ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದೇಶಿ ಪ್ರವಾಸಿಗರ ಸಂಖ್ಯೆಯಲ್ಲಿ ಹೆಚ್ಚಳ

ಬಂಡೀಪುರ, ಹಿಮವದ್‌ ಗೋಪಾಲಸ್ವಾಮಿ ಬೆಟ್ಟ, ಬಿಳಿಗಿರಿರಂಗನಬೆಟ್ಟ, ಭರಚುಕ್ಕಿ ನೆಚ್ಚಿನ ತಾಣ
Last Updated 6 ಮಾರ್ಚ್ 2019, 20:00 IST
ಅಕ್ಷರ ಗಾತ್ರ

ಚಾಮರಾಜನಗರ: ಗಡಿ ಜಿಲ್ಲೆಗೆ ಭೇಟಿ ನೀಡುತ್ತಿರುವ ವಿದೇಶಿ ಪ್ರವಾಸಿಗರ ಸಂಖ್ಯೆಯಲ್ಲಿ ಮತ್ತೆ ಹೆಚ್ಚಳವಾಗಿದೆ.

ಪ್ರವಾಸೋದ್ಯಮ ಇಲಾಖೆಯ ಬಳಿ ಲಭ್ಯವಿರುವ ಜಿಲ್ಲೆಯ ಪ್ರಮುಖ 10 ಪ್ರವಾಸಿ ತಾಣಗಳಿಗೆ ನಾಲ್ಕು ವರ್ಷಗಳಲ್ಲಿ ಭೇಟಿ ನೀಡಿರುವ ಪ್ರವಾಸಿಗರ ಅಂಕಿ ಅಂಶಗಳನ್ನು ಅವಲೋಕಿಸಿದರೆ ಜಿಲ್ಲೆಗೆ ಭೇಟಿ ನೀಡಿರುವ ವಿದೇಶಿಯರ ಸಂಖ್ಯೆಯಲ್ಲಿ ಹೆಚ್ಚಳವಾಗಿರುವುದು ಕಂಡು ಬಂದಿದೆ.

2015ರ‌ಲ್ಲಿ ಜಿಲ್ಲೆಯ ವಿವಿಧ ಪ್ರವಾಸಿ ತಾಣಗಳಿಗೆ ಹೊರದೇಶದ 3,547 ಮಂದಿ ಭೇಟಿ ನೀಡಿದ್ದರು. 2016ರಲ್ಲಿ ಇದು 3,191ಕ್ಕೆ ಕುಸಿದಿತ್ತು. 2017ರಲ್ಲಿ ವಿದೇಶಿ ಪ್ರವಾಸಿಗರ ಸಂಖ್ಯೆ 2,415ಕ್ಕೆ ಇಳಿದಿತ್ತು. ಆದರೆ, ಕಳೆದ ವರ್ಷ ವಿದೇಶಿ ಪ್ರವಾಸಿಗರ ಸಂಖ್ಯೆಯಲ್ಲಿ ಗಣನೀಯ ಹೆಚ್ಚಳವಾಗಿದ್ದು 3,842 ಮಂದಿ ಭೇಟಿ ನೀಡಿ, ಜಿಲ್ಲೆಯ ಸೌಂದರ್ಯವನ್ನು ಕಣ್ತುಂಬಿಕೊಂಡಿದ್ದಾರೆ.

ಪೂರಕ ವಾತಾವರಣ: 2017ರಲ್ಲಿ ತೀವ್ರ ಬರಸ್ಥಿತಿಗೆ ತುತ್ತಾಗಿದ್ದ ಚಾಮರಾಜನಗರ ಜಿಲ್ಲೆಯಲ್ಲಿ ಕಳೆದ ವರ್ಷಾರಂಭದಲ್ಲೇ ಉತ್ತಮ ಮಳೆಯಾಗಿ ಪ್ರವಾಸೋದ್ಯಮಕ್ಕೆ ಪೂರಕವಾದ ವಾತಾವರಣ ಉಂಟಾಗಿತ್ತು. ಅರಣ್ಯ ಪ್ರದೇಶಕ್ಕೆ ಹೆಸರುವಾಸಿಯಾಗಿರುವ ಜಿಲ್ಲೆಯು ಹೋದ ವರ್ಷ ಹಚ್ಚ ಹಸಿರಾಗಿತ್ತು.2017ಕ್ಕೆ ಹೋಲಿಸಿದರೆ, 2018ರಲ್ಲಿ ಜಿಲ್ಲೆಗೆ ಭೇಟಿ ನೀಡಿದ ಪ್ರವಾಸಿಗರ ಸಂಖ್ಯೆಯಲ್ಲಿ 5.44 ಲಕ್ಷ ಹೆಚ್ಚಳವಾಗಿದೆ.2017ರಲ್ಲಿ ಜಿಲ್ಲೆಯ ಪ್ರಮುಖ 10 ತಾಣಗಳಿಗೆ 47.83 ಲಕ್ಷ ಮಂದಿ ಭೇಟಿ ನೀಡಿದ್ದರು. ಕಳೆದ ವರ್ಷ 53.27 ಲಕ್ಷ ಮಂದಿ ಪ್ರವಾಸಿಗರು ಬಂದಿದ್ದರು. ಅದಕ್ಕೂ ಮೊದಲು, 2015ರಲ್ಲಿ 72.44 ಲಕ್ಷ ಮತ್ತು 2016ರಲ್ಲಿ 1.16 ಕೋಟಿ ಮಂದಿ ಜಿಲ್ಲೆಗೆ ಭೇಟಿ ನೀಡಿದ್ದರು.

ಗೋಪಾಲಸ್ವಾಮಿ ಬೆಟ್ಟಕ್ಕೆ ಹೆಚ್ಚು ಜನ: ಹೆಚ್ಚಿನ ವಿದೇಶಿ ಪ್ರವಾಸಿಗರು ಜಿಲ್ಲೆಯ ಹಸಿರಿನ ಸೌಂದರ್ಯವನ್ನು ಸವಿಯಲು ಭೇಟಿ ನೀಡುತ್ತಾರೆ. ಬಂಡೀಪುರ, ಬಿಳಿಗಿರಿರಂಗನಾಥ ಸ್ವಾಮಿ ಬೆಟ್ಟ, ಹಿಮವದ್‌ ಗೋಪಾಲಸ್ವಾಮಿ ಬೆಟ್ಟ, ಭರಚುಕ್ಕಿ ಜಲಪಾತಗಳಿಗೆ ಅವರು ಹೆಚ್ಚು‍‍ಇಷ್ಟಪಡುವ ತಾಣಗಳು. ಹಿಮದ ಹೊದಿಕೆ ಮತ್ತು ರಮಣೀಯ ಪ್ರಕೃತಿಯನ್ನು ಹೊಂದಿರುವ ಗುಂಡ್ಲುಪೇಟೆ ತಾಲ್ಲೂಕಿನ ಹಿಮವದ್‌ ಗೋಪಾಲಸ್ವಾಮಿ ಬೆಟ್ಟ ವಿದೇಶಿಯರ ನೆಚ್ಚಿನ ತಾಣ.

ಹೋದ ವರ್ಷ 1,371 ವಿದೇಶಿಯರು ಇಲ್ಲಿಗೆ ಭೇಟಿ ನೀಡಿದ್ದರು. ಉಳಿದಂತೆ ಬಂಡೀಪುರ 959 ಮತ್ತು ಬಿಳಿಗಿರಿರಂಗನಾಥಸ್ವಾಮಿ ಬೆಟ್ಟಕ್ಕೆ 814 ಮತ್ತು ಭರಚುಕ್ಕಿಗೆ 597 ವಿದೇಶಿ ಪ್ರವಾಸಿಗರು ಭೇಟಿ ನೀಡಿದ್ದಾರೆ. ಗೋಪಾಲಸ್ವಾಮಿ ಬೆಟ್ಟಕ್ಕೆರಾಜ್ಯ ಮತ್ತು ಹೊರರಾಜ್ಯಗಳಿಂದ ಬರುವ ಪ್ರವಾಸಿಗರ ಸಂಖ್ಯೆಯಲ್ಲೂ ಹೆಚ್ಚಳವಾಗಿದೆ. ಕಳೆದ ವರ್ಷ 4.33 ಲಕ್ಷ ಮಂದಿ ಗೋಪಾಲಸ್ವಾಮಿ ಬೆಟ್ಟದ ಸೌಂದರ್ಯ ಸವಿದಿದ್ದಾರೆ.

ಸೌಲಭ್ಯ ಹೆಚ್ಚಿಸಬೇಕು: ಜಿಲ್ಲೆಯ ಬಹುತೇಕ‍ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರಿಗೆ ರಾತ್ರಿ ಉಳಿದುಕೊಳ್ಳುವ ವ್ಯವಸ್ಥೆ ಇಲ್ಲ. ಪ್ರವಾಸಿಗರು ತಾಣಗಳನ್ನು ವೀಕ್ಷಿಸಿ ಹಿಂದಿರುಗಬೇಕಾದ ಪರಿಸ್ಥಿತಿ ಇದೆ. ಒಂದು ವೇಳೆ ಪ್ರವಾಸಿಗರಿಗೆ ಉಳಿದುಕೊಳ್ಳಲು ವ್ಯವಸ್ಥೆ ಮಾಡಿದರೆ ಪ್ರವಾಸಿಗರು ಇನ್ನಷ್ಟು ಹೆಚ್ಚು ಬರುತ್ತಾರೆ ಎಂದು ಹೇಳುತ್ತಾರೆ ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳು.

‘ಜಿಲ್ಲೆಯ ಬಹುತೇಕ ಪ್ರವಾಸಿ ತಾಣಗಳು ಮೂಲಸೌಕರ್ಯಗಳ ಕೊರತೆ ಎದುರಿಸುತ್ತಿದ್ದು, ಪ್ರವಾಸಿಗರಿಗೆ ಕನಿಷ್ಠ ಸೌಲಭ್ಯಗಳನ್ನು ಒದಗಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು. ಹಾಗಾದರೆ ಜಿಲ್ಲೆಯ ಪ್ರವಾಸೋದ್ಯಮಕ್ಕೆ ಇನ್ನಷ್ಟು ಚೈತನ್ಯ ಬರುತ್ತದೆ’ ಎಂಬುದು ಜನರ ಅಭಿಪ್ರಾಯ.

ಮಹದೇಶ್ವರ ಬೆಟ್ಟದ್ದೇ ದೊಡ್ಡ ಕೊಡುಗೆ
ಜಿಲ್ಲೆಗೆ ಭೇಟಿ ನೀಡುವ ಒಟ್ಟು ಪ್ರವಾಸಿಗರ ಸಂಖ್ಯೆಯಲ್ಲಿ, ಮಹದೇಶ್ವರ ಬೆಟ್ಟದ ಕೊಡುಗೆಯೇ ದೊಡ್ಡದು. ಇತಿಹಾಸ ಪ್ರಸಿದ್ಧ ಯಾತ್ರಾ ಸ್ಥಳಕ್ಕೆ ಪ್ರತಿ ವರ್ಷ ಭಾರಿ ಸಂಖ್ಯೆಯಲ್ಲಿ ಭಕ್ತರು ಬರುತ್ತಾರೆ.‌

ಪ್ರವಾಸೋದ್ಯಮ ಇಲಾಖೆಯ ಅಂಕಿ ಅಂಶಗಳ ಪ್ರಕಾರ, ಎರಡು ಮೂರು ವರ್ಷಗಳಿಗೆ ಹೋಲಿಸಿದರೆ, ಬೆಟ್ಟಕ್ಕೆ ಭೇಟಿ ನೀಡುವವರ ಸಂಖ್ಯೆಯಲ್ಲಿ ಇಳಿಮುಖವಾಗಿದೆ. 2017ರಲ್ಲಿ ಬೆಟ್ಟಕ್ಕೆ 31.66 ಲಕ್ಷ ಮಂದಿ ಭೇಟಿ ನೀಡಿದ್ದರು. ಹೋದ ವರ್ಷ ಭೇಟಿ ನೀಡಿದವರ ಸಂಖ್ಯೆ 29.94 ಲಕ್ಷಕ್ಕೆ ಇಳಿದಿದೆ. 2016ರಲ್ಲಿ ಅತಿ ಹೆಚ್ಚು ಅಂದರೆ, 99 ಲಕ್ಷ ಮಂದಿ ಮಾದಪ್ಪನ ಕ್ಷೇತ್ರಕ್ಕೆ ಬಂದಿದ್ದರು. ಅದಕ್ಕಿಂತಲೂ ಮೊದಲಿನ ವರ್ಷ 47.83 ಲಕ್ಷ ಮಂದಿ ಭೇಟಿ ನೀಡಿದ್ದರು.

ಜಿಲ್ಲೆಗೆ ಭೇಟಿ ನೀಡಿದ ಪ್ರವಾಸಿಗರು
ಯಾವ ವರ್ಷ ಎಷ್ಟು?
2015:
72.44 ಲಕ್ಷ
2016: 1.16 ಕೋಟಿ
2017: 47.83 ಲಕ್ಷ
2018: 53.27 ಲಕ್ಷ

ವಿದೇಶಿ ಪ್ರವಾಸಿಗರು
2015:
3,547
2016: 3,191
2017:2,415
2018:3,842

ಮಹದೇಶ್ವರ ಬೆಟ್ಟಕ್ಕೆ ಭೇಟಿ ನೀಡಿದವರ ಸಂಖ್ಯೆ
2015:
51.15 ಲಕ್ಷ
2016: 99.25 ಲಕ್ಷ
2017: 31.66 ಲಕ್ಷ
2018: 29.94 ಲಕ್ಷ

ಮಾಹಿತಿ: ಪ್ರವಾಸೋದ್ಯಮ ಇಲಾಖೆ

ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳು

* ಮಹದೇಶ್ವರ ಬೆಟ್ಟ
* ಬಿಳಿಗಿರಿರಂಗನಾಥಸ್ವಾಮಿ ಬೆಟ್ಟ
* ಕೆ.ಗುಡಿ
* ಬಂಡೀಪುರ
* ಹೊಗೇನಕಲ್‌ ಜ‌ಲಪಾತ
* ಹಿಮವದ್‌ ಗೋಪಾಲಸ್ವಾಮಿ ಬೆಟ್ಟ
* ಕನಕಗಿರಿ
* ಭರಚುಕ್ಕಿ
* ಹುಲುಗನಮುರಡಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT