ಗುರುವಾರ , ಆಗಸ್ಟ್ 18, 2022
24 °C
ಕೋವಿಡ್‌ 2ನೇ ಅಲೆ ಪರಿಹಾರ ಪ್ಯಾಕೇಜ್‌ ಪಡೆಯಲು ಅರ್ಜಿ ಸಲ್ಲಿಸಲು ಸಾಲು

ಕೋವಿಡ್‌ 2ನೇ ಅಲೆ ಪರಿಹಾರ ಪ್ಯಾಕೇಜ್‌: ಸೇವಾ ಸಿಂಧು ಕೇಂದ್ರಗಳಲ್ಲಿ ಜನವೋ ಜನ

ಸೂರ್ಯನಾರಾಯಣ ವಿ. Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಕೋವಿಡ್‌ 2ನೇ ಅಲೆಯ ಸಂದರ್ಭದಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಅಸಂಘಟಿತ ವಲಯಗಳ  ಕಾರ್ಮಿಕರಿಗೆ ಸರ್ಕಾರ ₹2,000 ಪರಿಹಾರ ಪ್ಯಾಕೇಜ್‌ ಘೋಷಿಸಿದ್ದು, ಪರಿಹಾರ ಪಡೆಯಲು ಸೇವಾ ಸಿಂಧು ಪೋರ್ಟಲ್‌ (https://sevasindhu.karnataka.gov.in/) ಮೂಲಕ ಅರ್ಜಿ ಸಲ್ಲಿಸಬೇಕಾಗಿದೆ.

ವಿವಿಧ ಅಸಂಘಟಿತ ವಲಯಗಳಲ್ಲಿ ದುಡಿಯುತ್ತಿರುವವರು ಈಗ ಅರ್ಜಿ ಸಲ್ಲಿಕೆಗಾಗಿ ಸೇವಾ ಸಿಂಧು ಕೇಂದ್ರಗಳಿಗೆ ಎಡತಾಕುತ್ತಿದ್ದಾರೆ. ಜಿಲ್ಲೆಯಾದ್ಯಂತ ಸೇವಾ ಸಿಂಧು ಸೇವಾ ಕೇಂದ್ರಗಳು, ಡಿಜಿಟಲ್‌ ಸೇವೆಗಳನ್ನು ಒದಗಿಸುವ ಮಳಿಗೆಗಳ ಮುಂದೆ ಜನಸಂದಣಿ ಕಾಣಿಸುತ್ತಿದೆ. 

ಕಾರ್ಮಿಕರೇ ಸ್ವತಃ ಸೇವಾ ಸಿಂಧು ವೆಬ್‌ಸೈಟ್‌ ಮೂಲಕ ಅರ್ಜಿ ಸಲ್ಲಿಸಬಹುದು. ಆದರೆ, ಜಿಲ್ಲೆಯ ಬಹುತೇಕ ಕಾರ್ಮಿಕರು ಬಡವರು, ಸ್ಮಾರ್ಟ್‌ಫೋನ್‌ ಇಂಟರ್‌ನೆಟ್‌ ಸಂಪರ್ಕ ಹೊಂದಿಲ್ಲ. ಅರ್ಜಿ ಸಲ್ಲಿಸುವುದು ಅವರಿಗೆ ಗೊತ್ತಾಗುವುದಿಲ್ಲ. ಹಾಗಾಗಿ, ಸೇವಾ ಸಿಂಧು ಸೇವಾ ಕೇಂದ್ರಗಳಿಗೆ ಹೋಗಿ ಅರ್ಜಿ ಸಲ್ಲಿಸುವುದು ಅವರಿಗೆ ಅನಿವಾರ್ಯವಾಗಿದೆ.

ಕಾರ್ಮಿಕ ಇಲಾಖೆಯ ವ್ಯಾಪ್ತಿಗೆ ಬರುವ 11 ಅಸಂಘಟಿತ ವಲಯಗಳ ಕಾರ್ಮಿಕರಿಗೆ ಪ್ಯಾಕೇಜ್‌ ಅಡಿ ಪರಿಹಾರ ಸಿಗಲಿದೆ. ಅಗಸರು, ಕ್ಷೌರಿಕರು, ಗೃಹ ಕಾರ್ಮಿಕರು, ಟೈಲರ್‌ಗಳು, ಮೆಕ್ಯಾನಿಕ್, ಚಿಂದಿ ಆಯುವವರು, ಹಮಾಲರು, ಅಕ್ಕಸಾಲಿಗರು, ಕಮ್ಮಾರರು, ಕುಂಬಾರರು ಹಾಗೂ ಭಟ್ಟಿ ಕಾರ್ಮಿಕರು ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಬಹುದು. ಜುಲೈ 20ರವರೆಗೂ ಅರ್ಜಿ ಸಲ್ಲಿಸುವುದಕ್ಕೆ ಅವಕಾಶ ಇದೆ.  

‘ಅಗಸರು ಮತ್ತು ಕ್ಷೌರಿಕರು ಈಗಾಗಲೇ ಕಾರ್ಮಿಕ‌ ಇಲಾಖೆಯಲ್ಲಿ ನೋಂದಣಿ ಮಾಡಿಕೊಂಡಿದ್ದಾರೆ. ಮೇ 19ರ ಮೊದಲು ನೋಂದಣಿ ಮಾಡಿಕೊಂಡವರು ಈಗ ಅರ್ಜಿ ಸಲ್ಲಿಸುವ ಅಗತ್ಯವಿಲ್ಲ. ಕಳೆದ ವರ್ಷ 2,992 ಅಗಸರು ಹಾಗೂ ಕ್ಷೌರಿಕರಿಗೆ ಪರಿಹಾರ ಬಂದಿತ್ತು. ಈ ಬಾರಿಯೂ ಈಗಾಗಲೇ ಇಷ್ಟು ಜನರ ಖಾತೆಗೆ ಪರಿಹಾರ ಜಮೆ ಆಗಿದೆ’ ಎಂದು ಜಿಲ್ಲಾ ಕಾರ್ಮಿಕ ಅಧಿಕಾರಿ ಎಂ.ಮಹದೇವಸ್ವಾಮಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು. 

ಮೇ 19ರ ನಂತರ ನೋಂದಾಯಿಸಿದೇ ಇರುವ ಅಗಸರು ಹಾಗೂ ಕ್ಷೌರಿಕರು ಪರಿಹಾರಕ್ಕಾಗಿ ಈಗ ಅರ್ಜಿ ಸಲ್ಲಿಸಬೇಕು. ಉಳಿದ ಒಂಬತ್ತು ವರ್ಗದವರೂ ಅರ್ಜಿ ಹಾಕಬೇಕು ಎಂದು ಅವರು ಮಾಹಿತಿ ನೀಡಿದರು.  

ಉದ್ಯೋಗ ಪ್ರಮಾಣ ಪತ್ರ ಕಡ್ಡಾಯ: ಅರ್ಜಿ ಸಲ್ಲಿಸುವವರು ಉದ್ಯೋಗ ಪ್ರಮಾಣ ಪತ್ರ ಸಲ್ಲಿಸುವುದು ಕಡ್ಡಾಯ. ನಿಗದಿತ ನಮೂನೆಯಲ್ಲಿ ಉದ್ಯೋಗದ ಮಾಹಿತಿಗಳನ್ನು ತುಂಬಿ ಗೆಜೆಟೆಡ್‌ ಅಧಿಕಾರಿಯಿಂದ ಸಹಿಯೊಂದಿಗೆ ದೃಢೀಕರಿಸಬೇಕು. ಸೇವಾ ಸಿಂಧು ಪೋರ್ಟಲ್‌ನಲ್ಲಿ ಅದನ್ನು ಕೂಡ ಅಪ್‌ಲೋಡ್‌ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. 

ತರಾತುರಿ ಬೇಡ: ಕಾರ್ಮಿಕರು ಅರ್ಜಿ ಸಲ್ಲಿಸುವುದಕ್ಕೆ ತರಾತುರಿ ಮಾಡುವ ಅಗತ್ಯವಿಲ್ಲ. ಜುಲೈ 20ರವರೆಗೂ ಸರ್ಕಾರ ಅವಕಾಶ ನೀಡಿದೆ. ಸೇವಾ ಸಿಂಧು ಸೇವಾ ಕೇಂದ್ರಗಳಿಗೆ ಭೇಟಿ ನೀಡುವಾಗ ಕೋವಿಡ್‌ ನಿಯಮಗಳನ್ನು (ಮಾಸ್ಕ್‌ ಧರಿಸುವುದು, ಸುರಕ್ಷಿತ ಅಂತರ ಕಾಪಾಡುವುದು) ಕಡ್ಡಾಯವಾಗಿ ಪಾಲಿಸಬೇಕು ಎಂದು ಮಹದೇವಸ್ವಾಮಿ ಅವರು ಹೇಳಿದರು.  

ಚಮ್ಮಾರರು ಹಾಗೂ ಚರ್ಮ ಕುಶಲಕರ್ಮಿಗಳಿಗೂ ಸರ್ಕಾರ ಪರಿಹಾರ ಘೋಷಿಸಿದ್ದು, ಅರ್ಜಿ ಸಲ್ಲಿಕೆಗೆ ಇದೇ 30 ಕೊನೆಯ ದಿನವಾಗಿದೆ. 

ಆಟೊ, ಟ್ಯಾಕ್ಸಿ ಚಾಲಕರಿಗೂ ಪ‍ರಿಹಾರ

ಆಟೊ, ಟ್ಯಾಕ್ಸಿ, ಕ್ಯಾಬ್‌ ಚಾಲಕರಿಗೂ ಸರ್ಕಾರ ₹3,000 ಪರಿಹಾರ ಘೋಷಿಸಿದ್ದು, ಅವರು ಕೂಡ ಕೂಡ ಸೇವಾ ಸಿಂಧು ಪೋರ್ಟಲ್‌ ಮೂಲಕವೇ ಅರ್ಜಿ ಸಲ್ಲಿಸಬೇಕು. 

‘ಪರಿಹಾರಕ್ಕಾಗಿ ಚಾಲಕರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕವನ್ನು ಇನ್ನೂ ನಿಗದಿ ಪಡಿಸಿಲ್ಲ. ಅರ್ಜಿ ಸಲ್ಲಿಸುವ ಪ್ರಕ್ರಿಯೆ ವಿವರಗಳನ್ನು ಕಚೇರಿಯಲ್ಲಿ ಪ್ರದರ್ಶಿಸಲಾಗಿದೆ’ ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ (ಆರ್‌ಟಿಒ) ಶಿವಕುಮಾರ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು