ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರ ಜಮೀನಿನಲ್ಲಿ ನಡೆಯದ ಹಾನಿ ಸಮೀಕ್ಷೆ

ಹನೂರು: ಸಮೀಕ್ಷೆಗೂ ಕೇಳುತ್ತಾರೆ ದುಡ್ಡು– ರೈತರ ಅಳಲು, ಆರೋಪ
Last Updated 7 ಡಿಸೆಂಬರ್ 2021, 16:08 IST
ಅಕ್ಷರ ಗಾತ್ರ

ಹನೂರು: ನಿರಂತರವಾಗಿ ಸುರಿದ ಮಳೆಯಿಂದ ತಾಲ್ಲೂಕಿನಾದ್ಯಂತ ಬೆಳೆದಿದ್ದ ರಾಗಿ ಫಸಲು ಹಾಳಾಗಿದ್ದು, ಸಂಕಷ್ಟಕ್ಕೊಳಗಾದ ರೈತರು ಸರ್ಕಾರದಿಂದ ಸಿಗುವ ಪರಿಹಾರಕ್ಕಾಗಿ ಪರದಾಡುವಂತಾಗಿದೆ.

ಕಟಾವಿಗೆ ಬಂದಿದ್ದ ರಾಗಿ ಮಳೆಯಿಂದಾಗಿ ನೆಲಕಚ್ಚಿ ತೆನೆಗಳಲ್ಲಿ ಮೊಳಕೆ ಬಂದು ಹಾನಿಯಾಗಿತ್ತು. ಬೆಳೆ ನಷ್ಟವನ್ನು ಅಂದಾಜಿಸುವುದಕ್ಕಾಗಿ ಜಿಲ್ಲಾಡಳಿತ ಸಮೀಕ್ಷೆಯನ್ನೂ ನಡೆಸಿತ್ತು. ಜಿಲ್ಲಾಡಳಿತದ ಪ್ರಕಾರ, ಸಮೀಕ್ಷೆ ಪೂರ್ಣಗೊಂಡಿದೆ.

ಇಡೀ ಜಿಲ್ಲೆಯಲ್ಲಿ ಹನೂರು ತಾಲ್ಲೂಕಿನಲ್ಲೇ ಅತಿ ಹೆಚ್ಚು ಬೆಳೆ ಹಾನಿ ಸಂಭವಿಸಿದೆ. ಸಮೀಕ್ಷೆಯ ವರದಿ ಪ್ರಕಾರ, 1,837 ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆದಿದ್ದ ಬೆಳೆ ನೀರು ಪಾಲಾಗಿದೆ. ಈ ಪೈಕಿ 1,791 ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆದಿರುವ ರಾಗಿ ಬೆಳೆಗೆ ಹಾನಿಯಾಗಿದೆ.

ಸಮೀಕ್ಷೆ ನಡೆಸಿದ ಅಧಿಕಾರಿಗಳು ಸಿಬ್ಬಂದಿ, ಎಲ್ಲ ರೈತರ ಜಮೀನುಗಳಿಗೆ ಭೇಟಿ ನೀಡಿಲ್ಲ ಎಂಬುದು ಬೆಳೆಗಾರರ ಆರೋಪ.

‘ಸ್ಥಳೀಯ ಗ್ರಾಮಲೆಕ್ಕಾಧಿಕಾರಿಗಳು ಕೆಲವು ಜಮೀನಿಗೆ ತೆರಳಿ ಸಮೀಕ್ಷೆ ನಡೆಸಿದ್ದಾರೆ. ಆದರೆ, ಕಾಡಂಚಿನ ಜಮೀನುಗಳಿಗೆ ಅಧಿಕಾರಿಗಳು ಭೇಟಿ ನೀಡಲು ಹಿಂದೇಟು ಹಾಕುತ್ತಿದ್ದಾರೆ. ಮಳೆಯಿಂದಾಗಿ ಜಮೀನಿನಲ್ಲಿ ಬೆಳೆದ ಫಸಲು ಹಾಳಾಗಿದೆ. ಈ ಬಗ್ಗೆ ಇಲ್ಲಿನ ಅಧಿಕಾರಿಗಳಿಗೆ ಗೊತ್ತಿದ್ದರೂ ಜಮೀನಿಗೆ ಭೇಟಿ ನೀಡುತ್ತಿಲ್ಲ. ಹಾಗೊಮ್ಮೆ ಭೇಟಿ ನೀಡಿದರೂ ಏನಾದರೂ ಸಬೂಬು ಹೇಳಿ ಹೋಗುತ್ತಾರೆ’ ಎಂದು ಹಲವು ರೈತರು ‘ಪ್ರಜಾವಾಣಿ’ ಮುಂದೆ ಅಳಲು ತೋಡಿಕೊಂಡರು.

‘ಎರಡು ಎಕರೆಯಲ್ಲಿ ರಾಗಿ ಬೆಳೆದಿದ್ದೆ. ಈಗ ನಿರಂತರವಾಗಿ ಬೀಳುತ್ತಿರುವ ಮಳೆಯಿಂದಾಗಿ ಜಮೀನು ಪೂರ್ತಿ ನೀರು ನಿಂತಿದೆ. ಸಮೀಕ್ಷೆ ಮಾಡಲು ಬಂದ ಇಲ್ಲಿನ ಗ್ರಾಮಲೆಕ್ಕಾಧಿಕಾರಿ ‘ರಾಗಿಯಲ್ಲಿ ಮೊಳಕೆ ಬಂದಿದ್ದರೆ ಮಾತ್ರ ಪರಿಹಾರ ನೀಡಲಾಗುತ್ತದೆ’ ಎಂದು ಹೇಳಿ ಹೊರಟು ಹೋದರು. ಜಮೀನಿನಲ್ಲಿ ಕಟಾವಿಗೆ ಬಂದಿರುವ ರಾಗಿಯನ್ನು ತೆಗೆಯಲು ಆಗದೇ, ಅಲ್ಲೇ ಬಿಡಲೂ ಆಗದೇ ಒದ್ದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಅದು ಜಮೀನಿನಲ್ಲೇ ಕೊಳತರೆ ನಮ್ಮ ಗತಿಯೇನು’ ಎಂದು ಒಡೆಯರಪಾಳ್ಯ ಗ್ರಾಮದ ಮಂಗಳಮ್ಮ ಅವರು ಪ್ರಶ್ನಿಸಿದರು.

‘ಎರಡು ಎಕರೆಯಲ್ಲಿ ಬೆಳೆದಿದ್ದ ರಾಗಿ ಫಸಲೆಲ್ಲಾ ನೆಲಕಚ್ಚಿದೆ. ಆದರೆ, ಇದುವರೆಗೆ ಯಾವ ಅಧಿಕಾರಿಯೂ ಜಮೀನಿಗೆ ಭೇಟಿ ನೀಡಿ ನಮ್ಮ ಕಷ್ಟ ಕೇಳುವ ಕೆಲಸ ಮಾಡಿಲ್ಲ. ನಮ್ಮ ಜಮೀನು ಮಾತ್ರವಲ್ಲದೇ ಸುತ್ತಲಿನ ನೂರಾರು ಎಕರೆಯಲ್ಲಿ ಬೆಳೆದಿದ್ದ ರಾಗಿಯದ್ದೂ ಇದೇ ಸ್ಥಿತಿ. ಇರುವ ಅಲ್ಪ ಜಮೀನಿನಲ್ಲಿ ಹೇಗೋ ಬೆಳೆದಿದ್ದ ಫಸಲು ಕಟಾವಿಗೆ ಬಂದಿತ್ತು. ಆದರೆ ಮಳೆಯಿಂದಾಗಿ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ’ ಎಂದು ಜಿ.ಕೆ ಹೊಸೂರು ಗ್ರಾಮದ ಮಹದೇವಸ್ವಾಮಿ ಅವರು ಅಸಹಾಯಕತೆ ವ್ಯಕ್ತಪಡಿಸಿದರು.

‘ದೂರು ನೀಡಿದರೆ ಕ್ರಮ’

ಮಳೆಯಿಂದಾಗಿ ಹಾನಿಗೊಳಗಾದ ಜಮೀನುಗಳಿಗೆ ಕಂದಾಯ ಅಧಿಕಾರಿಗಳು ಭೇಟಿ ನೀಡಿ ಸಮೀಕ್ಷೆ ಮಾಡುತ್ತಿಲ್ಲ ಎಂಬ ಆರೋಪ ಒಂದೆಡೆಯಾದರೆ, ಕೆಲವು ಜಮೀನುಗಳಿಗೆ ಭೇಟಿ ನೀಡುವ ಕಂದಾಯ ಇಲಾಖೆಯ ಕೆಳಹಂತದ ಅಧಿಕಾರಿಗಳು ನಷ್ಟಕ್ಕೊಳಗಾದ ಬೆಳೆ ಸಮೀಕ್ಷೆ ಮಾಡಲು ಹಣವನ್ನೂ ಕೇಳುತ್ತಿದ್ದಾರೆ ಎಂದು ರೈತರು ಆರೋಪಿಸಿದ್ದಾರೆ.

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಹನೂರು ತಹಶೀಲ್ದಾರ್ ಜಿ.ಎಚ್ ನಾಗರಾಜು ಅವರು, ‘ಜಿಲ್ಲಾಧಿಕಾರಿಗಳ ಆದೇಶದಂತೆ ಹಾನಿಯಾಗಿರುವ ಜಮೀನಿಗೆ ತೆರಳಿ ಬೆಳೆ ಸಮೀಕ್ಷೆ ಮಾಡಲಾಗುತ್ತಿದೆ. ಗ್ರಾಮಗಳಲ್ಲಿ ಅಧಿಕಾರಿಗಳು ರೈತರಿಂದ ಹಣ ಕೇಳುತ್ತಿರುವ ಬಗ್ಗೆ ಮಾಹಿತಿ ಬಂದಿಲ್ಲ. ಹಣ ಕೇಳುತ್ತಿರುವ ಬಗ್ಗೆ ರೈತರು ಲಿಖಿತ ದೂರು ನೀಡಿದರೆ ಕ್ರಮ ಜರುಗಿಸಲಾಗುವುದು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT