ಗುರುವಾರ , ಅಕ್ಟೋಬರ್ 1, 2020
21 °C
ಪ್ರಾಧಿಕಾರದ ನೌಕರರ ಸಂಘದ ಸಭೆ

ಮಹದೇಶ್ವರ ಬೆಟ್ಟ: ಬೇಡಿಕೆ ಈಡೇರಿಸಲು ಆ.31ರ ಗಡುವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಹದೇಶ್ವರಬೆಟ್ಟ: ಇಲ್ಲಿನ ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದಲ್ಲಿ ಕೆಲಸ ಮಾಡುವ ನೌಕರರ ಬೇಡಿಕೆಗಳನ್ನು ಈ ತಿಂಗಳ 31ರೊಳಗೆ ಪ್ರಾಧಿಕಾರದ ಆಡಳಿತ ಮಂಡಳಿ ಈಡೇರಿಸದಿದ್ದರೆ ತೀವ್ರ ಹೋರಾಟ ನಡೆಸಲಾಗುವುದು ಎಂದು ಪ್ರಾಧಿಕಾರದ ನೌಕರರ ಸಂಘ ಎಚ್ಚರಿಸಿದೆ. 

ಸಾಲೂರು ಸ್ಮಾರಕ ಭವನದಲ್ಲಿ ಗುರುವಾರ ನಡೆದ ಕುಂದು ಕೊರತೆ ಸಭೆಯಲ್ಲಿ ನೌಕರರು ಪ್ರಾಧಿಕಾರದ ಅಧಿಕಾರಿಗಳ ವಿರುದ್ಧ ಹಲವು ಆರೋಪಗಳನ್ನು ಮಾಡಿದರು. ಕೋವಿಡ್‌–19 ಸಂದರ್ಭದಲ್ಲಿ 186 ಹೊರಗುತ್ತಿಗೆ ನೌಕರರನ್ನು ಕೆಲಸದಿಂದ ತೆಗೆದಿರುವುದಕ್ಕೆ ಆಕ್ಷೇಪವನ್ನೂ ವ್ಯಕ್ತಪಡಿಸಿದರು. 

ಸಂಘದ ಅಧ್ಯಕ್ಷ ಮಹದೇವಪ್ರಸಾದ್‌ ಅವರು ಮಾತನಾಡಿ, ‘ಕೋವಿಡ್‌ ನೆಪದಲ್ಲಿ 186 ನೌಕರರಿಗೆ ಕೆಲಸಕ್ಕೆ ಬಾರದಂತೆ ಸೂಚಿಸಿರುವುದು ಅಮಾನವೀಯ. 2013ರಲ್ಲಿ ಪ್ರಾಧಿಕಾರ ಸ್ಥಾಪನೆಯಾದ ಮೇಲೆ ದೇವಾಲಯಕ್ಕೆ ಉತ್ತಮ ಆದಾಯ ಬರುತ್ತಿದೆ. ಹಾಗಿದ್ದರೂ ನೌಕರರಿಗೆ ವಸತಿ ಹಾಗೂ ಉತ್ತಮ ವೇತನ ಸೌಲಭ್ಯ ನೀಡಲಾಗುತ್ತಿಲ್ಲ. ಅನುಕಂಪ, ಕಾರ್ಯಾರ್ಥ, ಸಂಭಾವನೆ, ಹಾಗೂ ಹೊರಗುತ್ತಿಗೆ ರೂಪದಲ್ಲಿ ಕೆಲಸ ನಿರ್ವಹಿಸುತ್ತಿರುವವರಿಗೆ ₹24 ಸಾವಿರ ವೇತನಶ್ರೇಣಿಯ ಜೊತೆಗೆ ಅವರನ್ನು ಕಾಯಂ ನೌಕರರನ್ನಾಗಿ ನೇಮಿಸಿಕೊಳ್ಳಬೇಕು’ ಎಂದು ಆಗ್ರಹಿಸಿದರು. 

‘ಪ್ರಾಧಿಕಾರಕ್ಕೆ ನಾಲ್ಕು ಭಾರಿ ಅರ್ಜಿ ಸಲ್ಲಿಸಿದ್ದರೂ ನೌಕರರಿಗೆ ಗುರುತಿನ ಚೀಟಿ ನೀಡಿಲ್ಲ. ಕೆಲಸದಿಂದ ನಿವೃತ್ತಿ ಹೊಂದಿದವರಿಗೆ ಜೀವನಾಂಶವನ್ನು ನೀಡುತ್ತಿಲ್ಲ. ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವಸ್ವಾಮಿ ಅವರು ನೌಕರರ ಕಷ್ಟ ಸುಖಗಳನ್ನು ಆಲಿಸುತ್ತಿಲ್ಲ. ನಮ್ಮ ನಿಲುವು ಹಾಗೂ ಬೇಡಿಕೆಗಳನ್ನು ಮುಖ್ಯಮಂತ್ರಿ ಅವರು ಇದೇ 31ರೊಳಗೆ ಖುದ್ದಾಗಿ ಪರಿಶೀಲಿಸಬೇಕು. ಇಲ್ಲದಿದ್ದರೆ 31ರಂದು ಪ್ರತಿಭಟನೆ ನಡೆಸಿ ನಂತರ, ಹೋರಾಟ ತೀವ್ರಗೊಳಿಸಲಾಗುವುದು’ ಎಂದು ಹೇಳಿದರು. 

ಇದಕ್ಕೂ ಮುನ್ನ ಸಭೆಯಲ್ಲಿ ಮಾತನಾಡಿದ ಪೌರ ಕಾರ್ಮಿಕ ಪಳನಿಸ್ವಾಮಿ ಅವರು, ‘ಸಮಯ ಹಾಗೂ ಜೀವ ಲೆಕ್ಕಿಸದೆ ಸ್ವಚ್ಛತೆ ಕೆಲಸದಲ್ಲಿ ತೊಡಗಿರುವ ನಮಗೆ ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವಸ್ವಾಮಿ ಗೌರವ ನೀಡದೆ ಶೋಷಣೆ ಮಾಡುತ್ತಿದ್ದಾರೆ. ಸಂಚು ರೂಪಿಸಿ ಕೆಲವರನ್ನು ಉದ್ದೇಶಪೂರ್ವಕವಾಗಿ ಕೆಲಸದಿಂದ ತೆಗೆದು ಹಾಕಿದ್ದಾರೆ. ಇದರಿಂದ ಜೀವನ ಸಾಗಿಸುವುದೇ ಕಷ್ಟವಾಗಿದೆ. ಪ್ರಾಧಿಕಾರದ ವತಿಯಿಂದ ಪೌರ ಕಾರ್ಮಿಕರಿಗೆ ಅನ್ಯಾಯವಾಗುತ್ತಿದೆ’ ಎಂದು ಆರೋಪಿಸಿದರು.

ಪೌರಕಾರ್ಮಿಕರ ಸಂಘದ ಜಿಲ್ಲಾ ಅಧ್ಯಕ್ಷ ಮಾರಣ್ಣ, ಕಾರ್ಯದರ್ಶಿ ಗುಂಡುರಾಜ್,ಗೌರವ ಅಧ್ಯಕ್ಷ ಮಾದೇವಸ್ವಾಮಿ ಮಾತನಾಡಿದರು. 

ನೌಕರರ ಸಂಘದ ಪದಾಧಿಕಾರಿಗಳಾದ ಮಾದೇವಶೆಟ್ಟಿ, ರಮೇಶ್, ನಾಗರಾಜು, ಮುರುಗೇಶ್, ಸುಧಾ, ಪರಮೇಶ್, ಮಹದೇವಸ್ವಾಮಿ ಹಾಗೂ ನೌಕರ ವರ್ಗದವರು ಇದ್ದರು.

ಸೇವೆಯಿಂದ ವಜಾಗೊಳಿಸಿಲ್ಲ: ಜಯವಿಭವಸ್ವಾಮಿ
ನೌಕರರ ಸಂಘದ ಸದಸ್ಯರ ಆರೋಪಗಳ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವಸ್ವಾಮಿ ಅವರು, ‘ನಾವು ಯಾರಿಗೂ ಅನ್ಯಾಯ ಮಾಡಿಲ್ಲ. ನೌಕರರು ನೇರವಾಗಿ ನನ್ನನ್ನು ಭೇಟಿ ಮಾಡಿ ಅವರ ಕುಂದು ಕೊರತೆಗಳನ್ನು ಚರ್ಚಿಸಬಹುದಿತ್ತು. ಪರಿಹರಿಸಲು ಪ್ರಯತ್ನಿಸುತ್ತಿದ್ದೆ. 186 ನೌಕರರ ಕೆಲಸವನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ. ಸೇವೆಯಿಂದ ವಜಾಗೊಳಿಸಿಲ್ಲ. ಈವರೆಗೆ ಅವರ ಹಲವು ಬೇಡಿಕೆಗಳನ್ನು ಈಡೇರಿಸಲಾಗಿದೆ. ಎಲ್ಲಾ ಬೇಡಿಕೆಗಳು ಒಂದೇ ದಿನದಲ್ಲಿ ಪರಿಹಾರವಾಗುವುದಿಲ್ಲ. ನೌಕರರಿಗೆ ಏನೇ ಸಮಸ್ಯೆ ಇದ್ದರೂ ನಿರ್ಭೀತಿಯಿಂದ ನನ್ನ ಬಳಿ ಹೇಳಬಹುದು’ ಎಂದು ಹೇಳಿದರು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು