ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್ಲ ಕೆರೆಗಳ ಭರ್ತಿಗೆ ಯೋಜನೆ: ಮಾಧುಸ್ವಾಮಿ

ಮಹದೇಶ್ವರ ಬೆಟ್ಟ: ಕೆರೆ ತುಂಬಿಸಲು ಮಾಸ್ಟರ್‌ ಪ್ಲಾನ್‌ ಶಾಸಕರು, ಅಧಿಕಾರಿಗಳೊಂದಿಗೆ ಚರ್ಚೆ
Last Updated 19 ಏಪ್ರಿಲ್ 2021, 14:28 IST
ಅಕ್ಷರ ಗಾತ್ರ

ಮಹದೇಶ್ವರ ಬೆಟ್ಟ: ಸಣ್ಣ ನೀರಾವರಿ ಸಚಿವ ಜೆ.ಸಿ.ಮಾಧುಸ್ವಾಮಿ ಅವರು ಸೋಮವಾರ ಚಾಮರಾಜನಗರ ಜಿಲ್ಲಾ ವ್ಯಾಪ್ತಿಗೆ ಬರುವ ಕೆರೆಗಳಿಗೆ ಏತ ನೀರಾವರಿ ಯೋಜನೆಯ ಮೂಲಕ ನೀರು ತುಂಬಿಸುವ ಮಾಸ್ಟರ್ ಪ್ಲಾನ್ ಬಗ್ಗೆ ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು.

ಬೆಟ್ಟದಲ್ಲಿ ನಡೆದ ಸಭೆಯಲ್ಲಿ ಸಚಿವರು, ಶಾಸಕರಾದ ಆರ್.ನರೇಂದ್ರ, ಎನ್.ಮಹೇಶ್, ಸಿ.ಎಸ್.ನಿರಂಜನ ಕುಮಾರ್ ಹಾಗೂ ಇಲಾಖೆಯ ಹಿರಿಯ ಅಧಿಕಾರಿಗಳ ಅಭಿಪ್ರಾಯ ಆಲಿಸಿದರು. ಜಿಲ್ಲಾ ವ್ಯಾಪ್ತಿಯ ಸಣ್ಣ ನೀರಾವರಿ ಇಲಾಖೆಯ ಕಾಮಗಾರಿಯ ಪ್ರಗತಿಯನ್ನೂ ಪರಿಶೀಲಿಸಿದರು.

ಸಭೆಯಲ್ಲಿ ಮಾತನಾಡಿದ ಜೆ.ಸಿ. ಮಾಧುಸ್ವಾಮಿ ಅವರು,‘ದಿನದಿಂದ ದಿನಕ್ಕೆ ಕುಸಿಯುತ್ತಿರುವ ಅಂತರ್ಜಲ ಮಟ್ಟವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಏತ ನಿರಾವರಿ ಯೋಜನೆಯನ್ನು ಕೈಗೊಳ್ಳುವುದು ಉತ್ತಮ. ಜಿಲ್ಲೆಯ ನಾಲ್ಕು ತಾಲ್ಲೂಕುಗಳಿಗೆ ಕಬಿನಿ ನದಿಯಿಂದ ನೀರು ಪೂರೈಸುವ ಏತ ನಿರಾವರಿ ಯೋಜನೆಯನ್ನು ಕೈಗೊಳ್ಳಲಾಗಿದೆ. ಬಹುತೇಕ ಕಡೆಗಳಲ್ಲಿ 1,500 ರಿಂದ 2,000 ಸಾವಿರ ಅಡಿ ಕೊಳವೆ ಬಾವಿ ಕೊರೆಸಿದರೂ ನೀರು ದೊರೆಯುತ್ತಿಲ್ಲ. 400 ರಿಂದ 450 ಅಡಿ ಮಟ್ಟದಲ್ಲಿ ಅಂತರ್ಜಲ ದೊರೆಯುವ ನಿಟ್ಟಿನಲ್ಲಿ ಯೋಜನೆ ರೂಪಿಸಬೇಕಾಗಿದೆ’ ಎಂದರು.

‘ಜಿಲ್ಲಾ ವ್ಯಾಪ್ತಿ ಎಲ್ಲ ಕೆರೆಗಳಿಗೂ ನೀರು ತುಂಬಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸಬೇಕಿದೆ. ಕೊನೆಯ ಭಾಗದವರೆಗೂ ನೀರು ಹರಿಸುವ ಉದ್ದೇಶವನ್ನು ಒಳಗೊಂಡಂತೆ ಯೋಜನೆ ಸಿದ್ಧಪಡಿಸಬೇಕಿದೆ. ಹೀಗಾಗಿ ವಿಸ್ತೃತ ಯೋಜನಾ ವರದಿಯನ್ನು ಅಧಿಕಾರಿಗಳು ನೀಡಬೇಕು. ಈ ಬಗ್ಗೆ ಮತ್ತೊಮ್ಮೆ ಜಿಲ್ಲೆಯ ಜನಪ್ರತಿನಿಧಿಗಳ ಸಭೆ ಕರೆದು ಚರ್ಚಿಸಲಾಗುತ್ತದೆ. ಅಧಿಕಾರಿಗಳು ವಿವರವಾಗಿ ಯೋಜನೆ ಸಿದ್ಧಪಡಿಸಬೇಕು’ ಎಂದು ಸಚಿವರು ತಿಳಿಸಿದರು.

ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಜೆ.ಸಿ.ಮಾಧುಸ್ವಾಮಿ ಅವರು, ‘ಜಿಲ್ಲೆಯಲ್ಲಿ 300ಕ್ಕೂ ಹೆಚ್ಚು ಕೆರೆಗಳಿದ್ದು, ಈ ಪೈಕಿ ಸಣ್ಣ ನೀರಾವರಿ ಇಲಾಖೆಗೆ ಸೇರಿದ 64 ಕೆರೆಗಳಿವೆ. ಎಲ್ಲ ಕೆರೆಗಳಿಗೆ ನೀರು ತುಂಬಿಸಬೇಕೆಂಬ ರೂಪುರೇಷೆ ಮಾಡಬೇಕಿರುವ ನಿಟ್ಟಿನಲ್ಲಿ ನಮ್ಮ ಇಲಾಖೆಯಿಂದ ಮಾಸ್ಟರ್ ಪ್ಲಾನ್ ಮಾಡಿಸಿ ಇದಕ್ಕೆ ಸೇರ್ಪಡೆ ಹಾಗೂ ಮಾರ್ಪಾಡು ಮಾಡುವ ಸಂಬಂಧ ಜಿಲ್ಲೆಯ ಶಾಸಕರು ಹಾಗೂ ಅಧಿಕಾರಿಗಳೊಂದಿಗೆ ಸಭೆ ನಡೆಸಿ ವಿವರವಾಗಿ ಚರ್ಚೆ ಮಾಡಲಾಗಿದೆ’ ಎಂದರು.

‘ಇಲಾಖೆ ವ್ಯಾಪ್ತಿಯ 64 ಕೆರೆಗಳ ಪೈಕಿ ಈಗಾಗಲೇ 29 ಕೆರೆಗಳಿಗೆ ನೀರು ತುಂಬಿಸಲಾಗುತ್ತಿದೆ. ಉಳಿದ ಕೆರೆಗಳ ನಿರ್ವಹಣೆ ಕಾರ್ಯ ಮಾಡಲಾಗುತ್ತಿದ್ದು, ಇದಕ್ಕೆ ಯಾವುದೇ ಅಡಚಣೆಯಾಗಿಲ್ಲ. ಇಲಾಖೆ ವ್ಯಾಪ್ತಿಯ ಕೆರೆಗಳು ಸುಸ್ಥಿತಿಯಲ್ಲಿವೆ. ಜಿಲ್ಲೆಯ ಎಲ್ಲ ಕೆರೆಗಳು ಸದುಪಯೋಗವಾಗುವ ಉದ್ದೇಶದೊಂದಿಗೆ ಮಾಸ್ಟರ್ ಪ್ಲಾನ್ ಮಾಡಲಾಗುತ್ತಿದೆ’ ಎಂದರು.

ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ದಿ ಇಲಾಖೆಯ ಕಾರ್ಯದರ್ಶಿ ಮೃತ್ಯುಂಜಯಸ್ವಾಮಿ, ಪ್ರಧಾನ ಎಂಜಿನಿಯರ್ ಎಚ್.ಎಲ್. ಪ್ರಸನ್ನ, ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ದಿ ಇಲಾಖೆಯ ಮೈಸೂರು ವಿಭಾಗದ ಕಾರ್ಯಪಾಲಕ ಎಂಜಿನಿಯರ್ ಆರ್.ನರೇಂದ್ರಬಾಬು, ಚಾಮರಾಜನಗರ ವಿಭಾಗದ ಸಣ್ಣ ನೀರಾವರಿ ಇಲಾಖೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಎ.ಎಸ್.ಭಾಸ್ಕರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT