ಶುಕ್ರವಾರ, ಜುಲೈ 30, 2021
28 °C
19 ರಿಂದ 21ರವರೆಗೆ ಪ್ರವೇಶ ನಿಷೇಧಿಸಿ ಜಿಲ್ಲಾಧಿಕಾರಿ ಆದೇಶ

ಮಹದೇಶ್ವರ ಬೆಟ್ಟ: ಅಮಾವಾಸ್ಯೆ ವಿಶೇಷ ಪೂಜೆ, ಭಕ್ತರಿಗೆ‌ ನಿರ್ಬಂಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಾಮರಾಜನಗರ: ಜಿಲ್ಲೆಯ ಪ್ರಸಿದ್ಧ ಯಾತ್ರಾ ಸ್ಥಳ ಮಹದೇಶ್ವರ ಬೆಟ್ಟದ ಮಲೆಮಹದೇಶ್ವರ ಸ್ವಾಮಿ ದೇವಾಲಯದಲ್ಲಿ ಶುಕ್ರವಾರದಿಂದ (ಜೂನ್ 19) 21ರವರೆಗೆ ಎಣ್ಣೆ ಮಜ್ಜನ ಸೇವೆ ಹಾಗೂ ಅಮಾವಾಸ್ಯೆ ವಿಶೇಷ ಪೂಜೆಗಳು ನಡೆಯಲಿದ್ದು, ಕೋವಿಡ್-19 ಮುಂಜಾಗ್ರತಾ ಕ್ರಮವಾಗಿ ಈ ಅವಧಿಯಲ್ಲಿ ಭಕ್ತರ ಸಂದಣಿ ತಪ್ಪಿಸುವುದಕ್ಕಾಗಿ ಮೂರು‌ ದಿನಗಳ ಕಾಲ ಭಕ್ತರ ಪ್ರವೇಶವನ್ನು ನಿಷೇಧಿಸಿ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ಆದೇಶ ಹೊರಡಿಸಿದ್ದಾರೆ.

ಅಮಾವಾಸ್ಯೆ ದಿನದ ವಿಶೇಷ ಪೂಜೆಗಳು, ಭಾನುವಾರ ಮತ್ತು ರಜಾ ದಿನಗಳಲ್ಲಿ ಕ್ಷೇತ್ರಕ್ಕೆ ಬರುವ ಭಕ್ತಾದಿಗಳ ಸಂಖ್ಯೆಯಲ್ಲಿ ಭಾರಿ ಹೆಚ್ಚಳ ಕಂಡು ಬರುತ್ತದೆ. 

ಮೂರು‌ ದಿನಗಳ ಅವಧಿಯಲ್ಲಿ 50 ಸಾವಿರಕ್ಕೂ ಹೆಚ್ಚು ಜನರು ಬರುವ ನಿರೀಕ್ಷೆ ಇರುವುದರಿಂದ, ಕೋವಿಡ್-19 ತಡೆಗಾಗಿ ಸುರಕ್ಷಿತ ಅಂತರ ಕಾಪಾಡಿಕೊಂಡು ಭಕ್ತರನ್ನು ವ್ಯವಸ್ಥಿತವಾಗಿ ನಿರ್ವಹಿಸಲು ಕಷ್ಟವಿರುವುದರಿಂದ ಮೂರು‌ದಿನಗಳ ಕಾಲ ದೇವಾಲಯ ಹಾಗೂ ಪ್ರಾಧಿಕಾರದ ಆವರಣಕ್ಕೆ ಸಾರ್ವಜನಿಕರು ಹಾಗೂ ಭಕ್ತರ ಪ್ರವೇಶವನ್ನು ನಿಷೇಧಿಸಬೇಕು ಎಂದು ಮಲೆಮಹದೇಶ್ವರ ಸ್ವಾಮಿ‌ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವಸ್ವಾಮಿ ಅವರು ಪತ್ರದ ಮೂಲಕ ಮನವಿ‌ ಮಾಡಿದ್ದರು.

ಇದರ ಆಧಾರದಲ್ಲಿ, ಸಾರ್ವಜನಿಕರ ಹಾಗೂ ಭಕ್ತರ ಆರೋಗ್ಯದ ದೃಷ್ಟಿಯಿಂದ 19ರಿಂದ 21ರವರೆಗೆ ದೇವಾಲಯಕ್ಕೆ ಸಾರ್ವಜನಿಕರ ಹಾಗೂ ಭಕ್ತರ ಪ್ರವೇಶ ನಿರ್ಬಂಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ಆದೇಶದಲ್ಲಿ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು