ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಗುಚಿದ ಮಿನಿಲಾರಿ; 40 ಜನರಿಗೆ ಗಾಯ

ಅಂತ್ಯ ಸಂಸ್ಕಾರ ಮುಗಿಸಿ ವಾಪಸ್ಸಾಗುತ್ತಿದ್ದಾಗ ಹಲಗಾಪುರ ಬಳಿ ನಡೆದ ಘಟನೆ
Last Updated 8 ನವೆಂಬರ್ 2020, 3:17 IST
ಅಕ್ಷರ ಗಾತ್ರ

ಹನೂರು: ಸಂಬಂಧಿಕರೊಬ್ಬರ ಶವ ಸಂಸ್ಕಾರಕ್ಕೆ ಹೋಗಿ ವಾಪಸಾಗುತ್ತಿದ್ದಾಗ, ತಾಲ್ಲೂಕಿನ ಹಲಗಾಪುರ ಗ್ರಾಮದ ಬಳಿ ಮಿನಿ ಲಾರಿಯೊಂದು ಮಗುಚಿ 40ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

ಶನಿವಾರ ಸಂಜೆ ದುರ್ಘಟನೆ ನಡೆದಿದೆ. ಆರು ಜನರಿಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದು, ಅವರನ್ನು ಮೈಸೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಗೊಂಡವರೆಲ್ಲ ಹುತ್ತೂರು ಗ್ರಾಮದವರು.

ತಾಲ್ಲೂಕಿನ ಶಾಗ್ಯ ಗ್ರಾಮದಲ್ಲಿ ನಿಧನರಾಗಿದ್ದ ಸಂಬಂಧಿಕರೊಬ್ಬರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳುವುದಕ್ಕೆ ಗ್ರಾಮಸ್ಥರು ಮಿನಿ ಲಾರಿಯಲ್ಲಿ ತೆರಳಿದ್ದರು. ಕಾರ್ಯ ಮುಗಿಸಿ ವಾಪಸ್‌ ಬರುವಾಗ ಚಾಲಕನ ನಿಯಂತ್ರಣ ತಪ್ಪಿ ವಾಹನ ಮಗುಚಿ ಬಿದ್ದಿದೆ. ಲಾರಿಯಲ್ಲಿ 50ರಿಂದ 60 ಜನರು ಇದ್ದರು ಎಂದು ಹೇಳಲಾಗುತ್ತಿದೆ.

35ಕ್ಕೂ ಹೆಚ್ಚು ಜನರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಐವರಿಗೆ ಹೆಚ್ಚು ಗಾಯಗಳಾಗಿವೆ. ಎಲ್ಲರಿಗೂ ಹನೂರು ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಕಾಮಗೆರೆಯ ಹೋಲಿಕ್ರಾಸ್ ಆಸ್ಪತ್ರೆ ಹಾಗೂ ಕೊಳ್ಳೇಗಾಲದ ಉಪವಿಭಾಗ ಆಸ್ಪತ್ರೆಗೆ ದಾಖಲಿಸಲಾಯಿತು.

ಹೋಲಿಕ್ರಾಸ್ ಆಸ್ಪತ್ರೆಗೆ 14 ಜನರು ಚಿಕಿತ್ಸೆಗಾಗಿ ದಾಖಲಾಗಿದ್ದು, ಇವರಲ್ಲಿ ಇಬ್ಬರಿಗೆ ತಲೆಗೆ ಬಲವಾಗಿ ಪೆಟ್ಟು ಬಿದ್ದ ಕಾರಣದಿಂದ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿಗೆ ರವಾನಿಸಲಾಗಿದೆ. ಕೊಳ್ಳೇಗಾಲ ಸರ್ಕಾರಿ ಉಪವಿಭಾಗ ಆಸ್ಪತ್ರೆಗೆ ದಾಖಲಾಗಿದ್ದ 34 ಜನರ ಪೈಕಿ, ನಾಲ್ವರನ್ನು ಮೈಸೂರಿನ ಆಸ್ಪತ್ರೆಗೆ ಕಳುಹಿಸಿಕೊಡಲಾಗಿದೆ.

ಗಾಯಗೊಂಡಿರುವ ಹಲವರಿಗೆ ಬೆನ್ನಿಗೆ ಏಟಾಗಿದೆ ಎಂದು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಘಟನಾ ಸ್ಥಳಕ್ಕೆ ಹನೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಶಾಸಕ ಆರ್.ನರೇಂದ್ರ ಅವರು ಕೊಳ್ಳೇಗಾಲ ಸರ್ಕಾರಿ ಉಪವಿಭಾಗ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದರು.
ಎಲ್ಲರಿಗೂ ಸೂಕ್ತ ಚಿಕಿತ್ಸೆ ನೀಡುವುದರ ಜೊತೆಗೆ, ಅಗತ್ಯವಿದ್ದರೆ ಮೈಸೂರಿಗೆ ರವಾನಿಸುವಂತೆ ವೈದ್ಯರಿಗೆ ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT