ಮಂಗಳವಾರ, ಮೇ 17, 2022
29 °C
ಮಕರ ಸಂಕ್ರಾಂತಿಯ ಮಾರನೇ ದಿನ ನಡೆಯುತ್ತದೆ ಜಾನುವಾರುಗಳ ಹಬ್ಬ

ನಮ್ಮೂರು ನಮ್ಮ ಜಿಲ್ಲೆ: ಸಂಕ್ರಾಂತಿ ಮನುಕುಲಕ್ಕಷ್ಟೇ ಅಲ್ಲ, ಗೋವುಗಳಿಗೂ ಹಬ್ಬ

ಜಿ.ಪ್ರದೀಪ್‌ ಕುಮಾರ್‌ Updated:

ಅಕ್ಷರ ಗಾತ್ರ : | |

Prajavani

ಮಹದೇಶ್ವರ ಬೆಟ್ಟ: ಸಂಕ್ರಾಂತಿ ಬರೀ ಮನುಕುಲದ ಹಬ್ಬ ಅಲ್ಲ. ಜಾನುವಾರುಗಳ ಹಬ್ಬವೂ ಹೌದು. ಬೆಟ್ಟದ ಸುತ್ತಮುತ್ತ ಸಂಕ್ರಾಂತಿಯ ಮಾರನೇ ದಿನ ರೈತರು ಹಸು–ಎತ್ತುಗಳಿಗಾಗಿ ಈ ಹಬ್ಬವನ್ನು ವಿಶೇಷ ರೀತಿಯಲ್ಲಿ ಆಚರಿಸುತ್ತಾರೆ. 

ಸಂಕ್ರಾಂತಿಯ ಮಾರನೇ ದಿನ ತಮ್ಮಲ್ಲಿರುವ ಗೋವುಗಳನ್ನು ವಿಶೇಷವಾದ ರೀತಿಯಲ್ಲಿ ಅಲಂಕರಿಸಿ, ಬೆಳಿಗ್ಗೆ ಪೂಜೆ ಮಾಡಿ ಸಿಹಿ ಪೊಂಗಲ್, ಕಬ್ಬು, ಎಳ್ಳು ಬೆಲ್ಲ, ದವಸ ಧಾನ್ಯವನ್ನು ನೀಡಿ ಮೇಯಲು ಬಿಡುತ್ತಾರೆ.

ಸಂಜೆ ಅವುಗಳು ಹಿಂತಿರುಗುವ ಹೊತ್ತಿಗೆ ರಾಸುಗಳ ಮಾಲೀಕರು ಊರಿಂದಾಚೆ ಅವುಗಳನ್ನು ತಡೆದು ಕೊಂಡವನ್ನು ಹಾಯಿಸಿದ ನಂತರ ಊರಿನೊಳಕ್ಕೆ ಬಿಡುವುದು ವಾಡಿಕೆ. ದನದ ಕೊಟ್ಟಿಗೆ ಬಾಗಿಲಿನಲ್ಲಿ ತಡೆದು ಅವಕ್ಕೆ ಪೂಜೆ ಮಾಡಿ, ಆರತಿ ಮಾಡಿ ಮನೆಯಲ್ಲಿರುವ ಒನಕೆಯನ್ನು ಬಾಗಿಲ ಬಳಿ ಇಟ್ಟು ಒಳಗೆ ಬಿಡುವ ಆಚರಣೆ ಚಾಲ್ತಿಯಲ್ಲಿದೆ. 

ಮುಂದೆ ಬೇಸಿಗೆಯ ಬರುವುದರಿಂದ ದನಕರುಗಳಿಗೆ ಮೇವು ಹಾಗೂ ನೀರಿನ ಕೊರತೆ ಕಾಡಬಾರದು ಹಾಗೂ ರಾಸುಗಳಿಗೆ ರೋಗ ರುಜುನೆ ಕಾಡಬಾರದು ಎಂದು ಇಷ್ಟ ದೇವರನ್ನು ಕೈಮುಗಿದು ರಾಸುಗಳನ್ನು ಕಿಚ್ಚು ಹಾಯಿಸಿ ಕೊಟ್ಟಿಗೆಯ ಮುಂದೆ ಪೂಜೆ ಮಾಡಿ ರಾಸುಗಳಿಗೆ ಕೆಂಪು ಮತ್ತು ಕಪ್ಪು ಆರತಿಯನ್ನು ಬೆಳಗಿ ಒಳಗೆ ಬಿಡಲಾಗುತ್ತದೆ ಎಂದು ಹೇಳುತ್ತಾರೆ ರೈತರು.

‘ಈ ಹಿಂದೆ ನಮ್ಮ ಹಿರೀಕರು ದನಗಳ ಹಬ್ಬದ ದಿನ ಬೆಳಿಗ್ಗೆಯಿಂದ ಸಂಜೆಯವರೆಗೂ ಸಹ ರಾಸುಗಳ ಜೊತೆ ಒಡನಾಡುತ್ತಿದ್ದರು. ಇತ್ತೀಚೆಗೆ ಅದು ಕಮ್ಮಿಯಾಗತೊಡಗಿದೆ. ಸಂಕ್ರಾತಿ ಹಬ್ಬ ಬಂತೆಂದರೆ ದನಗಳ ಹಬ್ಬ ಎಂದೇ ಖುಷಿಪಡುತ್ತಿದ್ದೆವು. ಅಕ್ಕಪಕ್ಕದಲ್ಲಿರುವ ಎಲ್ಲ ಹಳ್ಳಿಯವರು ಒಂದುಗೂಡಿ ಈ ಹಬ್ಬವನ್ನು ಆಚರಿಸುತಿದ್ದರು. ಜಾತಿ ಭೇದಭಾವವನ್ನು ಮರೆತು ತಮ್ಮ ರಾಸುಗಳನ್ನು ಒಟ್ಟಿಗೆ ಕಿಚ್ಚು ಹಾಯಿಸಿ ಎಲ್ಲರೂ ಬೆರೆತು ಊಟ ಮಾಡುತಿದ್ದರು. ಇಂದು ಆ ಆಚರಣೆ ಮರೆಯಾಗಿದೆ’ ಎಂದು ರೈತ ರಾಮಚಂದ್ರ ಅವರು ‘ಪ್ರಜಾವಾಣಿ’ಗೆ ತಿಳಿಸಿದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು