ಸೋಮವಾರ, ಜುಲೈ 26, 2021
26 °C
ಮಹದೇಶ್ವರ ಬೆಟ್ಟ: 70 ದಿನಗಳ ನಂತರ ಭಕ್ತರಿಗೆ ದೇವಾಲಯ ಮುಕ್ತ, ನಿಯಮ ಪಾಲನೆ

ಪವಾಡ ಪುರುಷ ಮಾದಪ್ಪನ ಕಣ್ತುಂಬಿಕೊಂಡ ಭಕ್ತ‌ರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಹದೇಶ್ವರ ಬೆಟ್ಟ: ಕೊರೊನಾ ವೈರಸ್‌ ಹಾವಳಿ ತಡೆಯುವುದಕ್ಕಾಗಿ ಎರಡೂವರೆ ತಿಂಗಳ ಹಿಂದೆ ಭಕ್ತರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದ್ದ ಇಲ್ಲಿನ ಪ್ರಸಿದ್ಧ ಮಲೆ ಮಹದೇಶ್ವರ ಸ್ವಾಮಿ ದೇವಾಲಯ ಸೋಮವಾರ ಭಕ್ತರಿಗೆ ಮುಕ್ತವಾಯಿತು. 

ಮೊದಲ ದಿನವೇ ಐದು ಸಾವಿರಕ್ಕೂ ಹೆಚ್ಚು ಭಕ್ತರು ಪವಾಡ ಪುರುಷ ಮಾದಪ‍್ಪನ ದರ್ಶನ ಪಡೆದು ಕೃತಾರ್ಥರಾದರು. ಸ್ಥಳೀಯರು ಮಾತ್ರವಲ್ಲದೇ ಹೊರ ಜಿಲ್ಲೆಗಳಿಂದಲೂ ಭಕ್ತರು ತಮ್ಮ ಸ್ವಂತ ಹಾಗೂ ಬಾಡಿಗೆ ವಾಹನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದರು. 

ಸೋಮವಾರ ಸೂರ್ಯ ಉದಯಿಸುವುದಕ್ಕೂ ಮುನ್ನವೇ ಮಹದೇಶ್ವರ ಭಕ್ತರ ದಂಡು ಹರಿದು ಬಂದಿತ್ತು. ಸುರಕ್ಷಿತ ಅಂತರ ಕಾಪಾಡುವುದರ ಜೊತೆಗೆ, ಮಾಸ್ಕ್‌ ಧರಿಸುವುದನ್ನು ಕಡ್ಡಾಯ ಮಾಡಲಾಗಿತ್ತು. ಭಕ್ತರು ದೇವಾಲಯಕ್ಕೆ ಪ್ರವೇಶಿಸುವುದಕ್ಕೂ ಮೊದಲು ಥರ್ಮಲ್‌ ಸ್ಕ್ರೀನಿಂಗ್‌ ಮಾಡಲಾಯಿತು. ಮಂಗಳಾರತಿಗೆ ದೂರದಿಂದಲೇ ಕೈ ಮುಗಿಯುವುದಕ್ಕೆ ಅವಕಾಶ ನೀಡಲಾಗಿತ್ತು. ಸರ್ಕಾರದ ಸೂಚನೆಯಿಂದ ತೀರ್ಥ ಪ್ರಸಾದ ನೀಡುವ ವ್ಯವಸ್ಥೆ ಇರಲಿಲ್ಲ. ಲಾಡು ಪ್ರಸಾದ ಹಾಗೂ ಉಪಾಹಾರದ ವ್ಯವಸ್ಥೆಯನ್ನು ಮಾಡಲಾಗಿತ್ತು. ಮೊದಲ ದಿನ ಎಂಟು ಸಾವಿರ ಲಾಡು ಮಾರಾಟವಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

ಒಂದು ಬಾರಿ ಸ್ವಾಮಿಯ ದರ್ಶನಕ್ಕೆ ಗರಿಷ್ಠ 180 ಭಕ್ತರಿಗೆ ಮಾತ್ರ ಅವಕಾಶ ನೀಡಲಾಗಿತ್ತು. 

ದರ್ಶನ ಮಾಡಿದ ನಂತರ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಕನಕಪುರದ  ರಾಜಶೇಖರ್‌ ಅವರು, ‘ಮಾದಪ್ಪನ ದರ್ಶನ ಮಾಡದೆ ನಮ್ಮ ಮನಸ್ಸಿಗೆ ನೆಮ್ಮಧಿಯಿರಲಿಲ್ಲ. ಈಗ ದರ್ಶನ ಸಿಕ್ಕಿರುವುದರಿಂದ ಸಮಾಧಾನವಾಗಿದೆ. ಮುನ್ನೆಚ್ಚರಿಕೆ ಕ್ರಮಗಳನ್ನು ಇಲ್ಲಿ ಕಟ್ಟುನಿಟ್ಟಾಗಿ ಪಾಲಿಸಲಾಗಿದೆ. ಇಂತಹ ಕ್ರಮಗಳಿಂದಾಗಿಯೇ ಚಾಮರಾಜನಗರ ಜಿಲ್ಲೆ ಕೋವಿಡ್‌–19 ಮುಕ್ತವಾಗಿದೆ. ಈ ಕ್ರಮಗಳು ಹೀಗೆಯೇ ಮುಂದುವರಿಯಲಿ’ ಎಂದು ಅವರು ಹೇಳಿದರು. 

ಮೊದಲ ದಿನ ಐದು ಸಾವಿರಕ್ಕೂ ಹೆಚ್ಚು ಭಕ್ತರು ಸ್ವಾಮಿಯ ದರ್ಶನ ಮಾಡಿದ್ದಾರೆ. ಭಕ್ತರ ಸಂಖ್ಯೆ ದಿನ ದಿನ ಹೆಚ್ಚಾಗಲಿರುವುದರಿಂದ ಇನ್ನೂ ಹೆಚ್ಚಿನ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುವುದು. ದೇವಾಲಯದಲ್ಲಿ ಕೆಲಸ ನಿರತ ಎಲ್ಲ ಸಿಬ್ಬಂದಿಗೆ ಮಾಸ್ಕ್‌ ನೀಡಲಾಗಿದೆ. ಮಾಸ್ಕ್‌ ಧರಿಸದೇ ಬರುವ ಭಕ್ತರಿಗೂ ಪ‍್ರಾಧಿಕಾರದ ವತಿಯಿಂದ ಮಾಸ್ಕ್‌ ನೀಡಲಾಗುತ್ತಿದೆ’ ಎಂದು ಮಲೆ ಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವಸ್ವಾಮಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು. 

ಬಸ್‌ನಲ್ಲಿ ಬಂದವರು ಕಡಿಮೆ: ಭಕ್ತರ ಅನುಕೂಲಕ್ಕಾಗಿ ಕೆಎಸ್‌ಆರ್‌ಟಿಸಿಯು ಬಸ್‌ ವ್ಯವಸ್ಥೆ ಮಾಡಿತ್ತು. ಮೊದಲ ದಿನ ಬಸ್‌ನಲ್ಲಿ ಪ್ರಯಾಣ ಮಾಡಿದ ಭಕ್ತರ ಸಂಖ್ಯೆ ಕಡಿಮೆ ಇತ್ತು. 

‘ಜಿಲ್ಲೆಯ ವಿವಿಧ ಕಡೆಗಳಿಂದ 10 ಬಸ್‌ಗಳನ್ನು ಹಾಕಿದ್ದೆವು. ಪ್ರತಿ ಬಸ್‌ನಲ್ಲಿ 15–30 ಪ್ರಯಾಣಿಕರಿದ್ದರು. ಗರಿಷ್ಠ ಅಂದರೆ 400ರಿಂದ 500 ಪ್ರಯಾಣಿಕರು ನಮ್ಮ ಬಸ್‌ಗಳಲ್ಲಿ ಪ್ರಯಾಣಿಸಿರಬಹುದು’ ಎಂದು ಕೆಎಸ್‌ಆರ್‌ಟಿಸಿ ಚಾಮರಾಜನಗರ ವಿಭಾಗದ ನಿಯಂತ್ರಣಾಧಿಕಾರಿ ಕೆ.ಎಚ್‌.ಶ್ರೀನಿವಾಸ್‌ ಅವರು ತಿಳಿಸಿದರು. 

ಬೆಟ್ಟಕ್ಕೆ ಡಿ.ಸಿ ಭೇಟಿ, ಪರಿಶೀಲನೆ

ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ಸೋಮವಾರ ಮಹದೇಶ್ವರ ಬೆಟ್ಟಕ್ಕೆ ಭೇಟಿ ನೀಡಿ ಮಾದಪ್ಪನ ದರ್ಶನ ಪಡೆಯುವುದರ ಜೊತೆಗೆ ಕೈಗೊಂಡಿರುವ ಮುಂಜಾಗ್ರತಾ ಕ್ರಮಗಳನ್ನು ಪರಿಶೀಲಿಸಿದರು. 

ಆರೋಗ್ಯ ತಪಾಸಣೆ (ಸ್ಕ್ರೀನಿಂಗ್), ಅಂತರ ಕಾಯ್ದುಕೊಳ್ಳುವುದಕ್ಕಾಗಿ ಮಾಡಿರುವ ವ್ಯವಸ್ಥೆ, ಸ್ಯಾನಿಟೈಸರ್‌ ಬಳಕೆ ಸೇರಿದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ವೀಕ್ಷಿಸಿದರು. 

ಲಾಡು ಪ್ರಸಾದ ಸಿದ್ದಪಡಿಸುವ ಕೊಠಡಿಗೂ ಭೇಟಿ ಕೊಟ್ಟರು. ಲಾಡು, ಇತರೆ ಮಿಶ್ರ ಪ್ರಸಾದ ಮಾರಾಟ ಮಾಡುವ ಕೌಂಟರ್‌ಗಳಿಗೂ ಭೇಟಿ ನೀಡಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ಅವರು, ಕ್ಷೇತ್ರ ಅಬಿವೃದ್ಧಿ ಪ್ರಾಧಿಕಾರ ಕೈಗೊಂಡಿರುವ ಮುಂಜಾಗ್ರತಾ ಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. 

‘ದೇವಾಲಯದ ಪ್ರವೇಶ ದ್ವಾರದಲ್ಲಿಯೇ ಸ್ಕ್ರೀನಿಂಗ್ ಮಾಡಿ ಭಕ್ತಾಧಿಗಳ ಕೈಗಳಿಗೆ ಸ್ಯಾನಿಟೈಸರ್ ನೀಡಲಾಗುತ್ತಿದೆ. ಅರ್ಚಕರು ಸೇರಿದಂತೆ ದೇವಾಲಯ ಕ್ಷೇತ್ರದ ಸಿಬ್ಬಂದಿ ಸಹ ಮುಂಜಾಗ್ರತಾ ಕ್ರಮಗಳಾಗಿ ಮಾಸ್ಕ್, ಕೈಗವಸುಗಳನ್ನು ಧರಿಸಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ’ ಎಂದರು. 

ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವಸ್ವಾಮಿ, ಉಪಕಾರ್ಯದರ್ಶಿ ಬಸವರಾಜು, ತಾಂತ್ರಿಕ ಸಲಹೆಗಾರ ಕುಮಾರ್ ಇದ್ದರು. 

--

ಲಾಕ್‌ಡೌನ್ ಕ್ರಮವಾಗಿ ವಿಧಿಸಿರುವ ಷರತ್ತುಗಳನ್ನು ವ್ಯವಸ್ಥಿತವಾಗಿ ಪಾಲಿಸಲಾಗುತ್ತಿದೆ. ಸದ್ಯಕ್ಕೆ ವಿವಿಧ ಉತ್ಸವ ಹಾಗೂ ಸೇವೆಗಳನ್ನು ನಿಷೇಧಿಸಲಾಗಿದೆ
ಡಾ.ಎಂ.ಆರ್.ರವಿ, ಜಿಲ್ಲಾಧಿಕಾರಿ

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು