ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮೆಂದರೆ: ಈಡೇರುವುದೇ ಪುನರ್ವಸತಿಯ ಬೇಡಿಕೆ?

ಪಾಲಾರ್‌ಗೆ ಸ್ಥಳಾಂತರಿಸಲು ಮನವಿ ಮಾಡಿರುವ ಮೆಂದರೆ ಗ್ರಾಮಸ್ಥರು, 27ರಿಂದ ಸರ್ವೆ ಕಾರ್ಯ
Published 24 ಮೇ 2024, 6:51 IST
Last Updated 24 ಮೇ 2024, 6:51 IST
ಅಕ್ಷರ ಗಾತ್ರ

ಚಾಮರಾಜನಗರ: ಮಹದೇಶ್ವರ ಬೆಟ್ಟ ವ್ಯಾಪ್ತಿಯ ಇಂಡಿಗನತ್ತದಲ್ಲಿ ಘರ್ಷಣೆ ನಡೆದ ನಂತರ ಭಯಭೀತರಾಗಿರುವ ನೆರೆ ಮೆಂದರೆ ಗ್ರಾಮದವರು, ತಮಗೆ ಪಾಲಾರ್‌ನಲ್ಲಿರುವ ಗಿರಿಜನ ಕಾಲೊನಿಯಲ್ಲಿ ಪುನರ್ವಸತಿ ಕಲ್ಪಿಸುವಂತೆ ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದಾರೆ. 

ಮನವಿಗೆ ಸ್ಪಂದಿಸಿರುವ ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪಾನಾಗ್‌ ಅವರು ಮೆಂದರೆ ಗ್ರಾಮದಲ್ಲಿ ಜಂಟಿ ಸರ್ವೆ ನಡೆಸಲು ಸೂಚಿಸಿದ್ದಾರೆ. ಉಪವಿಭಾಗಾಧಿಕಾರಿಯವರ ಉಸ್ತುವಾರಿಯಲ್ಲಿ ಇದೇ 27ರಂದು ಸರ್ವೆ ಕಾರ್ಯ ಆರಂಭವಾಗಲಿದೆ. ಕಂದಾಯ, ಭೂಮಾಪನ, ಅರಣ್ಯಇಲಾಖೆಗಳು ಸರ್ವೆ ನಡೆಸಲಿವೆ. ಜಿಲ್ಲಾಡಳಿತದ ಕ್ಷಿಪ್ರ ಸ್ಪಂದನೆಯಿಂದ ಗಿರಿಜನರಲ್ಲಿ ಆಶಾ ಭಾವನೆ ಮೂಡಿದೆ. 

ಆದರೆ, ಮಲೆ ಮಹದೇಶ್ವರ ವನ್ಯಧಾಮದ ವ್ಯಾಪ್ತಿಯಲ್ಲಿ ಚಂಗಡಿ ಗ್ರಾಮವನ್ನು ಬೇರೆಗೆ ಸ್ಥಳಾಂತರ ಮಾಡುವ ಯೋಜನೆ ನಾಲ್ಕು ವರ್ಷಗಳಿಂದ ನನೆಗುದಿಗೆ ಬಿದ್ದಿದೆ. ಕುಟುಂಬಗಳು ಊರು ಬಿಟ್ಟು ಬರಲು ತಯಾರಿದ್ದರೂ, ಪುನರ್ವಸತಿಗೆ ಸ್ಥಳಗುರುತಿಸಿದ್ದರೂ, ಪರಿಹಾರ ಪ್ಯಾಕೇಜ್‌ ನಿಗದಿ ಪಡಿಸಿದ್ದರೂ, ಅನುದಾನದ ಕೊರತೆಯಿಂದ ಇನ್ನೂ ಅನುಷ್ಠಾನಕ್ಕೆ ಬಂದಿಲ್ಲ. ಸ್ಥಳಾಂತರದ ನಿರೀಕ್ಷೆಯಲ್ಲಿದ್ದ ಚಂಗಡಿ ಗ್ರಾಮಸ್ಥರು ನಿರಾಸೆಗೊಂಡಿದ್ದಾರೆ. ಹಾಗಿರುವಾಗ ಮೆಂದರೆ ಪುನರ್ವಸತಿ ಪ್ರಸ್ತಾವ ತ್ವರಿತವಾಗಿ ನಡೆಯಲಿದೆಯೇ ಎಂಬ ಪ್ರಶ್ನೆ ಎದ್ದಿದೆ.  

ಭೂಮಿ ಇಲ್ಲ: ಮೆಂದರೆಯಲ್ಲಿ 60ರಷ್ಟು ಸೋಲಿಗ ಕುಟುಂಬಗಳಿವೆ. 300ಕ್ಕೂ ಹೆಚ್ಚು ಜನಸಂಖ್ಯೆ ಇದೆ. ಇವರಿಗೆ ಯಾರಿಗೂ ಜಮೀನು ಇಲ್ಲ. ಪುಟ್ಟ ‍ಪುಟ್ಟ ಮನೆಗಳನ್ನು ಬಿಟ್ಟು ಬೇರೇನೂ ಇಲ್ಲ. ಕೂಲಿಯೇ ಜೀವನಾಧಾರ. ಸ್ಥಳೀಯವಾಗಿ ಕೂಲಿ ಸಿಗದಿದ್ದರೆ, ನೆರೆಯ ತಮಿಳುನಾಡಿಗೆ ಹೋಗಿ ಕೆಲಸ ಮಾಡುತ್ತಾರೆ. 

ಅರಣ್ಯ ಹಕ್ಕು ಕಾಯ್ದೆಯ ಅಡಿಯಲ್ಲಿ ಜಮೀನು ನೀಡಬೇಕು ಎಂಬ ಕೂಗು ಹಲವು ವರ್ಷಗಳಿಂದ ಕೇಳಿ ಬರುತ್ತಿದೆ.

‘ಎಲ್ಲ ಕುಟುಂಬಗಳೂ ಅರ್ಜಿ ಹಾಕಿವೆ. ದಾಖಲೆಗಳು ಇಲ್ಲ ಎಂಬ ಕಾರಣಕ್ಕೆ ವಿಳಂಬವಾಗಿತ್ತು. ಈಗ ದಾಖಲೆಗಳನ್ನು ಸಿದ್ಧಪಡಿಸಿ ನೀಡಲಾಗಿದೆ. ಗ್ರಾಮ ಸಭೆ ನಡೆಯಬೇಕಿದೆ. ಅಷ್ಟರಲ್ಲಿ ಇಂಡಿಗನತ್ತ ಪ್ರಕರಣ ನಡೆದಿದೆ. ಸಮುದಾಯದವರು ಮೆಂದರೆಯಲ್ಲಿ ಇರಲು ಭಯಭೀತರಾಗಿದ್ದಾರೆ. ಪಾಲಾರ್‌ನಲ್ಲಿ ಪುನರ್ವಸತಿ ಕಲ್ಪಿಸಬೇಕು ಎಂಬ ಬೇಡಿಕೆ ಇಟ್ಟಿದ್ದಾರೆ. ಜಿಲ್ಲಾಡಳಿತ ಇದಕ್ಕೆ ಸ್ಪಂದಿಸಬೇಕು. ಅರಣ್ಯ ಹಕ್ಕು ಕಾಯ್ದೆಯ ಅಡಿಯಲ್ಲಿ ಭೂಮಿ ನೀಡಿ ಸಮುದಾಯದವರ ಬದುಕಿಗೆ ನೆರವಾಗಬೇಕು’ ಎಂದು ಸೋಲಿಗ ಮುಖಂಡ ಗಿರಿಯ ‘ಪ್ರಜಾವಾಣಿ’ಗೆ ತಿಳಿಸಿದರು. 

ಪಾಲಾರ್‌ ಏಕೆ?: ಪಾಲಾರ್‌ನಲ್ಲಿ 90 ಸೋಲಿಗ ಕುಟುಂಬಗಳು ವಾಸಿಸುತ್ತಿವೆ. ಇಲ್ಲಿನ ಗಿರಿಜನರು ಮೊದಲು ಬೆಟ್ಟ ವ್ಯಾಪ್ತಿಯ ಹಣೆಹೊಲ ಸೇರಿದಂತೆ ಅರಣ್ಯದ ವಿವಿಧ ಕಡೆಗಳಲ್ಲಿ ವಾಸವಿದ್ದವರು. ಸರ್ಕಾರ ಅವರನ್ನು ಪಾಲಾರ್‌ನಲ್ಲಿ ಪುನರ್ವಸತಿ ಕಲ್ಪಿಸಿ ಅರಣ್ಯ ಹಕ್ಕು ಕಾಯ್ದೆಯಡಿ ಜಮೀನು ಕೂಡ ನೀಡಿದೆ. 

ಮೆಂದರೆಯಲ್ಲಿರುವ ಸೋಲಿಗರ ಸಂಬಂಧಿಕರು, ಕುಟುಂಬದವರು ಪಾಲಾರ್‌ನಲ್ಲಿ ನೆಲೆಸಿದ್ದಾರೆ. ಹಾಗಾಗಿ, ಅದೇ ಸ್ಥಳಕ್ಕೆ ಸ್ಥಳಾಂತರ ಮಾಡುವಂತೆ ಮೆಂದರೆ ಗ್ರಾಮಸ್ಥರು ಜಿಲ್ಲಾಡಳಿತವನ್ನು ಒತ್ತಾಯಿಸುತ್ತಿದ್ದಾರೆ. 

‘ನಾವು ಹಿಂದಿನಿಂದಲೂ ಸೌಲಭ್ಯಗಳ ಕೊರತೆಯ ನಡುವೆಯೇ ಜೀವನ ನಡೆಸಿಕೊಂಡು ಬಂದವರು. ಇಂಡಿಗನತ್ತದ ಘರ್ಷಣೆಯ ಬಳಿಕ ನಮಗೆ ಮೆಂದರೆಯಲ್ಲಿ ಇರಲು ಆಗುತ್ತಿಲ್ಲ. ಮುಂದೇನಾಗುತ್ತದೋ ಎಂಬ ಭಯ ನಮ್ಮನ್ನು ಕಾಡುತ್ತಿದೆ. ನಮ್ಮ ಸುರಕ್ಷತೆಯ ದೃಷ್ಟಿಯಿಂದ ಸ್ಥಳಾಂತರಗೊಳ್ಳಲು ನಾವು ಸಿದ್ಧರಿದ್ದೇವೆ. ಜಿಲ್ಲಾಡಳಿತ ನಮಗೆ ಅರಣ್ಯ ಹಕ್ಕು ಕಾಯ್ದೆಯಡಿಯಲ್ಲಿ ಜಮೀನು ನೀಡುವುದರ ಜೊತೆಗೆ ಪಾಲಾರ್‌ನಲ್ಲಿ ಪುನರ್ವಸತಿ ಕಲ್ಲಿಸಬೇಕು’ ಎಂದು ಮೆಂದರೆ ಮುಖಂಡ ಮಾದಯ್ಯ ‘ಪ್ರಜಾವಾಣಿ’ಗೆ ತಿಳಿಸಿದರು. 

ಚಂಗಡಿ ಸ್ಥಳಾಂತರಕ್ಕಿಂತ ಭಿನ್ನ

ಮೆಂದರೆ ಗ್ರಾಮಸ್ಥರ ಪುನರ್ವಸತಿ ಬೇಡಿಕೆಯೂ ಚಂಡಗಿ ಸ್ಥಳಾಂತರ ಯೋಜನೆಯನ್ನು ಪರಸ್ಪರ ಹೋಲಿಸಲು ಸಾಧ್ಯವಿಲ್ಲ ಎಂದು ಹೇಳುತ್ತಾರೆ ರಾಜ್ಯ ಮೂಲನಿವಾಸಿ ಬುಡಕಟ್ಟು ಜನರ ವೇದಿಕೆ ಕಾರ್ಯದರ್ಶಿ ಮುತ್ತಯ್ಯ.  ‘ಚಂಗಡಿಯಲ್ಲಿ ಗಿರಿಜನ ಕುಟುಂಬಗಳು ಕೇವಲ 12 ಇದ್ದವು. ಉಳಿದವರು ಆದಿವಾಸಿಗಳಲ್ಲ. ಮೆಂದರೆಯಲ್ಲಿ ಇರುವವರೆಲ್ಲರೂ ಆದಿವಾಸಗಳಿದ್ದಾರೆ. ಗಿರಿಜನರಿಗೆ ಪುನರ್ಸವತಿ ಕಲ್ಪಿಸಲು ಅರಣ್ಯ ಹಕ್ಕು ಕಾಯ್ದೆಯಡಿ ಭೂಮಿ ನೀಡಲು ಅವಕಾಶ ಇದೆ’ ಎಂದರು. 

ಭೂಮಿ ಪರಿಹಾರ ನೀಡಬಹುದು: ಡಿಸಿ ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪಾನಾಗ್‌ ಅವರು ‘ನಾನು ಖುದ್ದಾಗಿ ಮೆಂದರೆಗೆ ಕಾಲ್ನಡಿಗೆಯಲ್ಲಿ ಹೋಗಿ ಅವರ ಕಷ್ಟಗಳನ್ನು ಅರಿತಿದ್ದೇನೆ. ಅವರ ಸ್ಥಳಾಂತರಕ್ಕೆ ಕಾನೂನಿನಲ್ಲಿ ಅವಕಾಶ ಇದೆ. ಅರಣ್ಯ ಹಕ್ಕು ಕಾಯ್ದೆಯ ಅಡಿಯಲ್ಲಿ ಭೂಮಿಯನ್ನೂ ನೀಡಬಹುದು. ಪರಿಹಾರವನ್ನೂ ಕೊಡಬಹುದು. ಈಗ ಮೆಂದರೆ ಗ್ರಾಮಸ್ಥರೇ ಸ್ವಯಂ ಪ್ರೇರಿತರಾಗಿ ಸ್ಥಳಾಂತರ ಗೊಳ್ಳಲು ಒಪ್ಪಿರುವುದರಿಂದ ಸರ್ಕಾರದ ಅನುಮತಿ ಪಡೆದು ಅವರಿಗೆ ಪುನರ್ವಸತಿ ಕಲ್ಪಿಸಲು ಕ್ರಮವಹಿಸಲಾಗುವುದು’ ಎಂದರು. 

ಸ್ಥಳಾಂತರಕ್ಕೆ ಮೆಂದರೆ ಗ್ರಾಮಸ್ಥರು ಒಪ್ಪಿದ್ದಾರೆ. ಸರ್ವೆ ಮಾಡಿ ವರದಿ ಸಿದ್ಧಪಡಿಸಿ ಅದನ್ನು ಗ್ರಾಮಸ್ಥರ ಮುಂದೆ ಇಟ್ಟು ಅವರಿಗೆ ಒಪ್ಪಿಗೆಯಾದರೆ ಸರ್ಕಾರಕ್ಕೆ ಸಲ್ಲಿಸಲಿದ್ದೇವೆ.
-ಸಿ.ಟಿ.ಶಿಲ್ಪಾನಾಗ್‌, ಜಿಲ್ಲಾಧಿಕಾರಿ
ಮೆಂದರೆ ಗ್ರಾಮಸ್ಥರ ಮನವಿಗೆ ಜಿಲ್ಲಾಧಿಕಾರಿಯವರು ತ್ವರಿತವಾಗಿ ಸ್ಪಂದಿಸಿದ್ದಾರೆ. ಅವರಿಗೆ ಶೀಘ್ರವಾಗಿ ಪುನರ್ವಸತಿ ಕಲ್ಪಿಸಿ ಜೀವನಕ್ಕೆ ಅನುಕೂಲ ಮಾಡಿಕೊಡಬೇಕು
-ಮುತ್ತಯ್ಯ, ರಾಜ್ಯ ಮೂಲನಿವಾಸಿ ಬುಡಕಟ್ಟು ಜನರ ವೇದಿಕೆ ಕಾರ್ಯದರ್ಶಿ
8 ಜನರ ತಂಡವು ಸರ್ವೆ ನಡೆಸಲಿದೆ. ಪ್ರತಿ ಮನೆ ಮನೆಗಳಿಗೂ ತೆರಳಿ ಜನರಿಂದ ಮಾಹಿತಿ ಸಂಗ್ರಹ ಸಹ ಮಾಡುತ್ತೇವೆ. ವರದಿ ಬಂದ ನಂತರ ಜಿಲ್ಲಾಧಿಕಾರಿಗಳಿಗೆ ಸಲ್ಲಿಸುತ್ತೇವೆ
-ಶಿವಮೂರ್ತಿ ಉಪ ವಿಭಾಗಾಧಿಕಾರಿ ಕೊಳ್ಳೇಗಾಲ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT