ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿ–ಶಾ ಒಂದೇ ನಾಣ್ಯದ ಎರಡು ಮುಖಗಳು

ಸಿಎಎ, ಎನ್‌ಪಿಆರ್‌, ಎನ್‌ಆರ್‌ಸಿ ವಿರೋಧಿಸಿ ಸಂವಿಧಾನ ಸಂರಕ್ಷಣಾ ಸಮಾವೇಶ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ
Last Updated 7 ಮಾರ್ಚ್ 2020, 15:31 IST
ಅಕ್ಷರ ಗಾತ್ರ

ಚಾಮರಾಜನಗರ: ‘ಪ್ರಧಾನಿ ನರೇಂದ್ರ ಮೋದಿ ಅವರಿಗೆ ಎಷ್ಟು ಒಳ್ಳೆಯ ಸಂವಿಧಾನವನ್ನು ಬೇಕಾದರೂ ಕೊಡಿ, ಅದನ್ನು ಅವರು ಕೆಡಿಸಿ ಬಿಡುತ್ತಾರೆ’ ಎಂದು ಕಾಂಗ್ರೆಸ್‌ನ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ವಾಗ್ದಾಳಿ ನಡೆಸಿದರು.

ಸಂವಿಧಾನ ಪ್ರಚಾರ ಸಮಿತಿ, ಇಸ್ಲಾಹುಲ್‌ ಮುಸ್ಲಿಮೀನ್‌ ಹಾಗೂ ಸಂವಿಧಾನ ಸಂರಕ್ಷಣಾ ವೇದಿಕೆಯುಎನ್‌ಪಿಆರ್ (ರಾಷ್ಟ್ರೀಯ ಜನಸಂಖ್ಯೆ ನೋಂದಣಿ), ಸಿಎಎ (ಪೌರತ್ವ ತಿದ್ದುಪಡಿ ಕಾಯ್ದೆ) ಮತ್ತು ಎನ್‌ಆರ್‌ಸಿ (ರಾಷ್ಟ್ರೀಯ ಪೌರತ್ವ ನೋಂದಣಿ) ವಿರೋಧಿಸಿ ಡಾ.ಬಿ.ಆರ್‌.ಅಂಬೇಡ್ಕರ್‌ ಜಿಲ್ಲಾ ಕ್ರೀಡಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸಂವಿಧಾನ ಸಂರಕ್ಷಣಾ ಸಮಾವೇಶದಲ್ಲಿ ಅವರು ಮಾತನಾಡಿದರು.

‘ನಿರುದ್ಯೋಗ ಸಮಸ್ಯೆ, ಆರ್ಥಿಕ ಹಿಂಜರಿತ ದೇಶವನ್ನು ಕಾಡುತ್ತಿದೆ. ಇದನ್ನು ಜನರು ಪ್ರಶ್ನಿಸಿದರೆ ಮೋದಿಯವರು ವರಸೆ ಬದಲಿಸುತ್ತಾರೆ. ದೇಶಪ್ರೇಮ, ಪುಲ್ವಾಮ, ಪಾಕಿಸ್ತಾನದ ವಿಚಾರಗಳನ್ನು ಪ್ರಸ್ತಾಪಿಸುತ್ತಾರೆ. ನಾವೇನು ದೇಶದ್ರೋಹಿಗಳೇ? ನಮಗೆ ದೇಶಪ್ರೇಮ ಇಲ್ಲವೇ? ದೇಶದಲ್ಲಿ ಸದಾ ಅಶಾಂತಿ ಇದ್ದರೆ ಜನ ಎಲ್ಲವನ್ನೂ ಮರೆತು ಬಿಡುತ್ತಾರೆ ಎಂಬುದು ಅವರ ಭಾವನೆ. ಅದಕ್ಕೆ ಬೇಕಾದ ಎಲ್ಲವನ್ನೂ ಮಾಡುತ್ತಾರೆ’ ಎಂದು ಆಕ್ರೋಶ ವ್ಯಕ್ತಪ‍ಡಿಸಿದರು.

‘ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್‌ ಶಾ ಅವರು ಒಂದೇ ನಾಣ್ಯದ ಎರಡು ಮುಖಗಳು. ಮೋದಿ ಹೇಳಿದ್ದನ್ನು ಅಮಿತ್ ಶಾ ಮಾಡುತ್ತಾರೆ. ಕೇಂದ್ರ ಸರ್ಕಾರವನ್ನು ನಾಗಪುರದಿಂದಆರ್‌ಎಸ್ಎಸ್‌ ನಡೆಸುತ್ತಿದೆ’ ಎಂದು ಆರೋಪಿಸಿದರು.

ಎಲ್ಲರ ಸಂವಿಧಾನ: ‘ಸಂವಿಧಾನ ಎಂದರೆ ದಲಿತರದ್ದು ಎಂಬ ಭಾವನೆ ಕೆಲವರಲ್ಲಿದೆ. ದೀನ ದಲಿತರು, ಬಡವರು ಸೇರಿದಂತೆ ಎಲ್ಲ ವರ್ಗದವರಿಗೆ ಸೇರಿದ ಸಂವಿಧಾನ ಇದು. ಸಂವಿಧಾನವನ್ನು ಉಳಿಸಲು ನಾವು ಒಗ್ಗಟ್ಟಿನಿಂದ ಹೋರಾಡಬೇಕಿದೆ’ ಎಂದು ಕರೆ ನೀಡಿದರು.

‘ಸಿಎಎ, ಎನ್‌ಪಿಆರ್‌, ಎನ್‌ಆರ್‌ಸಿಗಳಿಂದ ಮುಸ್ಲಿಮರಿಗೆ ಮಾತ್ರ ತೊಂದರೆ ಉಳಿದವರಿಗೆ ಏನೂ ಆಗುವುದಿಲ್ಲ ಎಂದು ಕೆಲವರು ಬಿಂಬಿಸುತ್ತಿದ್ದಾರೆ. ಹಿಂದೂಗಳು ಸೇರಿದಂತೆ ಎಲ್ಲರಿಗೂ ತೊಂದರೆ ಇದೆ. ಈ ದೇಶದಲ್ಲಿ ಮೇಲ್ವರ್ಗದ ಶೇ 5ರಷ್ಟು ಮಂದಿಯ ಬಳಿ ಮಾತ್ರ ದಾಖಲೆಗಳು ಇರಬಹುದು. ಉಳಿದ ಶೇ 95 ರಷ್ಟು ಮಂದಿ ಬಳಿ ಇಲ್ಲ’ ಎಂದು ಎಚ್ಚರಿಸಿದರು.

‘ಸಂವಿಧಾನ ವಿರೋಧಿಯಾಗಿರುವ ಯಾವುದೇ ಕಾನೂನನ್ನು ಎಲ್ಲರೂ ವಿರೋಧಿಸಬೇಕು. ಸಂವಿಧಾನ ಕೊಟ್ಟಿರುವ ಸವಲತ್ತನ್ನು ಎಲ್ಲರಿಗೂ ತಲುಪಿಸಲು ಶ್ರಮಿಸಬೇಕು’ ಎಂದರು.

ಕಾಂಗ್ರೆಸ್‌ ಶಾಸಕ ರಮೇಶ್‌ ಕುಮಾರ್‌ ಅವರು ಮಾತನಾಡಿ, ‘ಸಮಸ್ಯೆ ಇಲ್ಲದಿರುವಾಗ ಸರ್ಕಾರವೇ ಸಮಸ್ಯೆಯನ್ನು ಸೃಷ್ಟಿಸಿ ಮನೆಯಲ್ಲಿದ್ದವರು ಬೀದಿಗೆ ಬರುವಂತೆ ಮಾಡುವುದು ಯಾವ ಪ್ರಜಾಪ್ರಭುತ್ವವೋ ನನಗೆ ಗೊತ್ತಿಲ್ಲ. ಈಗ ದೇಶಸವನ್ನು ಆಳುತ್ತಿರುವವರು ಸ್ವಾತಂತ್ರ್ಯ ಸಂದರ್ಭದಲ್ಲಿ ಬ್ರಿಟಿಷರ ಪರವಾಗಿ ಇದ್ದರು. ಆಗ, ಬೀದಿಗಿಳಿದು ಹೋರಾಟ ಮಾಡಿ ಜೈಲಿಗೆ ಹೋದವರು, ಪ್ರಾಣ ಕಳೆದುಕೊಂಡ ಕುಟುಂಬದವರು ಈಗ ಆಳುತ್ತಿರುವ ಸರ್ಕಾರದ ವಿರುದ್ಧ ಮತ್ತೆ ಬೀದಿಗಿಳಿಯಬೇಕಾಗಿ ಬಂದಿದೆ’ ಎಂದರು.

ಅಂಬೇಡ್ಕರ್‌ ದೇಶದ ಅಡಿಪಾಯ: ‘ಅಂಬೇಡ್ಕರ್‌ ಅವರ ನಿಜವಾದ ಮಾನವೀಯ ಗುಣಗಳನ್ನು ಜನರಿಗೆ ಪರಿಚಯಿಸಿದೆ ನಾವು ತಪ್ಪು ಮಾಡಿದ್ದೇವೆ. ಅವರನ್ನು ಒಂದು ಜಾತಿಗೆ ಸೀಮಿತ ಮಾಡಿದ್ದೇವೆ. ಅವರು ಈ ದೇಶಕ್ಕೆ ಅಡಿಪಾಯ ಹಾಕಿದವರು’ ಎಂದರು.

‘ನಮ್ಮದು ಸಂವಿಧಾನಾತ್ಮಕ ಶಾಸನ. ಸಂಸತ್ತಿಗೆ ಕಾನೂನು ಮಾಡುವ ಅವಕಾಶ ಇದೆಯೇ ವಿನಾ ಸಂವಿಧಾನವನ್ನು ಬದಲಾಯಿಸುವ ಅಧಿಕಾರ ಇಲ್ಲ. ಈಗ ರೂಪಿಸಿರುವ ಪೌರತ್ವ ತಿದ್ದುಪಡಿ ಕಾಯ್ದೆ ಸಂವಿಧಾನ ವಿರೋಧಿ. ಮೇಲ್ವರ್ಗದವರನ್ನು ಬಿಟ್ಟು ದೇಶದ ಎಲ್ಲರಿಗೂ ಎನ್‌ಆರ್‌ಸಿ ಅಪಾಯಕಾರಿ’ ಎಂದರು.

ಕಾಂಗ್ರೆಸ್‌ ಮುಖಂಡ, ವಿಧಾನಪರಿಷತ್‌ ಸದಸ್ಯ ಸಿ.ಎಂ.ಇಬ್ರಾಹಿಂ ಅವರು ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಇದಕ್ಕೂ ಮೊದಲು ಹೈಕೋರ್ಟ್‌ ವಕೀಲ ಬಾಲಣ್ಣ, ಸೇಂಟ್‌ ಪೌಲ್‌ ಚರ್ಚ್‌ನ ಫಾದರ್‌ ಜೋಸೆಫ್‌ ಮರಿ ಹಾಗೂ ವಿವಿಧ ಮುಸ್ಲಿಂ ಧರ್ಮಗುರುಗಳು ಮಾತನಾಡಿದರು.

ಶಾಸಕರಾದ ಸಿ.ಪುಟ್ಟರಂಗಶೆಟ್ಟಿ, ಆರ್.ನರೇಂದ್ರ, ಕೆಪಿಸಿಸಿ ರಾಜ್ಯ ವಕ್ತಾರ ಆರ್.ಧ್ರುವನಾರಾಯಣ, ಮುಖಂಡರಾದ ಎ.ಆರ್‌.ಕೃಷ್ಣಮೂರ್ತಿ, ಎಸ್‌.ಬಾಲರಾಜ್‌, ಜಯಣ್ಣ, ಶಿವಣ್ಣ, ಸೈಯದ್‌ ರಫೀ, ಹಜ್ರತ್ ಮೌಲಾನ ಕಾಮಿಲ್‌ ನಯೀಂಉಲ್‌ಃಕ್‌ ಸಾಹೇಬ್‌ ಬಾಖವಿ, ಎಸ್‌ಡಿಪಿಐನ ಅಬ್ರಾರ್‌ ಅಹಮದ್‌ ಸೇರಿದಂತೆ ಹಲವರು ಇದ್ದರು.

ಮೆರವಣಿಗೆ: ಇದಕ್ಕೂ ಮೊದಲು ನೂರಾರು ಸಂಖ್ಯೆಯ ಮುಸ್ಲಿಮರು ಸೋಮವಾರ ಪೇಟೆ ಈದ್ಗಾ ಮೈದಾನದಿಂದ ಜಿಲ್ಲಾ ಕ್ರೀಡಾಂಗಣದವರೆಗೆ ಮೆರವಣಿಗೆ ನಡೆಸಿದರು.

‘ನಾಗಪುರದ ಕಾರ್ಯಸೂಚಿ ತಡೆಯಲೇಬೇಕು’

ಎಸ್‌ಡಿಪಿಐನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಬ್ದುಲ್‌ ಮಜೀದ್‌ ಅವರು ಮಾತನಾಡಿ, ‘ನಾಗಪುರದಲ್ಲಿರುವ ಕಾರ್ಯಸೂಚಿ ಸೃಷ್ಟಿಯಾಗುತ್ತಿದೆ. ಸಂಘ ಪರಿವಾರದ ಸಿದ್ಧಾಂತದಂತೆ ಕೇಂದ್ರ ಸರ್ಕಾರ ನಡೆಯುತ್ತಿದೆ. ತ್ರಿವಳಿ ತಲಾಖ್‌, ಸಂವಿಧಾನದ ಕಲಂ 370 ರದ್ಧತಿ ಸಿಎಎ ಎಲ್ಲವೂ ಆ ಕಾರ್ಯಸೂಚಿಯಂತೆ ನಡೆದಿದೆ. ಮುಂದೆ ಏಕರೂಪ ನಾಗರಿಕ ಸಂಹಿತೆ, ಜನಸಂಖ್ಯೆ ನಿಯಂತ್ರಣ ನೀತಿಗಳೂ ಬರಲಿದೆ’ ಎಂದು ಹೇಳಿದರು.

‘ದೇಶವನ್ನು ಜಾತಿ ಧರ್ಮದಿಂದ ವಿಭಜಿಸುವುದು ಸಂಘ ಪರಿವಾರದ ಸಿದ್ಧಾಂತ, ಈ ಸಿದ್ಧಾಂತವನ್ನು ಸಂಪೂರ್ಣವಾಗಿ ನಿರ್ನಾಮ ಮಾಡುವವರೆಗೂ ದೇಶದಲ್ಲಿ ಇದೇ ಸ್ಥಿತಿ ಇರಲಿದೆ’ ಎಂದು ಎಚ್ಚರಿಸಿದರು.

‘ಎನ್‌ಪಿಆರ್‌ ವಿಫಲವಾಗುವಂತೆ ಮಾಡುವುದಕ್ಕೆ ಅವಕಾಶ ಇದೆ. ಎಲ್ಲರೂ ಅದನ್ನು ಬಹಿಷ್ಕರಿಸಬೇಕು. ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಇದನ್ನು ವಿರೋಧಿಸುವ ನಿರ್ಣಯ ಕೈಗೊಂಡರೆ ಇದು ವಿಫಲವಾಗುತ್ತದೆ. ರಾಜ್ಯದ ಶಾಸಕರು ಕೂಡ ಸದನದಲ್ಲಿ ಈ ವಿಚಾರ ಪ್ರಸ್ತಾಪಿಸಬೇಕು. ತಮ್ಮ ಕ್ಷೇತ್ರದಲ್ಲಿ ಬಹಿಷ್ಕಾರಕ್ಕೆ ಕರೆ ನೀಡಬೇಕು’ ಎಂದು ಒತ್ತಾಯಿಸಿದರು.

---

ಪೌರತ್ವ ಕಾಯ್ದೆಯನ್ನು ಏಳು ಬಾರಿ ಬದಲಾವಣೆ ಮಾಡಲಾಗಿದೆ. ಏನೂ ಗಲಾಟೆಯಾಗಿರಲಿಲ್ಲ. ಈಗ ಒಂದು ಸಮುದಾಯವನ್ನು ಗುರಿ ಮಾಡಲಾಗಿದೆ
ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ಮುಖಂಡ

---

ಸಿಎಎ ಜಾರಿಗೆ ತಂದು ಮೋದಿ–ಶಾ ಒಳ್ಳೆದೇ ಮಾಡಿದ್ದಾರೆ. ಎಲ್ಲೋ ಹೋಗುತ್ತಿದ್ದ ಮುಸ್ಲಿಮರನ್ನು ರಾಷ್ಟ್ರಧ್ವಜ ಹಿಡಿದು ಬರುವಂತೆ ಮಾಡಿದ್ದಾರೆ
ರಮೇಶ್ ಕುಮಾರ್, ಕಾಂಗ್ರೆಸ್ ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT