ಮಂಗಳವಾರ, ಡಿಸೆಂಬರ್ 1, 2020
25 °C

ಮಹದೇಶ್ವರ ಬೆಟ್ಟ: ತೆಪ್ಪೋತ್ಸವದೊಂದಿಗೆ ದೀಪಾವಳಿ ಜಾತ್ರೆಗೆ ತೆರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಹದೇಶ್ವರ ಬೆಟ್ಟ: ದೀಪಾವಳಿ ಜಾತ್ರೆಯ ಸಮಯದಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಭಕ್ತರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದ್ದ ಇಲ್ಲಿನ ಮಲೆ ಮಹದೇಶ್ವರ ಸ್ವಾಮಿ ದೇವಾಲಯದಲ್ಲಿ ಮಂಗಳವಾರ ಬೆಳಿಗ್ಗೆಯಿಂದ ಭಕ್ತರ ಪ್ರವೇಶಕ್ಕೆ ಅನುಮತಿ ನೀಡಲಾಗಿದೆ. 

ಜಿಲ್ಲೆ ಹಾಗೂ ಹೊರ ಜಿಲ್ಲೆಗಳ ನೂರಾರು ಭಕ್ತರು ದೀಪಾವಳಿ ಜಾತ್ರೆ ಮುಗಿದ ಮರುದಿನ ಮಾದಪ್ಪನ ದರ್ಶನ ಪಡೆದರು. ಮಂಗಳವಾರದಿಂದ ಕೋವಿಡ್‌ ನಿಯಮ ಪಾಲನೆ ಮಾಡಿಕೊಂಡು ಭಕ್ತರಿಗೆ ಉಪಾಹಾರ ರೂಪದಲ್ಲಿ ಪ್ರಸಾದ ಒದಗಿಸಲಾಗುತ್ತಿದೆ. 

ಮುಗಿದ ಸರಳ ಜಾತ್ರೆ: ಶುಕ್ರವಾರ ಆರಂಭವಾಗಿದ್ದ ಸರಳ, ಸಾಂಪ್ರದಾಯಿಕ ದೀಪಾವಳಿ ಜಾತ್ರಾ ಮಹೋತ್ಸವ ಸೋಮವಾರ ರಾತ್ರಿ ಮಹದೇಶ್ವರ ಸ್ವಾಮಿಯ ತೆಪ್ಪೊತ್ಸವದೊಂದಿಗೆ ಮುಕ್ತಾಯವಾಯಿತು.

ಕೋವಿಡ್‌ ಕಾರಣದಿಂದ ಈ ಬಾರಿ ದೀಪಾವಳಿ ಜಾತ್ರೆ ಭಕ್ತರ ಅನುಪಸ್ಥಿತಿಯಲ್ಲಿ, ಸ್ಥಳೀಯರು ಹಾಗೂ ಬೇಡಗಂಪಣ ಸಮುದಾಯದವರ ಸಮ್ಮುಖದಲ್ಲಿ  ಸಾಂಪ್ರದಾಯಿಕ ವಿಧಿ ವಿಧಾನಗಳೊಂದಿಗೆ ನಡೆಯಿತು. ಭಕ್ತರು ಇಲ್ಲದೇ ಇದ್ದುದರಿಂದ ಗೌಜು ಗದ್ದಲ ಕಂಡು ಬರ‌ಲಿಲ್ಲ.   

ನಾಲ್ಕು ದಿನಗಳ ಜಾತ್ರಾ ಮಹೋತ್ಸವದಲ್ಲಿ ಮೊದಲ ಮೂರು ದಿನ ಮಹದೇಶ್ವರಸ್ವಾಮಿಗೆ ಎಣ್ಣೆ ಮಜ್ಜನದ ಸೇವೆ, ಪುಷ್ಪಾರ್ಚನೆ, ಬಿಲ್ವಾರ್ಚನೆ, ತೈಲಾಭಿಷೇಕ, ಗಂದಾಭಿಷೇಕ, ಕುಂಕುಮಾರ್ಚನೆ ಸೇರಿದಂತೆ ವಿವಿಧ ಪೂಜೆಗಳನ್ನು ನೆರವೇರಿಸಲಾಯಿತು. ಅಮಾವಾಸ್ಯೆ ದಿನ ಹಾಲರವಿ ಉತ್ಸವ ನಡೆಯಿತು. ನಂತರ ದೇವಾಲಯದ ಒಳ ಆವರಣದಲ್ಲಿ ಬಿಳಿ ಆನೆ ಉತ್ಸವ, ಕುದುರೆ ಉತ್ಸವ ಮುಂತಾದ ಸೇವೆಗಳೂ ನೆರವೇರಿದವು. 

ಬಲಿ ಪಾಡ್ಯಮಿ ದಿನ ಬೆಳಗಿನ ಜಾವ ಪ್ರತಿ ವರ್ಷ ಮಹಾರಥೋತ್ಸವ ನಡೆಯುತ್ತದೆ. ಈ ಬಾರಿ ಕೋವಿಡ್‌ ಕಾರಣದಿಂದ ರದ್ದುಗೊಳಿಸಲಾಗಿತ್ತು. ರಾತ್ರಿ ದೊಡ್ಡಕೆರೆಯಲ್ಲಿ ತೆಪ್ಪೋತ್ಸವ ನೆರವೇರಿತು. 

ಸಾಲೂರು ಮಠದ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ನೇತೃತ್ವದಲ್ಲಿ ಮಹದೇಶ್ವರ ಸ್ವಾಮಿಗೆ ಪೂಜೆ ನೆರವೇರಿಸಿದ ಬಳಿಕ, ಉತ್ಸವ ಮೂರ್ತಿಯನ್ನು ಮಂಗಳವಾದ್ಯಗಳ ಸಮೇತವಾಗಿ ಮೆರವಣಿಗೆ ಮೂಲಕ ದೇವಾಲಯದ ಮುಂಭಾಗದಲ್ಲಿರುವ ದೊಡ್ಡಕೆರೆಯ ಬಳಿ ಬಂದು ತೆಪ್ಪದಲ್ಲಿ ಪ್ರತಿಷ್ಠಾಪಿಸಿ ತೆಪ್ಪೋತ್ಸವವನ್ನು ನಡೆಸಲಾಯಿತು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು