರಹೀಂ ಅವರ ಕಾರನ್ನು ಅಡ್ಡಗಟ್ಟಿ ಹಲ್ಲೆ ಮಾಡಿ, ಅವರ ಬಳಿ ಇದ್ದ ₹40 ಲಕ್ಷ ನಗದು, ಆ್ಯಪಲ್‌ ವಾಚ್‌, ಮೊಬೈಲ್‌ ಫೋನ್‌ ದೋಚಿತ್ತು. ಎರಡು ವಾರಗಳ ನಂತರ ಪೊಲೀಸರು 10 ಮಂದಿಯನ್ನು ಬಂಧಿಸಿದ್ದರು. ₹20 ಲಕ್ಷ ನಗದನ್ನೂ ವಶಪಡಿಸಿಕೊಂಡಿದ್ದರು. 

ಬೆಚ್ಚಿ ಬೀಳಿಸಿದ ಸಾಮೂಹಿಕ ಆತ್ಮಹತ್ಯೆ: ಜೂನ್‌ 23ರಂದು ಚಾಮರಾಜನಗರ ತಾಲ್ಲೂಕಿನ ಬೇಡರಪುರ ಗ್ರಾಮದಲ್ಲಿ ಆಸ್ತಿ ವಿವಾದದಿಂದ ಮನನೊಂದು ರೈತ ಮಹದೇವಸ್ವಾಮಿ (45), ಅವರ ಪತ್ನಿ ಸವಿತಾ (36) ಮತ್ತು ಮಗಳು ಸಿಂಚನಾ (14) ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಗ್ರಾಮವನ್ನು ಬೆಚ್ಚಿ ಬೀಳಿಸಿತ್ತು. 

ಸೆ.15ರಂದು ಗುಂಡ್ಲುಪೇಟೆ ತಾಲ್ಲೂಕಿನ ತೆರಕಣಾಂಬಿ ಹೋಬಳಿಯ ಬೊಮ್ಮನಹಳ್ಳಿ ಗ್ರಾಮದ ಹೊರ ವಲಯದ ಜಮೀನಿನಲ್ಲಿ ಮೇಘ (24) ಮತ್ತು ಅವರ ಇಬ್ಬರು ಹೆಣ್ಣುಮಕ್ಕಳ ಪುನ್ವಿತಾ (06), ಮನ್ವಿತಾ (03) ಮೃತದೇಹಗಳು ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಪತ್ತೆಯಾಯಿತು. ಕೌಟುಂಬಿಕ ಕಲಹದ ಕಾರಣಕ್ಕೆ ತಾಯಿ ಇಬ್ಬರು ಮಕ್ಕಳೊಂದಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿತ್ತಾದರೂ, ಮಹಿಳೆಯ ಪೋಷಕರು ಇದು ಆತ್ಮಹತ್ಯೆಯಲ್ಲ, ಕೊಲೆ ಎಂದು ದೂರಿದ್ದರು. 

ಅನುಮಾನ ಹುಟ್ಟುಹಾಕಿದ ಸಾವು: ತಾಲ್ಲೂಕಿನ ದಡದಹಳ್ಳಿಯ ರಮೇಶ್‌ ಎಂಬುವರ ಸಾವಿನ ಪ್ರಕರಣ ಅನುಮಾನ ಹುಟ್ಟುಹಾಕಿತ್ತು. ದಲಿತ ಸಂಘಟನೆಗಳು, ಇದು ಅಪಘಾತ ಅಲ್ಲ ಕೊಲೆ ಎಂದು ಆರೋಪಿಸಿದ್ದರು. ಆ.30ರ ರಾತ್ರಿ ಗುಂಡ್ಲುಪೇಟೆ ರಸ್ತೆಯಲ್ಲಿ ಸೊಂಟ ಹಾಗೂ ಮರ್ಮಾಂಗ ಗಾಯಗೊಂಡ ಸ್ಥಿತಿಯಲ್ಲಿ ರಮೇಶ್‌ ಕಂಡು ಬಂದಿದ್ದರು. 

ವಿಧಾನಪರಿಷತ್‌ ಸದಸ್ಯ ಸಿ.ಪಿ.ಯೋಗೇಶ್ವರ್‌ ಅವರ ಬಾವ ಮಹದೇವಯ್ಯ ಅವರನ್ನು ಹತ್ಯೆ ಮಾಡಿ ಮೃತದೇಹವನ್ನು ಹನೂರು ತಾಲ್ಲೂಕಿನ ರಾಮಾಪುರ ಮತ್ತು ನಾಲ್‌ರೋಡ್‌ ನಡುವಿನ ರಸ್ತೆ ಬದಿ, ಅರಣ್ಯದಲ್ಲಿ ಎಸೆಯಲಾಗಿತ್ತು. ತನಿಖೆ ನಡೆಸಿದ್ದ ಚನ್ನಪಟ್ಟಣ ಪೊಲೀಸರು ಆರೋಪಿಯನ್ನು ತಮಿಳುನಾಡಿನಲ್ಲಿ ಬಂಧಿಸಿದ್ದರು. 

ವರ್ಷದ ಕೊನೆಯಲ್ಲಿ, ಕೊಳ್ಳೇಗಾಲದ ಆದರ್ಶ ನಗರದಲ್ಲಿ ವಾಸವಿದ್ದ ಮಹಿಳೆ ರೇಖಾ ಅವರ ಅನುಮಾನಾಸ್ಪದ ಸಾವು ದೊಡ್ಡ ಸುದ್ದಿಯಾಯಿತು. ಡಿ.16ರಂದು ಮನೆಯಲ್ಲಿ ಆಕೆಯ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಯಿತು. ಮಗಳು ನಾಪತ್ತೆಯಾಗಿದ್ದಳು. ನಂತರ ಮಗಳು ಪತ್ತೆಯಾದಳು. ಕೊಲೆ ಎಂದು ಹೇಳಲಾಗುತ್ತಿದ್ದು, ಪ್ರಕರಣದ ಆರೋಪಿಗಳು ತಲೆ ಮರೆಸಿಕೊಂಡಿದ್ದಾರೆ. 

ಅಂಬೇಡ್ಕರ್‌ಗೆ ಅಪಮಾನ ಆರೋಪ: ಚಾಮರಾಜನಗರ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಹಿಂದಿನ ಡೀನ್‌ ಡಾ.ಜಿ.ಎಂ.ಸಂಜೀವ್‌ ಅವರು ಡಾ.ಬಿ.ಆರ್‌.ಅಂಬೇಡ್ಕರ್‌ ಅವರಿಗೆ ಅಪಮಾನ ಮಾಡಿದ್ದಾರೆ ಎಂದು ಮೇ 19ರಂದು ಆರೋಪಿಸಿ ಬಿಎಸ್‌ಪಿ ಮತ್ತು ದಲಿತ ಸಂಘಟನೆಗಳ ಕಾರ್ಯಕರ್ತರು ಸಿಮ್ಸ್‌ ಆವರಣದಲ್ಲಿ ಡೀನ್‌ ಅವರನ್ನು ಅಡ್ಡಹಾಕಿ ಅವರ ಮೇಲೆ ಕೊಳಚೆ ನೀರು ಎರಚಿ, ಕಾರನ್ನು ಜಖಂ ಗೊಳಿಸಿದರು. 

ಮಾನವ –ವನ್ಯಜೀವಿ ಸಂಘರ್ಷ : ಅರಣ್ಯ ಅಪರಾಧ ಪ್ರಕರಣ

ಜ.19: ಸತ್ಯಮಂಗಲ ಅರಣ್ಯ ಪ್ರದೇಶದಿಂದ ಚಾಮರಾಜನಗರ ತಾಲ್ಲೂಕಿನ ವಡ್ಗಲ್‌ಪುರ ಕಡೆ ಬಂದ ಆನೆಗಳನ್ನು ಅಟ್ಟಿಸುವ ಸಂದರ್ಭದಲ್ಲಿ ಆನೆಯೊಂದು ನಡೆಸಿದ ದಾಳಿಯಲ್ಲಿ ವಾಚರ್‌ ನಂಜಯ್ಯ ಮೃತಪಟ್ಟರು.

ಫೆ.7: ಬಂಡೀಪುರ ಕುಂದುಕೆರೆ ವಲಯದ ಕೆಬ್ಬೇಪುರ ಬಳಿ ಕೆರೆಯಲ್ಲಿ ಹುಲಿಯ ಮೃತದೇಹ ಪತ್ತೆಯಾಯಿತು. ವಿದ್ಯುತ್‌ ಆಘಾತದಿಂದ ಮೃತಪಟ್ಟಿದ್ದ ಹುಲಿಯನ್ನು ದುಷ್ಕರ್ಮಿಗಳು ತಂದು ನೀರಿಗೆ ಎಸೆದಿದ್ದರು ಎಂದು ತನಿಖೆಯಿಂದ ತಿಳಿದು ಬಂತು

ಜೂನ್‌  26: ಹನೂರು ತಾಲ್ಲೂಕಿನ ಕಗ್ಗಲಿಗುಂದಿ ಗ್ರಾಮದಲ್ಲಿ ಮನೆ ಮುಂದೆ ಕುಳಿತಿದ್ದ ಸುಶೀಲಾ ಎಂಬ ಬಾಲಕಿ ಮೇಲೆ ಚಿರತೆ ದಾಳಿ ಮಾಡಿತ್ತು. ಗಾಯಗೊಂಡಿದ್ದ ಬಾಲಕಿ 20 ದಿನಗಳ ಕಾಲ ಬಳಿಕ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಳು. ಬಾಲಕಿ ಮೇಲೆ ದಾಳಿ ಮಾಡಿದ ಎರಡು ದಿನಗಳ ನಂತರ ಹನೂರು ತಾಲ್ಲೂಕಿನ ಕಂಚಗಳ್ಳಿ ಗ್ರಾಮದಲ್ಲಿ ರೈತರೊಬ್ಬರ ಮೇಲೆ ದಾಳಿ ಮಾಡಿತ್ತು. ಬಳಿಕ ಯಳಂದೂರು ತಾಲ್ಲೂಕಿನ ಮಲ್ಲಿಗೆಹಳ್ಳಿ ಗ್ರಾಮದಲ್ಲಿ ಬಾಲಕನ ಮೇಲೆ ದಾಳಿ ಮಾಡಿ ಗಾಯಗೊಳಿಸಿತ್ತು. 36 ದಿನಗಳ ಕಾರ್ಯಾಚರಣೆ ನಂತರ ಚಿರತೆಯನ್ನು ಸೆರೆ ಹಿಡಿಯಲಾಯಿತು. 

ಜುಲೈ 25: ಚಾಮರಾಜನಗರ ತಾಲ್ಲೂಕಿನ ಎತ್ತೇಗೌಡನ ದೊಡ್ಡಿಯಲ್ಲಿ ಏ.18ರಂದು ಆನೆದಾಳಿಯಲ್ಲಿ ಗಾಯಗೊಂಡಿದ್ದ ಬಾಲಕ ಸಾವು.

ಆ.14: ಬಂಡೀಪುರದ ಮೇಲುಕಾಮನಹಳ್ಳಿಯ ಕಾಲೊನಿಯ ಹೊರಗಡೆ ಬಹಿರ್ದೆಸೆ ಮಾಡಲು ಹೋಗಿದ್ದ ಜೇನುಕುರುಬ ಹಾಡಿಯ ಮಾರ ಎಂಬುವವರ ಮೇಲೆ ಆನೆ ದಾಳಿ ಮಾಡಿ ತೀವ್ರವಾಗಿ ಗಾಯಗೊಳಿಸಿತು. ಇತ್ತೀಚೆಗೆ ಅವರು ಮೃತರಾದರು.  

ಆ.19: ಮಹದೇಶ್ವರ ಬೆಟ್ಟದ ನಾಗಮಲೆಗೆ ರಾತ್ರಿ ನಡೆದುಕೊಂಡು ಹೋಗುತ್ತಿದ್ದ ಬೆಂಗಳೂರಿನ ಗೋವಿಂದರಾಜು ಆನೆ ದಾಳಿಯಲ್ಲಿ ಮೃತಪಟ್ಟರು.  

ಆ.29: ಬಿಆರ್‌ಟಿಯ ಬೈಲೂರು ವನ್ಯಜೀವಿ ವಲಯದಲ್ಲಿ ಹುಲಿಯೊಂದರ ಮೃತದೇಹ ಪತ್ತೆ

ನ.5: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಗುಂಡೇಟಿಗೆ ಶಂಕಿತ ಬೇಟೆಗಾರ ಸಾವು

ನ.24: ಬಂಡೀಪುರ ಮದ್ದೂರು ಕಾಲೊನಿ ಬಳಿ ನಿಶ್ಶಕ್ತಿಗೊಂಡ ಗಂಡು ಹುಲಿ ಸಾವು 

ನ.31: ಬಂಡೀಪುರದ ರಾಂಪುರ ಆನೆ ಶಿಬಿರದಲ್ಲಿ ಅಕ್ಕಿರಾಜ ಎಂಬ ಗಂಡಾನೆ ದಿಢೀರ್‌ ಕುಸಿದು ಸಾವು

ಡಿ.8: ಚಾಮರಾಜನಗರ ತಾಲ್ಲೂಕಿನ ಕೊತ್ತಲವಾಡಿ ಬಳಿ ಹುಲುಗನಮುರಡಿ ದೇವಾಲಯದ ಬೆಟ್ಟದ ತಪ್ಪಲಿನಲ್ಲಿ ಎರಡು ಹುಲಿಗಳ ಕಳೇಬರ ಕೊಳೆತ ಸ್ಥಿತಿಯಲ್ಲಿ ಪತ್ತೆ

ಡಿ.12: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಆಡಿನ ಕಣಿವೆ ಹಾಡಿ ಬಳಿಯ ಅರಣ್ಯ ಪ್ರದೇಶದಲ್ಲಿ ಪ್ರಾಣಿಯೊಂದರ ದಾಳಿಯಲ್ಲಿ ಗಿರಿಜನ ಸಮುದಾಯದ ಬಸವಯ್ಯ ಸಾವು. ದಾಳಿ ಮಾಡಿರುವುದು ಹುಲಿಯೇ ಚಿರತೆಯೇ ಎಂದು ಸ್ಪಷ್ಟವಾಗಿಲ್ಲ.

ಕೊತ್ತಲವಾಡಿ ಗ್ರಾಮದ ಬಳಿ ಹುಲಿಯ ಕಳೇಬರ
ಕೊತ್ತಲವಾಡಿ ಗ್ರಾಮದ ಬಳಿ ಹುಲಿಯ ಕಳೇಬರ
36 ದಿನಗಳ ಕಾರ್ಯಾಚರಣೆ ನಂತರ ಕೊಳ್ಳೇಗಾಲ ತಾಲ್ಲೂಕಿನ ಕುಂತೂರು ಬೆಟ್ಟದಲ್ಲಿ ಬೋನಿಗೆ ಬಿದ್ದ ಚಿರತೆ
36 ದಿನಗಳ ಕಾರ್ಯಾಚರಣೆ ನಂತರ ಕೊಳ್ಳೇಗಾಲ ತಾಲ್ಲೂಕಿನ ಕುಂತೂರು ಬೆಟ್ಟದಲ್ಲಿ ಬೋನಿಗೆ ಬಿದ್ದ ಚಿರತೆ
ಕಾವೇರಿ ವನ್ಯಧಾಮದಲ್ಲಿ ಬಿಳಿ ಕಡವೆ ಇರುವುದು ಈ ವರ್ಷ ಪತ್ತೆಯಾಯಿತು
ಕಾವೇರಿ ವನ್ಯಧಾಮದಲ್ಲಿ ಬಿಳಿ ಕಡವೆ ಇರುವುದು ಈ ವರ್ಷ ಪತ್ತೆಯಾಯಿತು
ಮಲೆಮಹದೇಶ್ವರ ವನ್ಯಧಾಮದ ಪಿ.ಜಿ.ಪಾಳ್ಯ ವಲಯದಲ್ಲಿ ಡಿ.2ರಂದು ಸಫಾರಿಗೆ ಶಾಸಕ ಎಂ.ಆರ್‌.ಮಂಜುನಾಥ್‌ ಶನಿವಾರ ಚಾಲನೆ ನೀಡಿದರು. ಡಿಸಿಎಫ್‌ ಸಂತೋಷ್‌ಕುಮಾರ್‌ ಅಧಿಕಾರಿಗಳು ಇದ್ದರು
ಮಲೆಮಹದೇಶ್ವರ ವನ್ಯಧಾಮದ ಪಿ.ಜಿ.ಪಾಳ್ಯ ವಲಯದಲ್ಲಿ ಡಿ.2ರಂದು ಸಫಾರಿಗೆ ಶಾಸಕ ಎಂ.ಆರ್‌.ಮಂಜುನಾಥ್‌ ಶನಿವಾರ ಚಾಲನೆ ನೀಡಿದರು. ಡಿಸಿಎಫ್‌ ಸಂತೋಷ್‌ಕುಮಾರ್‌ ಅಧಿಕಾರಿಗಳು ಇದ್ದರು
ಬೇಗೂರಿನಲ್ಲಿ ನಡೆದ 2ನೇ ದರೋಡೆ ಪ್ರಕರಣದ ಬಂಧಿತ ಆರೋಪಿಗಳಿಂದ ಪೊಲೀಸರು ವಶಪಡಿಸಿಕೊಂಡಿರುವ ನಗದು ಮತ್ತು ಕಾರುಗಳು
ಬೇಗೂರಿನಲ್ಲಿ ನಡೆದ 2ನೇ ದರೋಡೆ ಪ್ರಕರಣದ ಬಂಧಿತ ಆರೋಪಿಗಳಿಂದ ಪೊಲೀಸರು ವಶಪಡಿಸಿಕೊಂಡಿರುವ ನಗದು ಮತ್ತು ಕಾರುಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT