ಚಾಮರಾಜನಗರ: ಸಮಾಜವಾದಿ, ಪ್ರಾಮಾಣಿಕ ರಾಜಕಾರಣಿ ಎಂದು ಹೇಳಿಕೊಳ್ಳುವ ಸಿದ್ದರಾಮಯ್ಯ ಮುಡಾ ಹಗರಣದಲ್ಲಿ ಆರೋಪ ಮುಕ್ತರಾಗುವವರೆಗೂ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಬಿಎಸ್‌ಪಿ ರಾಜ್ಯ ಸಂಯೋಜಕ ಎಂ.ಕೃಷ್ಣಮೂರ್ತಿ ಆಗ್ರಹಿಸಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಸಾಮಾಜಿಕ ನ್ಯಾಯಕ್ಕೆ ಬದ್ಧರಾಗಿದ್ದರೆ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದು ತನಿಖೆ ಎದುರಿಸಿ ಆರೋಪ ಮುಕ್ತರಾಗಬೇಕು. ಅಲ್ಲಿಯವರೆಗೂ ಪರಿಶಿಷ್ಟ ಜಾತಿ ಅಥವಾ ವರ್ಗಕ್ಕೆ ಸೇರಿದವರಿಗೆ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಡಬೇಕು ಎಂದು ಒತ್ತಾಯಿಸದರು.
ಸಿದ್ದರಾಮಯ್ಯ ಜೆಡಿಎಸ್ ತೊರೆದು ಕಾಂಗ್ರೆಸ್‌ಗೆ ಬಂದಾಗ ಪರಿಶಿಷ್ಟ ಜಾತಿಯ ನಾಯಕರಿಗೆ ಅನ್ಯಾಯವಾಯಿತು. ಮಲ್ಲಿಕಾರ್ಜುನ ಖರ್ಗೆ ರಾಜ್ಯ ರಾಜಕಾರಣ ತೊರೆದು ರಾಷ್ಟ್ರ ರಾಜಕಾರಣಕ್ಕೆ ಹೋಗಬೇಕಾಯಿತು. ಜಿ.ಪರಮೇಶ್ವರ್ ಸೋಲಿಗೂ ಸಿದ್ದರಾಮಯ್ಯ ಪರೋಕ್ಷ ಕಾರಣ ಎಂಬ ಆರೋಪಗಳಿವೆ.
ಈಗ ಪರಿಶಿಷ್ಟ ಜಾತಿ, ವರ್ಗದವರ ಋಣ ತೀರಿಸಲು ಸಿದ್ದರಾಮಯ್ಯ ಅವರಿಗೆ ಅವಕಾಶ ಸಿಕ್ಕಿದ್ದು ಮುಖ್ಯಮಂತ್ರಿ ಹುದ್ದೆ ಬಿಟ್ಟುಕೊಡಬೇಕು. ಆರೋಪಗಳ ವಿರುದ್ಧ ತನಿಖೆ ಎದುರಿಸಬೇಕು ಎಂದು ಆಗ್ರಹಿಸಿದರು.
ಇದೇವೇಳೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ವಿರುದ್ಧವೂ ಅಕ್ರಮವಾಗಿ ಗಣಿ ಗುತ್ತಿಗೆ ನೀಡಿರುವ ಆರೋಪವಿದ್ದು ರಾಜ್ಯಪಾಲರು ಪ್ಯಾಸಿಕ್ಯೂಷನ್‌ಗೆ ಅನುಮತಿ ನೀಡಬೇಕು. ರಾಜ್ಯ ರಾಜಕೀಯ ಸ್ವಚ್ಛವಾಗುವ ನಿಟ್ಟಿನಲ್ಲಿ ಮಾಜಿ ಮುಖ್ಯಮಂತ್ರಿಗಲು, ಹಾಲಿ ಸಚಿವರು, ಮಾಜಿ ಸಚಿವರು, ಹಾಲಿ ಶಾಸಕರು, ಮಾಜಿ ಶಾಸಕರ ವಿರುದ್ದದ ಭ್ರಷ್ಟಾಚಾರ ಪ್ರಕರಣಗಳನ್ನು ತನಿಖೆಗೆ ಆದೇಶಿಸುವ ಮೂಲಕ ರಾಜ್ಯದಲ್ಲಿ ಸ್ವಚ್ಛ ರಾಜಕಾರಣಕ್ಕೆ ನಾಂದಿ ಹಾಡಬೇಕು ಎಂದು ಕೃಷ್ಣಮೂರ್ತಿ ಒತ್ತಾಯಿಸಿದರು.
ಡಿ.ಕೆ.ಶಿವಕುಮಾರ್, ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಗಂಭೀರ ಭ್ರಷ್ಟಾಚಾರ ಆರೋಪಗಳಿವೆ. ಈಚೆಗೆ ಸಂಸದರಾಗಿ ಆಯ್ಕೆಯಾದ ಡಾ.ಮಂಜುನಾಥ್ ಮೇಲೆ 200 ಎಕರೆ ಭೂಕಬಳಿಕೆ ಆರೋಪ ಕೇಳಿಬಂದಿದ್ದು ಕೂಡಲೇ ತನಿಖೆಗೆ ಆದೇಶ ನೀಡಬೇಕು ಎಂದು ಆಗ್ರಹಿಸಿದರು.
ಮುಡಾ ಹಗರಣ ಬೆಳಕಿಗೆ ಬಂದ ಬಳಿಕ ಜನಸಾಮಾನ್ಯರು ಎಲ್ಲ ಪಕ್ಷದ ರಾಜಕಾರಣಿಗಳನ್ನು ಅನುಮಾನದಿಂದ ನೋಡುವಂತಾಗಿದೆ. ಜನರು ಪರ್ಯಾಯ ರಾಜಕಾರಣದತ್ತ ಆಕರ್ಷಿತರಾಗುತ್ತಿದ್ದು ಬಿಎಸ್‌ಪಿ ರಾಜಕೀಯ ಪರ್ಯಾಯವಾಗಿ ಬೆಳೆಯಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಬಿಎಸ್‌ಪಿ ಜಿಲ್ಲಾ ಘಟಕದ ಅಧ್ಯಕ್ಷ ಎನ್.ನಾಗಯ್ಯ, ಸಂಯೋಜಕ ರಾಜಶೇಖರ್, ಉಪಾಧ್ಯಕ್ಷ ಬ್ಯಾಡಮೂಡ್ಲು ಬಸವಣ್ಣ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬ.ಮ.ಕೃಷ್ಣಮೂರ್ತಿ, ತಾಲ್ಲೂಕು ಅಧ್ಯಕ್ಷ ಚಂದ್ರಕಾಂತ್, ಮುಖಂಡ ಭೈರಲಿಂಗಸ್ವಾಮಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.