ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೃತ್ತಿಯಲ್ಲಿ ಶಿಕ್ಷಕ, ಪ್ರವೃತ್ತಿಯಲ್ಲಿ ಕಲಾವಿದ - ರವಿ ಬೈಲೂರು

Published 21 ಫೆಬ್ರುವರಿ 2024, 7:15 IST
Last Updated 21 ಫೆಬ್ರುವರಿ 2024, 7:15 IST
ಅಕ್ಷರ ಗಾತ್ರ

ಗುಂಡ್ಲುಪೇಟೆ: ವಿದ್ಯಾರ್ಥಿಯಾಗಿ ಕಾಲೇಜು ದಿನಗಳಲ್ಲಿ ಕಲಿತ ದೇಶಿ ಕಲೆಗಳನ್ನು ಶಿಕ್ಷಕನಾದ ನಂತರವೂ ಮುಂದುವರಿಸುತ್ತಿದ್ದಾರೆ ತಾಲ್ಲೂಕಿನ ಕಣ್ಣೇಗಾಲ ಸರ್ಕಾರಿ ‍ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿರುವ ರವಿ ಬೈಲೂರು.

ಮೂಲತಃ ಹನೂರು ತಾಲ್ಲೂಕಿನವರಾದ ರವಿ, ತಾವು ಕಲಾ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದು ಮಾತ್ರವಲ್ಲದೇ, ವಿದ್ಯಾರ್ಥಿಗಳಲ್ಲೂ ಕಲೆಯ ಬಗ್ಗೆ ಸೆಳೆತ ಉಂಟು ಮಾಡುತ್ತಿದ್ದಾರೆ.  ಮಕ್ಕಳಿಗೆ ಕಂಸಾಳೆ, ಕೋಲಾಟ, ಮಾರಿ ಕುಣಿತ, ಪಟ ಕುಣಿತ, ಡೊಳ್ಳುಕುಣಿತ... ಮೊದಲಾದ ದೇಸಿ ಕಲೆಗಳನ್ನು ಕಲಿಸುತ್ತಿದ್ದಾರೆ.

ಶಾಲೆಯ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ತಾಲ್ಲೂಕು, ಜಿಲ್ಲಾ ಮಟ್ಟದ  ಕಾರ್ಯಕ್ರಮದಲ್ಲಿ ಇವರ ವಿದ್ಯಾರ್ಥಿಗಳು ಕಲೆಗಳನ್ನು ಪ್ರಸ್ತುತ ಪಡಿಸಿ ಬಹುಮಾನಗಳನ್ನು ಪಡೆದುಕೊಂಡಿದ್ದಾರೆ.

ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪದವಿ ಓದುತ್ತಿದ್ದ ಸಂದರ್ಭದಲ್ಲಿ ರವಿಯವರು ರಂಗಾಯಣದ ನಂಟು ಬೆಳೆಸಿಕೊಂಡರು. ರಂಗಕರ್ಮಿ ಜನಾರ್ದನ್ (ಜನ್ನಿ) ಅವರ ಮಾರ್ಗದರ್ಶನ ದೊರೆತು ಕಲೆಗಳಲ್ಲಿ ಪಳಗಿದರು.

‘ನಾವು ಓದುವ ಸಂದರ್ಭದಲ್ಲಿ ಮನೆಯಲ್ಲಿ ಬಡತನವಿತ್ತು. ಡಿಇಡಿ ಮಾಡಿ ಕೆಲಸಕ್ಕೆ ಸೇರಿದೆ. ಇಲ್ಲದಿದ್ದರೆ ಜಾನಪದ ಕಲೆಗಳಲ್ಲೇ ಬೆಳೆಯುತ್ತಿದ್ದೆ’ ಎಂದು ಹೇಳುತ್ತಾರೆ ರವಿ ಬೈಲೂರು. 

ಸರ್ಕಾರಿ ನೌಕರರಿಗೆ ಏರ್ಪಡಿಸುವ ಸಾಂಸ್ಕೃತಿಕ  ಕಲೆ ಮತ್ತು ಕ್ರೀಡಾ ಸ್ಪರ್ಧೆಗಳಲ್ಲಿ ರಾಜ್ಯ ಮಟ್ಟದಲ್ಲಿ ಪ್ರತಿನಿದಿಸಿದ್ದಾರೆ. ಕಂಸಾಳೆ ನೃತ್ಯ ಮತ್ತು ಕಬಡ್ಡಿ ಪಂದ್ಯಗಳಲ್ಲಿ ಬಹುಮಾನವನ್ನೂ  ಪಡೆದುಕೊಂಡಿದ್ದಾರೆ.

16 ವರ್ಷಗಳ ಶಿಕ್ಷಕ ವೃತ್ತಿ ಜೀವನದಲ್ಲಿ ಕೆಲಸ ಮಾಡಿದ ಎಲ್ಲ ಶಾಲೆಗಳ ವಿದ್ಯಾರ್ಥಿಗಳಿಗೆ ಕಂಸಾಳೆ, ಡೊಳ್ಳು, ಪೂಜಾ ಕುಣಿತ ಕಲಿಸಿದ್ದಾರೆ. 

‘ಸಾಂಸ್ಕೃತಿಕ ಚಟುವಟಿಕೆಗಳೂ ಮುಖ್ಯ’

‘ಮಕ್ಕಳಿಗೆ ಶೈಕ್ಷಣಿಕ ಚಟುವಟಿಕೆ ಜೊತೆಗೆ ಸಾಂಸ್ಕೃತಿಕ ಚಟುವಟಿಕೆಗಳೂ ಮುಖ್ಯ.  ಪದವಿಪೂರ್ವದ ನಂತರ ಸಾಂಸ್ಕೃತಿಕ ಚಟುವಟಿಕೆಗಳಿಗೆ ಅನೇಕ ಕಾಲೇಜುಗಳಲ್ಲಿ ಉತ್ತಮ ಅವಕಾಶವಿದೆ. ಅದನ್ನು ವಿದ್ಯಾರ್ಥಿಗಳು ಬಳಸಿಕೊಂಡರೆ ಕಲೆಗಳ ಮೂಲಕವೇ ಜೀವನ ರೂಪಿಸಿಕೊಳ್ಳಬಹುದು. ಇದೇ ಉದ್ದೇಶದಿಂದ ವಿದ್ಯಾರ್ಥಿಗಳಿಗೆ ನಮ್ಮ ಸ್ಥಳೀಯ ಕಲೆಗಳನ್ನು ಕಲಿಸುತ್ತಿದ್ದೇನೆ’ ಎಂದು ರವಿ ಹೇಳಿದರು.  ‘ನನಗೆ ಕಲೆಗಳಲ್ಲಿ ಬೆಳೆಯಬೇಕು ಎಂಬ ಆಸಕ್ತಿ ಇತ್ತು. ಕಾರಣಾಂತರದಿಂದ ಅದು ಆಗಲಿಲ್ಲ. ಆದರೆ ಕಲೆ ಈಗಲೂ ನನ್ನನ್ನು ಸೆಳೆಯುತ್ತದೆ. ಹಾಗಾಗಿ ಆಸಕ್ತಿ ಮತ್ತು ಪ್ರತಿಭೆಗಳಿರುವ ಮಕ್ಕಳನ್ನು ಗುರುತಿಸಿ ತರಬೇತಿ ನೀಡುತ್ತೇನೆ. ಈ ಕಲೆಗಳು ಮುಂದಿನ ದಿನಗಳಲ್ಲಿ ಅವರ ಕೈ ಹಿಡಿಯಲಿದೆ’ ಎಂದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT