ಮಂಗಳವಾರ, ಆಗಸ್ಟ್ 3, 2021
28 °C
ಸೇಬು ಸ್ವಲ್ಪ ತುಟ್ಟಿ, ದ್ರಾಕ್ಷಿ, ದಾಳಿಂಬೆ ಅಗ್ಗ ತರಕಾರಿ, ಹೂವು ಧಾರಣೆ ಯಥಾಸ್ಥಿತಿ

ಚಾಮರಾಜನಗರ | ಹೆಚ್ಚಿದ ಕೊತ್ತಂಬರಿ ಸೊಪ್ಪಿನ ‘ಘಾಟು’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಎರಡು ವಾರಗಳಿಂದೀಚೆಗೆ ಮಾರುಕಟ್ಟೆಯಲ್ಲಿ ಕೊತ್ತಂಬರಿ ಸೊಪ್ಪಿನ ಬೆಲೆ ಹೆಚ್ಚಾಗುತ್ತಿದ್ದು, ಕಟ್ಟಿಗೆ ₹40ರಿಂದ ₹50 ವರೆಗೂ ಇದೆ. 

ಕಡು ಬೇಸಿಗೆ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಕೊತ್ತಂಬರಿ ಸೊಪ್ಪು ಬೆಳೆಯುವವರ ಸಂಖ್ಯೆ ಕಡಿಮೆ. ಹಾಗಾಗಿ, ಹೊರಗಡೆಯಿಂದ ತರಬೇಕಾಗುತ್ತದೆ. ಕಡಿಮೆ ಆವಕವಾಗುವುದರಿಂದ ಬೆಲೆ ಹೆಚ್ಚಾಗುತ್ತದೆ ಎಂದು ವ್ಯಾಪಾರಿಗಳು ಹೇಳುತ್ತಿದ್ದಾರೆ. 

‘ನಾಟಿ ಕೊತ್ತಂಬರಿ ಸೊಪ್ಪಿಗೆ ಕಟ್ಟಿಗೆ ₹40 ಇದೆ. ಫಾರಂ ಸೊಪ್ಪಿಗೆ ₹30 ಹಾಗೂ ನಾಮಧಾರಿ (ದೊಡ್ಡ ಎಲೆ ಹೊಂದಿದ್ದು, ಪರಿಮಳ ಇಲ್ಲದಿರುವ) ತಳಿಗೆ ಕಟ್ಟಿಗೆ ₹25 ಇದೆ’ ಎಂದು ಕೊತ್ತಂಬರಿ ಸೊಪ್ಪಿನ ಸಗಟು ವ್ಯಾಪಾರಿ ಸಿದ್ದಲಿಂಗಪ್ಪ ಅವರು ‘ಪ್ರಜಾವಾಣಿ’ಗೆ ತಿಳಿಸಿದರು. 

‘ಬೇಸಿಗೆ ಇರುವುದರಿಂದ ನಮ್ಮಲ್ಲಿ ಕೊತ್ತಂಬರಿ ಸೊಪ್ಪು ಬೆಳೆಯುವವರಿಲ್ಲ. ನಾನು ಬೆಂಗಳೂರು, ಮಂಗಳೂರು, ಮೈಸೂರಿನಿಂದ ತರಿಸುತ್ತಿದ್ದೇನೆ. ಹಾಗಾಗಿ ಬೆಲೆ ಹೆಚ್ಚು. ಜಿಲ್ಲೆಯಲ್ಲಿ ಈಗ ಮಳೆ ಬಂದಿರುವುದರಿಂದ ರೈತರು ಕೊತ್ತಂಬರಿ ನಾಟಿ ಮಾಡಿದ್ದು, ಸ್ಥಳೀಯವಾಗಿ ಹೆಚ್ಚು ಸೊಪ್ಪು ಲಭ್ಯವಾದರೆ ಬೆಲೆ ಕಡಿಮೆಯಾಗಲಿದೆ’ ಎಂದು ಅವರು ಹೇಳಿದರು. 

ಕೊತ್ತಂಬರಿ ಸೊಪ್ಪು ಬಿಟ್ಟು ‌ಉಳಿದ ಸೊಪ್ಪುಗಳ ಬೆಲೆ ಕಟ್ಟಿಗೆ ₹10ರಿಂದ ₹20ವರೆಗೆ ಇದೆ. 

ತರಕಾರಿಗಳ ಬೆಲೆಯಲ್ಲಿ ಈ ವಾರ ಹೆಚ್ಚಿನ ಬದಲಾವಣೆ ಆಗಿಲ್ಲ. ಎಲ್ಲ ತರಕಾರಿಗಳಿಗೆ ಹೋಲಿಸಿದರೆ ಬೀನ್ಸ್‌ ಬೆಲೆಯೇ ಹೆಚ್ಚಿದೆ. ಹಾಪ್‌ಕಾಮ್ಸ್‌ನಲ್ಲಿ ಕೆಜಿಗೆ ₹50 ಇದೆ.

‘ಬೀನ್ಸ್‌ ಬಿಟ್ಟು ಉಳಿದೆಲ್ಲ ತರಕಾರಿಗಳ ಬೆಲೆಯಲ್ಲಿ ಏನೂ ವ್ಯತ್ಯಾಸವಾಗಿಲ್ಲ. ಎರಡು ವಾರಗಳ ಹಿಂದಿನ ಬೆಲೆಗೆ ಹೋಲಿಸಿದರೆ ಬೀನ್ಸ್‌ ಬೆಲೆಯೂ ಕೆಜಿಗೆ ₹30ರಷ್ಟು ಕಡಿಮೆಯಾಗಿದೆ’ ಎಂದು ಹಾಪ್‌ ಕಾಮ್ಸ್‌ ವ್ಯಾಪಾರಿ ಮಧು ಅವರು ‘ಪ್ರಜಾವಾಣಿ’ಗೆ ತಿಳಿಸಿದರು. 

ಹಣ್ಣುಗಳ ಪೈಕಿ ಸೇಬಿನ ಬೆಲೆ ₹10ರಿಂದ ₹20ರಷ್ಟು ಹೆಚ್ಚಾಗಿದೆ. ಸೋಮವಾರ ಸೇಬು ಕೆಜಿಗೆ ₹140–₹160ರವರೆಗೆ ಇತ್ತು. ದ್ರಾಕ್ಷಿ, ದಾಳಿಂಬೆ ಕೆಜಿಗೆ ₹20ರಷ್ಟು ಕಡಿಮೆಯಾಗಿದೆ. ಪಚ್ಚೆಬಾಳೆಗೆ ₹5 ಹೆಚ್ಚಳವಾಗಿದೆ.

ಹೂವು ಯಥಾಸ್ಥಿತಿ: ಬಿಡಿ ಹೂವಿನ ಮಾರುಕಟ್ಟೆಯಲ್ಲಿ ಹೂವಿನ ಬೆಲೆಯಲ್ಲಿ ಯಾವುದೇ ವ್ಯತ್ಯಾಸ ಕಂಡು ಬಂದಿಲ್ಲ. ಮಳೆ ಆರಂಭವಾಗಿರುವುದರಿಂದ ಮುಂದಿನ ದಿನಗಳಲ್ಲಿ ಬೆಲೆ ಕಡಿಮೆಯಾಗಬಹುದು ಎಂದು ವ್ಯಾಪಾರಿಗಳು ಹೇಳುತ್ತಿದ್ದಾರೆ. 

‘ಇದುವರೆಗೆ ಹೂವಿಗೆ ಬೇಡಿಕೆ ಇತ್ತು. ಮಳೆ ಬಂದರೆ ಹೂವುಗಳು ಚೆನ್ನಾಗಿ ಆಗುವುದಿಲ್ಲ. ಬೇಡಿಕೆ ಕಡಿಮೆಯಾಗುತ್ತದೆ. ಇದರಿಂದ ಬೆಲೆ ಕಡಿಮೆಯಾಗಲಿದೆ’ ಎಂದು ಬಿಡಿ ಹೂವಿನ ವ್ಯಾಪಾರಿ ರವಿ ಅವರು ಹೇಳಿದರು.

ಮಾಂಸ ಕೊಂಚ ಅಗ್ಗ

ಮಾಂಸದ ಮಾ‌ರುಕಟ್ಟೆಯಲ್ಲಿ ಚಿಕನ್‌ ಬೆಲೆಯಲ್ಲಿ ಸ್ವಲ್ಪ ಇಳಿಕೆಯಾಗಿದೆ. ಕಳೆದ ವಾರ ಈದ್‌ ಹಬ್ಬದ ಅಂಗವಾಗಿ ಚಿಕನ್‌ ಬೆಲೆ ₹230ರವರೆಗೂ ಹೋಗಿತ್ತು. ಈವಾರ ₹190–₹200ರವೆಗೆ ಇದೆ. ಮಟನ್‌ ಬೆಲೆ ₹600 ಇದೆ.

ಮೊಟ್ಟೆಯ ದರದಲ್ಲಿ ಕೊಂಚ ಏರಿಕೆಯಾಗಿದೆ, ಸಗಟು ವ್ಯಾಪಾರಿಗಳು 100 ಮೊಟ್ಟೆಗೆ ₹368 ತೆಗೆದುಕೊಳ್ಳುತ್ತಿದ್ದಾರೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಒಂದು ಮೊಟ್ಟೆಗೆ ₹4.5ಯಿಂದ ₹5ರವರೆಗೂ ಬೆಲೆ ಇದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.