ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಯಳಂದೂರು | ಮುಂಗಾರು ಹಂಗಾಮು: ಅರಿಶಿನ ಬಿತ್ತನೆ ಚುರುಕು

ಗುಂಡ್ಲುಪೇಟೆ ಬಿತ್ತನೆ ತಳಿಗೆ ಬೇಡಿಕೆ: ಬೆಲೆ ಏರಿಕೆಯಿಂದ ಕಂಗೆಟ್ಟ ಕೃಷಿಕ
Published 26 ಮೇ 2024, 14:08 IST
Last Updated 26 ಮೇ 2024, 14:08 IST
ಅಕ್ಷರ ಗಾತ್ರ

ಯಳಂದೂರು: ತಾಲ್ಲೂಕಿನಲ್ಲಿ ವಾರದಿಂದ ಸುರಿದ ಮಳೆಗೆ ಭೂಮಿ ಹದಗೊಂಡಿದೆ. ಕೃಷಿಕರು ಬಿತ್ತನೆ ಚಟುವಟಿಕೆ ಆರಂಭಿಸಿದ್ದಾರೆ. ಮುಂಗಾರಿಗೂ ಮೊದಲು ಭೂಮಿಗೆ ಗೊಬ್ಬರ ಸೇರಿಸಿ ಭೂಮಿ ಹದ ಮಾಡುತ್ತಿದ್ದಾರೆ. ಅದರಲ್ಲೂ ಅರಿಶಿನ ನಾಟಿಗೆ ವೇಗ ದೊರೆತಿದ್ದು, ಉತ್ತಮ ತಳಿಯ ಬಿತ್ತನೆ ಬೀಜಕ್ಕೆ ಹುಡುಕಾಟ ನಡೆಸಿದ್ದಾರೆ.

ಹಲವು ವರ್ಷಗಳಿಂದ ಅರಿಶಿನಕ್ಕೆ ಅಷ್ಟಾಗಿ ಬೇಡಿಕೆ ಇರಲಿಲ್ಲ. ಇಳುವರಿ ಕೊರತೆ, ಹೆಚ್ಚಾದ ಖರ್ಚು ಮತ್ತು ನಿರ್ವಹಣೆಯ ಸಮಸ್ಯೆಯಿಂದ ಬಹುತೇಕ ಬೆಳೆಗಾರರು ಬೆಳೆಯಿಂದ ವಿಮುಖವಾಗಿದ್ದರು. ಆದರೆ, ಕಳೆದ ವರ್ಷ ಅರಿಶಿನಕ್ಕೆ ದಿಢೀರ್ ಏರಿದ ಬೆಲೆಯಿಂದ ಮತ್ತೆ ನಾಟಿಗೆ ಮುಂದಾಗಿದ್ದು, ಭೂಮಿ ಸಿದ್ಧತೆಯಲ್ಲಿ ತೊಡಗಿದ್ದಾರೆ.

ಕಳೆದ ಜೂನ್‌ನಲ್ಲಿ ಕ್ವಿಂಟಲ್ ಒಂದಕ್ಕೆ ₹ 6 ಸಾವಿರದಿಂದ ₹22 ಸಾವಿರ ತನಕ ಅರಿಶಿನ ಧಾರಣೆ ಏರಿಕೆ ಕಂಡಿತ್ತು. ಪೂರೈಕೆ  ಕೊರೆತೆಯಿಂದ ಬೆಲೆ ಮತ್ತು ಬೇಡಿಕೆ ಏರುಮುಖ ಆಗಿತ್ತು. ಇದನ್ನು ಮನಗಂಡ ಬೇಸಾಯಗಾರರು ಮತ್ತೆ ಅರಿಶಿನ ನಾಟಿಗೆ ಮುಂದಾಗಿದ್ದಾರೆ. ತರಕಾರಿ ನಾಟಿ ಮಾಡುತ್ತಿದ್ದ ಹಿಡುವಳಿಗಳಲ್ಲಿ ಈ ಬಾರಿ ಅರಿಶಿನ ಬಿತ್ತನೆಗೆ ಒಲವು ತೋರಿದ್ದಾರೆ ಎಂದು ಅಂಬಳೆ ಶಿವಮೂರ್ತಿ ಹೇಳಿದರು.

ಏರಿದ ನಾಟಿ ಅರಿಶಿನ ದರ: ಗುಂಡ್ಲುಪೇಟೆ ಹಾಗೂ ತೆರಕಣಾಂಬಿ ಸುತ್ತಮುತ್ತಲ ಪ್ರದೇಶಗಳಲ್ಲಿ ಉತ್ತಮ ದರ್ಜೆಯ ಬೀಜ ಸಿಗುವ ಭರವಸೆ ಇದೆ. ಮೇ ಅಂತ್ಯದಲ್ಲಿ ನಾಟಿ ಪ್ರಕ್ರಿಯೆ ಮುಗಿಯುವ ಧಾವಂತವೂ ಇದೆ. 2023ರಲ್ಲಿ ಉತ್ತಮ ದರ್ಜೆಯ ಬಿತ್ತನೆ ಅರಿಶಿನ ಕ್ವಿಂಟಲ್ ಒಂದಕ್ಕೆ ₹ 2 ಸಾವಿರ ಇತ್ತು. ಈ ಸಲ ₹ 4500ರಿಂದ ₹5500ಕ್ಕೆ ಏರಿಕೆ ಕಂಡಿದೆ. ಜೊತೆಗೆ ಸಾಗಣೆ ವೆಚ್ಚವೂ ಸೇರಿ ದರ ಹೆಚ್ಚಾಗುತ್ತದೆ. 2 ವರ್ಷಗಳಿಂದ ನೀರಿನ ಕೊರತೆ, ಬರ ಮತ್ತಿತರ ಕಾರಣಗಳಿಂದ ಅರಿಶಿನ ಬಿತ್ತನೆ ಸಾಧ್ಯ ಆಗಿರಲಿಲ್ಲ. ಆದರೆ, ಮುಂದಿನ ಸಲ ಅರಿಶಿನಕ್ಕೆ ಮತ್ತೆ ಬೆಲೆ ಮತ್ತು ಬೇಡಿಕೆ ಹೆಚ್ಚಾಗುವ ನಿರೀಕ್ಷೆಯಿಂದ ಬಿತ್ತನೆಗೆ ಸಿದ್ಧತೆ ಆರಂಭಿಸಿದ್ಧೇವೆ ಎನ್ನುತ್ತಾರೆ ಹೊನ್ನೂರು ಕೃಷಿಕ ಮಹೇಶ್.

ಅರಿಶಿನಕ್ಕೆ ಬೇಡಿಕೆ ಹೆಚ್ಚಿದ್ದಾಗ ಸರ್ಕಾರ ಬೆಲೆ ನಿರ್ಧರಿಸುತ್ತದೆ. ಸದ್ಯ ಮೈಸೂರು ಇಲವಾಲದಲ್ಲಿ ಪ್ರಾತ್ಯಕ್ಷಿಕೆಗಾಗಿ ಅರಿಶಿಣ ನೀಡಲಾಗುತ್ತದೆ. ಹಾಗಾಗಿ, ರೈತರಿಗೆ ವಿತರಿಸುವ ಬೆಲೆ ಅಂತಿಮಗೊಂಡಿಲ್ಲ ಎಂದು ತೋಟಗಾರಿಕಾ ಇಲಾಖೆ ಸಹಾಯಕ ನಿರ್ದೇಶಕ ಜಿ.ಎಸ್.ರಾಜು ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT