ಬುಧವಾರ, ಆಗಸ್ಟ್ 10, 2022
23 °C
ಕೋವಿಡ್‌ ಲಸಿಕೆ ಬಗ್ಗೆ ಜಾಗೃತಿ ಮೂಡಿಸಲು ಬಂದ ಸಚಿವರಿಗೆ ಸೋಲಿಗರ ಪ್ರತಿಕ್ರಿಯೆ

ಗುಂಡ್ಲುಪೇಟೆ: ಜ್ವರಕ್ಕೆ ಕಷಾಯ, ಕಾಡು ಸೊಪ್ಪೇ ಮದ್ದು!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗುಂಡ್ಲುಪೇಟೆ: ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಸುರೇಶ್‌ ಕುಮಾರ್‌ ಅವರು ಶನಿವಾರ ತಾಲ್ಲೂಕಿನ ವಿವಿಧ ಗಿರಿಜನ ಹಾಡಿಗಳಿಗೆ ಭೇಟಿ ನೀಡಿ ಕೋವಿಡ್‌ ಲಸಿಕೆ ಬಗ್ಗೆ ಜಾಗೃತಿ ಮೂಡಿಸಿದರು. 

ಮೇಲುಕಾಮನಹಳ್ಳಿ, ಮಗುವಿನಹಳ್ಳಿ, ಕಾರೆಮಾಳ ಹಾಡಿಗಳಿಗೆ ಸ್ಥಳೀಯ ಶಾಸಕ ಸಿ.ಎಸ್‌.ನಿರಂಜನಕುಮಾರ್ ಹಾಗೂ ಅಧಿಕಾರಿಗಳೊಂದಿಗೆ ಅವರು ಭೇಟಿ ನೀಡಿ ಸೋಲಿಗರೊಂದಿಗೆ ಸಮಾಲೋಚನೆ ನಡೆಸಿ, ಕೋವಿಡ್‌ ಲಸಿಕೆ ಬಗ್ಗೆ ತಿಳಿ ಹೇಳಿದರು. 

ಮೇಲುಕಾಮನಹಳ್ಳಿ ಹಾಡಿಯಲ್ಲಿ, ಜ್ವರ ಅಥವಾ ಬೇರೆ ಕಾಯಿಲೆ ಬಂದರೆ ಏನು ಮಾಡುತ್ತೀರಿ ಎಂದು ಸಚಿವರು ಸೋಲಿಗರನ್ನು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಅವರು, ‘ಕಷಾಯ, ಇನ್ನಿತರ ಕಾಡು ಸೊಪ್ಪು ಬಳಸಿ ಗುಣಪಡಿಸುತ್ತೇವೆ’ ಎಂದು ಉತ್ತರಿಸಿದರು. 

‘ಸರ್ಕಾರದಿಂದ ಸಿಗುವ ಎಲ್ಲಾ ಸೌಲಭ್ಯಗಳು ನಿಮಗೆ ಸಿಗುತ್ತಿದೆಯೇ? ತುಪ್ಪ, ಮೊಟ್ಟೆಗಳನ್ನು ಬಳಸಿಕೊಳ್ಳುತ್ತಿದ್ದೀರಾ ಅಥವಾ ಮಾರಾಟ ಮಾಡಿ ಕೊಳ್ಳುತ್ತಿದ್ದೀರಾ’ ಎಂದು ಸಚಿವರು ಕೇಳಿದಾಗ, ‘ಎಲ್ಲ ಸೌಲಭ್ಯ ಸಿಗುತ್ತಿದೆ. ಹಿಂದಿನವರು ಮಾರಿಕೊಳ್ಳುತ್ತಿದ್ದರು. ಆ ತಪ್ಪನ್ನು ನಾವು ಮಾಡುವುದಿಲ್ಲ’ ಎಂದು ಉತ್ತರಿಸಿದರು.

ಲಸಿಕೆ ಸಹಕಾರಿ: ‘ಕಾಡು ಪ್ರಾಣಿಗಳು ಮನೆಗಳಿಗೆ ಬರದಂತೆ ತಡೆಯಲು ಬೇಲಿಯನ್ನು ಹಾಕಿಕೊಳ್ಳುತ್ತೀರೋ, ಅದೇ ರೀತಿ ಕೋವಿಡ್‌ನಿಂದ ರಕ್ಷಿಸಲು ಲಸಿಕೆ ಸಹಕಾರಿ’ ಎಂದು ಸುರೇಶ್‌ ಕುಮಾರ್‌ ಅವರು ಸೋಲಿಗರಿಗೆ ತಿಳಿ ಹೇಳಿದರು. 

‘ದೇಶದಲ್ಲಿ 23 ಕೋಟಿ ಜನರು ಈ ಲಸಿಕೆ ಪಡೆದುಕೊಂಡಿದ್ದಾರೆ. ಲಸಿಕೆ ಪಡೆದುಕೊಂಡರೆ ಯಾವುದೇ ತೊಂದರೆ ಆಗುವುದಿಲ್ಲ. ಪ್ರಕೃತಿ ಮಡಿಲಲ್ಲಿ ಸ್ವಚ್ಛಂದವಾಗಿರುವ ಗ್ರಾಮಕ್ಕೆ ಕೋವಿಡ್ ವಕ್ಕರಿಸದಿರಲು ಪ್ರತಿಯೊಬ್ಬರೂ ಲಸಿಕೆ ಪಡೆದುಕೊಳ್ಳಿ, ವಯಸ್ಕರಿಗೆ ಸೋಂಕು ಹರಡಿದರೆ ಮಕ್ಕಳಿಗೆ ಬೇಗ ಹರಡುತ್ತದೆ. ಮಕ್ಕಳ ಹಿತದೃಷ್ಟಿಯಿಂದ ಲಸಿಕೆ ಹಾಕಿಸಿಕೊಳ್ಳಿ’ ಎಂದರು.

ಶಾಸಕ ಸಿ.ಎಸ್‌.ನಿರಂಜನ ಕುಮಾರ್ ಅವರು ಮಾತನಾಡಿ, ‘ಲಸಿಕೆ ಪಡೆಯುವುದರಿಂದ ಆರೋಗ್ಯದಿಂದ ಇರುತ್ತೀರಿ. ಕೋವಿಡ್‌ ಮುಕ್ತ ಆರೋಗ್ಯಕರ ಸಮಾಜ ನಿರ್ಮಾಣಕ್ಕಾಗಿ ಎಲ್ಲರೂ ಲಸಿಕೆ ಹಾಕಿಸಿಕೊಳ್ಳಬೇಕು’ ಎಂದು ಹೇಳಿದರು.

ಕಾಡು ಸೇರಿದ ಗಿರಿಜನರು

ಯಳಂದೂರು ತಾಲ್ಲೂಕಿನ ಪುರಾಣಿ ಪೋಡಿನಲ್ಲಿ ಶುಕ್ರವಾರ ಜರುಗಿದ ಪ್ರಸಂಗ, ಶನಿವಾರ ಮಗುವಿನಹಳ್ಳಿ ಗಿರಿಜನ ಕಾಲೊನಿಯಲ್ಲಿ ಪುನರಾವರ್ತನೆಯಾಯಿತು. 

ಸಚಿವರು, ಶಾಸಕರು ಹಾಗೂ ಅಧಿಕಾರಿಗಳು ಬರುವುದನ್ನು ಗಮನಿಸಿದ ಗಿರಿಜನರು, ಮನೆಗೆ ಬೀಗ ಹಾಕಿ ಕಾಡು ಸೇರಿದರು. 

ಸಚಿವರು ಕಾಲೊನಿಯ ಎಲ್ಲಾ ಮನೆಗಳಿಗೆ ಭೇಟಿ ನೀಡಿ ಸಿಕ್ಕಿದ ಕೆಲವು ಜನರಿಗೆ ಲಸಿಕೆ ಪಡೆಯುವಂತೆ ಮನವಿ ಮಾಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು